ಇಲಿ ಕೊಂದ ಆರೋಪ : ಯುವಕನನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು !

Update: 2023-07-30 14:24 GMT

Photo: Twitter/@MuslimSpaces

-ಆರ್. ಜೀವಿ

ಉತ್ತರ ಪ್ರದೇಶದಲ್ಲಿ ಜಂಗಲ್ ರಾಜ್ ತಂದಿದ್ದು ಇಲಿಯನ್ನು ಕೊಂದ ಆರೋಪಿಗಳೇ ? ಅರೇ ಇದೆಂತ ಪ್ರಶ್ನೆ ಅಂದ್ರಾ. ಉತ್ತರ ಪ್ರದೇಶದ ಪೊಲೀಸರು ಮೊನ್ನೆ ಇಲಿಯನ್ನು ಕೊಂದ ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲಿಗೆ ಎಸ್ಪಿ ಪಕ್ಷದ ಅಖಿಲೇಶ್ ಯಾದವ್ ಇದ್ದಾಗ ನಿರ್ಮಾಣವಾಗಿದ್ದ ಉತ್ತರ ಪ್ರದೇಶದ ಜಂಗಲ್ ರಾಜ್ ಈಗ ಸಿಎಂ ಆದಿತ್ಯನಾಥ್ ಅವರ ಮಾರ್ಗದರ್ಶನದಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥೆಯ ರಾಜ್ಯವಾಗಿ ಮಾರ್ಪಾಡಾಗಿದೆ.

2017ರ ವಿಧಾನಸಭಾ ಚುನಾವಣೆ ಸಂದರ್ಭ ​"ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಕ್ರಿಮಿನಲ್ ಗಳ ಜಂಗಲ್ ರಾಜ್ ನಿರ್ಮಿಸಿದೆ, ಅದನ್ನು ನಿರ್ಮೂಲನೆ ಮಾಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತರುವುದಾಗಿ​" ಮೋದಿ ನೇತೃತ್ವದಲ್ಲಿ ಬಿಜೆಪಿ ಪ್ರಚಾರ ಮಾಡಿತು. ಬಿಜೆಪಿಗೆ ಭರ್ಜರಿ ಬಹುಮತ ಬಂತು. ಆಗ ಸಿಎಂ ಆಗುವ ಸಂಭಾವ್ಯರ ಪಟ್ಟಿಯಲ್ಲಿ ಆದಿತ್ಯನಾಥ್ ಇರಲೇ ಇಲ್ಲ. ಆದರೂ ಹುಡುಕಿ ತಂದು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದ ಸಂಸದ ಆದಿತ್ಯನಾಥ್ ರನ್ನೇ ಸಿಎಂ ಮಾಡಿತು ಬಿಜೆಪಿ. ಮುಖ್ಯಮಂತ್ರಿಯಾಗುವಾಗ ಆದಿತ್ಯನಾಥ್ ಮೇಲೆ ಕೊಲೆ, ಕ್ರಿಮಿನಲ್ ಪ್ರಚೋದನೆ, ಗಲಭೆಕೋರತನ, ಸಮುದಾಯಗಳ ನಡುವೆ ದ್ವೇಷ ಹರಡುವುದು ಹಾಗು ಆರಾಧನಾ ಸ್ಥಳಗಳನ್ನು ಮಲಿನಗೊಳಿಸುವುದು - ಈ ಎಲ್ಲ ಆರೋಪಗಳ ಕ್ರಿಮಿನಲ್ ಕೇಸುಗಳಿದ್ದವು. ಇದೆಲ್ಲವನ್ನು ಅವರೇ ತಮ್ಮ​ ಲೋಕಸಭಾ ಚುನಾವಣಾ​ ನಾಮಪತ್ರದ ಅಫಿಡವಿಟ್ ನಲ್ಲೂ ಹೇಳಿಕೊಂಡಿದ್ದರು. ಅವರ ಹಿಂದೂ ಯುವ ವಾಹಿನಿ ಸಂಘಟನೆ ಅಲ್ಪಸಂಖ್ಯಾತರ ಮೇಲೆ ಹತ್ತು ಹಲವು ದಾಳಿ ಮಾಡಿದ, ಹಿಂಸಾಚಾರ ಎಸಗಿದ ಆರೋಪಗಳನ್ನು ಎದುರಿಸುತ್ತಿತ್ತು.

ಆದರೂ ಬಿಜೆಪಿಗೆ ಪ್ರಚಂಡ ಬಹುಮತ ಬಂದಾಗ ಅಲ್ಲಿ ಆಯ್ಕೆಯಾದ ಎಲ್ಲ ಶಾಸಕರನ್ನು ಬಿಟ್ಟು ಕ್ರಿಮಿನಲ್ ಆರೋಪಿ ಆದಿತ್ಯನಾಥ್ ರನ್ನು ಮುಖ್ಯಮಂತ್ರಿ ಮಾಡಿತು. ಆಮೇಲೆ ಇದೇ ಕ್ರಿಮಿನಲ್ ಆರೋಪಿ ಮುಖ್ಯಮಂತ್ರಿ ತನ್ನ ಮೇಲಿದ್ದ ಕೇಸನ್ನು ತಾನೇ ಹಿಂಪಡೆದರು. ಇನ್ನು ಕೆಲವು ನ್ಯಾಯಾಲಯಗಳಲ್ಲಿ ಬಿಟ್ಟು ಹೋಯಿತು.

ಹಾಗೆ 2022 ರ ವಿಧಾನ ಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಆದಿತ್ಯನಾಥ್ ವಿರುದ್ಧ ಕ್ರಿಮಿನಲ್ ಕೇಸುಗಳೇ ಇರಲಿಲ್ಲ. ಅಂದರೆ ಕ್ರಿಮಿನಲ್ ಗಳಿಂದ ಉತ್ತರ ಪ್ರದೇಶದಲ್ಲಿ ಸೃಷ್ಟಿಯಾಗಿದ್ದ ಜಂಗಲ್ ರಾಜ್ ಅನ್ನು ಕೊನೆಗೊಳಿಸಲು ಯಾರ ಮೇಲೆ ಕ್ರಿಮಿನಲ್ ಕೇಸುಗಳಿವೆಯೋ ಅವರನ್ನೇ ಸಿಎಂ ಮಾಡಿ ಆಮೇಲೆ ಅವರೇ ತಮ್ಮ ಮೇಲಿನ ಕೇಸು ವಾಪಸ್ ಪಡೆದು ಕ್ರಿಮಿನಲ್ ಕೇಸುಗಳೇ ಇಲ್ಲದಂತೆ ಮಾಡುವ ವಿನೂತನ​ ಆಡಳಿತ ಕ್ರಮವನ್ನು ಬಿಜೆಪಿ ಜಾರಿ ಮಾಡಿತ್ತು.

​ಅದರ ಮುಂದುವರಿದ ಭಾಗವೇ ಈಗ ಇಲಿ ಕೊಂದವನನ್ನು ಅರೆಸ್ಟ್ ಮಾಡಿದ ಸ್ಟೋರಿ. ಉತ್ತರ ಪ್ರದೇಶದ ಪೊಲೀಸರ ಬಗ್ಗೆ​ ಇತ್ತೀಚಿನ ವರ್ಷಗಳಲ್ಲಿ ಎಂಥೆಂಥ ಸುದ್ದಿಗಳನ್ನೆಲ್ಲ ಕೇಳಿದ್ದೇವೆ. ಅಂಥದ್ದರಲ್ಲಿ, ​ಈಗ ಇಲಿ ಕೊಂದವನನ್ನು ಅರೆಸ್ಟ್ ಮಾಡಿದರು ಎಂಬ ಸುದ್ದಿಯೊಂದು ಬಂದಿದೆ.

ಐದೇ ವರ್ಷಗಳಲ್ಲಿ 160ಕ್ಕೂ ಹೆಚ್ಚು ಕ್ರಿಮಿನಲ್ಗಳನ್ನು ಎನ್ಕೌಂಟರ್ ಮಾಡಿ ಬಿಸಾಕಿದ್ದೇವೆ ಎಂದು ಸ್ವತಃ ಸಿಎಂ ​ಆದಿತ್ಯನಾಥ್ ಅವರೇ ಹೇಳಿದ್ದಿದೆ. ಅಲ್ಲೀಗ ಎಲ್ಲ​ ಅಪರಾಧಿಗಳನ್ನು ಹಿಡಿದು ಹಿಡಿದು ಜೈಲೊಳಗೆ ತುಂಬಿಬಿಟ್ಟಿ​ರೋದ್ರಿಂದ ಇನ್ನೇನಿದ್ದರೂ ಇಲಿ ಕೊಂದವರು, ಇರುವೆ ಹೊಸಕಿದವರು ಇಂಥವರನ್ನು ಮಾತ್ರ ಹಿಡಿಯುವ ಕೆಲಸವಷ್ಟೇ ​ಅಲ್ಲಿ ಬಾಕಿಯಿ​ತ್ತು. ಅದನ್ನು ಈಗ ಅಲ್ಲಿನ ಪೊಲೀಸರು ಪೂರ್ಣಗೊಳಿಸಿದ್ದಾರೆ.

​ಅಂದರೆ ಉತ್ತರ ಪ್ರದೇಶದಲ್ಲಿ ​ಆದಿತ್ಯನಾಥ್ ಸರ್ಕಾರದಡಿಯಲ್ಲಿ ಮೂಕ ಇಲಿಗಳ ಪಾಲಿಗೂ ​ಈಗ ಅಚ್ಛೇದಿನಗಳು ಬಂದುಬಿ​ಟ್ಟಿವೆ. ನೋಯ್ಡಾದ ಯುವಕ​ ಝೈನುಲ್ ಆಬಿದೀನ್ ನನ್ನು ಪೊಲೀಸರು ಮೊನ್ನೆ ಬಂಧಿಸಿದ್ದಾರೆ. ಏಕೆ ಎಂದು ಕೇಳಿದರೆ, ಆತ ಇಲಿಯ ಮೇಲೆ ಬೈಕ್ ಹರಿಸಿ ಕೊಂದುಬಿಟ್ಟಿದ್ದಾನೆ.​ ಹಾಗೆ ಇಲಿಯ ಮೇಲೆ ಬೈಕ್ ಹಾಯಿಸಿ ಕೊಂದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದನ್ನು ಕಂಡವರೇ ತಕ್ಷಣ ಆಕ್ಷನ್ ತೆಗೆದುಕೊಂಡಿದ್ದಾರೆ. ಎಂ​ಥಾ ದಕ್ಷತೆ ಅಲ್ಲವೆ​ ?

ಆ ವೀಡಿಯೊ ನೋಡಿದ ಇಬ್ಬರು, ಹಾಗೆ ಇಲಿಯ ಮೇಲೆ ಬೈಕ್ ಹರಿಸಿದವನ ಮನೆಗೆ ಬಂದು ಆತನ ಸಹೋದರನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರನ್ನು ಬಂಧಿಸಿದ ಪೊಲೀಸರು, ಕಡೆಗೆ ಇಲಿ ಕೊಂದವನನ್ನೂ ಅರೆಸ್ಟ್ ಮಾಡಿದ್ಧಾರೆ. ಕಡೆಗೆ ಏನಾಯ್ತೊ ಗೊತ್ತಿಲ್ಲ. ಗಲಾಟೆಯೊಂದರ ಸಂಬಂಧ ಆತನನ್ನು ಬಂಧಿಸಿರೋದು ಎಂದು ಸಬೂಬು ಹೇಳಿದ್ದಾರೆ.​ ಬಂಧಿತನನ್ನು ಬಿಡುಗಡೆ ಮಾಡಿದ್ದೂ ಆಗಿದೆ. ಈ ಮಧ್ಯೆ, ಈ ವಿಚಾರವಾಗಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದೂ ವರದಿ ಹೇಳುತ್ತದೆ. ​ಆದಿತ್ಯನಾಥ್ ರ ಆಡಳಿತದಲ್ಲಿ ಪ್ರಾಣ ಕಳೆದುಕೊಂಡ ಇಲಿಗೆ ನ್ಯಾಯ ಸಿಕ್ಕಿತು. ಏಕೆಂದರೆ ಅದರ ಕೊಲೆ ಆರೋಪಿ ಝೈನುಲ್ ಆಬಿದೀನ್ ಆಗಿದ್ದ.

ಏಕೆಂದರೆ ಅಲ್ಲಿ ಅನ್ಯಾಯವಾಗಿ ಪ್ರಾಣ ಕಳೆದುಕೊಂಡವರು, ಹಲ್ಲೆಗೊಳಗಾದವರು, ಅತ್ಯಾಚಾರಕ್ಕೊಳಗಾದವರು, ಲೂಟಿ ಗೊಳಗಾದವರು ಮುಸ್ಲಿಮರು, ದಲಿತರು ಆಗಿದ್ದರೆ ಆರೋಪಿಗಳು ಸಂಘ ಪರಿವಾರದ ಹಿನ್ನೆಲೆಯವರಾಗಿದ್ದರೆ ಆ ಪ್ರಕರಣಗಳ ಸಂತ್ರಸ್ತರಿಗೆ ಆ ಇಲಿಗೆ ಸಿಕ್ಕಿದಷ್ಟು ನ್ಯಾಯ ಉತ್ತರ ಪ್ರದೇಶದಲ್ಲಿ ಸಿಗೋದು ಕಷ್ಟ. ​ಈಗ ಇಲಿ ಕೊಲೆ ಆರೋಪಿಯ ಬಂಧನವಾಗಿದೆ.

ಹೀಗೇ ಯಾವ್ಯಾವ ವಿಚಾರಕ್ಕೆಲ್ಲ ಯುಪಿಯಲ್ಲಿ ಬಂಧನವಾಗಬಹುದು​ ? ಕೆಲವು ಸ್ಯಾಂಪಲ್ಲುಗಳನ್ನು ಉದಾಹರಿಸುವುದಾದರೆ, ಹಥ್ರಾಸ್ ಅತ್ಯಾಚಾರ ಪ್ರಕರಣ ವರದಿ ಮಾಡ​ಲು ಹೋಗಿದ್ದಕ್ಕೆ ಪತ್ರಕರ್ತ ಸಿದ್ದೀಕ್ ಕಪ್ಪನ್ ಬಂಧನವಾಗುತ್ತದೆ. ಮಂತ್ರಿಯನ್ನು ಪ್ರಶ್ನಿಸಿದ್ದಕ್ಕೆ ​ಪತ್ರಕರ್ತ ಸಂಜಯ್ ರಾಣಾ ಅರೆಸ್ಟ್ ಆಗುತ್ತಾರೆ. ಬಿಸಿಯೂಟಕ್ಕೆ ರೋಟಿ, ಉಪ್ಪು ಕೊಟ್ಟಿದ್ದನ್ನು ವರದಿ ಮಾಡಿದ​ ಪತ್ರಕರ್ತ ಪವನ್ ಜೈಸ್ವಾಲ್ ಮೇಲೆಯೂ ಕೇಸು ಹಾಕಲಾಗುತ್ತದೆ. ಸಿಎಂ ಬಗ್ಗೆ ಬರೆದಿದ್ದಕ್ಕೆ​ ಪತ್ರಕರ್ತ ಪ್ರಶಾಂತ್ ಕನೋಜಿಯ ಮತ್ತಿತರ ಐವರನ್ನು ಬಂಧಿಸಲಾಗುತ್ತದೆ. ​ಪತ್ರಕರ್ತ ಝಾಕೀರ್ ಅಲಿ ತ್ಯಾಗಿಯನ್ನು ಮನೆಯಿಂದ ಹೊರಗೆ ದರದರನೆ ಎಳೆದುಕೊಂಡು ಹೋಗಿ ಬಂಧಿಸಲಾಗುತ್ತದೆ. ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ರೈತ ಯುವಕ ಸತ್ತಿದ್ದರ ಬಗ್ಗೆ ವರದಿ ಮಾಡಿದ ಪತ್ರಕರ್ತೆ ಇಸ್ಮತ್ ಅರಾ ಮೇಲೆ ಕೇಸು ಬೀಳುತ್ತದೆ​. ಸಿಎಎ ಎನ್ನಾರ್ಸಿ ವಿರೋಧಿಸಿದ್ದಕ್ಕೆ ​ಮಾನವ ಹಕ್ಕು ಕಾರ್ಯಕರ್ತರನ್ನು ಅರೆಸ್ಟ್ ಮಾಡಲಾಗುತ್ತದೆ.​ ಅವರಿಗೆ ಕಿರುಕುಳ ನೀಡಲಾಗುತ್ತದೆ. ಹೀಗೆ ​ಆದಿತ್ಯನಾಥ್ ಸಿಎಂ ಆದಾಗಿನಿಂದ ​ಅಲ್ಲಿನ ಬೆನ್ನುಮೂಳೆ ಇರುವ ಪತ್ರಕರ್ತರಂತೂ ಯುಪಿ ಪೊಲೀಸರ ಪರಾಕ್ರಮ​ವನ್ನು ಬಹಳ ಬಾರಿ ನೋಡಿದ್ದಾರೆ.

2017ರಿಂದ ​ಆದಿತ್ಯನಾಥ್ ಸರ್ಕಾರದ ​ಬಗ್ಗೆ ವಸ್ತುನಿಷ್ಠವಾಗಿ ವರದಿ ಮಾಡಿದವರೆಲ್ಲ ಅನುಭವಿಸಿದ ತಾಪತ್ರಯ ಒಂದೆರಡಲ್ಲ. ಈ ಐದಾರು ವರ್ಷಗಳಲ್ಲಿ 66 ಪತ್ರಕರ್ತರ ವಿರುದ್ಧ 138 ಕ್ರಿಮಿನಲ್ ಕೇಸ್ ದಾಖಲಾಗಿವೆ. 48 ಪತ್ರಕರ್ತರು ದೈಹಿಕವಾಗಿ ಹಲ್ಲೆಗೊಳಗಾಗಿದ್ದಾರೆ. ಇಷ್ಟೂ ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಾಗದೆ ಇರುವ ಯಾವ ಜಿಲ್ಲೆಯೂ ಇಲ್ಲ ಎಂದು ವರದಿಗಳು ಹೇಳುತ್ತವೆ. ಪತ್ರಕರ್ತರ ಪಾಲಿಗೆ ಯುಪಿ ದೇಶದಲ್ಲಿಯೇ ಎರಡನೇ ಅತ್ಯಂತ ಅಪಾಯಕಾರಿ ಸ್ಥಳವಾಗಿದೆ. ಈ ವಿಚಾರದಲ್ಲಿ ಅದು ಕಾಶ್ಮೀರವನ್ನೂ ಮೀರಿಸಿದೆ.

​ಮೊನ್ನೆ ಮೊನ್ನೆ ಅಲ್ಲಿನ ಅತೀಖ್ ಅಹ್ಮದ್ ಎಂಬ ಕ್ರಿಮಿನಲ್ ಆರೋಪ ಹೊತ್ತ ಮಾಜಿ ಸಂಸದ ಹಾಗು ಆತನ ಸಹೋದರನನ್ನು ಹತ್ತು ಹಲವು ಪೋಲೀಸರ ಎದುರಲ್ಲೇ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದರು. ಕೊಲೆಯಾಗಿದ್ದು ಮುಸ್ಲಿಂ ಕ್ರಿಮಿನಲ್ ಆರೋಪಿ, ಹಾಗಾಗಿ ಪೋಲೀಸರ ಎದುರಲ್ಲೇ ನಡೆದು ಹೋದ ಕೊಲೆಯೂ ಕಾನೂನು ಸುವ್ಯವಸ್ಥೆ ಕಾಪಾಡುವ ಆದಿತ್ಯನಾಥ್ ಅವರ ಕ್ರಮ ಎಂಬಂತೆಯೇ ಬಿಂಬಿತವಾಯಿತು. ಎಲ್ಲ ಚಾನಲ್ ಗಳು ಅತೀಖ್ ಕತೆ ಮುಗಿದಿದ್ದನ್ನೇ ಪರೋಕ್ಷವಾಗಿ ಸಂಭ್ರಮಿಸಿದವು. ಹೇಗೆ ಎಲ್ಲರೆದುರೇ ಪೋಲೀಸರ ಸಮಕ್ಷಮದಲ್ಲೇ ಕೊಲೆಯಾಯಿತು ಎಂಬುದನ್ನು ಯಾರೂ ಕೇಳಲಿಲ್ಲ.

​ಆದರೆ ಇದೇ ಯುಪಿಯಲ್ಲಿ, ಅಲ್ಪಸಂಖ್ಯಾತರ ಹತ್ಯಾಕಾಂಡಕ್ಕೆ ​ಬಹಿರಂಗವಾಗಿ ಕರೆ ಕೊಟ್ಟರೆ ಅಂಥವರ ಬಂಧನವಾಗುವುದಿಲ್ಲ. ​ಸಂಘ ಪರಿವಾರದ ಗೂಂಡಾಗಳು ಗೋ ರಕ್ಷಣೆಯ ಹೆಸರಲ್ಲಿ, ಲವ್ ಜಿಹಾದ್ ಹೆಸರಲ್ಲಿ ಕಾನೂನು ಕೈಗೆತ್ತಿಕೊಂಡರೆ ಅರೆಸ್ಟ್ ಇಲ್ಲ. ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿದವರಿಗೆ ಶಿಕ್ಷೆಯಿಲ್ಲ​. ದಲಿತರ ಮೇ​ಲೆ ದೌರ್ಜನ್ಯ ನಡೆದರೆ ಬಂಧನವಿಲ್ಲ.ಗೋರಕ್ಷಕರು ಕೊಲೆಗೈದರೆ ಅರೆಸ್ಟ್ ಆಗುವುದಿಲ್ಲ.

ಆದರೆ ಈಗ ಆದಂತೆ ಇಲಿಯನ್ನು ಮಾತ್ರ ಕೊಲ್ಲಬಾರದು. ಪೊಲೀಸರು ಬಂದು​ ದರದರನೆ ಎಳೆದುಕೊಂಡು ಹೋಗುತ್ತಾರೆ. ಈಗೇನೋ ಇಲಿಯನ್ನು ಕೊಂದವನನ್ನು ಹಿಡಿದಿದ್ದಾರೆ. ಯಾರಿಗೆ ಗೊತ್ತು, ನಾಳೆ ಇಲಿಯನ್ನೇ ಯಾವುದೋ ಆರೋಪದ ಮೇಲೆ ಹಿಡಿದರೂ ಹಿಡಿದಾರು.

ಯಾಕೆಂದರೆ ಅವರು ಯುಪಿ ಪೊಲೀಸರು.​ ಯಾಕೆಂದರೆ ಅವರು ಆದಿತ್ಯನಾಥ್ ಅವರ ಪೊಲೀಸರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News