ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಸಿಬಿಐ ಕೊಟ್ಟ ಹೇಳಿಕೆಯನ್ನು ಆಧರಿಸಿ ಅಮಿತ್ ಶಾ ಅವರಿಗೆ ಕ್ರಿಮಿನಲ್ ಹಿನ್ನಲೆಯಿದೆ ಎಂದಿದ್ದೇನೆ: ಯತೀಂದ್ರ ಸಿದ್ದರಾಮಯ್ಯ
ಮಡಿಕೇರಿ: 2010ರಲ್ಲಿ ಸೊಹ್ರಾಬುದ್ದೀನ್ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಗುಜರಾತ್ ಕೋರ್ಟ್‍ಗೆ ಸಿಬಿಐ ಕೊಟ್ಟ ಹೇಳಿಕೆಯನ್ನು ಆಧರಿಸಿ ಅಮಿತ್ ಶಾ ಅವರಿಗೆ ಕ್ರಿಮಿನಲ್ ಹಿನ್ನಲೆಯಿದೆ ಎಂದು ಹೇಳಿದ್ದೇನೆಯೇ ಹೊರತು ಅದು ನನ್ನ ಸ್ವಂತ ಸೃಷ್ಟಿಯ ಹೇಳಿಕೆಯಲ್ಲವೆಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ವಿರಾಜಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ಕೊಟ್ಟ ಹೇಳಿಕೆಯನ್ನು ನಾನು ಪುನರುಚ್ಚಾರ ಮಾಡಿದ್ದೇನೆ, ಹಾಗಾಗಿ ನನ್ನ ಹೇಳಿಕೆಯಿಂದ ಬಿಜೆಪಿಗೆ ಕೋಪ ಬಂದಿದ್ದರೆ ಮೊದಲು ಸಿಬಿಐ ಮೇಲೆ ಅವರು ಕೋಪ ಮಾಡಿಕೊಳ್ಳಬೇಕು. ಈಗಾಗಲೇ ನನಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಅದಕ್ಕೆ ನಾನು ಏನು ಉತ್ತರ ಕೊಡಬೇಕೋ ಕೊಡುತ್ತೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಆಡಳಿತದಿಂದ ದೇಶ 25 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ. ಕೊಟ್ಟ ಯಾವುದೇ ಭರವಸೆಗಳನ್ನು ಅವರು ಈಡೇರಿಸಿಲ್ಲ. ಕಪ್ಪು ಹಣದ ವಿಚಾರದಲ್ಲೂ ಮೋದಿ ಎಡವಿದ್ದಾರೆ. ರೈತರ ಬಾಳು ಹಸನಾಗಿಲ್ಲ, ರೈತರ ಪ್ರತಿಭಟನೆಯನ್ನು ಅಧಿಕಾರದಿಂದ ಹತ್ತಿಕ್ಕುವ ಕೆಲಸ ಆಗುತ್ತಿದೆ ಎಂದು ಯತೀಂದ್ರ ಟೀಕಿಸಿದರು.
ಉದ್ಯೋಗ ಸೃಷ್ಟಿಸುವಲ್ಲಿ ಮೋದಿ ಎಡವಿದ್ದಾರೆ, ಇದರಿಂದ ಭಾರತದಲ್ಲಿ ಅತೀ ಹೆಚ್ಚು ನಿರುದ್ಯೋಗ ಸೃಷ್ಟಿಯಾಗಿದೆ. ಪ್ರಜಾಪ್ರಭುತ್ವದ ಭಾರತ ದೇಶದಲ್ಲಿ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಸೇರಿದಂತೆ ತನಿಖಾ ಸಂಸ್ಥೆಗಳನ್ನು ಮೋದಿ ಸರ್ಕಾರ ಕಪಿ ಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದೆ. ಸರ್ಕಾರದ ವಿರುದ್ಧ ಮಾತನಾಡಿದವರನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು.