ತುಂಗಭದ್ರಾ ಜಲಾಶಯಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ; ಪರಿಶೀಲನೆ
ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ತುಂಡಾದ ಘಟನೆ ಕುರಿತಂತೆ ಬೃಹತ್ ನೀರಾವರಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೊಪ್ಪಳದ ಮುನಿರಾಬಾದ್ ಹತ್ತಿರದ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ, ಎನ್.ಎಸ್.ಬೋಸರಾಜು, ಸಂಸದರಾದ ಇ.ತುಕಾರಾಮ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಎಚ್.ಆರ್.ಗವಿಯಪ್ಪ ಸೇರಿದಂತೆ ಇನ್ನೀತರ ಜನಪ್ರತಿನಿಧಿಗಳೊಂದಿಗೆ ಉಪ ಮುಖ್ಯಮಂತ್ರಿಗಳು ಜಲಾಶಯಕ್ಕೆ ಆಗಮಿಸಿ, ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ಘಟನೆಯ ಬಗ್ಗೆ ಮಾಹಿತಿ ಪಡೆದರು.
ಕೊಚ್ಚಿ ಹೋದ ಕ್ರಸ್ಟ್ ಗೇಟ್ ಪರಿಶೀಲಿಸಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆಣೆಕಟ್ಟಿನ 16 ಗೇಟ್‌ಗಳನ್ನು ಸಿಡಬ್ಲ್ಯೂಸಿ ನಿರ್ವಹಣೆ ಮಾಡುತ್ತದೆ. ಇನ್ನುಳಿದ ಗೇಟ್‌ಗಳ ನಿರ್ವಹಣೆಯನ್ನು ರಾಜ್ಯ ಸರಕಾರ ಮಾಡುತ್ತದೆ. ತುಂಗಭದ್ರಾ ಆಣೆಕಟ್ಟಿನ 19ನೇ ಗೇಟ್ ಚೈನ್ ಲಿಂಕ್ ಮುರಿದಿರುವುದರಿಂದ ನೀರು ರಭಸವಾಗಿ ನದಿಗೆ ಹರಿಯುತ್ತಿದೆ. ಆ.10ರ ರಾತ್ರಿ ಸಮಯದಿಂದಲೇ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯಲಾಗುತ್ತಿದೆ. ಮೂರು ರಾಜ್ಯಗಳಿಗೆ ಸೇರಿರುವ ನೀರನ್ನು ಉಳಿಸಿಕೊಂಡು ಆಣೆಕಟ್ಟಿನ ಗೇಟನ್ನು ದುರಸ್ತಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಆಣೆಕಟ್ಟಿನ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತದೆ. ರೈತರ ಬಗ್ಗೆ ನಮಗೆ ಕಾಳಜಿ ಇದೆ. ರೈತರ ಸಲಹೆಗಳಿಗೂ ನಾವು ಗೌರವಿಸುತ್ತೇವೆ. ಅಂತಿಮವಾಗಿ ತಜ್ಞರ ವರದಿ ಆಧರಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.