ಖರ್ಗೆ, ಖಂಡ್ರೆ ಬಗ್ಗೆ ಅವಹೇಳನಕಾರಿ ಮಾತಾಡಿದ ಆರಗ ಜ್ಞಾನೇಂದ್ರ

Update: 2023-08-03 13:56 GMT

ಆರ್. ಜೀವಿ

“ಆ ಭಾಗದವರು ಸುಟ್ಟು ಕರಕಲಾಗಿರ್ತಾರೆ, ಖರ್ಗೆ ನೋಡಿದ್ರೆ ಗೊತ್ತಾಗಲ್ವಾ?”. ಇದು ಎಐಸಿಸಿ ಅಧ್ಯಕ್ಷ, ರಾಜ್ಯ ಮಾತ್ರವಲ್ಲ ಈಗ ರಾಷ್ಟ್ರ ರಾಜಕಾರಣದಲ್ಲೂ ತಮ್ಮದೇ ಛಾಪು ಮೂಡಿಸಿರುವ ಹೆಮ್ಮೆಯ ಕನ್ನಡಿಗ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ಅವರ ಮಾತು.

ವರ್ಣಭೇದ ಮನಃಸ್ಥಿತಿ ಅಲ್ಲೆಲ್ಲೋ ದೂರದಲ್ಲಿಲ್ಲ, ಇಲ್ಲೇ ನಮ್ಮ ನಡುವೆಯೇ ಇದೆ, ಮತ್ತದು ದಲಿತರನ್ನು ಮಾತುಮಾತಲ್ಲೂ ಅವಮಾನಿಸುತ್ತದೆ ಮತ್ತು ಹಾಗೆ ಅವಮಾನಿಸುವುದನ್ನು ತೀರಾ ಸಾಮಾನ್ಯ ಸಂಗತಿ ಎಂಬ ಉಡಾಫೆತನ ತೋರುತ್ತದೆ ಎಂಬುದಕ್ಕೆ ಆರಗ ಹೇಳಿಕೆ ಸಾಕ್ಷಿ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೇ ಅಣಕಿಸಿದ್ದ ಅದೇ ಸಂಘಪರಿವಾರದ ಕೊಳಕು ಮನಃಸ್ಥಿತಿಯೇ ಈ ಆರಗ ಜ್ಞಾನೇಂದ್ರ ಮಾತಿನ ಹಿಂದೆಯೂ ಇದೆ.

ಕಿಂಚಿತ್ ವಿವೇಚನೆಯಿಲ್ಲದೆ, ಸೂಕ್ಷ್ಮತೆ ಇಲ್ಲದೆ ಆಡುವ ಮಾತಿನಿಂದ ಒಬ್ಬ ವ್ಯಕ್ತಿಯನ್ನು, ಆ ಮೂಲಕ ಒಂದಿಡೀ ಸಮುದಾಯವನ್ನು, ಸಮಾಜವನ್ನು ಅವಹೇಳನ ಮಾಡುವ ಇಂಥವರಿಗೆ ತಾವು ಅದೆಂತಹ ಪ್ರಮಾದ ಮಾಡಿದ್ದೇವೆ ಎಂದು ಅನಂತರ ಕೂಡ ಅನ್ನಿಸುವುದಿಲ್ಲ. ಅಷ್ಟರ ಮಟ್ಟಿಗೆ ಅವರು ತಮ್ಮನ್ನು ಸರಿ ಎಂದು ಸಮರ್ಥಿಸಿಕೊಳ್ಳುತ್ತಾರೆ. ಯಾಕೆಂದರೆ ಅದು ಅವರೊಳಗೇ ಇರುವ ಶ್ರೇಷ್ಠತೆಯ ರೋಗ.

ಯಾವ ಅಹಂಕಾರ ಇಂಥವರಿಂದ ಈ ಬಗೆಯ ಮಾತನ್ನಾಡಿಸುತ್ತದೆ ?. ತಾವು ಉತ್ತಮ ಜಾತಿ ಎಂಬುದು ಕಾರಣವೆ ?. ತಾವು ಬೆಳ್ಳಗಿದ್ದೇವೆ ಎಂಬ ದುರಭಿಮಾನವೆ ?. ತಾನು ಬಿಜೆಪಿಯ ನಾಯಕ, ಸಂಘಪರಿವಾರದ ಮನುಷ್ಯ ಎಂಬುದು ಈ ಮಾತುಗಳನ್ನು ಹೇಳಿಸುತ್ತಿದೆಯೇ?. ಗೃಹಮಂತ್ರಿಯಂಥ ಸ್ಥಾನದಲ್ಲಿದ್ದೂ ಹಲವು ಬಾರಿ ನಗೆಪಾಡಲಿಗೀಡಾಗುವಂತೆ ನಡೆದುಕೊಂಡಿದ್ದ ಈ ವ್ಯಕ್ತಿ ಈಗ ಇಡೀ ರಾಜ್ಯ ಹೆಮ್ಮೆ ಪಡುವ ಹಿರಿಯ ನಾಯಕರೊಬ್ಬರ ಮೈಬಣ್ಣದ ಬಗ್ಗೆ ಅಣಕಿಸಿ ಮಾತಾಡುವ ಅತಿ ಹೀನ ಮನಃಸ್ಥಿತಿ ತೋರಿದ್ದಾರೆ. ಇಂಥದೊಂದು ಮನಃಸ್ಥಿತಿ ಅವರದಾಗಿತ್ತು, ಈಗ ದಿಢೀರನೇ ಬಹಿರಂಗವಾಗಿದೆ ಎಂದೇ ಭಾವಿಸಬೇಕಾಗುತ್ತದೆ.

ಆರಗ ಜ್ಞಾನೇಂದ್ರ ಹೇಳಿಕೆ ಒಂದೆಡೆ ಖರ್ಗೆಯವರನ್ನು ಅವಹೇಳನ ಮಾಡಿದೆ. ಅದರೊಂದಿಗೆ ದಲಿತರನ್ನು ಆರಗ ಮತ್ತು ಅವರಂಥ ಸಂಘಿ ಮನಃಸ್ಥಿತಿಯ ಜನರು ಹೇಗೆ ಕಾಣುತ್ತಾರೆ ಎಂಬುದನ್ನೇ ಬಿಂಬಿಸಿದೆ.

ಎರಡನೆಯದಾಗಿ ಅವರಿಗೆ ಪ್ರಾದೇಶಿಕ ಅಸಹನೆಯೊಂದು ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿರುವಂತಿದೆ. ಈಶ್ವರ ಖಂಡ್ರೆ ಅರಣ್ಯ ಸಚಿವರಾಗಿರುವುದನ್ನು ವಿರೋಧಿಸುವ ಅವರು, ಆ ಭಾಗದ ಜನರಿಗೆ ಮರ, ಗಿಡಗಳ ಬಗ್ಗೆ ಏನೂ ಗೊತ್ತಿಲ್ಲ. ಅವರು ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುವ ಜನರ ಜೀವನದ ಮೇಲೆ ಪರಿಣಾಮ ಬೀರುವ ನಿರ್ಧಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅರಣ್ಯವೇ ಇಲ್ಲದ ಪ್ರದೇಶದವರು ಅರಣ್ಯ ಸಚಿವರಾಗಿರುವುದು ನಮ್ಮ ದುರದೃಷ್ಟ ಎಂದುಬಿಡುತ್ತಾರೆ. ಮತ್ತು ಸಿದ್ದರಾಮಯ್ಯ ಇದನ್ನು ಅರ್ಥ ಮಾಡಿಕೊಳ್ಳಬೇಕಂತೆ.

ರಾಜ್ಯದ ಗೃಹಮಂತ್ರಿಯಾಗಿದ್ದ ಇವರಿಗೆ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿನ ಸ್ಥಿತಿಗಳು, ಸೂಕ್ಷ್ಮಗಳೆಲ್ಲ ಗೊತ್ತಿದ್ದವೆ ?

ಅಥವಾ ಮಲೆನಾಡು ಭಾಗಕ್ಕೆ ಮಾತ್ರ ಗೃಹಸಚಿವರಾಗಿದ್ದರೆ?. ನಾಯಕರಾದವರೊಬ್ಬರು ತಮ್ಮ ಪ್ರದೇಶ ಬಿಟ್ಟು ಇತರೆಡೆಗಳ ಸನ್ನಿವೇಶ. ಜನಜೀವನವನ್ನು ತಿಳಿದುಕೊಳ್ಳುವುದೂ ಸಾಧ್ಯವಿದೆಯಲ್ಲವೆ ?. ಅರಿತುಕೊಳ್ಳುವ ಮೂಲಕವೇ ನಾಡಿನ ನಾಡಿಯನ್ನು ನಾಯಕನೊಬ್ಬ ಗ್ರಹಿಸಬೇಕಲ್ಲವೆ ?. ಹೀಗಿರುವಾಗ ಅವರಿಗೇನು ಗೊತ್ತು ಎಂದು ಕೇಳುವ ರೀತಿ, ಮಂತ್ರಿಯಾಗಿ ಕೆಲಸ ಮಾಡಿದವರೊಬ್ಬರಿಗೆ ಶೋಭೆ ತರುತ್ತದೆಯೆ?

ಇನ್ನು ಖರ್ಗೆಯವರ ಬಗ್ಗೆ ಆರಗ ಆಡಿರುವ ಮಾತಿನ ಬಗ್ಗೆ ಬರುವುದಾದರೆ, "ಆ ಭಾಗದವರು ಸುಟ್ಟು ಕರಕಲಾಗಿರ್ತಾರೆ. ಖರ್ಗೆಯವರನ್ನು ನೋಡಿದರೆ ಅಲ್ಲಿಯವರ ಪರಿಸ್ಥಿತಿ ಗೊತ್ತಾಗುತ್ತದೆ." ಎಂದಿದ್ದಾರೆ ಆರಗ. ಇನ್ನು ಸಚಿವ ಈಶ್ವರ ಖಂಡ್ರೆ ಬಗ್ಗೆಯೂ " ಪಾಪ ಅವರ ತಲೆ ಕೂದಲು ಮುಚ್ಚಿಕೊಂಡಿದ್ದರಿಂದ ಸ್ವಲ್ಪ ಉಳ್ಕೊಂಡಿದ್ದಾರೆ. ಅದೇ ಅವರ ನೆರಳು" ಎಂದು ಹೀಗಳೆಯುವ ಮಾತು ಆರಗ ಬಾಯಿಂದ ಬಂದಿದೆ. ಇಷ್ಟು ಹೇಳಿದ ಮೇಲೆಯೂ ತಾನೇನು ಮಾತಾಡಿದ್ದೇನೆ, ಅದು ಬೀರಿರುವ ಪರಿಣಾಮವೇನು ಎಂಬುದು ಅವರಿಗೆ ಗೊತ್ತಿದ್ದ ಹಾಗಿಲ್ಲ ಅಥವಾ ಹಾಗೆ ತೋರಿಸಿಕೊಳ್ಳುತ್ತಿದ್ಧಾರೆ.

ರಾಜ್ಯಾದ್ಯಂತ ಆರಗ ಮಾತುಗಳ ಬಗ್ಗೆ ಆಕ್ರೋಶ ವ್ಯಕ್ತವಾದ ಮೇಲೆ ಅನಿವಾರ್ಯವಾಗಿ "ಖರ್ಗೆ ಅವರ ವಿರುದ್ಧ ನಾನು ಯಾವತ್ತೂ ಮಾತನಾಡಿಲ್ಲ, ಅವರನ್ನು ಟೀಕಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅವರ ಹಿರಿತನ, ಅನುಭವಕ್ಕೆ ಗೌರವ ಕೊಟ್ಟು ಮಾತನಾಡುತ್ತೇನೆ. ಯಾರ ಭಾವನೆಗಳಿಗೂ ಧಕ್ಕೆ ತರುವುದು ನನ್ನ ಉದ್ದೇಶವಲ್ಲ. ಆದರೆ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ " ಎಂಬ ಹೇಳಿಕೆ ಕೊಟ್ಟಿರುವುದೂ ವರದಿಯಾಗಿದೆ.

ಬಾಯಿಗೆ ಬಂದಂತೆ ಮಾತನಾಡುವುದು, ಅನಂತರ ನೋವಾಗಿದ್ದರೆ ವಿಷಾದಿಸುತ್ತೇನೆ ಅನ್ನೋದು ಇಂಥವರಿಗೆ ಒಂದು ಚಟ. ನೋಯಿಸಬೇಕಾದ ಉದ್ದೇಶವೊಂದು ಅಷ್ಟರೊಳಗೆ ಪೂರ್ತಿಯಾಗಿರುತ್ತದೆ. ದಶಕಗಳಿಂದ ರಾಜಕೀಯದಲ್ಲಿದ್ದ ವ್ಯಕ್ತಿಗೆ ಯಾವ ಮಾತಾಡಿದರೆ ಏನು ಪರಿಣಾಮವಾಗುತ್ತದೆ ಎಂಬುದು ಅರ್ಥವಾಗದ ವಿಷಯವೆ ?. ಜಾತಿ, ಬಣ್ಣದ ಕುರಿತು ಮಾತನಾಡುವುದು ಸಂವೇದನೆಯುಳ್ಳ ಮನುಷ್ಯ ನಡೆದುಕೊಳ್ಳುವ ರೀತಿಯಲ್ಲ ಎಂಬ ಸೂಕ್ಷ್ಮವೂ ಆರಗ ಥರದವರಿಗೆ ಗೊತ್ತಿಲ್ಲವೆ? ಅಥವಾ ಸಮುದಾಯವೊಂದನ್ನು ಅಣಕಿಸುವುದೇ ತಮ್ಮ ಹೆಚ್ಚುಗಾರಿಕೆ ಎಂಬ ಭಾವನೆಯೆ?

ಗೃಹಮಂತ್ರಿಯಾಗಿದ್ದಾಗಲೂ ಇವರು ತಮ್ಮ ಹೇಳಿಕೆಗಳಿಂದ ಸೃಷ್ಟಿಸಿಕೊಂಡಿದ್ದ ಅವಾಂತರಗಳು ಒಂದೆರಡಲ್ಲ. ಮೈಸೂರಲ್ಲಿ ಅತ್ಯಾಚಾರವಾದಾಗ ಆ ವಿದ್ಯಾರ್ಥಿನಿ ಸಂಜೆ ಮನೆಯಿಂದ ಹೊರಹೋದದ್ದೇ ತಪ್ಪೆಂದಿದ್ದರು. ಅಷ್ಟೇ ಅಲ್ಲದೆ ಪಿಎಸ್ಐ ನೇಮಕಾತಿ ಹಗರಣ, ಹಿಜಾಬ್ ಪ್ರಕರಣ,ಮುಂತಾದ ಕಾನೂನು ಸುವ್ಯವಸ್ಥೆಯ ಸಮಸ್ಯೆಯಾದಾಗಿನ ಜ್ಞಾನೇಂದ್ರ ನಡೆ ಕೂಡ ತೀವ್ರ ಟೀಕೆಗೆ ಒಳಗಾಗಿತ್ತು.

ಆರಗ ಜ್ಞಾನೇಂದ್ರ ಈ ರಾಜ್ಯದ ಅತ್ಯಂತ ಕಳಪೆ ಗೃಹ ಸಚಿವ ಎಂಬ ಕುಖ್ಯಾತಿ ಪಡೆದವರು. ಅವರ ಅವಧಿಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿಗೆ ಇಳಿಯಿತು. ಒಂದರ ಹಿಂದೊಂದು ವಿವಾದಗಳು, ಅಪರಾಧ ಪ್ರಕರಣಗಳು, ಅನೈತಿಕ ಪೊಲೀಸ್ ಗಿರಿ, ಕೋಮುದ್ವೇಷದ ದಾಳಿಗಳು ನಡೆದವು. ಅವುಗಳನ್ನು ಅಷ್ಟೇ ಕೆಟ್ಟದಾಗಿ ನಿಭಾಯಿಸಿ ಆರಗ ಎಲ್ಲರಿಂದಲೂ ಟೀಕೆಗೊಳಗಾದರು. ಅಪರಾಧಗಳು ನಡೆದಾಗ ಗೃಹ ಸಚಿವರು ಹೇಳಿಕೆ ಕೊಟ್ಟರೆ ಅದು ಹಾಗಲ್ಲ ಹೀಗೆ ಎಂದು ಪೊಲೀಸ್ ಹಿರಿಯಧಿಕಾರಿಗಳು ಸ್ಪಷ್ಟೀಕರಣ ಕೊಡಬೇಕಾಯಿತು. ಅವರು ಬಾಯಿ ಬಿಟ್ಟರೆ ಯಾವ ಸಮಸ್ಯೆ ತಂದೊಡ್ಡುತ್ತಾರೆ ಎಂದು ಅವರ ಸ್ವಪಕ್ಷೀಯರೇ ಭಯಪಡುವ ವಾತಾವರಣ ನಿರ್ಮಿಸಿದ್ದರು. ಒಂದಾದ ಮೇಲೊಂದು ತೀರಾ ಅಸಂಬದ್ಧ, ಸಂವೇದನಾ ರಹಿತ ಹೇಳಿಕೆಗಳನ್ನು ಕೊಟ್ಟು ತಮ್ಮ ಸ್ಥಾನದ ಘನತೆಗೆ ಕುಂದುಂಟು ಮಾಡಿಕೊಂಡರು.

ಖರ್ಗೆಯವರ ಕುರಿತ ಆರಗ ಹೇಳಿಕೆಗೆ ಕಾಂಗ್ರೆಸ್ ಖಡಕ್ಕಾಗಿಯೇ ಪ್ರತಿಕ್ರಿಯಿಸಿದೆ. ಮತ್ತು ಹಾಗೆ ಪ್ರತಿಕ್ರಿಯಿಸದೇ ಇದ್ದರೆ ಇಂಥವರಿಗೆ ತಾವು ಏನೂ ಹೇಳಿದರೂ ನಡೆಯುತ್ತದೆ ಎಂಬ ಭಾವನೆ ಇನ್ನೂ ಬೆಳೆಯುತ್ತದೆ. ಖರ್ಗೆಯವರ ಮೈಬಣ್ಣದ ಬಗ್ಗೆ ಅವಹೇಳನ ಮಾಡಿದ ಆರಗ ಜ್ಞಾನೇಂದ್ರ ಅವರು ಬಿಜೆಪಿಯ ಕೀಳು ಮಟ್ಟದ ಮನಸ್ಥಿತಿಯನ್ನು ಪ್ರತಿನಿಧಿಸಿದ್ದಾರೆ. ಬಿಜೆಪಿಯವರಲ್ಲಿ ದಲಿತರ ಬಗ್ಗೆ ಇರುವ ಅಸಹನೆ, ಅಸಡ್ಡೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಮೈಬಣ್ಣದ ಬಗೆಗಿನ ಈ ಅವಹೇಳನ ಕೇವಲ ಖರ್ಗೆಯವರನ್ನು ಅವಮಾನಿಸಿದ್ದಲ್ಲ, ಖರ್ಗೆಯವರ ಹೆಸರಲ್ಲಿ ಇಡೀ ಮೂಲನಿವಾಸಿ ದಲಿತರಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಟೀಕಿಸಿದೆ. ಬಣ್ಣದ ಬಗೆಗಿನ ಶೋಷಣೆ, ಅವಮಾನವನ್ನು ತೊಡೆದುಹಾಕಲು ಜಾಗತಿಕ ಮಟ್ಟದಲ್ಲಿ ಚಳವಳಿಗಳು ನಡೆದಿವೆ, ಪಾಶ್ಚಿಮತ್ಯ ದೇಶಗಳಲ್ಲಿ ಮೈಬಣ್ಣದ ಬಗ್ಗೆ, ದೈಹಿಕ ರೂಪದ ಬಗ್ಗೆ ಅವಮಾನಿಸಿದರೆ ಮಹಾ ಅಪರಾಧಿ ಎಂದು ಕಾಣಲಾಗುತ್ತದೆ. ಆದರೆ ಇಲ್ಲಿನ ಬಿಜೆಪಿಗರು ದಲಿತರನ್ನು, ದಲಿತರ ಮೈಬಣ್ಣವನ್ನು, ರೂಪವನ್ನು ಅವಮಾನಿಸುವುದನ್ನು ಹೆಗ್ಗಳಿಕೆಯಾಗಿ ನೋಡುತ್ತದೆ ಎಂದು ಟ್ವೀಟ್ನಲ್ಲಿ ಕಾಂಗ್ರೆಸ್ ಟೀಕಿಸಿದೆ.

ಬಿಜೆಪಿಗೆ ದಲಿತರ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ ಜ್ಞಾನೇಂದ್ರರನ್ನು ಉಚ್ಚಾಟನೆ ಮಾಡಬೇಕು, ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ ಖರ್ಗೆಯವರ ಹಾಗೂ ದಲಿತರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದ ಕಾಂಗ್ರೆಸ್, ಆರಗ ಹೇಳಿಕೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿತ್ತು. ಕಡೆಗೆ ಎಚ್ಚೆತ್ತ ಆರಗ ಕ್ಷಮೆ ಯಾಚಿಸಿರುವುದಾಗಿಯೂ ವರದಿಯಾಗಿದೆ.

ತಮ್ಮ ನಾಯಕನ ಬಾಯಿಂದ ರಾಷ್ಟ್ರೀಯ ಪಕ್ಷದ ಅಧ್ಯಕ್ಷನ ಸ್ಥಾನದಲ್ಲಿರುವ ನಾಯಕರೊಬ್ಬರನ್ನು ಅವಹೇಳನ ಮಾಡುವ ಮಾತು ಬಂದರೂ ಬಿಜೆಪಿ ನಾಯಕರೆಲ್ಲರೂ ಬಾಯಿ ಮುಚ್ಚಿಕೊಂಡೇ ಇದ್ದರು ಎಂಬುದನ್ನು ಗಮನಿಸಬೇಕು. ಈ ಮೌನ, ಆರಗ ಮಾತಿಗೆ ಬಿಜೆಪಿಯ, ಸಂಘಪರಿವಾರದ ಸಹಮತದ ಸೂಚನೆಯೆ ಅಲ್ಲವೆ?

ಮೊನ್ನೆ ಮೊನ್ನೆ ಉಡುಪಿ ಪ್ರಕರಣದ ಬಗ್ಗೆ ಹಸಿ ಹಸಿ ಸುಳ್ಳು ಟ್ವೀಟ್ ಮಾಡಿ ಸುದ್ದಿಯಾಗಿದ್ದ ಸ್ವಘೋಷಿತ ಹಿಂದೂ ಹೋರಾಟಗಾರ್ತಿ ರಶ್ಮಿ ಸಾಮಂತ್ ಪ್ರತಿಷ್ಠಿತ ಆಕ್ಸ್ ಫರ್ಡ್ ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಾಗಿ ಬಂದಿದ್ದೂ ಇಂತಹದೇ ಜನಾಂಗೀಯವಾದಿ ಸೋಷಿಯಲ್ ಮೀಡಿಯಾ ಪೋಸ್ಟ್ ಗಳಿಂದಾಗಿ.

ಆದರೆ ತನ್ನ ಜನಾಂಗೀಯವಾದಿ ನಿಲುವಿನಿಂದ ಆಕ್ಸ್ ಫರ್ಡ್ ನಲ್ಲಿ ಛೀಮಾರಿ ಹಾಕಿಸಿಕೊಂಡ ರಶ್ಮಿ ಸಾಮಂತ್ ಅನ್ನು ಬಿಜೆಪಿ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ರ ಸಲಹಾ ಸಮಿತಿಗೆ ಸೇರಿಸಿತು. ಆಕೆಯನ್ನು ತಿದ್ದುವ ಬದಲು ಆಕೆಯನ್ನು ಇನ್ನಷ್ಟು ಪ್ರೋತ್ಸಾಹಿಸಿತು. ಆಕೆ ಈಗ ಉಡುಪಿಯ ಸಾಮರಸ್ಯಕ್ಕೆ ಕೊಳ್ಳಿ ಇಡುವ ಪ್ರಯತ್ನ ಮಾಡಿದ್ದಾಳೆ. ಇದು ಜನಾಂಗೀಯವಾದಿ ನಿಲುವಿನ ನಾಯಕರ ಬಗ್ಗೆ ಬಿಜೆಪಿ ಹಾಗು ಸಂಘ ಪರಿವಾರದ ಧೋರಣೆ.

ದೇಶದ ಸಂವಿಧಾನವನ್ನೇ ಅಣಕಿಸುವ, ಮಹಿಳೆಯರನ್ನು, ದಲಿತರನ್ನು ಮನುಷ್ಯರಂತೆಯೇ ಪರಿಗಣಿಸದ ಮನುಸ್ಮೃತಿಯನ್ನು ಆರಾಧಿಸುವ ಬಿಜೆಪಿ ಹಾಗು ಸಂಘ ಪರಿವಾರದಿಂದ ಇದಕ್ಕಿಂತ ಭಿನ್ನವಾದುದೇನನ್ನೂ ನಾವು ನಿರೀಕ್ಷಿಸುವಂತಿಲ್ಲ. ಮತ್ತೆ ಮತ್ತೆ ದಲಿತರನ್ನು ದಮನಿಸುವ ನೀತಿ ನಿಲುವುಗಳು ಬಿಜೆಪಿಯಿಂದ, ಆರೆಸ್ಸೆಸ್ನಿಂದ ವ್ಯಕ್ತವಾಗುತ್ತಲೇ ಇರುತ್ತವೆ. ಶತಮಾನಗಳಿಂದ ವ್ಯಕ್ತವಾಗುತ್ತಿರುವ ಮನಃಸ್ಥಿತಿ ಇದು.

ಆಗ ಈ ಮನಃಸ್ಥಿತಿಗಳು ಬಿಜೆಪಿ ಅಥವಾ ಆರೆಸ್ಸೆಸ್ ಎಂಬ ಹೆಸರಿನಡಿ ಇರಲಿಲ್ಲ, ಅಷ್ಟೆ. ಈಗ ಇವೆ. ಮತ್ತವು ದಲಿತರನ್ನು ಮತಗಳಿಗಾಗಿ ಮಾತ್ರ ಬಳಸಿಕೊಳ್ಳುತ್ತ, ಬಳಿಕ ಕೀಳಾಗಿ ಕಾಣುವ ತಮ್ಮ ಎಂದಿನ ಬಣ್ಣವನ್ನೇ ತೋರಿಸುತ್ತವೆ. ಬೇರೆಯವರ ಕಪ್ಪು ಮೈಬಣ್ಣದ ಬಗ್ಗೆ ಮಾತನಾಡುವ ಇವರ ಮನಃಸ್ಥಿತಿಯ ಕೊಳೆ ಬಹುಶಃ ತೊಳೆದು ಹೋಗುವಂಥದ್ದಲ್ಲ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News

ಸಂವಿಧಾನ -75