ಚಂದ್ರನಲ್ಲಿಗೆ ಹಾರುವಾಗ ಮ್ಯಾನ್ ಹೋಲ್ ಗೆ ಮನುಷ್ಯ ಇಳಿಯದಂತೆ ಮಾಡಲಾಗದೆ ?

Update: 2023-07-20 13:43 GMT
Editor : Althaf | Byline : ಆರ್. ಜೀವಿ

Photo: PTI

​ಚಂದ್ರನ ಮೇಲೆ ನೌಕೆಯಿಳಿಸಿದ ದೇಶಗಳ ಸಾಲಿಗೆ ಭಾರತ ಸೇರಲಿದೆಯೆ? ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತಕ್ಕೆ ಹೊಸ ಬಲ ಬರಲಿದೆಯೆ?

ಈ ಪ್ರಶ್ನೆಗೆ ಉತ್ತರ ಸಿಗಲು ​​ಆಗಸ್ಟ್ 23ರವರೆಗೂ ಕಾಯಬೇಕು. ​ಈಗ ಯಶಸ್ವೀ ಉಡ್ಡಯನವಾಗಿರುವ ಚಂದ್ರಯಾನ - 3 ಕುರಿತ ಸಮಗ್ರ ಮಾಹಿತಿ ನಿಮ್ಮ ಮುಂದಿಡುತ್ತೇವೆ. ಏನಿದು ಚಂದ್ರಯಾನ 3 ? ಇದರ ಮಹತ್ವವೇನು ? ಇದರಿಂದ ಏನಾಗಲಿದೆ ? ಇದರ ಹಿಂದಿರುವವರು ಯಾರು ? ಇದರ ಬಗ್ಗೆ ಕೇಳಿ ಬಂದಿರುವ ಟೀಕೆ ಟಿಪ್ಪಣಿಗಳೇನು ?. ಅದರ ವಿವರಣೆ ಇಲ್ಲಿದೆ.

​ಇಸ್ರೋದ ಚಂದ್ರಯಾನ 3 ಉಡ್ಡಯನ​ ಶುಕ್ರವಾರ ಮಧ್ಯಾಹ್ನ​ ಯಶಸ್ವಿಯಾಗಿದ್ದು, ನೌಕೆ ನಿಗದಿತ ಕಕ್ಷೆ ಸೇರಿದೆ. ಇಸ್ರೋ ವಿಜ್ಞಾನಿಗಳು ಅಂದುಕೊಂಡಂತೆ ಎಲ್ಲವೂ ಆದರೆ ​​ಆಗಸ್ಟ್ 23 ​ರಂದು​ ಚಂದಿರನ ಅಂಗಳದಲ್ಲಿ ಭಾರತದ ಹೆಮ್ಮೆಯ ​ಲ್ಯಾಂಡರ್ ಮತ್ತು ರೋವರ್ ಇಳಿಯಲಿ​​ದ್ದು, ಭಾರತದ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಲಿದೆ.​

ನೌಕೆ ಚಂದ್ರನ ಅಂಗಳ ತಲುಪಲು 40 ದಿನಗಳು ಬೇಕು. ಆಗಸ್ಟ್ 23ರ ಸಂಜೆ ಚಂದ್ರನ ಮೇಲೆ ನೌಕೆ ಇಳಿಯಲಿದೆ. ವಿಕ್ರಂ ಹೆಸರಿನ ಲ್ಯಾಂಡರ್ ಮತ್ತು ಪ್ರಗ್ಯಾನ್ ಎಂಬ ರೋವರ್​ ಅನ್ನು​ ಗಗನನೌಕೆ ಒಳಗೊಂಡಿದೆ.

ಸುಮಾರು 615 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ​ಜಾರಿಯಾಗಿದೆ. ಈ ಹಿಂದಿನ ವಿಫಲ ಯೋಜನೆಗೆ ವೆಚ್ಚ ಮಾಡಿದ ಹಣವನ್ನು ಸೇರಿಸಿದರೆ ಈ ಮೊತ್ತ ಇನ್ನಷ್ಟು ದೊಡ್ಡದಾಗುತ್ತದೆ. ಆದರೆ ನೌಕೆ ಚಂದ್ರನನ್ನು ತಲುಪುವಲ್ಲಿ ಯಶಸ್ವಿಯಾಗಿ, ಅದು ಚಂದ್ರನ ಮೇಲ್ಮೈಯ ಕುರಿತಂತೆ ಮಹತ್ತರ ಸಂಶೋಧನೆಗಳನ್ನು ಭೂಮಿಗೆ ರವಾನಿಸುವುದರ ಮುಂದೆ ಈ ವೆಚ್ಚ ಅತ್ಯಲ್ಪ. ಚಂದ್ರಯಾನ ಯಶಸ್ವಿಯಾದರೆ ಖಗೋಳ ಕ್ಷೇತ್ರದಲ್ಲಿ ಭಾರತದ ವರ್ಚಸ್ಸೂ ಹಿಗ್ಗಲಿದೆ.

ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಯಲಿದೆ. ಲ್ಯಾಂಡರ್ ಸುರಕ್ಷಿತವಾಗಿ ಇಳಿದ ಬಳಿಕ ಅದರೊಳಗಿನ ರೋವರ್ ನಿಧಾನವಾಗಿ ಚಂದ್ರನ ಅಂಗಳಕ್ಕೆ ಪ್ರವೇಶಿಸುತ್ತದೆ. 40 ದಿನಗಳ ಪ್ರಯಾಣದ ಬಳಿಕ ಚಂದ್ರನ ಮೇಲಿಳಿಯುವ ಲ್ಯಾಂಡರ್ ಮತ್ತು ರೋವರ್, ಅಲ್ಲಿ ಕಾರ್ಯಾಚರಣೆ ನಡೆಸುವ ಅವಧಿ ಒಂದು ಚಂದ್ರದಿನ. ಅಂದರೆ ಭೂಮಿಯ 14 ದಿನಗಳು.

ಈ ಅವಧಿಯಲ್ಲಿ ಅವೆರಡೂ ಹಲವು ಮಹತ್ವದ ಕಾರ್ಯಾಚರಣೆ ನಡೆಸಲಿವೆ. ಈ ಕಾರ್ಯಾಚರಣೆಗಳನ್ನು ಭೂಮಿಯಲ್ಲಿನ ಉಪಗ್ರಹ ನಿಯಂತ್ರಣ ಕೇಂದ್ರದಿಂದ ನಿರ್ವಹಿಸಲಾಗುತ್ತದೆ. ವಿಕ್ರಂ ಲ್ಯಾಂಡರ್ ಒಳಗೆ ಚಂದ್ರನ ಮೇಲಿನ ಉಷ್ಣಾಂಶ ಅಳೆಯುವ ಮಾಪನ ಯಂತ್ರವಿರುತ್ತದೆ. ಚಂದ್ರನ ನೆಲದ ಮೇಲೆ ಭೂಕಂಪವಾದರೆ ಅದನ್ನು ಕಂಡುಹಿಡಿಯುವ ಯಂತ್ರವೂ ಇರುತ್ತದೆ. ಚಂದ್ರನ ಮೇಲಿರುವ ಪ್ಲಾಸ್ಮಾ ಪ್ರಮಾಣವನ್ನು ಅಳತೆ ಮಾಡಲಿದೆ. ಬಳಿಕ ಈ ಎಲ್ಲಾ ಮಾಹಿತಿಗಳನ್ನೂ ಭೂಮಿಗೆ ಕಳಿಸಲಿದೆ.

ರೋವರ್ ಒಳಗಿರುವ ಲೇಸರ್ ಸ್ಪೆಕ್ಟ್ರೋ ಮೀಟರ್ ಚಂದ್ರನ ಮೇಲಿನ ಖನಿಜಗಳು ಮತ್ತು ರಾಸಾಯನಿಕ ವಸ್ತುಗಳ ಸಂಯೋಜನೆಗಳನ್ನು ಅಧ್ಯಯನ ಮಾಡಲಿದೆ. ಇದರಿಂದ ಚಂದ್ರನ ಮೇಲ್ಮೈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಾಧ್ಯ. ರೋವರ್‌ನಲ್ಲಿ ಎಕ್ಸ್‌ ರೇ ಸ್ಪೆಕ್ಟ್ರೋ ಮೀಟರ್ ಕೂಡ ಇದ್ದು, ಚಂದ್ರನಲ್ಲಿರುವ ಕಲ್ಲು ಮತ್ತು ಮಣ್ಣಿನಲ್ಲಿರುವ ಮೆಗ್ನೀಶಿಯಂ, ಅಲ್ಯುಮಿನಿಯಂ, ಸಿಲಿಕಾನ್, ಕಬ್ಭಿಣ ಸೇರಿದಂತೆ ಹಲವು ಖನಿಜಗಳು ಮತ್ತು ಲೋಹಗಳ ಕುರಿತಾಗಿ ಇದು ಮಾಹಿತಿ ಸಂಗ್ರಹಿಸಲಿದೆ.

ಚಂದ್ರಯಾನ 3 ಯೋಜನೆ ಯಶಸ್ವಿಯಾದರೆ ಚಂದ್ರನ ಮೇಲೆ ನೌಕೆ ಇಳಿಸಿದ ​ಕೇವಲ ​4ನೇ ದೇಶವೆಂಬ ಹೆಗ್ಗಳಿಕೆ ಭಾರತದ್ದಾಗಲಿದೆ. ಈವರೆಗೆ ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳು ಮಾತ್ರ ಚಂದ್ರನ ಮೇಲೆ ನೌಕೆ ಇಳಿಸಿವೆ. ಈ ಯೋಜನೆ ಯಶಸ್ವಿಯಾದರೆ ಭಾರತದ ಆಂತರಿಕ್ಷ ವಿಜ್ಞಾನ ವಲಯಕ್ಕೆ ಹೆಚ್ಚು ಬಲ ಬಂದಂತಾಗುತ್ತದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಹೂಡಿಕೆ ಇನ್ನಷ್ಟು ಹೆಚ್ಚಾಗಲಿದೆ.

2019ರಲ್ಲಿ ಚಂದ್ರಯಾನ 2, ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಇಳಿಯುವಾಗ ತಪ್ಪಾಗಿ ವಿಫಲವಾಗಿತ್ತು. ಈ ಬಾರಿ ಅಂಥ ತಪ್ಪುಗಳು ಮರುಕಳಿಸದಂತೆ ಇಸ್ರೋ ವಿಜ್ಞಾನಿಗಳು ಎಚ್ಚರ ವಹಿಸಿದ್ದಾರೆನ್ನಲಾಗಿದೆ.

ಇಸ್ರೋ ಈ ಹಿಂದೆ ಹಲವು ದೂರ ಸಂವೇದಿ ಉಪಗ್ರಹಗಳನ್ನು ಹಾರಿಸಿದೆ. ಶಿಕ್ಷಣ, ಮೀನುಗಾರಿಕೆ, ನೈಸರ್ಗಿಕ ವಿಪತ್ತುಗಳ ರಕ್ಷಣೆ ಮೊದಲಾದ ಕ್ಷೇತ್ರಗಳಿಗೆ ಈ ಉಪಗ್ರಹಗಳು ತಮ್ಮ ನೆರವನ್ನು ನೀಡುತ್ತಿವೆ. ​ಬೇರೆ ಬೇರೆ ಕ್ಷೇತ್ರಗಳಲ್ಲಿ​ ​ಭಾರತ​ದ​​ ಸಾಧನೆ​ಗೆ ಇಸ್ರೋ ​ಮಹತ್ವದ ಕೊಡುಗೆ ನೀಡಿದೆ. ಇಸ್ರೋದ ವಿಜ್ಞಾನಿಗಳು ಹಗಲು ರಾತ್ರಿಯೆನ್ನದೆ ಬೆಳೆಸಿದ ದೇಶೀಯ ತಂತ್ರಜ್ಞಾನ ಭಾರತವನ್ನು ಹಲವು ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗಿಸಿದೆ ಎನ್ನುವುದನ್ನು ನಾವು ಮರೆಯುವಂತಿಲ್ಲ.

ಚಂದ್ರಯಾನ 3 ಯೋಜನೆಯ ಇಡೀ ಕಾರ್ಯಾಚರಣೆಯ ನೇತೃತ್ವ ವಹಿಸಿರುವವರು ಭಾರತದ 'ರಾಕೆಟ್ ಮಹಿಳೆ' ಎಂದೇ ಪರಿಚಿತರಾಗಿರುವ ​​ರಿತು ಕರಿದಾಲ್ ಶ್ರೀವಾಸ್ತವ. ಅವರು ISRO ದಲ್ಲಿ ಹಿರಿಯ ವಿಜ್ಞಾನಿ ಮತ್ತು ಭಾರತದ ಮಾರ್ಸ್ ಆರ್ಬಿಟರ್ ಮಿಷನ್ (MOM) ​​ಮಂಗಳಯಾನ್‌​ ​ಗೆ ಉಪ ಕಾರ್ಯಾಚರಣೆ ನಿರ್ದೇಶಕರಾಗಿದ್ದರು.

ಲಕ್ನೋದವರಾದ ರಿತು, 1996ರಲ್ಲಿ ಲಕ್ನೋ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ MSc ಪದವಿ ಪಡೆದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದಿಂದ MTech ಪದವಿಯನ್ನೂ ಪಡೆದಿದ್ದಾರೆ.

ಮಾರ್ಸ್ ಆರ್ಬಿಟರ್ ಮಿಷನ್ (​​ಮಂಗಳಯಾನ್‌​) ಮತ್ತು ಇತರ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಅವರ ಕೆಲಸಕ್ಕಾಗಿ ಅವರನ್ನು ಭಾರತದ "ರಾಕೆಟ್ ವುಮನ್" ಎಂದು ಕರೆಯಲಾಗುತ್ತದೆ.

ಇಸ್ರೋದ ಅನೇಕ ಪ್ರತಿಷ್ಠಿತ ಮಿಷನ್‌ಗಳಲ್ಲಿ​ ರಿತು​ ಕೆಲಸ ಮಾಡಿದ್ದಾರೆ, ಅವುಗಳೆಂದರೆ: ದಿ ಮಾರ್ಸ್ ಆರ್ಬಿಟರ್ ಮಿಷನ್ (ಮಂಗಳ್ಯಾನ್), ದಿ ಚಂದ್ರಯಾನ್ -1 ಮಿಷನ್, ದಿ ಚಂದ್ರಯಾನ್ -2 ಮಿಷನ್, ದಿ ಜಿಸ್ಯಾಟ್ -6 ಎ ಮಿಷನ್, GSAT-7A ಮಿಷನ್​.

1997ರಲ್ಲಿ ISRO ಸೇರಿದ ಅವರು, ISRO ಯುವ ವಿಜ್ಞಾನಿ ಪ್ರಶಸ್ತಿ, MOM ಗಾಗಿ ISRO ತಂಡ ಪ್ರಶಸ್ತಿ, ASI ತಂಡ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳಿಗೆ ಪಾತ್ರರಾಗಿದ್ದಾರೆ. ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಕಟಣೆಗಳಲ್ಲಿ 20ಕ್ಕೂ ಹೆಚ್ಚು​ ವೈಜ್ಞಾನಿಕ​ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

ಇನ್ನು ಈ ಮಿಷನ್ನ ಇತರ ಪ್ರಮುಖರೆಂದರೆ,

ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ - ಅವರು ಅಧಿಕಾರ ವಹಿಸಿಕೊಂಡ ನಂತರ, ಚಂದ್ರಯಾನ-3, ಆದಿತ್ಯ-​ ​ಎಲ್1 (ಸೂರ್ಯ ಮಿಷನ್), ಮತ್ತು ಗಗನ​ಯಾನ್ ​ ​ನಂತಹ ನಿರ್ಣಾಯಕ ಕಾರ್ಯಾಚರಣೆಗಳು ಚುರುಕುಗೊಂಡಿವೆ.

ಪಿ.ವೀರಮುತ್ತುವೇಲ್ – ಚಂದ್ರಯಾನ 3 ಪ್ರಾಜೆಕ್ಟ್ ಡೈರೆಕ್ಟರ್. ಚಂದ್ರಯಾನ 2ರಲ್ಲೂ ಪ್ರಮುಖ ಪಾತ್ರ ವಹಿಸಿದ್ದವರು.

ಎಸ್ ಉನ್ನಿಕೃಷ್ಣನ್ ನಾಯರ್ –​ ಇವರು ​ ವಿಕ್ರಂ ಸಾರಾಭಾಯ್ ಸ್ಪೇಸ್ ಸೆಂಟರ್​ ನ​ ನಿರ್ದೇಶಕರು. ನಾಯರ್ ಮತ್ತವರ ತಂಡ ಈ ನಿರ್ಣಾಯಕ ಮಿಷನ್‌ನ ವಿವಿಧ ಪ್ರಮುಖ ಕಾರ್ಯಗಳ ಉಸ್ತುವಾರಿ ವಹಿಸಿದೆ.

ಎ ರಾಜರಾಜನ್ – ಲಾಂಚ್ ​ಆಥರೈಸೇಷನ್ ಬೋರ್ಡ್ (LAB) ಅಧ್ಯಕ್ಷರು. ಪ್ರತಿಷ್ಠಿತ ವಿಜ್ಞಾನಿಯಾಗಿರುವ ಇವರು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ,

ಎಂ. ಶಂಕರನ್ –​ ಇವರು ​ ​ಯು ಆರ್ ರಾವ್ ಸ್ಯಾಟಲೈಟ್ ಸೆಂಟರ್ ನಿರ್ದೇಶಕರು. ಸಂವಹನ, ​ನೇವಿಗೇಷನ್, ರಿಮೋಟ್ ಸೆನ್ಸಿಂಗ್, ಹವಾಮಾನಶಾಸ್ತ್ರ ಮತ್ತು ಅಂತರ್ ಗ್ರಹಗಳ ಅನ್ವೇಷಣೆಯಂಥ ಕ್ಷೇತ್ರಗಳಲ್ಲಿ ಪ್ರಮುಖ ಹೆಸರು.

ಖಾಸಗಿ ಬಾಹ್ಯಾಕಾಶ ಉಡಾವಣೆಗಳಲ್ಲಿ ಹೂಡಿಕೆಯನ್ನು ಉತ್ತೇಜಿಸುವ ನೀತಿಗಳನ್ನು ಭಾರತ ಘೋಷಿಸಿದ ನಂತರದ ದೇಶದ ಮೊದಲ ಪ್ರಮುಖ ಮಿಷನ್ ಇದಾಗಿದೆ. 2008ರಲ್ಲಿ ಭಾರತ ಚಂದ್ರನ ಕಕ್ಷೆಗೆ ತನ್ನ ಮೊದಲ ಶೋಧಕವನ್ನು ಕಳುಹಿಸಿತು. 2014ರಲ್ಲಿ ಮಂಗಳನ ಕಕ್ಷೆಗೆ ಉಪಗ್ರಹವನ್ನು ಮುಟ್ಟಿಸಿದ ಏಷ್ಯಾದ ಮೊದಲ ದೇಶವಾಯಿತು. ಮೂರು ವರ್ಷಗಳ ನಂತರ ಒಂದೇ ಕಾರ್ಯಾಚರಣೆಯಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡಿದ್ದು ಮ​ತ್ತೊಂದು ಮೈಲಿಗಲ್ಲಾಗಿತ್ತು.

ಗಗನ​ಯಾನ್ ​ ಮಿಷನ್ ಎಂಬ ಮೂರು ದಿನಗಳ ಮಾನವಸಹಿತ ಮಿಷನ್ ಮುಂದಿನ ವರ್ಷ ನಿಗದಿಪಡಿಸಲಾಗಿದೆ. ​ಇಸ್ರೋದ ಈ ಸಾಧನೆಗೆ, ಅದರ ಹಿಂದಿರುವ ಅಲ್ಲಿನ ಪ್ರತಿಯೊಬ್ಬ ವಿಜ್ಞಾನಿಯ ಶ್ರಮ ಹಾಗು ಛಲಕ್ಕೆ ಒಂದು ಬಿಗ್ ಸೆಲ್ಯೂಟ್.

ಈ​ ದೊಡ್ಡ ಸಾಧನೆಯ​ ನಡುವೆ, ಉಡಾವಣೆಗೆ ಮೊದಲು ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಇಸ್ರೋ ನಡೆ ಮಾತ್ರ ವಿಚಾರವಂತರ ಟೀಕೆಗೆ ತುತ್ತಾಗಿದೆ. ಬಾಹ್ಯಾಕಾಶದಲ್ಲಿ ಮೈಲಿಗಲ್ಲು ಸ್ಥಾಪಿಸಲು ಹೊರಟವರು ಯಶಸ್ಸಿಗಾಗಿ ಕೋರಿ ವೆಂಕಟೇಶ್ವರನ ಮುಂದೆ ನಿಂತಿದ್ದ​ರು. ಇದು ವೈಜ್ಞಾನಿಕ ಕ್ಷೇತ್ರದವರಿಂದ ನಿರೀಕ್ಷಿಸುವ ನಡೆಯಲ್ಲ ಎಂದು ಹಲವರು ಟೀಕಿಸಿದ್ದಾರೆ. ಚಂದ್ರಯಾನಕ್ಕೆ ಮುನ್ನ ಪೂಜೆ, ಪ್ರಾರ್ಥನೆ​ ತಪ್ಪಲ್ಲ. ದೇವರನ್ನು ನಂಬುವುದು ಮೌಢ್ಯವೂ ಅಲ್ಲ. ಆದರೆ ಇಸ್ರೋ ಎನ್ನುವುದು ಒಂದು ಸಾರ್ವಜನಿಕ ಸಂಸ್ಥೆ. ಅಲ್ಲಿ ಬೇರೆ ಬೇರೆ ನಂಬಿಕೆಗಳುಳ್ಳ ವಿಜ್ಞಾನಿಗಳಿದ್ದಾರೆ. ನಾಸ್ತಿಕರು ಕೂಡ ಅವರಲ್ಲಿ ಸೇರಿರಬಹುದು. ತಮ್ಮ ತಮ್ಮ ಮನೆಗಳಲ್ಲಿ ದೇವರನ್ನು ಪೂಜಿಸಿ, ದೇವರನ್ನು ಸ್ಮರಿಸಿದರೆ ಅದು ಚರ್ಚೆಯಾಗುತ್ತಿರಲಿಲ್ಲ.

‘‘ಚಂದ್ರಯಾನ-3 ಪ್ರತೀ ಭಾರತೀಯನ ಮಹತ್ವಾಕಾಂಕ್ಷೆ, ಕನಸುಗಳನ್ನು ಎತ್ತರಕ್ಕೇರಿಸಿದೆ’ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ.​ ಸರಿ. ​ ಆದರೆ ಈ ಕನಸುಗಳು ಕೇವಲ ಚಂದ್ರನನ್ನು ತಲುಪುದಕ್ಕಷ್ಟೇ ಸೀಮಿತವಾದರೆ ಸಾಕೆ​ ​? ಚಂದ್ರನ ಮೇಲೆ ನೌಕೆಯನ್ನು ಕಳುಹಿಸಿರುವ ನಮಗೆ, ಕೆಲವೇ ಮೀಟರ್ ಆಳವಿರುವ ಮಲದ ಗುಂಡಿ​ಗೆ ಇಳಿದು ಅದನ್ನು ​ ಶುಚಿಗೊಳಿಸಲು ಯಂತ್ರವನ್ನು ಸೃಷ್ಟಿಸುವುದಕ್ಕೆ ಯಾಕೆ ಸಾಧ್ಯವಾಗಿಲ್ಲ ಎನ್ನುವ ಪ್ರಶ್ನೆಯೂ ಈ ಸಂದರ್ಭದಲ್ಲಿ ಮುನ್ನೆಲೆಗೆ ​ಬಂದಿದೆ. ​​ಮ್ಯಾನ್​ ಹೋಲ್ ​, ಮಲದಗುಂಡಿ, ಚರಂಡಿಗಳನ್ನು ಶುಚಿಗೊಳಿಸುವ ಸಂದರ್ಭದಲ್ಲಿ ಪ್ರತೀ ವರ್ಷ ನೂರಕ್ಕೂ ಅಧಿಕ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ​​ಮ್ಯಾನ್​ ಹೋಲ್ ​ಗ​ಳಲ್ಲಿ ತೇಲುತ್ತಿರುವ ಭಾರತದ ವರ್ಚಸ್ಸನ್ನು ಮೇಲೆತ್ತುವುದಕ್ಕೆ ಬೇಕಾದ ಸಾಧನೆಗಳು ಇಂದಿನ ಅಗತ್ಯವಾಗಿದೆ.​ಇದಕ್ಕೆ ‘ಚಂದ್ರಯಾನ-3’ಕ್ಕೆ ಬೇಕಾದಷ್ಟು ಹಣದ ಅಗತ್ಯವೇನೂ ಇಲ್ಲ. ಇಂದು ಚಂದ್ರನೆಡೆಗೆ ಯಾವುದೇ ನೌಕೆಯನ್ನು ಕಳುಹಿಸದ ದೇಶಗಳು ತಮ್ಮ ದೇಶದಲ್ಲಿ ಮಲದ ಗುಂಡಿಗೆ ಯಾವುದೇ ಮನುಷ್ಯನನ್ನು ಇಳಿಸಿ ಶುಚಿಗೊಳಿಸುವುದಿಲ್ಲ ಎಂದು ಹೆಮ್ಮೆ ಪಡುತ್ತಿವೆ. ಆ ಹೆಮ್ಮೆಯ ಮುಂದೆ ‘ಚಂದ್ರಯಾನ-3’ರ ಹೆಮ್ಮೆ ಏನೇನೂ ಅಲ್ಲ ಎನ್ನುವ ಅರಿವು, ವಿವೇಕ ಕೂಡ ನಮ್ಮಲ್ಲಿ ಇರಬೇಕಾಗಿದೆ.​

ಇಸ್ರೋ​ ಇವತ್ತು ಈ ದೊಡ್ಡ ಸಾಧನೆ ಮಾಡುತ್ತಿದೆ ಎಂದಾದರೆ ಅದಕ್ಕೆ ಅಂತಹದೊಂದು ಸಂಸ್ಥೆಯ ಅಗತ್ಯವನ್ನು ಈ ದೇಶದಲ್ಲಿ ದಶಕಗಳ ಹಿಂದೆಯೇ ಕಂಡುಕೊಂಡು ಅದನ್ನು ಸ್ಥಾಪಿಸಿ ಬೆಳೆಸುವಲ್ಲಿ ನೆಹರೂ, ಇಂದಿರಾಗಾಂಧಿಯಂತಹ ಮುತ್ಸದ್ದಿ​ತನ ಹಾಗು ಡಾ.ವಿಕ್ರಂ ಸಾರಾಭಾಯಿಯಂತಹ ಮಹಾನ್ ವಿಜ್ಞಾನಿಗಳ ದೂರದೃಷ್ಟಿಯ ಕೊಡುಗೆಯಿದೆ. ​ಅಂತಹ ಪ್ರಬುದ್ಧ ರಾಜಕಾರಣಿಗಳ ದೂರದೃಷ್ಟಿಯ ಫಲವಾಗಿ ಇಂದು ಇಸ್ರೋ ವಿಶ್ವಮಟ್ಟದಲ್ಲಿ ಬೆಳೆದು ನಿಂತಿದೆ. ​ಅಲ್ಲಿನ ವಿಜ್ಞಾನಿಗಳ ಶ್ರಮದಿಂದ ದೊಡ್ಡ ದೊಡ್ಡ ಸಾಧನೆ ಮಾಡುತ್ತಿದೆ. ಹಾಗಾಗಿ ಭಾರತದ ಈವರೆಗಿನ ಎಲ್ಲ ಸರಕಾರಗಳನ್ನೂ ಈ ಕ್ಷಣದಲ್ಲಿ ನೆನೆದು ಕೃತಜ್ಞತೆ ಸಲ್ಲಿಸೋದು ನಮ್ಮೆಲ್ಲರ ಕರ್ತವ್ಯ.

ಚಂದ್ರಯಾನದ ಯಶಸ್ಸು ಈ ದೇಶದ ವೈಜ್ಞಾನಿಕ ಮನೋಧರ್ಮವನ್ನು ಇನ್ನಷ್ಟು ಹಿಗ್ಗಿಸಲಿ, ಇಸ್ರೋ ಸಾಧನೆಯ ಲಾಭ ಈ ದೇಶದ ತಳಸ್ತರದ ಜನರಿಗೂ ತಲುಪಲಿ ಎಂದು ನಾವು ಈ ಸಂದರ್ಭದಲ್ಲಿ ಆಶಿ​ಸೋಣ.​

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ಆರ್. ಜೀವಿ

contributor

Similar News