ಯೋಗದಲ್ಲಿ ಪ್ರಬುದ್ಧತೆ ಸಾಧಿಸುವುದು ನಮ್ಮ ಗುರಿಯಾಗಿರಲಿ: ಡಾ. ವಿನಯ ಪೂರ್ಣಿಮಾ ಅಭಿಮತ
ಮಂಗಳೂರು,ಜೂ.20: ಯೋಗವೆಂದರೆ ಶಾರೀರಿಕವಾಗಿ ಫಿಟ್ ಆಗುವುದು ಮಾತ್ರವಲ್ಲ, ಅದು ಮನಸ್ಸು, ಆಧ್ಯಾತ್ಮಗಳಿಗೆ ಸಂಬಂಧಪಟ್ಟದ್ದು. ದೇಹ, ಮನಸ್ಸನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆ. ಸರಳವಾಗಿ ಯೋಗಾಭ್ಯಾಸ ಆರಂಭಿಸಿ ಬಳಿಕ ಪ್ರಬುದ್ಧತೆ ಸಾಧಿಸುವ ಗುರಿ ನಮ್ಮದಾಗಬೇಕು, ಎಂದು ಕಸ್ತೂರ್ ಬಾ ವೈದ್ಯಕೀಯ ಕಾಲೇಜಿನ ವಿಕಿರಣಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ವಿನಯ ಪೂರ್ಣಿಮಾ ಅಭಿಪ್ರಾಯಪಟ್ಟಿದ್ದಾರೆ.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ಹಾಗೂ ಯೋಗ ವಿಜ್ಞಾನ ವಿಭಾಗವು, ಕಾಲೇಜಿನ ಐಕ್ಯೂಎಸಿ ಸಹಯೋಗದೊಂದಿಗೆ, ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಮ್ಮೊಳಗಿನ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಆ ಮೂಲಕ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಯೋಗವೊಂದು ಸಾಧನ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ, ಕಾಲೇಜಿನ ಯೋಗ ವಿಜ್ಞಾನ ವಿಭಾಗ ನಡೆಸುವ ಯೋಗ ತರಗತಿಗಳಿಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿರುವುದನ್ನು ಗಮನಿಸಿ, ಹೊಸತಾಗಿ ಯೋಗ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದೆ ಎಂದರು.
ವಿದ್ಯಾರ್ಥಿ, ಯೋಗಪಟು ಪ್ರತ್ಯಕ್ಷ ಕುಮಾರ್ ಯೋಗಾಸನಗಳ ಪ್ರಾತ್ಯಕ್ಷಿಕೆ ನೀಡಿದರು.
ಕಾಲೇಜಿನ ಯೋಗ ವಿಜ್ಞಾನ ವಿಭಾಗದ ಸಂಯೋಜಕ ಡಾ. ಕೇಶವಮೂರ್ತಿ ಸ್ವಾಗತಿಸಿದರು. ಉಪನ್ಯಾಸಕ ಅಜಿತೇಶ್ ಅತಿಥಿ ಪರಿಚಯ ಮಾಡಿದರು. ಡಾ. ರಂಗಪ್ಪ ವಂದಿಸಿದರು. ಸಂಧ್ಯಾ ಕಾಲೇಜಿನ ಉಪನ್ಯಾಸಕಿ, ಯೋಗ ವಿದ್ಯಾರ್ಥಿ ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಯೋಗ ವಿಜ್ಞಾನ ವಿಭಾಗದ ಉಮಾನಾಥ ಕೆ ಅವರ ನೇತೃತ್ವದಲ್ಲಿ ಸುಮಾರು ಒಂದು ಗಂಟೆಯ ಯೋಗಾಭ್ಯಾಸ ನಡೆಯಿತು.