ಅಮಿತ್ ಶಾ ಹೇಳಿಕೆ ಖಂಡಿಸಿ ಕರೆ ನೀಡಿದ್ದ ಕೊಪ್ಪಳ ಬಂದ್‌ಗೆ ಹಲವು ಸಂಘಟನೆಗಳ ಬೆಂಬಲ
ಕೊಪ್ಪಳ : ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಮೂವತ್ತಕ್ಕೂ ಹೆಚ್ಚು ಸಂಘಟನೆಗಳ ಇಂದು ಕರೆ ನೀಡಲಾಗಿದ್ದ ಕೊಪ್ಪಳ ಬಂದ್‌ಗೆ ಹಲವು ಸಂಘಟನೆಗಳ ಬೆಂಬಲ ನೀಡಿದೆ.
ಅನೇಕ ಸಂಘ ಸಂಸ್ಥೆಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರ ಹಾಕಿದರು.
ಬಂದ್ ಕರೆಗೆ ಬೆಳಗಿನಿಂದಲೇ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಯಿತು. ಇಡೀ ನಗರದ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಬಂದ್ಗೆ ಬೆಂಬಲ ವ್ಯಕ್ತಪಡಿಸಿದರು. ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಅಲ್ಲದೆ ನಗರದಲ್ಲಿ ಆಟೋ ಸಂಚಾರ, ಬಸ್ ಸಂಚಾರ ಸಂಪೂರ್ಣವಾಗಿ ಬಂದ್ ಆಗಿತ್ತು.
ನಗರದ ತಾಲ್ಲೂಕು ಸ್ಟೇಡಿಯಂ ನಿಂದ ಬೈಕ್ ರ್ಯಾಲಿ ಆರಂಭಿಸಿದ ಪ್ರತಿಭಟನಾಕಾರರು, ನಗರದ ಜಿಲ್ಲಾಡಳಿತ ಕಚೇರಿಗೆ ತೆರಳಿ ನಂತರ ಗವಿಮಠ ಮಾರ್ಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ತೆರಳಿದರು, ಆಟೋ ರ್ಯಾಲಿ ಮೂಲಕ ಪ್ರತಿಭಟನಾಕಾರರು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾಡಿದರು.
ಕೇಂದ್ರೀಯ ಬಸ್ ನಿಲ್ದಾಣದ ಎದುರುಗಡೆ ಪ್ರತಿಭಟನಾಕಾರರು ಟೈರ್ ಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದರು. ಅಮಿತ್ ಶಾ ರಾಜೀನಾಮೆ ನೀಡಬೇಕು ಅಮಿತ್ ಶಾ ರನ್ನು ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸ್ ಸಂಚಾರ ಸಂಪೂರ್ಣವಾಗಿ ನಿಂತು ಹೋಗಿದ್ದರಿಂದ ಬೇರೆ ಊರಿನಿಂದ ಬಂದಿದ್ದ ಪ್ರಯಾಣಿಕರು ಹಾಗೂ ಬೇರೆ ಊರಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ಸಾಕಷ್ಟು ಸಂಕಷ್ಟವನ್ನು ಅನುಭವಿಸಬೇಕಾಯಿತು, ಹೀಗಾಗಿ ಬಸ್ಸುಗಳನ್ನು ಬೈಪಾಸ್ ರಸ್ತೆಯ ಮೂಲಕ ಹಾದು ಹೋಗಲು ಅವಕಾಶ ಮಾಡಿಕೊಡಲಾಗಿತ್ತು.
ಪ್ರತಿಭಟನೆಯಲ್ಲಿ ಸಾವಿತ್ರಿಬಾಯಿ ಫುಲೆ ಹಾಗೂ ರಮಾಬಾಯಿ ಮಹಿಳಾ ಸಂಘಟನೆಗಳು ಸಹ ಭಾಗವಹಿಸಿದ್ದು ವಿಶೇಷವಾಗಿತ್ತು. ನಂತರ ನಡೆದ ಬೃಹತ್ ಮೆರವಣಿಗೆಯ ಜಾಥಾ ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಅಶೋಕ ಸರ್ಕಲ್ ನಲ್ಲಿ ಕೊನೆಗೊಂಡಿತು. ಅಶೋಕ ಸರ್ಕಲ್ ನಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಹೋರಾಟಗಾರರು, ಅಮಿತ್ ಶಾ ಕ್ಷಮೆಯಾಚಿಸದಿದ್ದರೆ ಇಡೀ ದೇಶವನ್ನೇ ಬಂದ್ ಮಾಡುವುದಾಗಿ ಎಚ್ಚರಿಸಿದರು.
ಹೋರಾಟಗಾರರಾದ ಹನುಮೇಶ ಕಡೆಮನಿ, ಅಲ್ಲಂಪ್ರಭು ಬೆಟ್ಟದೂರ್ ಬಸವರಾಜ್ ಸುಳಿಭಾವಿ ಸಾವಿತ್ರಿ ಮುಂಜುಂದರ್, ಶುಕ್ರಜ್, ಆಸಿಫ್ ಅಲಿ, ಆದಿಲ್ ಪಟೇಲ್ ಸೇರಿದಂತೆ 30ಕ್ಕೂ ಹೆಚ್ಚು ಸಂಘಟನೆಗಳ ಮುಖಂಡರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
ಅಲ್ಲಲ್ಲಿ ಪೊಲೀಸ್ ರೊಂದಿಗೆ ಸಣ್ಣಪುಟ್ಟ ವಾಗ್ವಾದ ಹೊರತುಪಡಿಸಿ, ಇಡೀ ಬಂದ್ ಶಾಂತಿಯುತವಾಗಿ ನಡೆಯಿತು. ಆಸ್ಪತ್ರೆ, ಮೆಡಿಕಲ್ ಶಾಪ್ಗಳನ್ನು ತೆರೆಯಲಾಗಿತ್ತು.