ಮಂಡ್ಯದಲ್ಲಿ ಮತ್ತೊಂದು ಹೆಣ್ಣು ಭ್ರೂಣಪತ್ತೆ ಪ್ರಕರಣ ಬೆಳಕಿಗೆ | ಮೂವರ ಬಂಧನ, ಪ್ರಮುಖ ಆರೋಪಿ ಪರಾರಿ

Update: 2024-08-16 13:20 GMT

ಮಂಡ್ಯ: ಜಿಲ್ಲೆಯಲ್ಲಿ ಹೆಣ್ಣು ಭ್ರೂಣಪತ್ತೆ ಮತ್ತು ಹತ್ಯೆ ಪ್ರಕರಣಗಳು ಮುಂದುವರಿದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ತವರು ನಾಗಮಂಗಲ ತಾಲೂಕಿನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಈ ಹಿಂದೆ ಮಂಡ್ಯ ತಾಲೂಕಿನ ಹಾಡ್ಯ-ಹುಳ್ಳೇನಹಳ್ಳಿ ಮಧ್ಯೆ ಇರುವ ಆಲೆಮನೆ ಹಾಗೂ ಪಾಂಡವಪುರದ ಆರೋಗ್ಯ ಇಲಾಖೆ ಸಿಬ್ಬಂದಿ ವಸತಿಗೃಹದ ಬಳಿ ಬೆಳಕಿಗೆ ಬಂದಿದ್ದ ಪ್ರಕರಣಗಳ ಆರೋಪಿ ಅಭಿಷೇಕ್ ಎಂಬಾತ ನಾಗಮಂಗಲದ ಪ್ರಕರಣದಲ್ಲೂ ಭಾಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ನಾಗಮಂಗಲ ತಾಲೂಕಿನ ಮಾವಿನಕೆರೆ ಗ್ರಾಮದ ತೋಟದ ಮನೆಯೊಂದರಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಮನೆಯ ಮಾಲಕನೆನ್ನಲಾದ ಧನಂಜಯ, ಭ್ರೂಣ ಪತ್ತೆಗೆ ಪತ್ನಿಯೊಂದಿಗೆ ಬಂದಿದ್ದ ಹಾನಸಜಿಲ್ಲೆ ರಾಮನಾಥಪುರದ ಮನೋಹರ್ ಹಾಗೂ ಖಾಸಗಿ ನರ್ಸಿಂಗ್ ಡಿ ಗ್ರೂಪ್ ಸಿಬ್ಬಂದಿ ನಾಗಮಣಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಪೊಲೀಸರ ಸಹಕಾರದೊಂದಿಗೆ ಈ ದಾಳಿ ನಡೆಸಿದ್ದು, ಪ್ರಮುಖ ಆರೋಪಿ ಅಭಿಷೇಕ್ ನಾಪತ್ತೆಯಾಗಿದ್ದಾನೆ. ಸ್ಥಳದಲ್ಲಿ ಭ್ರೂಣಹತ್ಯೆ ಕಿಟ್, ಸ್ಕ್ಯಾನಿಂಗ್ ಯಂತ್ರ ಪತ್ತೆಯಾಗಿದೆ ಎಂದು ಡಾ.ಮೋಹನ್ ತಿಳಿಸಿದ್ದಾರೆ.

ಬೆಂಗಳೂರಿನ ಬೈಯಪ್ಪನಹಳ್ಳಿಯ ಪೊಲೀಸರು ಕಳೆದ 2023ರ ನವೆಂಬರ್‌ನಲ್ಲಿ ಮಂಡ್ಯ ತಾಲೂಕು ಹಾಡ್ಯ ಹುಳ್ಳೇನಹಳ್ಳಿ ನಡುವಿನ ಆಲೆಮನೆಯೊಂದರ ಮೇಲೆ ದಾಳಿ ನಡೆಸಿದಾಗ ಕೊಠಡಿಯಲ್ಲಿ ಅಕ್ರಮವಾಗಿ ಹೆಣ್ಣು ಭ್ರೂಣಲಿಂಗ ಪತ್ತೆ ಕಾರ್ಯ ನಡೆಯುತ್ತಿದ್ದದ್ದು ಬೆಳಕಿಗೆ ಬಂದಿತ್ತು.

ಆಲೆಮನೆಯಲ್ಲಿ ಭ್ರೂಣಲಿಂಗ ಪರೀಕ್ಷೆ ನಡೆಸಿ ನಂತರ, ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಹೆಣ್ಣು ಭ್ರೂಣಹತ್ಯೆ ನಡೆಲಾಗುತ್ತಿತ್ತು. ಈ ಪ್ರಕರಣದಲ್ಲಿ ಹತ್ತು ಮಂದಿಯನ್ನು ಬಂಧಿಸಿದ್ದರು.

ಆಲೆಮನೆ ಪ್ರಕರಣದ ಬೆನ್ನುಹತ್ತಿ ತನಿಖೆ ಮುಂದುವರಿದಿದ್ದಾಗಲೇ ಕಳೆದ ಮೇ ತಿಂಗಳಲ್ಲಿ ಪಾಂಡವಪುರ ಪಟ್ಟಣದ ಆರೋಗ್ಯ ಇಲಾಖೆಯ ವಸತಿಗೃಹದ ಬಳಿಯ ಮನೆಯೊಂದರಲ್ಲೂ ಹೆಣ್ಣುಭ್ರೂಣ ಪತ್ತೆ ಪ್ರಕರಣ ಬೆಳಕಿಗೆ ಬಂದಿತ್ತು. ಅಲ್ಲಿನ ಸರಕಾರಿ ಆಸ್ಪತ್ರೆ ಅಂಬ್ಯುಲೆನ್ಸ್ ಚಾಲಕ ಸೇರಿದಂತೆ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದರು.

ಇದೀಗ ನಾಗಮಂಗಲ ತಾಲೂಕಿನಲ್ಲಿ ಹೆಣ್ಣುಭ್ರೂಣ ಪತ್ತೆಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮೊದಲ ಎರಡು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುವ ಅಭಿಷೇಕ್ ಎಂಬುವನು ಈ ಪ್ರಕರಣದಲ್ಲೂ ಭಾಗಿಯಾಗಿದ್ದು, ದಾಳಿ ವೇಳೆ ಪರಾರಿಯಾಗಿದ್ದಾನೆ. ಈತನ ಬಂಧನಕ್ಕೆ ಬೆಳ್ಳೂರು ಪೊಲೀಸರು ಬಲೆಬೀಸಿದ್ದಾರೆ ಎಂದು ಡಿಎಚ್‌ಒ ಡಾ.ಮೋಹನ್ ತಿಳಿಸಿದ್ದಾರೆ.

“ನಾಗಮಂಗಲದಲ್ಲಿ ಹೆಣ್ಣುಭ್ರೂಣ ಪತ್ತೆ ದಂಧೆ ನಡೆಯುತ್ತಿರುವ ಬಗ್ಗೆ ಎರಡು ತಿಂಗಳ ಹಿಂದೆಯೇ ಮಾಹಿತಿ ದೊರಕಿತ್ತು. ಆದರೆ, ಸ್ಥಳ ಗೊತ್ತಿರಲಿಲ್ಲ. ದಂಧೆಯನ್ನು ಪತ್ತೆಹಚ್ಚಲು ಯೋಜನೆ ಹಾಕಿಕೊಂಡಿದ್ದೆವು. ಅಂತೆಯೇ ಗುರುವಾರ ತಡರಾತ್ರಿ ಬೆಂಗಳೂರಿನ ಮೇಲಾಧಿಕಾರಿ ಡಾ.ವಿವೇಕ್ ದೊರೆ ನೇತೃತ್ವದಲ್ಲಿ ದಾಳಿ ನಡೆಸಿ ಪ್ರಕರಣ ಬೇಧಿಸಿದ್ದೇವೆ. ಈ ಸಂದರ್ಭದಲ್ಲಿ ಮನೆ ಮಾಲಕ ಧನಂಜಯ ನಮ್ಮ ಇಲಾಖೆಯ ಇಬ್ಬರು ಕಾರು ಚಾಲಕರ ಮೇಲೆ ಕಾರುಹರಿಸಿ ಕೊಲೆ ಮಾಡುವ ಯತ್ನ ನಡೆಸಿದ್ದ. ಆತ ಸೇರಿದಂತೆ ಗರ್ಭಿಣಿ ಪತಿ ಹಾಗೂ ಖಾಸಗಿ ಆಸ್ಪತ್ರೆ ಡಿ ಗ್ರೂಪ್ ಮಹಿಳಾ ಸಿಬ್ಬಂದಿಯನ್ನು ಬಂಧಿಸಿದ್ದೇವೆ. ಸ್ಕ್ಯಾನಿಂಗ್ ಯಂತ್ರ, ಅಬಾರ್ಷನ್ ಕಿಟ್ ವಶಪಡಿಸಿಕೊಂಡಿದ್ದೇವೆ. ಮೊದಲ ಎರಡು ಪ್ರಕರಣಗಳ ಆರೋಪಿಯಾದ ಅಭಿಷೇಕ್ ಸ್ಥಳದಿಂದ ಪರಾರಿಯಾಗಿದ್ದಾನೆ.”

-ಡಾ.ಮೋಹನ್, ಡಿಎಚ್‌ಒ, ಮಂಡ್ಯ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News