ತುಂಗಭದ್ರಾ ಅಣೆಕಟ್ಟು ಗೇಟ್ ಅವಘಡ : ತನಿಖೆಗೆ ಸಮಿತಿ ರಚನೆ
ಕೊಪ್ಪಳ : ಜಿಲ್ಲೆಯ ಮುನಿರಾಬಾದ್‌ನ ತುಂಗಭದ್ರಾ ಅಣೆಗಟ್ಟಿನ ಕ್ರಸ್ಟ್ ಗೇಟೊಂದು ಅ.10 ರಂದು ತುಂಡಾಗಿ ಕಳಚಿ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಘಟನೆ ಸಂಬಂಧ ತನಿಖೆ ನಡೆಸಲು ತಾಂತ್ರಿಕ ವಿಚಾರಣಾ ಸಮಿತಿಯನ್ನು ಟಿ.ಬಿ.ಬೋರ್ಡ್ ರಚನೆ ಮಾಡಿದೆ.
ಬಯಲು ಸೀಮೆಯ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯ(ಟಿ.ಬಿ.ಡ್ಯಾಂ)ದ 19ನೇ ಕ್ರಸ್ಟ್‌ಗೇಟ್‌ನ ಚೈನ್ ಕಡಿದುಹೋಗಿ ಇಡೀ ಗೇಟ್ ಮುರಿದು ಬಿದ್ದು ಭಾರೀ ಅನಾಹುತ ಸಂಭವಿಸಿತ್ತು. ತುಂಬಿ ತುಳುಕುತ್ತಿದ್ದ, ಜಲಾಶಯದಿಂದ 40 ಟಿಎಂಸಿ ಗೂ. ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿದುಹೋಗಿತ್ತು.
ಇದಕ್ಕೆ ಅಧಿಕಾರಿಗಳ, ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎನ್ನುವ ಆರೋಪ ಸಾರ್ವಜನಿಕ ಮತ್ತು ರೈತರಿಂದ ಕೇಳಿ ಬಂದಿತ್ತು. ಈ ಆರೋಪಗಳ ಹಿನ್ನೆಲೆಯಲ್ಲಿ ದಿಲ್ಲಿ ಮೂಲದ ಎ.ಕೆ.ಬಜಾಜ್ ಎನ್ನುವವರ ನೇತೃತ್ವದಲ್ಲಿ ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯಲ್ಲಿ ಒಬ್ಬ ಅಧ್ಯಕ್ಷ ಮತ್ತು ಐದು ಜನ ಸದಸ್ಯರುಳ್ಳ ತಾಂತ್ರಿಕ ವಿಚಾರಣಾ ಸಮಿತಿಯನ್ನು ಟಿ.ಬಿ.ಬೋರ್ಡ್ ರಚನೆ ಮಾಡಿದೆ.
ಕ್ರಸ್ಟ್ ಗೇಟ್ ಕೊಂಡಿ ಕಳಚಿ ಬೀಳಲು ಕಾರಣ ವೇನು?. ಗೇಟ್ ನಿರ್ವಹಣೆ ಕೆಲಸ ಮಾಡಿದವರು ಯಾರು?. ಜಲಾಶಯಕ್ಕೆ ನೀರು ಹರಿದು ಬರುವಾಗ ಗೇಟ್ ಪರಿಶೀಲನೆ ಮಾಡಲಾಗಿತ್ತೇ? ದುರುಂತ ಮುನ್ನ ಪರ್ಯಾಯ ವ್ಯವಸ್ಥೆ ಯಾಕೆ ಮಾಡಿರಲಿಲ್ಲ? ಜಲಾಶಯದ 32 ಗೇಟ್ ಗಳ ಪರಿಸ್ಥಿತಿ ಹಾಗೂ ಗುಣಮಟ್ಟ ಪರಿಶೀಲನೆ ಮಾಡಲಾಗಿತ್ತೇ? ಸೇರಿದಂತೆ ಗೇಟ್ ಗಳ ಸಾಮರ್ಥ್ಯ ಹಾಗೂ ಸ್ಥಿತಿಗತಿ ಬಗ್ಗೆ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಬಗ್ಗೆ ಮಾಹಿತಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ.