ಸಂವಿಧಾನ ರಕ್ಷಣೆಗೆ ಬೃಹತ್ ಜನಾಂದೋಲನ ರೂಪಿಸುವ ಅಗತ್ಯವಿದೆ : ರಾಕೇಶ್ ಟಿಕಾಯತ್
ಕೊಪ್ಪಳ : ದೇಶದ ಇತಿಹಾಸವನ್ನು ತಿರುಚಿ ದಲಿತ, ಆದಿವಾಸಿಗಳು, ರೈತರನ್ನು ಕಡೆಗಣಿಸಿ, ಕೃಷಿ ಹಾಗೂ ಶಿಕ್ಷಣ ಸೇರಿದಂತೆ ದೇಶವನ್ನು ಸಂಪೂರ್ಣವಾಗಿ ಕಾರ್ಪೋರೇಟ್ ವಲಯಕ್ಕೆ ಒಪ್ಪಿಸುತ್ತಿರುವ ಶಕ್ತಿಗಳ ವಿರುದ್ಧ ದೇಶದ ಜನರು ದೊಡ್ಡ ಪ್ರಮಾಣದಲ್ಲಿ ಸಂಘಟಿತರಾಗಿ ಸಂವಿಧಾನ ಮತ್ತು ಅದರ ಆಶಯಗಳ ಉಳಿಯುವಿಕೆಗೆ ಬೃಹತ್ ಜನಾಂದೋಲನ ರೂಪಿಸುವ ಅಗತ್ಯವಿದೆ ಎಂದು ರೈತ ಹೋರಾಟಗಾರ ರಾಕೇಶ್ ಟಿಕಾಯತ್ ಹೇಳಿದರು.
ಇಲ್ಲಿನ ಶಿವಶಾಂತವೀರ ಮಂಗಲ ಭವನದಲ್ಲಿ ಪ್ರಾರಂಭವಾದ 10 ನೇ ಮೇ ಸಾಹಿತ್ಯ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ದೇಶವು ಇಂದು ಕಠಿಣ ಸನ್ನಿವೇಶ ಎದುರಿಸುತ್ತಿದೆ. ಒಂದು ದೇಶ , ಒಂದು ಚುನಾವಣೆ ಎಂದು ಹೇಳುವ ಮೂಲಕ ಬಹುತ್ವದ ಆಶಯಕ್ಕೆ, ಒಕ್ಕೂಟ ವ್ಯವಸ್ಥೆಗೆ, ರಾಜ್ಯಗಳ ಸ್ವಾಯತ್ತತೆಗೆ, ಅಸ್ಮಿತೆಗೆ ಧಕ್ಕೆ ತರುವ ಯತ್ನಗಳು ನಡೆದಿವೆ. ದಿಲ್ಲಿಯಲ್ಲಿ ನಡೆಸಿದ 13 ತಿಂಗಳ ರೈತ ಆಂದೋಲನದಲ್ಲಿ ದೇಶದ ಜನತೆ ಹಾಗೂ ಭಾರತ ಸರ್ಕಾರ ಮುಖಾಮುಖಿಯಾಗಿದ್ದವು. ಚಳವಳಿಯಲ್ಲಿ ಯಾವುದೇ ವಿಪಕ್ಷಗಳು, ರೈತರು ಯಾವುದೇ ಭಾಷೆ , ಧರ್ಮದ ಆಧಾರದಲ್ಲಿ ಒಂದಾಗದೇ ಕೇವಲ ಕೃಷಿಕರು ಮಾತ್ರ ಸಂಯುಕ್ತ ಕಿಸಾನ್ ಮೋರ್ಚಾ ಹೆಸರಿನಲ್ಲಿ ಸಂಘಟಿತರಾಗಿ ಹೋರಾಡಿದರು" ಎಂದು ಹೇಳಿದರು.
ದೇಶದ ಜನರನ್ನು ಕಳೆದ ಸುಮಾರು 25 ವರ್ಷಗಳಿಂದ ಧರ್ಮದ ಹೆಸರಿನಲ್ಲಿ ವಿಭಜಿಸುವ ಪ್ರಯತ್ನಗಳು ಎಗ್ಗಿಲ್ಲದೇ ಸಾಗಿವೆ. ಸಂವಿಧಾನದ ಆಶಯಗಳಿಗೆ ಧಕ್ಕೆ ಬಂದಿದೆ. ದೇಶದ ಜನತೆ ಇದೆಲ್ಲವನ್ನೂ ಶಾಂತಿಯುತವಾಗಿ ಗಮನಿಸುತ್ತಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ರಾಕೇಶ್ ಟಿಕಾಯತ್ ಹೇಳಿದರು.
ತೆಲಂಗಾಣದ ಕವಿ, ಹೋರಾಟಗಾರ್ತಿ ಜೂಪಕ ಸುಭದ್ರ ದಿಕ್ಸೂಚಿ ಮಾತುಗಳನ್ನಾಡಿ, "ದೇಶವು ಯಾರೊಬ್ಬರ ಸರ್ವಾಧಿಕಾರದಲ್ಲಿ ಮುಂದೆ ಸಾಗಬಾರದು. ಧಾರ್ಮಿಕ ಮತ್ತು ಸಾಮಾಜಿಕ ಹಕ್ಕು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಪ್ರತಿಯೊಬ್ಬರು ಇದೇ ಧರ್ಮ ಅನುಸರಿಸಿ ಎಂದು ಯಾರೂ ಕೂಡ ನಿರ್ದೇಶನ ಕೊಡಲು ಸಾಧ್ಯವಿಲ್ಲ. ಅನೇಕ ದಮನಕಾರಿ ಪ್ರಕ್ರಿಯೆಗಳ ಮಧ್ಯೆಯೂ ಎದೆಗುಂದದ ಈ ದೇಶದ ರೈತರು ಪ್ರಭುತ್ವದ ವಿರುದ್ಧ ವರ್ಷಗಟ್ಟಲೇ ಹೋರಾಡಿದ್ದು, ದೇಶದ ಜನಸಾಮಾನ್ಯರಲ್ಲಿನ ರೋಷಕ್ಕೆ ಸಾಕ್ಷಿಯಾಗಿದೆ ಎಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಪ್ರ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಮಾತನಾಡಿ, " ಸಂವಿಧಾನ ಉಳಿವಿಗಾಗಿ ಎರಡನೇ ಸ್ವಾತಂತ್ರ್ಯ ಆಂದೋಲನಕ್ಕೆ ನಾವೆಲ್ಲ ಅಣಿಯಾಗಬೇಕಾಗಿದೆ. ಭಾರತ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ಇಂದು ಅಪಾಯದಲ್ಲಿದೆ. ಜವಾಬ್ದಾರಿಯಿಂದ ಜನರಿಂದ ಮತ ಪಡೆದವರು ಸಂವಿಧಾನಬದ್ಧವಾಗಿ ಸಮಸ್ತ ಜನರಿಗೆ ರಾಜಕೀಯ, ಆರ್ಥಿಕ, ಸಾಮಾಜಿಕ ನ್ಯಾಯ ಕೊಡುವುದಾಗಿ ಪ್ರತಿಜ್ಞೆ ಸ್ವೀಕರಿಸಿದವರು, ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದರೂ ಕೂಡ ಮಹಿಳೆಯರಿಗೆ ಶೇ.33 ರ ಮೀಸಲು ಕೊಡಲು ಸಾಧ್ಯವಾಗದಿರುವುದು ಅವರ ಗೋಸುಂಬೆ ತನಕ್ಕೆ ಸಾಕ್ಷಿಯಾಗಿದೆ" ಎಂದರು.
10 ನೇ ಮೇ ಸಾಹಿತ್ಯ ಮೇಳದ ರಾಜ್ಯ ನಿರ್ಣಯಗಳು:
1) ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಸರಕಾರವು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲು ಈ ಮೇಳವು ಒತ್ತಾಯಿಸುತ್ತದೆ. ಮಹಿಳೆಯರ ಮೇಲೆ ಆಗುವ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಜಿಲ್ಲೆಯಲ್ಲಿ ವಿಶೇಷ ಟಾಸ್ಕ್ ಪೋರ್ಸ್ ರಚಿಸಬೇಕು. ಮತ್ತು ಕಾನೂನಾತ್ಮಕವಾಗಿ ನ್ಯಾಯ ದೊರಕಿಸುವ ವಿಚಾರಣೆಗಾಗಿ ವಿಶೇಷ ಕೋರ್ಟ್ ಗಳನ್ನು ಸ್ಥಾಪಿಸಿ, ಆರು ತಿಂಗಳ ಕಾಲಮಿತಿಯಲ್ಲಿ ತ್ವರಿತ ನ್ಯಾಯವನ್ನು ಖಚಿತಪಡಿಸಬೇಕು. ತನಿಖಾ ಹಂತದಲ್ಲಿ ಇಂತಹ ಪ್ರಕರಣಗಳ ತನಿಖೆಯ ಪರಿಣಿತಿ ಇರುವ ಅಧಿಕಾರಿಗಳ ವಿಶೇಷ ತಂಡವನ್ನು ನೇಮಿಸಿ ಸಾಕ್ಷ್ಯಾಧಾರಗಳಲ್ಲಿ ಲೋಪವಾಗದಂತೆ ನೋಡಿಕೊಳ್ಳಬೇಕಾಗಿದೆ.
2) ರೈತ ವಿರೋಧಿ ಮೂರು ಕಾನೂನುಗಳನ್ನು ವಿರೋಧಿಸಿ ದೇಶಾದ್ಯಂತ, ಅದರಲ್ಲೂ ವಿಶೇಷವಾಗಿ ದಿಲ್ಲಿಯಲ್ಲಿ ನಡೆದ ಸತ್ಯಾಗ್ರಹದ ಪರಿಣಾಮವಾಗಿ ಕೇಂದ್ರ ಸರಕಾರ ಈ ಕಾನೂನುಗಳನ್ನು ಹಿಂತೆಗೆದುಕೊಂಡಿದ್ದರೂ ರಾಜ್ಯ ಸರಕಾರಗಳ ಮೂಲಕ ಇದೇ ಕಾನೂನುಗಳನ್ನು ಜಾರಿಗೆ ತರಲು ಯತ್ನಿಸಿದೆ. ಕರ್ನಾಟಕದಲ್ಲೇ ಈ ಮೂರು ಕಾನೂನುಗಳೊಂದಿಗೆ ಭೂ ಸುಧಾರಣಾ ಕಾಯಿದೆಯ ತಿದ್ದುಪಡಿಯನ್ನೂ ಜಾರಿಗೆ ತರಲಾಗಿದೆ. ಹಾಗೆಯೇ ಗೋ ಸಂರಕ್ಷಣಾ ಕಾಯಿದೆಯೂ ಜಾರಿಯಲ್ಲಿದೆ. ಈ ಕಾನೂನುಗಳನ್ನು ಈಗಿನ ರಾಜ್ಯ ಸರಕಾರವು ಮುಂದಿನ ಅಧಿವೇಶನದಲ್ಲೇ ಹಿಂತೆಗೆದುಕೊಂಡು ರೈತ ಪರ ನಿಲುವನ್ನು ಸಾಬೀತುಪಡಿಸಬೇಕು ಎಂದು ಈ ಮೇಳ ಒತ್ತಾಯಿಸುತ್ತದೆ.
3) ಪ್ರಾಥಮಿಕ, ಶಿಕ್ಷಣ ಮತ್ತು ಉನ್ನತ ಶಿಕ್ಷಣ ಎರಡೂ ಹಂತಗಳಲ್ಲೂ ರಾಜ್ಯ ಸರಕಾರ ನಿಲುವು, ಹೆಜ್ಜೆಗಳು ಅಸ್ಪಷ್ಟವಾಗಿವೆ. ಪ್ರಾಥಮಿಕ ಹೈಸ್ಕೂಲ್ ಮಟ್ಟದಲಿ ಪಬ್ಲಿಕ್ ಪರೀಕ್ಷೆಯಂಥಾ ಕ್ರಮಗಳು ಸರಕಾರದ ಉಪಕ್ರಮಗಳು ಶಿಕ್ಷಣ ನೀತಿಯನ್ನು ಸುಧಾರಿಸುವ ಪುರಾವೆಗಳನ್ನು ಹೊಂದಿಲ್ಲ. ಮಕ್ಕಳ ಕಲಿಕಾ ಮಟ್ಟವನ್ನು ಅರಿಯುವ ಕ್ರಮವಾದರೆ, ಅದರಲ್ಲಿ ಶಿಕ್ಷಕರ ಪಾತ್ರ ಎಷ್ಟು, ಕಲಿಕಾ ಸುಧಾರಣೆಯ ಕ್ರಮಗಳೇನು ಎಂಬುದನ್ನು ಶಿಕ್ಷಣ ತಜ್ಞರ ಸಮಾಲೋಚನೆಯೊಂದಿಗೆ ಸರಕಾರ ಮುಂದಿಡಬೇಕು. ಮುಖ್ಯತಃ ಶಾಲೆಗಳ ಮೂಲಭೂತ ಸೌಕರ್ಯವನ್ನು, ಶಿಕ್ಷಕರ ಸಂಖ್ಯೆಯನ್ನೂ ಉತ್ತಮಪಡಿಸಬೇಕಷ್ಟೇ ಅಲ್ಲ, ಶಿಕ್ಷಕರ ಬೋಧನಾ ಜವಾಬ್ದಾರಿಯ ಮೇಲೆ ನಿಗಾ ಇಟ್ಟು ಕ್ರಮ ಕೈಗೊಳ್ಳುವ ಉಪಕ್ರಮಗಳನ್ನೂ ಹೆಚ್ಚು ವೈಜ್ಞಾನಿಕವಾಗಿಸಬೇಕು.
4) ರಾಜ್ಯದ ಸಾಹಿತ್ಯ ಮತ್ತು ಸಾಂಸ್ಕೃತಿಕ ನೀತಿಯು ಹಳೇ ಜಾಡಿನಲ್ಲಿದೆ. ರಾಜ್ಯದ ಅಂಚಿಗೆ ಸರಿದ ಸಮುದಾಯಗಳ ಭಾಷೆ ಸಂಸ್ಕೃತಿಯ ಉಳಿವು ಮತ್ತು ಪುನಶ್ಚತನಕ್ಕಾಗಿ ಸರಕಾರ ವಿಶೇಷವಾದ ನೀತಿ ಮತ್ತು ಕಾರ್ಯಕ್ರಮಗಳನ್ನು ಯೋಜಿಸಬೇಕಿದೆ. ಹಾಗೇಯೇ ಸಾಂಸ್ಕೃತಿಕ ಮತ್ತು ಸಾಹಿತ್ಯ ನೀತಿಗಳೂ ಕರ್ನಾಟಕದ ಕನ್ನಡ ಮತ್ತು ಇತರ ಭಾಷಾ ವೈವಿಧ್ಯತೆಗಳನ್ನು ಹೆಣೆದು ಬೆಳೆಸುವ ರೀತಿಯಲ್ಲಿ ರೂಪಿಸಬೇಕಿದೆ. ಮುಂದಿನ ದಿನಗಳಲ್ಲಿ ಸರಕಾರ ಈ ಕುರಿತ ಸಂವಾದ, ಚರ್ಚೆಗಳನ್ನು ಆರಂಭಿಸಿ ತನ್ಮೂಲಕ ಈ ವರ್ಷದಲ್ಲೇ ನವೀನ ಹೆಜ್ಜೆಗಳನ್ನು ಇಡಬೇಕಿದೆ.
5) ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳ ಅನಭಿವೃದ್ಧಿಗೆ 60 ವರ್ಷಗಳ ಇತಿಹಾಸವಿದೆ. ಕಲ್ಯಾಣ ಕರ್ನಾಟಕಕ್ಕೆ ಸಾಂವಿಧಾನಿಕವಾಗಿ ವಿಶೇಷ ಸ್ಥಾನಮಾನ ದೊರಕಿದ್ದರೂ ವಾಸ್ತವದಲ್ಲಿ ಗುಣಾತ್ಮಕ ಬದಲಾವಣೆಗಳೇನೂ ಕಂಡಿಲ್ಲ. ಈ ಭಾಗದ ಅಭಿವೃದ್ಧಿಗೆ ಖಾಸಗಿ ಹೂಡಿಕೆ, ಇತ್ಯಾದಿ ಜಾಗತೀಕರಣದ ಸೂಚಿಗಳನ್ನು ಅವಲಂಬಿಸಿದ ಘೋಷಣೆಗಳೇ ಹೆಚ್ಚಾಗಿವೆ. ಈ ಕುರಿತ ಸಮಗ್ರವಾದ ವಿವರಗಳುಳ್ಳ ಶ್ವೇತ ಪತ್ರ ರಾಜ್ಯ ಸರ್ಕಾರ ಮಂಡಿಸಬೇಕು. ಹಿಂದುಳಿಯುವಿಕೆಯನ್ನು ಮಾಪನ ಮಾಡಲು ತಜ್ಞರ ನೇಮಿಸಿ ಅವರು ಕೊಟ್ಟ ವರದಿ ಆಧರಿಸಿ ವಿಕೇಂದ್ರೀಕೃತ, ಸ್ಥಳೀಯ ಕೌಶಲ್ಯ, ಉದ್ಯೋಗ ಸೃಷ್ಟಿಯ ಮಾದರಿಗಳನ್ನು ಅನ್ವೇಶಿಸಿ ಕಾಲಮಿತಿಯ ಯೋಜನೆಗಳನ್ನು ಸರಕಾರ ಕೈಗೊಂಡು ಈ ಪ್ರದೇಶಗಳ ಹಿಂದುಳಿದಿರುವಿಕೆಗೆ ಅಂತ್ಯ ಹೇಳಬೇಕಿದೆ.