ಮಹಾರಾಷ್ಟ್ರ | ರಾಹುಲ್ ಗಾಂಧಿಯವರ ಸುಳ್ಳುಗಳನ್ನು ನಿರ್ಬಂಧಿಸಿ : ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

Update: 2024-11-11 17:04 GMT

ರಾಹುಲ್ ಗಾಂಧಿ | PC : PTI 

ಹೊಸದಿಲ್ಲಿ : ಮುಂದಿನ ವಾರ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಸುಳ್ಳುಗಳನ್ನು ಹರಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಛೀಮಾರಿ ಹಾಕುವಂತೆ, ಖಂಡಿಸುವಂತೆ ಮತ್ತು ನಿರ್ಬಂಧಿಸುವಂತೆ ಬಿಜೆಪಿಯು ಸೋಮವಾರ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.

ಮಾದರಿ ನೀತಿ ಸಂಹಿತೆಯ ಸಮಗ್ರ ಉಲ್ಲಂಘನೆಗಾಗಿ ರಾಹುಲ್ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಬಿಜೆಪಿ ಆಯೋಗಕ್ಕೆ ಸಲ್ಲಿಸಿರುವ ಲಿಖಿತ ದೂರಿನಲ್ಲಿ ಒತ್ತಾಯಿಸಿದೆ. ಕಳೆದ ವಾರ ರಾಹುಲ್ ಮುಂಬೈನಲ್ಲಿ ಮಾಡಿದ್ದ ಭಾಷಣದ ಭಾಗವನ್ನು ಅದು ತನ್ನ ದೂರಿನಲ್ಲಿ ಪ್ರಸ್ತಾವಿಸಿದ್ದು,ಇತರ ರಾಜ್ಯಗಳು ಮಹಾರಾಷ್ಟ್ರದ ಅವಕಾಶಗಳನ್ನು ಕಿತ್ತುಕೊಂಡಿವೆ ಎಂಬ ಸುಳ್ಳು ಆರೋಪವನ್ನು ಅವರು ಮಾಡಿದ್ದಾರೆ ಎಂದು ತಿಳಿಸಿದೆ.

ರಾಹುಲ್ ಮಹಾರಾಷ್ಟ್ರದಲ್ಲಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಬಿಜೆಪಿ ಸಂವಿಧಾನವನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ ಎಂದು ನಾವು ಆಯೋಗಕ್ಕೆ ತಿಳಿಸಿದ್ದೇವೆ ಎಂದು ಉನ್ನತ ಚುನಾವಣಾ ಅಧಿಕಾರಿಗಳನ್ನು ಭೇಟಿಯಾಗಿದ್ದ ಬಿಜೆಪಿ ನಿಯೋಗದ ನೇತೃತ್ವ ವಹಿಸಿದ್ದ ಕೇಂದ್ರ ಕಾನೂನು ಸಚಿವ ಅರ್ಜುನ ರಾಮ ಮೇಘ್ವಾಲ್ ತಿಳಿಸಿದರು.

ಮಹಾರಾಷ್ಟ್ರದ ಅವಕಾಶಗಳನ್ನು ಕಿತ್ತುಕೊಂಡು ಇತರ ರಾಜ್ಯಗಳಲ್ಲಿ ಆ್ಯಪಲ್ನ ಐಫೋನ್ಗಳು ಮತ್ತು ಬೋಯಿಂಗ್ ವಿಮಾನಗಳನ್ನು ತಯಾರಿಸಲಾಗುತ್ತಿದೆ ಎಂದು ರಾಹುಲ್ ತಳಬುಡವಿಲ್ಲದ ಹೇಳಿಕೆಗಳನ್ನು ನೀಡಿದ್ದಾರೆ. ನೋಟಿಸ್ ಜಾರಿಗೊಂಡ ಬಳಿಕವೂ ರಾಹುಲ್ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ವಾಸ್ತವದಲ್ಲಿ ಮಹಾರಾಷ್ಟ್ರವು ಭಾರತದಲ್ಲಿ ವಿದೇಶಿ ನೇರ ಹೂಡಿಕೆಯಲ್ಲಿ ಅಗ್ರಸ್ಥಾನದಲ್ಲಿದೆ. ರಾಹುಲ್ ತನ್ನ ಹೇಳಿಕೆಗಳ ಮೂಲಕ ಮಹಾರಾಷ್ಟ್ರದ ಯುವಜನರನ್ನು ಪ್ರಚೋದಿಸುತ್ತಿದ್ದಾರೆ. ಇದು ತೀವ್ರ ಅಪಾಯಕಾರಿಯಾಗಿದೆ ಎಂದು ಬಿಜೆಪಿ ತನ್ನ ದೂರಿನಲ್ಲಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News