“ಕೆಲಸಗಾರರು ಬೇಕಾಗಿದ್ದಾರೆ”: ಕೊಡಗಿನ ಬೆಳೆಗಾರರ ಅಸಹಾಯಕ ಪರಿಸ್ಥಿತಿಗೆ ಸಾಕ್ಷಿಯಾದ ವೈರಲ್ ಫೋಟೋ

Update: 2024-01-04 18:28 GMT

ಮಡಿಕೇರಿ: ಕಾಫಿ ಕೊಯ್ಲಿನ ಹಂತದಲ್ಲಿನ ಕಾರ್ಮಿಕರ ಕೊರತೆ, ಕಾರ್ಮಿಕರ ವೇತನಗಳಿಂದ ಕಂಗಾಲಾಗಿರುವ ಕೊಡಗಿನ ಬೆಳೆಗಾರ, ತನ್ನ ಆರ್ಥಿಕ ಪರಿಸ್ಥಿತಿಗಳಿಗೆ ತಕ್ಕಂತೆ ಕೆಲಸಗಾರರನ್ನು ಹೊಂದಿಸಿಕೊಳ್ಳಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ. ಇಲ್ಲೊಬ್ಬ ಬೆಳೆಗಾರರು ತಾವು ನೀಡಬಹುದಾದ ಕಾರ್ಮಿಕರ ದಿನಗೂಲಿಯ ವಿವರ ಬರೆದು “ಕೆಲಸಗಾರರು ಬೇಕಾಗಿದ್ದಾರೆ” ಎನ್ನುವ ಫಲಕದೊಂದಿಗೆ ರಸ್ತೆಗಿಳಿದು ತಮ್ಮ ಅಸಹಾಯಕ ಸ್ಥಿತಿಯನ್ನು ಸಾಕ್ಷೀಕರಿಸಿದ್ದಾರೆ.

ವರ್ಷಾವಧಿ ತೋಟದ ನಿರ್ವಹಣೆಗಾಗಿ, ಅದರ ಕೆಲಸ ಕಾರ್ಯಗಳಿಗಾಗಿ ಶ್ರಮಿಸಿದ ಬೆಳೆಗಾರ, ತನ್ನ ಶ್ರಮಕ್ಕೆ ಯಶಸ್ಸು ಪಡೆಯುವುದು ಕಾಫಿ ಫಸಲನ್ನು ಜಾಗೃತೆಯಿಂದ ಕೊಯ್ಲು ಮಾಡಿ, ಉತ್ತಮ ಧಾರಣೆಗೆ ಮಾರಾಟ ಮಾಡುವುದರಿಂದ ಮಾತ್ರ.

ಇತ್ತೀಚಿನ ವರ್ಷಗಳಲ್ಲಿ ಕಾಫಿ ಕೊಯ್ಲು ಸಮಯ ಬಂತೆಂದರೆ ಬೆಳೆಗಾರ ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕರ ವೇತನ ಜಿಲ್ಲೆಯ ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಇದೆ. ಕಾಫಿ ಹಣ್ಣು ಕೊಯ್ಯುವ ಕಾರ್ಮಿಕನಿಗೆ ಪ್ರತಿ ಕೆ.ಜಿ.ಗೆ ಕಳೆದ ಸಾಲಿನವರೆಗೆ 3.50 ರೂ.ಗಳಿಂದ 7 ರೂ.ಗಳವರೆಗೆ ನೀಡಿರುವ ಉದಾಹರಣೆಗಳು ಇದೆ. ಕಾಫಿ ಫಸಲು ಹೆಚ್ಚಾಗಿರುವ ತೋಟಗಳಲ್ಲಿ ಪ್ರತಿ ಕೆ.ಜಿ. ಕಾಫಿ ಕೊಯ್ಲಿಗೆ 3 ರಿಂದ 4 ರೂ. ಒಳಗೆ ದರವನ್ನು ಸಂದರ್ಭಕ್ಕೆ ತಕ್ಕಂತೆ ಕಾರ್ಮಿಕರನ್ನು ಕರೆ ತರುವ ಮಂದಿ ನಿರ್ಧರಿಸುತ್ತಾರೆ. ಅದೇ ಫಸಲು ಕಡಿಮೆ ಇರುವ ತೋಟಗಳಲ್ಲಿ ಪ್ರತಿ ಕೆ.ಜಿ. ಕೊಯ್ಲಿನ ದರ 5 ರೂ.ಗಳಿಗೂ ಹೆಚ್ಚಿಗೆ ನಿಗದಿ ಪಡಿಸುತ್ತಾರೆ.

ಇಂತಹ ಇಕ್ಕಟ್ಟಿನ ಸಂದರ್ಭಗಳಲ್ಲಿ ಬೆಳೆಗಾರ ಆಕ್ಷರಶಃ ಅಡಕತ್ತರಿಯಲ್ಲಿ ಸಿಲುಕಿಕೊಳ್ಳುತ್ತಾನೆ. ಕಾಫಿ ಕೊಯ್ಲು ಮಾಡದೆ ಇರುವಂತೆಯೂ ಇಲ್ಲ, ಮಾಡುವುದಾದಲ್ಲಿ ದುಪ್ಪಟ್ಟು ದರ ತೆರಬೇಕು. ಇದರಿಂದ ಹೆಚ್ಚಿನ ನಷ್ಟವನ್ನು ಅನುಭವಿಸುವ ಮೂಲಕ, ತೋಟ ನಿರ್ವಹಣೆ ಎನ್ನುವುದು ಸಾಧ್ಯವೇ ಇಲ್ಲ ಎನ್ನುವಂತಾಗಿ ಹೋಗುತ್ತದೆ.

ಕಾಫಿ ಕೊಯ್ಯುವ ಧಾರಣೆಯ ಫಲಕ ಹಿಡಿದು ರಸ್ತೆ ನಡುವೆ ನಿಂತ ಬೆಳೆಗಾರ ಬೀಟೆಕಾಡ್ ಎಸ್ಟೇಟ್ ನವರು. ಇವರು ತಮ್ಮ ಪಟ್ಟಿಯಲ್ಲಿ ಪ್ರತಿ ಕೆ.ಜಿ ಕಾಫಿಗೆ 4.45 ರೂ., ದಿನಕ್ಕೆ ಪುರುಷ ಕೆಲಸಗಾರರಿಗೆ 615 ರೂ., ಮಹಿಳಾ ಕೆಲಸಗಾರರಿಗೆ 415 ರೂ. ನಮೂದಿಸಿ ರಸ್ತೆಯಲ್ಲಿ ನಿಂತಿರುವ ಫೋಟೋ ವ್ಯಾಪಕ ವೈರಲ್ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News