ಹವಾಮಾನ ಮುನ್ಸೂಚನೆಯಂತೆ ತುಂಗಭದ್ರಾ ಜಲಾಶಯ ಮತ್ತೆ ತುಂಬುವ ನಿರೀಕ್ಷೆ: ಸಿಎಂ ಸಿದ್ದರಾಮಯ್ಯ

Update: 2024-08-13 11:05 GMT

ಕೊಪ್ಪಳ: ಹವಾಮಾನ ಮುನ್ಸೂಚನೆಯಂತೆ ತುಂಗಭದ್ರಾ ಜಲಾಶಯದಿಂದ ಪೋಲಾಗಿರುವ ನೀರು ಮತ್ತೆ ತುಂಬಿಕೊಳ್ಳಲಿದ್ದು, ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 ಮಂಗಳವಾರ ಕೊಪ್ಪಳದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ತುಂಗಭದ್ರಾ ಜಲಾಶಯದ ಬಗ್ಗೆ ಸರಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಇದು ರಾಜಕೀಯ ಮಾಡುವ ವಿಷಯವಲ್ಲ. ತುಂಗಭದ್ರಾ ಮಂಡಳಿಯ ನೇತೃತ್ವವನ್ನು ಭಾರತ ಸರಕಾರ ನೇಮಿಸಿದ ಅಧ್ಯಕ್ಷರು ನಿರ್ವಹಿಸುತ್ತಾರೆ. ಆಂಧ್ರ, ಕರ್ನಾಟಕ, ತೆಲಂಗಾಣ ರಾಜ್ಯದ ಸದಸ್ಯರು ಮಂಡಳಿಯಲ್ಲಿರುತ್ತಾರೆ. ಈ ಜಲಾಶಯದ ನಿರ್ವಹಣೆಯ ಜವಾಬ್ದಾರಿ ತುಂಗಭದ್ರಾ ಮಂಡಳಿಗೆ ಸೇರಿರುತ್ತದೆ. ಆದರೆ ಈ ವಿಷಯದಲ್ಲಿ ನಾನು ಯಾರನ್ನೂ ದೂಷಿಸುವುದಿಲ್ಲ ಎಂದರು.

ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 105 ಟಿಎಂಸಿ ನೀರು ತುಂಬಿತ್ತು. ಆದರೆ ತುಂಡಾಗಿರುವ ಗೇಟ್ ನ ದುರಸ್ತಿಗಾಗಿ 50 ರಿಂದ 60 ಟಿಎಂಸಿ ನೀರು ಹೊರಗೆ ಬಿಡಬೇಕಾಗಿದೆ. ಈ ವರ್ಷದ ಅಕ್ಟೋಬರ್ ವರೆಗೆ ಮಳೆಯಾಗಲಿದ್ದು, ಜಲಾಶಯದಲ್ಲಿ ಪುನಃ ನೀರು ತುಂಬುವ ಸಾಧ್ಯತೆಯಿದೆ. ಹವಾಮಾನ ಮುನ್ಸೂಚನೆಯಂತೆ ಆಗಸ್ಟ್ 15 ರ ನಂತರ ಪುನಃ ಮಳೆಬರುವ ನಿರೀಕ್ಷೆಯಿದೆ. ಆದ್ದರಿಂದ ಈಗ ಪೋಲಾಗಿರುವ ನೀರು ಮತ್ತೊಮ್ಮೆ ಜಲಾಶಯದಲ್ಲಿ ತುಂಬಲಿದ್ದು, ರೈತರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News