ಇಸ್ರೇಲ್ ಗಾಗಿ ಬೇಹುಗಾರಿಕೆ ಮಾಡುತ್ತಿದ್ದರೇ ಭಾರತದ ಮಾಜಿ ನೌಕಾಪಡೆ ಅಧಿಕಾರಿಗಳು ?

Update: 2023-10-28 09:51 GMT
Editor : Althaf | Byline : ಆರ್. ಜೀವಿ

ಖತರ್ ನಿಂದ ಆಘಾತಕಾರಿ ಸುದ್ದಿಯೊಂದು ಬಂದಿದೆ. ಅಲ್ಲಿ ಕಳೆದ ವರ್ಷ ಗೂಢಚರ್ಯೆ ಸಂಬಂಧಿತ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಭಾರತೀಯ ನೌಕಾಪಡೆಯ ಎಂಟು ಮಂದಿ ಮಾಜಿ ಅಧಿಕಾರಿಗಳಿಗೆ ಈಗ ಮರಣ ದಂಡನೆ ವಿಧಿಸಲಾಗಿದೆ. ನೌಕಾಪಡೆಯ ಈ ಮಾಜಿ ಅಧಿಕಾರಿಗಳು ಖತರ್ ಸೇನಾಪಡೆಗಳಿಗೆ ತರಬೇತಿ ಮತ್ತಿತರ ಸೇವೆಗಳನ್ನು ಒದಗಿಸುವ ಖಾಸಗಿ ಸಂಸ್ಥೆ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಎಂಡ್ ಕನ್ಸಲ್ಟನ್ಸಿ ಸರ್ವೀಸಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರಲ್ಲಿ ಕೆಲವರು ಅತಿ ಸೂಕ್ಷ್ಮವೆಂದು ತಿಳಿಯಲಾಗುವ ಖತರ್ ಸಬ್ಮರೀನ್ ಯೋಜನೆಯಲ್ಲಿ ಸೇವೆಯಲ್ಲಿದ್ದರು.

ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಠ್, ಕಮಾಂಡರ್ ಅಮಿತ್ ನಾಗಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಕರ್ ಪಕಲ, ಕಮಾಂಡರ್ ಸಂಜೀವ್ ಗುಪ್ತಾ ಹಾಗೂ ನಾವಿಕ ರಾಗೇಶ್ ಈ ಎಂಟು ಮಂದಿ ಬಂಧಿತ ಭಾರತೀಯರು.

ಇವರಲ್ಲಿ ಕಮಾಂಡರ್ ಪೂರ್ಣೇಂದು ತಿವಾರಿ ಅವರಿಗೆ 2019ರಲ್ಲಿ ಪ್ರವಾಸಿ ಭಾರತೀಯ ಸಮ್ಮಾನ್ ಪುರಸ್ಕಾರ ನೀಡಲಾಗಿತ್ತು.

ಭಾರತ ಮತ್ತು ಖತರ್ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಉತ್ತಮಗೊಳಿಸುವಲ್ಲಿನ ಸೇವೆಗಾಗಿ ಅವರಿಗೆ ಈ ಪುರಸ್ಕಾರ ನೀಡಲಾಗಿತ್ತು.

ತಿವಾರಿ ಅವರು ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಸಂಸ್ಥೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಭಾರತೀಯ ನೌಕಾ ಪಡೆಯಲ್ಲಿದ್ದಾಗ ಅವರು ಅನೇಕ ಯುದ್ಧ ನೌಕೆಗಳ ನೇತೃತ್ವ ವಹಿಸಿದ್ದರು.

ಈ ಎಂಟೂ ಮಂದಿ ಕೆಲಸ ಮಾಡುತ್ತಿದ್ದ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಆಂಡ್ ಕನ್ಸಲ್ಟೆನ್ಸಿ ಸರ್ವಿಸಸ್, ರಾಯಲ್ ಒಮನ್ ವಾಯುಪಡೆಯ ನಿವೃತ್ತ ಸದಸ್ಯರೊಬ್ಬರ ಮಾಲೀಕತ್ವದ ರಕ್ಷಣಾ ಸೇವಾ ಪೂರೈಕೆದಾರ ಸಂಸ್ಥೆಯಾಗಿತ್ತು. ಇವರ ಜತೆ ಸಂಸ್ಥೆಯ ಮಾಲೀಕನನ್ನು ಕೂಡ ಬಂಧಿಸಲಾಗಿತ್ತು. ಆದರೆ ಕಳೆದ ವರ್ಷದ ನವೆಂಬರ್‌ನಲ್ಲಿಯೇ ಆತನನ್ನು ಬಿಡುಗಡೆ ಮಾಡಲಾಗಿತ್ತು.

ಭಾರತೀಯ ನೌಕಾಪಡೆಯ ಈ ಮಾಜಿ ಅಧಿಕಾರಿಗಳ ಮೇಲಿನ ಆರೋಪಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿಲ್ಲ.

ಇದು ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಈ ಆರೋಪಗಳ ಕುರಿತು ಕೋರ್ಟ್ ವಿಚಾರಣೆ ವೇಳೆ ಉಲ್ಲೇಖಿಸಿದ್ದರೂ, ಖತರ್ ಅಥವಾ ಭಾರತ ಸರ್ಕಾರ ಅವುಗಳನ್ನು ಬಹಿರಂಗಪಡಿಸಿಲ್ಲ.

ಈ ಎಂಟೂ ಮಂದಿ ಕಳೆದ ವರ್ಷ ಆಗಸ್ಟ್ನಿಂದ ಜೈಲಿನಲ್ಲಿದ್ದು, ಅವರ ಜಾಮೀನು ಅರ್ಜಿಗಳು ಹಲವು ಬಾರಿ ತಿರಸ್ಕೃತಗೊಂಡಿದ್ದವು.

ಅವರ ಮೊದಲ ವಿಚಾರಣೆ ಮಾರ್ಚ್ 29ರಂದು ನಡೆದಿತ್ತು. ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀವ್ರ ಆಘಾತ ವ್ಯಕ್ತಪಡಿಸಿದೆ. ಕಾನೂನು ಹೋರಾಟದ ಎಲ್ಲ ಆಯ್ಕೆಗಳನ್ನು ಪರಿಗಣಿಸುತ್ತಿರುವುದಾಗಿ ಹೇಳಿದೆ. ತೀರ್ಪಿನ ವಿವರಗಳಿಗಾಗಿ ಕಾಯಲಾಗುತ್ತಿದೆ. ಶಿಕ್ಷೆಗೆ ಒಳಗಾದವರ ಕುಟುಂಬ ಸದಸ್ಯರು ಮತ್ತು ಕಾನೂನು ತಂಡದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಅದು ಹೇಳಿದೆ.

​ವರದಿಗಳ ಪ್ರಕಾರ, ಪತ್ತೆ ಹಚ್ಚಲು ಬಹಳ ಕ್ಲಿಷ್ಟಕರವಾದ ರಹಸ್ಯ ಸಾಮರ್ಥ್ಯಗಳನ್ನು ಹೊಂದಿರುವ ಖತರ್​ ನ ಅತ್ಯಾಧುನಿಕ ಸಬ್‌ಮೆರಿನ್‌ಗಳ ಕುರಿತು ಭಾರತದ ಈ ಮಾಜಿ ಅಧಿಕಾರಿಗಳು ಇಸ್ರೇಲ್‌ಗಾಗಿ ಬೇಹುಗಾರಿಕೆ ನಡೆಸುತ್ತಿದ್ದರು ಎಂಬ ​ಗಂಭೀರ ಆರೋಪವಿತ್ತು.

ಇಟಲಿಯ ಹಡಗು ನಿರ್ಮಾಣ ಸಂಸ್ಥೆಯ ಸಹಭಾಗಿತ್ವದಲ್ಲಿ​ ಖತರ್ ಗಾಗಿ ಅತ್ಯಾಧುನಿಕ, ಶತ್ರುಗಳು ಪತ್ತೆ ಹಚ್ಚಲಾಗದಂತಹ ಜಲಾಂತರ್ಗಾಮಿಗಳ ತಯಾರಿಕೆ ನಡೆಯುತ್ತಿತ್ತು.

ದಿ ಪ್ರಿಂಟ್ ವರದಿಯ ಪ್ರಕಾರ, ಇಟಲಿಯ ಟ್ರೈಸ್ಟೆ ಮೂಲದ ಹಡಗು ನಿರ್ಮಾಣ ಕಂಪನಿ ಫಿನ್ಕಾಂಟಿಯೆರಿ​ ಸ್ಪಾ , ನೌಕಾ ನೆಲೆಯ ನಿರ್ಮಾಣ ಮತ್ತು ಅದರ ಮಿಲಿಟರಿ ನೌಕಾಪಡೆಯ ನಿರ್ವಹಣೆಯನ್ನು ಒಳಗೊಂಡಿರುವ ಯೋಜನೆಯ ಭಾಗವಾಗಿ 2020ರಲ್ಲಿ ಜಲಾಂತರ್ಗಾಮಿ ನೌಕೆಗಳ ಉತ್ಪಾದನೆಗಾಗಿ ಖತರ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ವ್ಯಾಪಕ ನೌಕಾಪಡೆ ರಚನೆಯ ಭಾಗವಾಗಿ ಖತರ್ ನಾಲ್ಕು ಕಿರು ಯುದ್ಧನೌಕೆಗಳು ಮತ್ತು ಹೆಲಿಕಾಪ್ಟರ್ ಕ್ಯಾರಿಯರ್‌ಗೆ ಕೇಳಿತ್ತು.

ಖತರ್ ಜೊತೆಗಿನ ಒಪ್ಪಂದವನ್ನು ತಾನು ಅನುಷ್ಠಾನಗೊಳಿಸಿಲ್ಲ ಎಂಬ ಫಿನ್ಕಾಂಟಿಯೆರಿ ಹೇಳಿಕೆಯನ್ನು ಕೂಡ ದಿ ಪ್ರಿಂಟ್ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ​ಆದರೂ, ಅದು ಜಲಾಂತರ್ಗಾಮಿ ತಯಾರಕ ​ಕ್ಯಾಬಿ ಕಟನೆವೊ ಸಹಯೋಗದೊಂದಿಗೆ, ಬರ್ಗಾಮೊದಲ್ಲಿನ ಕಾರ್ಖಾನೆಯಲ್ಲಿ, M23 S.R.L ಕಂಪನಿಯು ​ಖತರ್‌ಗಾಗಿ ಅತ್ಯಾಧುನಿಕ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುತ್ತಿದೆ ಎಂಬ ವರದಿಗಳಿವೆ ಎಂದೂ ದಿ ಪ್ರಿಂಟ್ ವರದಿ ಹೇಳಿತ್ತು.

ಉದ್ಯಮದ ಪ್ರಕಟಣೆಗಳ ಪ್ರಕಾರ, ಜಲಾಂತರ್ಗಾಮಿ ನೌಕೆಗಳು ಜರ್ಮನ್ ಸಂಸ್ಥೆ ಥೈಸೆನ್‌ಕ್ರುಪ್ ಮೆರೈನ್ ಸಿಸ್ಟಮ್ಸ್ ಸಹಯೋಗದೊಂದಿಗೆ ಇಟಲಿ ನಿರ್ಮಿಸಿದ U212 ಜಲಾಂತರ್ಗಾಮಿ ನೌಕೆಯ ಸಣ್ಣ ರೂಪಾಂತರಗಳಾಗಿವೆ. ಖತರ್ ಜಲಾಂತರ್ಗಾಮಿ ಯೋಜನೆ ಭಾರತ ಮತ್ತು ಇಸ್ರೇಲ್ ಎರಡರ ಮೇಲೂ ಪರಿಣಾಮ ಬೀರುತ್ತದೆ. ಪಾಕಿಸ್ತಾನ ನೌಕಾಪಡೆ ಈಗಾಗಲೇ ಹೊಂದಿರುವ ಕಾಸ್ಮೊಸ್-ಕ್ಲಾಸ್ ಮಿ​ಜೆಟ್ ಜಲಾಂತರ್ಗಾಮಿ ನೌಕೆಗಳನ್ನು ಕೂಡ ಇದೇ ಇಟಲಿ ಕಂಪನಿಯೇ ನಿರ್ಮಿಸಿದೆ. ಇದನ್ನು ಭಾರತೀಯ ನೌಕಾ ಪಡೆ ವಿರುದ್ಧ ವಿಶೇಷ ಪಡೆಗಳ ಕಾರ್ಯಾಚರಣೆಗೆ ಬಳಸಬಹುದಾದ ಸಾಧ್ಯತೆ ಇಲ್ಲದೆ ಇಲ್ಲ​ ಎಂದಿತ್ತು ದಿ ಪ್ರಿಂಟ್ ವರದಿ.

ಖತರ್ ಪಾಕಿಸ್ತಾನದ ಸಶಸ್ತ್ರ ಪಡೆಗಳೊಂದಿಗೆ ನಿಕಟ ಸಂಬಂಧ ಹೊಂದಿದೆ ​. ಹಾಗಾಗಿ ಖತರ್ ನಿಂದ ಪಾಕಿಸ್ತಾನ ಹೊಸ ಜಲಾಂತರ್ಗಾಮಿ ನೌಕೆಗಳಲ್ಲಿ ಹುದುಗಿರುವ ರಹಸ್ಯ ತಂತ್ರಜ್ಞಾನಗಳನ್ನು ಪಡೆಯಲು ಪ್ರಯತ್ನಿಸಬಹುದು ಎಂಬುದು ಭಾರತದ ಆತಂಕ ಎಂದು ದಿ ಪ್ರಿಂಟ್ ವರದಿಯಲ್ಲಿ ಹೇಳಲಾಗಿತ್ತು.

​ಇಸ್ರೇಲ್ ಜೊತೆಗೂ ಖತರ್ ಗೆ ಮಿಲಿಟರಿ ಸಂಬಂಧವಿದೆ. ಆದರೆ ತನ್ನ ಮಿಲಿಟರಿ ಶಕ್ತಿ ಕುಂದಬಹುದು ಎಂಬ ಭಯದಿಂದ ಖತರ್ ಸಹಿತ ಯಾವುದೇ ಮಧ್ಯ ಪ್ರಾಚ್ಯ ದೇಶ ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನ ಪಡೆಯುವುದಕ್ಕೆ ಇಸ್ರೇಲ್ ತಡೆ ಹಾಕುತ್ತಾ ಬಂದಿದೆ.

ಭಾರತವಾಗಲೀ ಅದರ ಮಾಜಿ ಅಧಿಕಾರಿಗಳಾಗಲೀ​ ಖತರ್ ವಿರುದ್ಧ ಯಾವುದೇ ಗುಪ್ತಚರ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿಲ್ಲ ಎಂದು​ ಖತರ್ ಗೆ ಮನವರಿಕೆ ಮಾಡಿಕೊಡಲು​ ನಾವು ಸಾಕಷ್ಟು ಯತ್ನಿಸಿರುವುದಾಗಿ ಹೆಸರು​ ಬಹಿರಂಗಪಡಿಸಲು ಬಯಸದ ಗುಪ್ತಚರ ಅಧಿಕಾರಿಯೊಬ್ಬರು ಹೇಳಿದ್ದನ್ನೂ ದಿ ಪ್ರಿಂಟ್ ಉಲ್ಲೇಖಿಸಿತ್ತು.​ ಆದರೆ ಖತರ್ ರಹಸ್ಯ ನೌಕಾ ಯೋಜನೆಯ ಮಾಹಿತಿಗಳನ್ನು​ ಈ ಮಾಜಿ ಅಧಿಕಾರಿಗಳು ಇಸ್ರೇಲ್‌ಗೆ ರವಾನಿಸುತ್ತಿದ್ದರು ​ಎಂದು ಕಂಡು ಬಂದಿದೆ ಎಂದು ಖತರ್ ಪ್ರತಿಕ್ರಿಯಿಸಿತ್ತು. ಖತರ್ ಸ್ಟೇಟ್ ಸೆಕ್ಯೂರಿಟಿ, ಅಲ್ಲಿನ ಸ್ಟೇಟ್ ಇಂಟೆಲಿಜೆನ್ಸ್ ಏಜೆನ್ಸಿಗಳಿಗೆ ಸಿಕ್ಕಿರುವ ಇಲೆಕ್ಟ್ರಾನಿಕ್ ಸಂವಹನ ಮಾಹಿತಿಗಳಲ್ಲಿ ಈ ಮಾಜಿ ಭಾರತೀಯ ಅಧಿಕಾರಿಗಳು ಅಲ್ಲಿನ ಸಬ್ ಮರೀನ್ ಯೋಜನೆಯ ಬಗ್ಗೆ ಗೂಢಚರ್ಯೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ ಎಂದು ಖತರ್ ಹೇಳುತ್ತಿದೆ ಎಂದು ವರದಿ ಮಾಡಿತ್ತು ದಿ ಪ್ರಿಂಟ್ .​

ಈ ಆಘಾತಕಾರಿ ಬೆಳವಣಿಗೆ ಭಾರತ ಖತರ್ ನಡುವಿನ ಉತ್ತಮ ಬಾಂಧವ್ಯಕ್ಕೆ ಧಕ್ಕೆ ತರುವ ಸಾಧ್ಯತೆ ಬಗ್ಗೆ ಆತಂಕ ಎದ್ದಿದೆ. ಖತರ್ ನಲ್ಲಿ ಏಳು ಲಕ್ಷಕ್ಕೂ ಹೆಚ್ಚು ಭಾರತೀಯರಿದ್ದಾರೆ. ಭಾರತದೊಂದಿಗೆ ಆ ದೇಶಕ್ಕೆ ಆರ್ಥಿಕ ಸಂಬಂಧಗಳಿವೆ. ಭಾರತ ಖತರ್ ಈವರೆಗೂ ಆತ್ಮೀಯ ಸಂಬಂಧ ಕಾಪಾಡಿಕೊಂಡು ಬಂದಿವೆ. ಈ ಹಿಂದೆ 2016 ರಲ್ಲಿ ಪ್ರಧಾನಿ ಮೋದಿ ಹಾಗು ಕಳೆದ ವರ್ಷ ಫೆಬ್ರವರಿಯಲ್ಲಿ ವಿದೇಶಾಂಗ ಸಚಿವರು ಅಲ್ಲಿಗೆ ಭೇಟಿ ನೀಡಿದ್ದಾರೆ. ಭಾರತದ ಎಲ್ ಎನ್ ಜಿ ಅಂದ್ರೆ ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ ಆಮದಿನಲ್ಲಿ 48% ಬರುತ್ತಿರುವುದು ಖತರ್ ನಿಂದ. ಅಷ್ಟೇ ಅಲ್ಲ ಖತರ್ ನಿಂದ ಎಥಿಲಿನ್, ಪ್ರೊಪಿಲೀನ್, ಅಮೋನಿಯಾ, ಯೂರಿಯಾ ಹಾಗು ಪಾಲಿ ಎಥಿಲಿನ್ ಅನ್ನೂ ಭಾರತ ಆಮದು ಮಾಡಿಕೊಳ್ಳುತ್ತದೆ. ಈಗ ಭಾರತ ಸರಕಾರ ತನಗಿರುವ ಉತ್ತಮ ರಾಜತಾಂತ್ರಿಕ ಸಂಬಂಧವನ್ನು ಅತ್ಯುನ್ನತ ಮಟ್ಟದಲ್ಲಿ ಬಳಸಿಕೊಂಡು ನೌಕಾಪಡೆಯ ಮಾಜಿ ಅಧಿಕಾರಿಗಳನ್ನು ಬಿಡಿಸಿಕೊಂಡು ಬರಬೇಕು ಎಂದು ವಿಪಕ್ಷಗಳು ಆಗ್ರಹಿಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ಆರ್. ಜೀವಿ

contributor

Similar News

ಬಯಲರಿವು