ದೇಶ ಮೊದಲ ದಲಿತ ಪ್ರಧಾನಿಯನ್ನು ಹೊಂದುವ ಕಾಲ ಸನ್ನಿಹಿತವಾಗಿದೆಯೆ?

ಹತ್ತು ವರ್ಷಗಳ ಆಡಳಿತದ ನಂತರ ಮೋದಿ ಜನಸಾಮಾನ್ಯನ ನಾಯಕರಾಗಿ ಉಳಿದಿಲ್ಲ. ಆದರೂ ಅವರಿನ್ನೂ ಹಿಂದುತ್ವದ ಆಟ ಆಡಬಲ್ಲರು. ದಲಿತ ನಾಯಕರ ನೇತೃತ್ವದ ಹೊಸ ಸಾಮಾಜಿಕ ಒಕ್ಕೂಟದ ಮೂಲಕ ಸವಾಲೊಡ್ಡಿದರೆ ಮಾತ್ರ ಮೋದಿಯ ಸೋಲು ಸಾಧ್ಯ ಎಂಬುದನ್ನು ಬಹುಬೇಗ ಪ್ರತಿಪಕ್ಷ ನಾಯಕರು ಅರಿಯಬೇಕಿದೆ. ಮಲ್ಲಿಕಾರ್ಜುನ ಖರ್ಗೆಯಂಥ ಸಮಚಿತ್ತದ ನಾಯಕನ ನೇತೃತ್ವವನ್ನು ಒಪ್ಪಿಕೊಳ್ಳುವ ಅಗತ್ಯ ಈಗ ಬಹಳವಿದೆ.

Update: 2023-07-21 05:08 GMT

ಹರೀಶ್ ಖರೆ

ಟೆನಿಸ್ ಅಂಗಳದಲ್ಲಿ ಶ್ರೇಷ್ಠ ಆಟಗಾರ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಲು ಸಾಧ್ಯವಾಗಿದೆ ಎಂದಾದರೆ, ಮುಂದಿನ ವರ್ಷದ ಜನ ನ್ಯಾಯಾಲಯದಲ್ಲಿ ನರೇಂದ್ರ ಮೋದಿಯವರನ್ನೂ ಸೋಲಿಸಲು ಸಾಧ್ಯವಿದೆ. ಪ್ರತಿಪಕ್ಷದಲ್ಲಿನ ರಾಜಕೀಯ ಸನ್ನಿವೇಶ ಅತ್ಯಂತ ಅವ್ಯವಸ್ಥಿತವಾಗಿದ್ದರೂ, ಅಲ್ಲೊಬ್ಬ ಕಾರ್ಲೋಸ್ ಅಲ್ಕರಾಝ್ ಇದ್ದಾರೆ. ಅವರೇ ಮಲ್ಲಿಕಾರ್ಜುನ ಖರ್ಗೆ. ಪ್ರತಿಪಕ್ಷ ನಾಯಕರು ಚತುರತೆಯಿಂದ ಆಟವಾಡಿದ್ದೇ ಆದಲ್ಲಿ ಮುಂದಿನ ಮೇಯಲ್ಲಿ ಭಾರತ ತನ್ನ ಮೊದಲ ದಲಿತ ಪ್ರಧಾನಿಯನ್ನು ಕಂಡೀತು.

ಪ್ರತಿಪಕ್ಷಗಳು ಒಗ್ಗೂಡುವಲ್ಲಿ ಮುಖ್ಯ ತೊಡಕಾಗಿರುವುದು ನಾಯಕತ್ವದ ವಿಚಾರ ಎಂಬುದು ಗೊತ್ತಿರದ ಸಂಗತಿಯೇನಲ್ಲ. ಆ ಸಮಸ್ಯೆಯಲ್ಲಿಯೇ ಒಂದು ಪರಿಹಾರದ ಸುಳಿವು ಕೂಡ ಇದೆಯೆಂಬುದೂ ಅಷ್ಟೇ ನಿಜ.

ಮೊದಲನೆಯದಾಗಿ, ಯಾವುದೇ ಕಾಂಗ್ರೆಸೇತರ ರಾಜಕೀಯ ಪಕ್ಷ ೪೦ಕ್ಕಿಂತ ಹೆಚ್ಚು ಲೋಕಸಭಾ ಸ್ಥಾನಗಳನ್ನು ಸ್ವಂತ ಬಲದಿಂದ ಗೆಲ್ಲಲು ಸಾಧ್ಯವಿಲ್ಲ. ಹಾಗಾಗಿ, ಆ ಪಕ್ಷಗಳು ಪ್ರಧಾನಿ ಸ್ಥಾನಕ್ಕೆ ಯಾವುದೇ ಹಕ್ಕು ಸಾಧಿಸುವುದು ಕೂಡ ಆಗದು. ಅಥವಾ ಅದನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ.

ಎರಡನೆಯದಾಗಿ, ಯಾವುದೇ ಬಿಜೆಪಿಯೇತರ, ಮೋದಿಯೇತರ ಪರ್ಯಾಯಕ್ಕೆ ಕಾಂಗ್ರೆಸ್ ಪಕ್ಷದ ನೇತೃತ್ವ ಪ್ರಶ್ನಾತೀತ. ಹಾಗಿದ್ದರೂ, ಇತರ ಪ್ರತಿಪಕ್ಷಗಳ ನಾಯಕರು ತಮ್ಮ ಜಂಟಿ ಪ್ರಧಾನಿ ಅಭ್ಯರ್ಥಿಯನ್ನಾಗಿ ರಾಹುಲ್ ಗಾಂಧಿಯವರನ್ನು ಒಪ್ಪುವುದಿಲ್ಲ. ಗಾಂಧಿ ಕುಟುಂಬದೊಂದಿಗಿನ ಹಲವು ಕೆಟ್ಟ ನೆನಪುಗಳು ಮತ್ತು ಸನ್ನಿವೇಶಗಳು ಅದಕ್ಕೆ ಕಾರಣ. ಹಾಗಾಗಿ ತೋರಿಕೆಗೂ ರಾಹುಲ್ ನಾಯಕತ್ವವನ್ನು ಯಾರೂ ಒಪ್ಪುವುದಿಲ್ಲ. ಹಾಗೆಯೇ ಕಾಂಗ್ರೆಸ್ ಕೂಡ. ಮಮತಾ ಬ್ಯಾನರ್ಜಿ ಅಥವಾ ಅರವಿಂದ ಕೇಜ್ರಿವಾಲ್ ಅಂಥವರನ್ನು ಪ್ರಧಾನಿಯಾಗಿ ಹೊಂದಲು ಅದು ಒಪ್ಪುವುದಿಲ್ಲ.

ಮೂರನೆಯದಾಗಿ, ಭಾರತ್ ಜೋಡೊ ಯಾತ್ರೆಯ ಕುರಿತಾದ ಎಲ್ಲಾ ಉತ್ಸಾಹ ಮತ್ತು ಅದು ಹೆಚ್ಚು ಸುದ್ದಿಯಾದುದರ ಹೊರತಾಗಿಯೂ, ರಾಹುಲ್ ಗಾಂಧಿ ಇನ್ನೂ ಸ್ವೀಕಾರಾರ್ಹ ಎಂದೆನಿಸಿಕೊಂಡಿಲ್ಲ. ಅವರೊಬ್ಬ ಭಿನ್ನ ರಾಜಕೀಯ ವ್ಯಕ್ತಿಯಾಗಿ ಉಳಿದಿದ್ದಾರೆ. ಅವರ ಉಪನಾಮದ ಕಾರಣದಿಂದಾಗಿಯೇ ಮಧ್ಯಮ ವರ್ಗದವರು ಅವರು ಪ್ರಧಾನಿ ಅಭ್ಯರ್ಥಿಯಾಗುವುದನ್ನು ಬೆಂಬಲಿಸುವುದಿಲ್ಲ. ಇದೆಲ್ಲಕ್ಕಿಂತಲೂ, ನರೇಂದ್ರ ಮೋದಿಗೆ ಪರ್ಯಾಯವಾಗಿ ರಾಹುಲ್ ಅವರನ್ನು ಕಾಣುವುದಕ್ಕೆ ಜನರ ಮನಃಸ್ಥಿತಿ ಇನ್ನೂ ಸಿದ್ಧವಾಗಿಲ್ಲ.

ಮತ್ತೊಂದೆಡೆ, ರಾಹುಲ್ ಗಾಂಧಿ ತಮಗೆ ಆಡಳಿತದಲ್ಲಿ ಆಸಕ್ತಿಯಿಲ್ಲವೆಂಬುದನ್ನು ಬಹಳ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ನಾಯಕನಾಗಿ ಇರಬಯಸಿದರೂ, ಕೇಂದ್ರ ಸರಕಾರದಂಥ ದೊಡ್ಡ ಸಾಂಸ್ಥಿಕ ಯಂತ್ರವನ್ನು ನಿಭಾಯಿಸುವ ವಿಚಾರದಲ್ಲಿ ಅವರಿಗೆ ಉತ್ಸುಕತೆಯಿಲ್ಲ. ತಾಯಿಯಂತೆಯೇ ಅವರು ಈ ವಿಚಾರದಿಂದ ಬಹಳ ದೂರವೇ ಉಳಿಯಲು ಬಯಸುವವರು.

ಹೀಗಿರುವಾಗ ವಿರೋಧ ಪಕ್ಷದ ನಾಯಕರು ತಮ್ಮ ಸೀಮಿತ ಸಂಖ್ಯೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕತ್ವದೊಂದಿಗೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳ ಬಹುದು?

ಬಹುಶಃ, ಕಾಂಗ್ರೆಸ್ ನೇತೃತ್ವದ ಒಕ್ಕೂಟದ ಚುಕ್ಕಾಣಿ ಹಿಡಿದಿರುವ ಗಾಂಧಿ ಕುಟುಂಬಕ್ಕೆ ಹೊರತಾದವರ ಕಡೆಗೆ ಗಮನ ಹರಿಸುವುದೇ ಈ ಹೊತ್ತಿನಲ್ಲಿ ಅತ್ಯಂತ ಕಾರ್ಯಸಾಧ್ಯವಾದುದು. ಮಾತ್ರವಲ್ಲ, ಅದು ಅತ್ಯಂತ ಸೂಕ್ತ ಉತ್ತರವೂ ಆಗಿರಬಹುದು. ಹಾಗಾಗಿಯೇ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಹತ್ವ ಇರುವುದು. ಅವರು ತಾನೊಬ್ಬ ಸಮಚಿತ್ತದ ಮತ್ತು ಅಷ್ಟೇ ಸಮರ್ಥ ನಾಯಕನೆಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ನರೇಂದ್ರ ಮೋದಿಗೆ ಅತ್ಯಂತ ಪ್ರಬಲ ಮತ್ತು ಅರ್ಹ ಎದುರಾಳಿಯಾಗಿ ಖರ್ಗೆ ನಿಲ್ಲುತ್ತಾರೆನ್ನುವುದರಲ್ಲಿ ಸಂಶಯವಿಲ್ಲ.

ಅಖಿಲೇಶ್ ಯಾದವ್ ಅಥವಾ ತೇಜಸ್ವಿ ಯಾದವ್ ಅಥವಾ ಅರವಿಂದ ಕೇಜ್ರಿವಾಲ್ ಥರದ ಯುವ ನಾಯಕರು ಅಥವಾ ಮಮತಾ ಬ್ಯಾನರ್ಜಿಯಂಥವರು ಕೂಡ ಮತ್ತೂ ಐದು ವರ್ಷಗಳ ಮೋದಿ-ಶಾ ದಾದಾಗಿರಿಗೆ ಅವಕಾಶವಾಗುವುದನ್ನು ತಪ್ಪಿಸುವುದಕ್ಕೆ ಖರ್ಗೆಯವರನ್ನು ಒಪ್ಪಿಕೊಳ್ಳುವ ಸೂಕ್ತ ಲೆಕ್ಕಾಚಾರಕ್ಕೆ ಮನಸ್ಸು ಮಾಡಬೇಕು. ಮೋದಿ-ಶಾ-ಯೋಗಿ ಸಂಯೋಜನೆಯಲ್ಲಿ ಎಲ್ಲಾ ಪ್ರಾದೇಶಿಕ ಪಕ್ಷಗಳು, ಮಿತ್ರ ಪಕ್ಷಗಳು ಅಥವಾ ಪ್ರತಿಪಕ್ಷಗಳನ್ನು ಹೊಡೆದುರುಳಿಸುವ ತರ್ಕವಿದೆ ಎಂಬುದು ದೇಶದ ಪ್ರತಿಯೊಬ್ಬ ಪ್ರಾದೇಶಿಕ ನಾಯಕರಿಗೂ ಈಗ ಸ್ಪಷ್ಟವಾಗಿರಬೇಕು. ನವೀನ್ ಪಟ್ನಾಯಕ್ ಅಥವಾ ಚಂದ್ರ ಬಾಬು ನಾಯ್ಡು ಅಥವಾ ಸುಖಭೀರ್ ಬಾದಲ್ ಅವರಂತಹ ಇನ್ನೂ ಕೆಲವರು ಬಿಜೆಪಿ ಜೊತೆ ಸಖ್ಯ ಹೊಂದಿರುವ ಕಾರಣದಿಂದ ನಿರಾಳತೆಯ ಭಾವನೆಯಲ್ಲಿದ್ದಾರೆ. ಆದರೆ ಅವರ ಉಳಿವು ಸಂಪೂರ್ಣವಾಗಿ ಮೋದಿ ನೀತಿಯನ್ನೇ ಅವಲಂಬಿಸಿದೆ ಎನ್ನುವುದೂ ಅಷ್ಟೇ ಸತ್ಯ. ಗೆಲ್ಲುವ ಕುದುರೆಗಳು ಎಂದು ಕಾಣಿಸುವವರೆಗೆ ಮಾತ್ರವೇ ಮೋದಿ ಒಲವು ಅವರ ಮೇಲಿರಲಿದೆ.

ಬಡವರು, ಇಲ್ಲದವರ ಮತ್ತು ಕೆಳವರ್ಗದವರ ಪರ ಎಂಬ ಮೋದಿಯ ಇಮೇಜ್ ವ್ಯವಸ್ಥಿತವಾಗಿ ರೂಪಿಸಲಾಗಿರುವಂಥದ್ದು. ರಾಹುಲ್ ಎದುರು ನಿಂತು ಮಿಂಚುವ ಮೋದಿ, ಮಲ್ಲಿಕಾರ್ಜುನ ಖರ್ಗೆಯಂತಹ ದಲಿತ ನಾಯಕರಿಗೆ ಮುಖಾಮುಖಿಯಾದರೆ ಎಲ್ಲವೂ ಬದಲಾಗಲಿದೆ. ಮೊದಲ ಒಬಿಸಿ ಪ್ರಧಾನಮಂತ್ರಿ ಎಂದು ಮೋದಿ ಲಾಭ ಪಡೆದರೆ, ಖರ್ಗೆಯವರ ನಾಯಕತ್ವ ನಿಚ್ಚಳವಾದಲ್ಲಿ ಭಾರತದ ಮೊದಲ ದಲಿತ ಪ್ರಧಾನಿಯ ನಿರೀಕ್ಷೆಯೊಂದಿಗೆ ಇಡೀ ಅಂಬೇಡ್ಕರ್ವಾದಿ ವಲಯವೇ ಹುರುಪು ಪಡೆಯಲು ಸಾಧ್ಯವಾದೀತು.

ಪ್ರತಿಪಕ್ಷ ನಾಯಕರ ಮುಂದಿರುವ ಸರಳ ಸವಾಲು ಏನೆಂದರೆ, ಭಾರತಕ್ಕೆ ಸ್ಥಿರ ಮತ್ತು ಸೂಕ್ಷ್ಮ ಆಡಳಿತ ವ್ಯವಸ್ಥೆಯನ್ನು ನೀಡಲು ಸಾಮೂಹಿಕವಾಗಿ ಅವರು ಬದ್ಧರಾಗಿರುವ ಬಗ್ಗೆ ದೇಶದ ಜನತೆಗೆ ಭರವಸೆ ಸಿಗುವ ಹಾಗೆ ನಡೆದುಕೊಳ್ಳಬೇಕಿರುವುದು. ಅತಿ ಬಲಿಷ್ಠ ಮತ್ತು ಅತಿರೇಕದ ಪ್ರಧಾನಿಯ ಅವಶ್ಯಕತೆ ಇಲ್ಲ.

ದೇಶ ನಿರ್ಣಾಯಕ ಸರಕಾರ ಮತ್ತು ಬಲವಾದ ನಾಯಕರನ್ನು ಹೊಂದಿದೆ ಎಂಬುದನ್ನು ಸಾಬೀತುಪಡಿಸುವುದು ಸಾಧ್ಯವಿದೆ. ವಿರೋಧ ಪಕ್ಷದ ನಾಯಕರು ಕಳೆದ ಹತ್ತು ವರ್ಷಗಳ ದೋಷಗಳು ಮತ್ತು ವೈಫಲ್ಯಗಳ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆ ನೀಡಬೇಕು. ಮೋದಿ ದೊಡ್ಡದಾಗಿ ಮಾತನಾಡಿ, ತಮ್ಮ ‘ಲಾಲ್ ಆಂಖ್’ ಮೂಲಕ ಚೀನೀಯರನ್ನು ದಿಟ್ಟಿಸಿ ನೋಡುವುದಾಗಿ ಭರವಸೆ ನೀಡಿದರು ಮತ್ತು ಆಕ್ರಮಣವನ್ನು ಎದುರಿಸಲು ಸಿದ್ಧ ಎಂಬಂತೆ ಮಾತನಾಡಿದರು. ಆದರೆ, ಹಿಂದಿನ ಸರಕಾರದ ಅವಧಿಯಲ್ಲಿ ಆದುದಕ್ಕಿಂತ ಹೆಚ್ಚಿನ ಭಾರತೀಯ ಭೂಪ್ರದೇಶವನ್ನು ಚೀನಾದ ಪಡೆಗಳು ಈಗ ಸುತ್ತುವರಿದಿವೆ. ಪಾಕಿಸ್ತಾನ ಎಂದಿನಂತೆ ಅತಂತ್ರವಾಗಿದೆ, ಕಾಶ್ಮೀರಿಗಳು ಹೊಸದಿಲ್ಲಿಯ ಆಧಿಪತ್ಯಕ್ಕೆ ಮರುಳಾಗದೆ ಮತ್ತು ರಾಜಿಯಾಗದೆ ಉಳಿದಿದ್ದಾರೆ ಮತ್ತು ಇಡೀ ಈಶಾನ್ಯವನ್ನು ಹೊಸದಿಲ್ಲಿಯಲ್ಲಿನ ಮೋದಿಯವರ ಪ್ರಬಲ ಸರಕಾರ ತೀವ್ರವಾಗಿ ದುರುಪಯೋಗಪಡಿಸಿಕೊಂಡಿದೆ ಎಂಬ ಆರೋಪಗಳಿವೆ.

ಭ್ರಷ್ಟಾಚಾರ ಮತ್ತು ಭ್ರಷ್ಟರ ವಿರುದ್ಧ ಹೋರಾಡುವ ಉತ್ಪ್ರೇಕ್ಷಿತ ಮಾತುಗಳ ಹೊರತಾಗಿಯೂ, ಭಾರತ ೨೦೧೪ರಲ್ಲಿ ಇದ್ದುದಕ್ಕಿಂತ ಕಡಿಮೆ ಭ್ರಷ್ಟಾಚಾರ ಹೊಂದಿದೆ ಎಂದು ಯಾರೂ ಸಮರ್ಥಿಸಿಕೊಳ್ಳುವ ಸ್ಥಿತಿಯಿಲ್ಲ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಕೇಳುತ್ತಲೇ ಇದ್ದೇವೆ. ಸಾರ್ವಜನಿಕ ಕಚೇರಿಗಳ ದುರ್ಬಳಕೆ ಮತ್ತು ಚುನಾಯಿತ ಶಾಸಕರ ಕೊಂಡುಕೊಳ್ಳುವಿಕೆಯಂತೂ ಸರ್ವೇಸಾಮಾನ್ಯವಾಗಿದೆ.

ಹತ್ತು ವರ್ಷಗಳ ಆಡಳಿತದ ನಂತರ ಮೋದಿ ಅವರೀಗ ಜನಸಾಮಾನ್ಯನ ನಾಯಕರಾಗಿ ಉಳಿದಿಲ್ಲ. ಅವರು ಜಾಗತಿಕ ಮತ್ತು ಸೂಪರ್ ಶ್ರೀಮಂತ ಭಾರತೀಯ ಗಣ್ಯರ ಮುಖವಾಡ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಆದರೂ ಅವರಿನ್ನೂ ಹಿಂದುತ್ವದ ಆಟ ಆಡಬಲ್ಲರು. ಮೊದಲಿಗೆ, ದಲಿತರ ನೇತೃತ್ವದ ಹೊಸ ಸಾಮಾಜಿಕ ಒಕ್ಕೂಟದ ಮೂಲಕ ಸವಾಲೊಡ್ಡಿದರೆ ಮಾತ್ರ ಮೋದಿಯ ಸೋಲು ಸಾಧ್ಯ ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ ಪ್ರತಿಪಕ್ಷದ ನಾಯಕರು ಅಗತ್ಯ ಜಾಣ್ಮೆ ತೋರಿಸಬೇಕಿದೆ.

(ಕೃಪೆ: thewire.in)

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News