ಅಮಿತ್ ಶಾ ಹೇಳಿಕೆ ಖಂಡಿಸಿ ಜ.6ರಂದು ಕೊಪ್ಪಳ ನಗರದಲ್ಲಿ ಬೃಹತ್ ಮುಷ್ಕರ
ಕೊಪ್ಪಳ: ನಗರದಲ್ಲಿ ಜ.6ರಂದು ಸೋಮವಾರ ಬೃಹತ್ ಮುಷ್ಕರಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡ ಹನುಮೇಶ್ ಕಡೆಮನಿ ಸಭೆಯಲ್ಲಿ ಹೇಳಿದರು.
ರವಿವಾರ ನಗರದ ಪ್ರವಾಸಿ ಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಬೃಹತ್ ಮುಷ್ಕರದ ಅಂತಿಮ ಪೂರ್ವಭಾವಿ ಸಭೆಯಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡ ಹನುಮೇಶ್ ಕಡೆಮನಿ ಮಾತನಾಡಿದರು.
ವಿವಿಧ ಜನಪರ ಸಂಘಟನೆಗಳು ಸಂಪೂರ್ಣ ಬೆಂಬಲಿಸಿದ್ದು, ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ಬಂದು ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಯಾವುದಾದರೂ ಅಂಗಡಿಗಳು ಮುಚ್ಚದಿದ್ದರೆ ಅವರಿಗೆ ನಮ್ಮ ಸಂಘಟನೆಗಳ ಯುವಕರು ಗುಲಾಬಿ ಹೂ ಕೊಡುವ ಮೂಲಕ ಮನವಿ ಮಾಡಿಕೊಳ್ಳುತ್ತಾರೆ, ದ್ವಿಚಕ್ರ ವಾಹನಗಳಿಂದ ಶಬ್ದ ಮಾಡುತ್ತಾ ಓಡಾಡುವುದನ್ನು ನಿರ್ಬಂಧಿಸಲಾಗಿದೆ ಎಂದರು.
30ಕ್ಕೂ ಹೆಚ್ಚು ಸಂಘಟನೆಗಳ ನಾಯಕರು ಇರುವುದರಿಂದ ಸ್ವಯಂ ಪ್ರೇರಣೆಯಿಂದ ಎಲ್ಲರೂ ಶಿಸ್ತನ್ನು ಕಾಪಾಡಿಕೊಳ್ಳುತ್ತಾರೆ. ನಗರದ ತಾಲ್ಲೂಕು ಕ್ರೀಡಾಂಗಣದಿಂದ ಬೆಳಿಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಪ್ರಾರಂಭಗೊಂಡು ಸಾಲಾರ್ ಜಂಗ್ ರಸ್ತೆ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ವೃತ್ತಕ್ಕೆ ತಲುಪಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮುಂದುವರೆದು ಶಾರದಾ ಟಾಕೀಸ್ ತಿರುವಿನಿಂದ ಗಡಿಯಾರ ಕಂಬ ಸುತ್ತಿ ಜವಾಹರ್ ರಸ್ತೆ ಮೂಲಕ ಅಶೋಕ ವೃತ್ತದಲ್ಲಿ ಸಂಜೆ 5 ಗಂಟೆಯ ವರೆಗೆ ಬೃಹತ್ ಬಹಿರಂಗ ಸಭೆ ನಡೆಯಲಿದ್ದು, ರಾಜ್ಯಕ್ಕೆ ಮಾದರಿಯಾಗುವ ಹೋರಾಟ ಇದಾಗಲಿದೆ ಎಂದು ಹೇಳಿದರು.
ಸಂವಿಧಾನ ಸಂರಕ್ಷಣಾ ಸಮಿತಿಯ ಹಿರಿಯ ಮುಖಂಡ ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು, ಸಭೆಯಲ್ಲಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್,ಎ,ಗಫಾರ್, ರಾಮಣ್ಣ ಚೌಡಕಿ, ಮಂಜುನಾಥ್ ಗೊಂಡಬಾಳ, ಪರಶುರಾಮ್ ಕೆರೆಹಳ್ಳಿ, ಕೌಸರ್ ಕೋಲ್ಕಾರ್,ಕೆ,ಬಿ,ಗೋನಾಳ್,ಬಸವರಾಜ್ ಪೂಜಾರ್, ಸಲೀಮ್ ಖಾದ್ರಿ, ಆದಿಲ್ ಪಟೇಲ್,ರಮೇಶ್ ಗಿಣಿಗೇರಿ, ಕಾಶಪ್ಪ ಚಲವಾದಿ, ಈಶಣ್ಣ ಕೊರ್ಲಳ್ಳಿ ಮುಂತಾದ ಅನೇಕರು ಸಲಹೆ ಸೂಚನೆ ನೀಡಿದರು.