ಜಾತಿಯೊಂದರ ಸತ್ಯಾಸತ್ಯತೆ ಹುಡುಕುತ್ತಾ...

Update: 2023-06-24 05:33 GMT

ಪ್ರವೀಣ್ ಎಸ್. ಶೆಟ್ಟಿ ಮಂಗಳೂರು

ಮಾಯಾವತಿಯವರ ಬಿಎಸ್ಪಿ ಪಕ್ಷದ ಕರ್ನಾಟಕ ಹೊಸ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪನವರು ತಮ್ಮ ಮೊದಲ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದೇನೆಂದರೆ ‘‘ನಿಜವಾಗಿ ಪ್ರಧಾನಿ ಮೋದಿಯವರು ಮೇಲ್ಜಾತಿಯವರಾಗಿದ್ದು, ಕೇವಲ ಚುನಾವಣಾ ಲಾಭಕ್ಕಾಗಿ ಅವರು ಹಿಂದುಳಿದ ವರ್ಗದ ಗಾಣಿಗ ಜಾತಿಯವರು ಎಂದು ಸುಳ್ಳು ಪ್ರಚಾರ ಮಾಡಲಾಗಿದೆ, ಅವರು ಎಣ್ಣೆ ತೆಗೆಯುವ ಗಾಣಿಗ ಸಮಾಜದವರು ಆಗಿರದೆ ಅವರು ವೈಶ್ಯ/ ಬನಿಯಾ ಎಂಬ ವ್ಯಾಪಾರಸ್ಥ ಸಮಾಜದವರು’’ ಎಂದು. ಮುನಿಯಪ್ಪನವರ ಈ ಮಾತು ನೂರಕ್ಕೆ ನೂರು ಸತ್ಯ.

ಮಹಾತ್ಮಾ ಗಾಂಧೀಜಿಯವರು ಶುದ್ಧ ಬನಿಯಾ/ವಾಣಿಯಾ/ವೈಶ್ಯ ಜಾತಿಯವರು. ಮೋದಿಯವರು ಕೂಡಾ ವೈಶ್ಯ (ಬನಿಯಾ/ವಾಣಿಯಾ) ಜಾತಿಯಲ್ಲಿಯೇ ‘ಮೋಧಗಾಂಚಿ’ ಎಂಬ ಉಪಜಾತಿಯವರು. ಮೋದಿಯವರು 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ಅವರು ಮಾಡಿದ ಮೊತ್ತಮೊದಲ ಕೆಲಸವೆಂದರೆ ತನ್ನ ಮೋಧಗಾಂಚಿ ಉಪಜಾತಿಯನ್ನು ಮಾತ್ರ ಒಬಿಸಿ (ಹಿಂದುಳಿದ ವರ್ಗ) ಎಂದು ವರ್ಗೀಕರಿಸಿ ಉಳಿದ ವೈಶ್ಯ (ವಾಣಿಯಾ/ಬನಿಯಾ) ಜಾತಿಯನ್ನು ಸಾಮಾನ್ಯ (ಸವರ್ಣೀಯ) ಜಾತಿಯಲ್ಲಿಯೇ ಮುಂದುವರಿಸಿದ್ದು!

ನಿಜವಾದ ಗಾಣಿಗ ಸಮುದಾಯವನ್ನು ಗುಜರಾತಿನಲ್ಲಿ ‘ತೇಲಿಗಾಂಚಿ’ ಎಂದು ಕರೆಯುತ್ತಾರೆ. ಈ ತೇಲಿಗಾಂಚಿ ಜಾತಿಯನ್ನು 1984ರಲ್ಲಿಯೇ ಆಗಿನ ರಾಜ್ಯ ಸರಕಾರ ಹಿಂದುಳಿದ ವರ್ಗ (ಒಬಿಸಿ) ಎಂದು ಅಧಿಕೃತವಾಗಿ ವರ್ಗೀಕರಿಸಿತ್ತು. ಹಾಗಾದರೆ 2001ರಲ್ಲಿ ಮೋದಿ ಒಬಿಸಿ ಎಂದು ವರ್ಗೀಕರಿಸಿದ ಮೋಧಗಾಂಚಿ ಜಾತಿ ಯಾವುದು? (ನಾನು ಗುಜರಾತಿನಲ್ಲಿ ಹಲವಾರು ವರ್ಷ ಉದ್ಯೋಗ ಮಾಡಿ ಬಂದವನು, ಹಾಗಾಗಿ ನನಗೆ ಗುಜರಾತಿನ ಸಾಮಾಜಿಕ ವ್ಯವಸ್ಥೆ ಸ್ವಲ್ಪಮಟ್ಟಿಗೆ ಗೊತ್ತಿದೆ).

ಬಿಹಾರದ ಉಪಮುಖ್ಯಮಂತ್ರಿ ಆಗಿದ್ದ ಸುಶೀಲ್ ಕುಮಾರ್ ಮೋದಿಯವರ ವಿಕಿಪಿಡಿಯಾದಲ್ಲಿ ಅವರು ಬನಿಯಾ ಜಾತಿಯವರು ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಅದೇ ಪ್ರಕಾರ ಐಪಿಎಲ್ ವಂಚಕ ಲಲಿತ್ ಮೋದಿ ಕೂಡಾ ಬನಿಯಾ ಜಾತಿಯವನು. ಬ್ಯಾಂಕ್ ವಂಚಕ ನೀರವ್ ಮೋದಿ, ಅವನ ಸಹೋದರ ಮೆಹುಲ್ ಚೋಕ್ಷಿ ಇವರೆಲ್ಲರ ಕೋರ್ಟ್ ದಾಖಲೆಗಳಲ್ಲಿ ಇವರ ಜಾತಿ ‘ಜೈನ’ ಎಂದು ಸ್ಪಷ್ಟವಾಗಿ ಬರೆದಿದೆಯಂತೆ. ವಾಣಿಜ್ಯ/ವಣಿಕ ಎಂಬ ಸಂಸ್ಕೃತ ಶಬ್ದದಿಂದ ವಾಣಿಯಾ/ಬನಿಯಾ ಶಬ್ದಗಳು ಹುಟ್ಟಿದ್ದು (ಕನ್ನಡದ ಬಣಜಿಗ ಎಂಬ ಜಾತಿವಾಚಕ ಶಬ್ದವೂ ವಾಣಿಜ್ಯಿಕ/ವಣಿಕ ಶಬ್ದದಿಂದ ಹುಟ್ಟಿದ್ದು). ಹೀಗಿರುವಾಗ ಕೇವಲ ನರೇಂದ್ರ ಮೋದಿ ಮಾತ್ರ ಯಾಕೆ ಹಿಂದುಳಿದ ಜಾತಿ ಮತ್ತು ಬೇರೆಲ್ಲಾ ಮೋದಿಗಳು ಯಾಕೆ ಮುಂದುವರಿದ ವೈಶ್ಯ/ಜೈನ ಜಾತಿಯವರು?

ಭಾರತದಲ್ಲಿ ತಮ್ಮ ಅಡುಗೆಯಲ್ಲಿ ಅತಿ ಹೆಚ್ಚು ತುಪ್ಪ ಬಳಸುವವರೆಂದರೆ ಗುಜರಾತಿಗಳು. ನಂತರದ ಸ್ಥಾನ ರಾಜಸ್ಥಾನಿಗಳಿಗೆ. ಹಾಗಾಗಿ ಒಂದು ಕಾಲದಲ್ಲಿ ಗುಜರಾತ್ನಲ್ಲಿ ತುಪ್ಪದ ವ್ಯಾಪಾರ ಮಾಡುತ್ತಿದ್ದ ವೈಶ್ಯ ಜಾತಿಯವರು ಅತಿ ಶ್ರೀಮಂತರಾಗಿದ್ದರು. ಈ ತುಪ್ಪದ ವ್ಯಾಪಾರದಿಂದಲೇ ವೈಶ್ಯ ಜಾತಿಯಲ್ಲಿ ಮೋಧಗಾಂಚಿ ಎಂಬ ಉಪಜಾತಿ ಹುಟ್ಟಿದ್ದು. ಹಿಂದಿನ ಕಾಲದಲ್ಲಿ ಇವರು ಎತ್ತಿನ ಬಂಡಿ ಕಟ್ಟಿಕೊಂಡು, ಅದರಲ್ಲಿ ಎರಡು ಮೂರು ದೊಡ್ಡ ತಾಮ್ರದ ಹಂಡೆ ಇಟ್ಟುಕೊಂಡು, ಅಲ್ಲಿಯ ಹಳ್ಳಿಹಳ್ಳಿಗೆ ಹೋಗಿ ರೈತರಿಂದ ಆಕಳ ಹಾಲಿನ ಬೆಣ್ಣೆ ಮತ್ತು ಎಮ್ಮೆ ಹಾಲಿನ ಬೆಣ್ಣೆಗಳನ್ನು ಖರೀದಿಸಿ ಪ್ರತ್ಯೇಕ ಹಂಡೆಗಳಲ್ಲಿ ಸಂಗ್ರಹಿಸಿ ಅದನ್ನು ತಮ್ಮ ನಗರಕ್ಕೆ ತಂದು ಆ ಬೆಣ್ಣೆಯನ್ನು ಕಾಯಿಸಿ ಸ್ವಚ್ಛ ಮಾಡಿ ಶುದ್ಧ ತುಪ್ಪವನ್ನು ಮಾರುತ್ತಿದ್ದರು. ತಲೆತಲಾಂತರದಿಂದ ಈ ಕುಲಕಸುಬು ಮಾಡಿಕೊಂಡಿದ್ದ ಬನಿಯಾ ಜಾತಿಯವರನ್ನು ಮೋಧಗಾಂಚಿ ಎಂಬ ಉಪಜಾತಿಯಾಗಿ ವರ್ಗೀಕರಿಸಲಾಗಿತ್ತು ಹಾಗೂ ದೇವಸ್ಥಾನಗಳ ದೀಪಕ್ಕೆ ಇವರೇ ಆಕಳ ತುಪ್ಪಒದಗಿಸುತ್ತಿದ್ದುದರಿಂದ ಇವರನ್ನು ಸಾಮಾನ್ಯ ವೈಶ್ಯ ಜಾತಿಯವರಿಗಿಂತ ಉನ್ನತ ವರ್ಗದವರು ಹಾಗೂ ಹೆಚ್ಚು ಗೌರವಾನ್ವಿತರು ಎಂದು ಆಗಿನ ಸಮಾಜದಲ್ಲಿ ಪರಿಗಣಿಸಲಾಗುತ್ತಿತ್ತು. ಹಳ್ಳಿಯ ಜನರೊಂದಿಗೆ ಲೇವಾದೇವಿ ವ್ಯವಹಾರ ಕೂಡಾ ಮಾಡುತ್ತಿದ್ದುದರಿಂದ ಇವರನ್ನು ಮಹಾಜನ್ ಅಥವಾ ಸಾಹೂ/ಸಾಹುಕಾರ್ ಎಂದು ಕೂಡ ಕರೆಯಲಾಗುತ್ತಿತ್ತು.

ಆದರೆ ಕುರಿಯನ್ರವರ ಆಡಳಿತದಲ್ಲಿ ಅಮುಲ್ ಸಹಕಾರ ಸಂಘ ದೊಡ್ಡ ಮಟ್ಟದಲ್ಲಿ ಗುಜರಾತಿನಲ್ಲಿ ಕಾರ್ಯನಿರತವಾಗಿ ಹಳ್ಳಿಯ ಹೈನುಗಾರರಿಂದ ನೇರವಾಗಿ ಹಾಲು ಬೆಣ್ಣೆ ಖರೀದಿಸಿ ಅದನ್ನು ವ್ಯವಸ್ಥಿತವಾಗಿ ಪಟ್ಟಣಗಳಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದ ನಂತರ ಈ ಮೋಧಗಾಂಚಿ-ವೈಶ್ಯರು ಬೆಣ್ಣೆ-ತುಪ್ಪದ ವ್ಯಾಪಾರದಲ್ಲಿ ನೆಲೆ ಕಳೆದುಕೊಂಡರು ಹಾಗೂ ಬೇರೆ ವ್ಯಾಪಾರದತ್ತ ವಲಸೆ ಹೋಗುವುದು ಅನಿವಾರ್ಯವಾಯಿತು.

ಬನಿಯಾ ಎಂಬ ಹಿಂದಿ ಶಬ್ದವೇ ಗುಜರಾತಿ ಭಾಷೆಯಲ್ಲಿ ವಾಣಿಯಾ ಆಗಿದೆ. ಮುಂಬೈಯಲ್ಲಿ ಇರುವ ದಿನಸಿ/ಕಿರಾಣಿ ಅಂಗಡಿಗಳಲ್ಲಿ ಹೆಚ್ಚಿನವು ಇದೇ ವಾಣಿಯಾ ಅರ್ಥಾತ್ ವೈಶ್ಯ ಜಾತಿಯವರದ್ದು. ಮಧ್ಯಮ ವರ್ಗದವರಾಗಿದ್ದ ಮೋದಿಯವರ ತಂದೆ ದಾಮೋದರ ದಾಸರದೂ ವಡನಗರದಲ್ಲಿ ಮೊದಲು ಸಣ್ಣ ದಿನಸಿ ಅಂಗಡಿಯಿತ್ತು, ಆದರೆ 1972ರ ನಂತರ ವಡನಗರದಲ್ಲಿ ಹೊಸ ರೈಲ್ವೆ ಸ್ಟೇಷನ್ ಕಟ್ಟಿದಾಗ, ಇತರ ಅರ್ಹರನ್ನು ಕಡೆಗಣಿಸಿ, ದಾಮೋದರ ದಾಸರು ಕಾಂಗ್ರೆಸ್ ಕಾರ್ಯಕರ್ತ ಎಂಬ ನೆಲೆಯಲ್ಲಿ ಅವರಿಗೆ ರೈಲ್ವೆ ಸ್ಟೇಷನ್ನಲ್ಲಿ ಚಹಾ ಸ್ಟಾಲ್ ಹಾಕಲು ಲೈಸನ್ಸ್ ದೊರೆಯಿತು. ಆಗ ನರೇಂದ್ರ ಮೋದಿಯವರಿಗೆ ವಯಸ್ಸು 23. ಆಶ್ಚರ್ಯವೆಂದರೆ ಮೋದಿ ಕುಟುಂಬದ ಕಾಂಗ್ರೆಸ್-ಮೂಲ ಈಗಿನ ಕಾಂಗ್ರೆಸ್ನವರಿಗೂ ಗೊತ್ತಿಲ್ಲ!.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News