ಕುರ್ಮಿ ಸಮುದಾಯದ ಅಸ್ಮಿತೆಯ ಹೋರಾಟ ಮತ್ತು ಬಿಜೆಪಿಯ ಒಡಕಿನ ರಾಜಕೀಯ
ಮಣಿಪುರದಲ್ಲಿನ ವಿದ್ಯಮಾನ ಸುದ್ದಿಯಲ್ಲಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿಯೂ ಅಂಥದೇ ಬಗೆಯ ಬೇಡಿಕೆಯೊಂದು ಮುಂದೆ ಪಡೆಯಬಹುದಾದ ರಾಜಕೀಯ ಬಣ್ಣ ಎಂಥದಿರಬಹುದು ಎಂಬ ಪ್ರಶ್ನೆ ಏಳುತ್ತಿದೆ. ಅಲ್ಲಿ ಜಂಗಲ್ ಮಹಲ್ ಎಂಬ ನಾಲ್ಕು ಜಿಲ್ಲೆಗಳನ್ನೊಳಗೊಂಡ ಪ್ರದೇಶವಿದೆ. ದಶಕಗಳಿಂದ ಮಾವೋವಾದಿಗಳ ಹಿಂಸಾಚಾರವನ್ನು ಕಂಡ ಈ ಪ್ರದೇಶದಲ್ಲೀಗ ಮತ್ತೊಂದು ಹೋರಾಟ ಶುರುವಾಗಿದೆ. ಎಸ್ಟಿ ಸ್ಥಾನಮಾನಕ್ಕೆ ಬೇಡಿಕೆಯಿಟ್ಟು ಕುರ್ಮಿ ಜನಾಂಗದವರು ನಡೆಸುತ್ತಿರುವ ಹೋರಾಟ ಅದು.
ಮಣಿಪುರ ಹಿಂಸಾಚಾರದ ಕಾರಣಗಳು ಗೊಂದಲಗೊಳಿಸುವಷ್ಟು ಸಂಕೀರ್ಣವಾಗುತ್ತಿವೆ. ಆದರೂ, ಬುಡಕಟ್ಟು ಸಮುದಾಯ ಮತ್ತು ಬಹುಸಂಖ್ಯಾತ ಮೈತೈ ಸಮುದಾಯದ ನಡುವಿನ ಸಂಘರ್ಷ, ಅದು ಪಡೆಯುತ್ತಿರುವ ರಾಜಕೀಯ ಸ್ವರೂಪ, ಮೈತೈ ಸಮುದಾಯದ ಪರವಾಗಿ ಸರಕಾರವೇ ನಿಂತಿರುವುದು, ಕ್ರಿಶ್ಚಿಯನ್ ಧರ್ಮದವರಾದ ಕುಕಿ ಬುಡಕಟ್ಟು ಸಮುದಾಯದ ವಿರುದ್ಧದ ನಿಲುವುಗಳು ಸ್ಪಷ್ಟವಾಗಿಯೇ ಗೋಚರಿಸುತ್ತಿರುವುದು ಸುಳ್ಳಲ್ಲ. ಬುಡಕಟ್ಟು ಜನರ ನೆಲೆಯಾಗಿರುವ ಗುಡ್ಡಗಾಡು ಪ್ರದೇಶದಲ್ಲಿ ಭೂಮಿಯ ಮೇಲೆ ಒಡೆತನ ಬಯಸುತ್ತಿರುವ ಮೈತೈ ಸಮುದಾಯದ ಎಸ್ಟಿ ಸ್ಥಾನಮಾನದ ಬೇಡಿಕೆಗೆ ಸೂಕ್ತ ಸ್ಪಂದನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಶುರುವಾದ ವಿರೋಧ ಕಡೆಗೆ ಹಿಂಸಾಚಾರಕ್ಕೆ ತಿರುಗಿ ತೀವ್ರ ತಲ್ಲಣವನ್ನು ಸೃಷ್ಟಿಸಿದೆ. ಹೀಗೆ ಮಣಿಪುರದಲ್ಲಿನ ವಿದ್ಯಮಾನ ಸುದ್ದಿಯಲ್ಲಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿಯೂ ಅಂಥದೇ ಬಗೆಯ ಬೇಡಿಕೆಯೊಂದು ಮುಂದೆ ಪಡೆಯಬಹುದಾದ ರಾಜಕೀಯ ಬಣ್ಣ ಎಂಥದಿರಬಹುದು ಎಂಬ ಪ್ರಶ್ನೆ ಏಳುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಜಂಗಲ್ ಮಹಲ್ ಎಂಬ ಪ್ರದೇಶವಿದೆ. ಬಂಕುರಾ, ಪುರುಲಿಯಾ, ಜಾರ್ಗ್ರಾಮ್ ಮತ್ತು ಪಶ್ಚಿಮ ಮೇದಿನಿಪುರ್ ಜಿಲ್ಲೆಗಳನ್ನು ಒಟ್ಟಾಗಿಸಿ ಈ ಹೆಸರಿನಿಂದ ಕರೆಯಲಾಗುತ್ತದೆ. ದಶಕಗಳಿಂದ ಮಾವೋವಾದಿಗಳ ಹಿಂಸಾಚಾರವನ್ನು ಕಂಡ ಈ ಪ್ರದೇಶದಲ್ಲೀಗ ಮತ್ತೊಂದು ಹೋರಾಟ ಶುರುವಾಗಿದೆ. ಎಸ್ಟಿ ಸ್ಥಾನಮಾನಕ್ಕೆ ಬೇಡಿಕೆಯಿಟ್ಟು ಕುರ್ಮಿ ಜನಾಂಗದವರು ನಡೆಸುತ್ತಿರುವ ಹೋರಾಟ ಅದು.
ಕಳೆದೆರಡು ದಶಕಗಳಿಂದ ಪಶ್ಚಿಮ ಬಂಗಾಳದ ರಾಜಕಾರಣದ ಬಗ್ಗೆ ಬರೆಯುತ್ತ ಬಂದಿರುವ ಪತ್ರಕರ್ತ ಜಾಯ್ದೀಪ್ ಸರಕಾರ್ ಕುರ್ಮಿಗಳ ಹೋರಾಟದ ರಾಜಕೀಯ ಆಯಾಮಗಳ ಬಗ್ಗೆ ‘ದಿ ವೈರ್’ ವೆಬ್ ಪತ್ರಿಕೆಯಲ್ಲಿ ಬರೆದಿದ್ದಾರೆ. ಅವರು ಉಲ್ಲೇಖಿಸಿರುವ, ಪಶ್ಚಿಮ ಬಂಗಾಳದ ಇತಿಹಾಸಕಾರ ಮತ್ತು ಕಲಾವಿದ ಮಧುಸೂದನ್ ಮಹತೊ ಮಾತು ಹೇಗೆ ಹೋರಾಟವೆಂಬುದು ಸಂಕುಚಿತಗೊಂಡಿದೆ ಮತ್ತು ರಾಜಕೀಯ ಮಾತ್ರವಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಆ ಮಾತುಗಳು ಹೀಗಿವೆ:
‘‘ನಾನು ರಾಜಕೀಯವನ್ನು ಅರ್ಥಮಾಡಿಕೊಳ್ಳುವಷ್ಟು ವಯಸ್ಸಾಗುವ ಹೊತ್ತಿಗೆ, ನಾವು ವರ್ಗ ಹೋರಾಟದ ಬಗ್ಗೆ, ದಬ್ಬಾಳಿಕೆ ನಡೆಸುವವರು ಮತ್ತು ತುಳಿತಕ್ಕೊಳಗಾದವರ ನಡುವಿನ ಸೈದ್ಧಾಂತಿಕ ಯುದ್ಧದ ಬಗ್ಗೆ ಮಾತನಾಡುತ್ತಿದ್ದೆವು. ಈಗ ನಾನು ನೋಡುತ್ತಿರುವುದು ಜಾತಿ ಮತ್ತು ಧರ್ಮದ ಮೇಲಿನ ಹೋರಾಟ. ಇದು ನಾನೆಂದೂ ಬಯಸಿದ್ದಲ್ಲ.’’
ಮತ್ತೊಮ್ಮೆ ಪಶ್ಚಿಮ ಬಂಗಾಳದ ಸಾಮಾಜಿಕ ರಾಜಕೀಯ ಸಂದರ್ಭದ ಕೇಂದ್ರಬಿಂದುವಾಗಿ ಮಾರ್ಪಟ್ಟಿರುವ ಜಂಗಲ್ ಮಹಲ್ನಲ್ಲಿ, ಮಾವೋವಾದಿ ಚಳವಳಿಯ ನಂತರದ ಈ ಕುರ್ಮಿಗಳ ಹೋರಾಟ ಹೆಚ್ಚಾಗಿ ಅಸ್ಮಿತೆಯ ರಾಜಕೀಯಕ್ಕೆ ಸಂಬಂಧಿಸಿದ್ದಾಗಿದೆ ಎನ್ನುತ್ತಾರೆ ತಮ್ಮ ಬರಹದಲ್ಲಿ ಸರಕಾರ್. ಅವರು ಗಮನಿಸಿರುವ ಕೆಲವು ಅಂಶಗಳು ಇಲ್ಲಿವೆ:
2005ರಿಂದ 2012ರವರೆಗೆ ಈ ಪ್ರದೇಶ ತೀವ್ರವಾದ ಮಾವೋವಾದಿ ದಂಗೆ ಮತ್ತು ಭದ್ರತಾ ಪಡೆಗಳ ಪ್ರತೀಕಾರದ ಪರಿಣಾಮವಾಗಿ ಹಿಂಸಾಚಾರದಿಂದಲೇ ಸುದ್ದಿಯಾಗುತ್ತಿತ್ತು. ಆಗ ಸಾವಿಗೀಡಾದವರು ಒಟ್ಟು 698 ಮಂದಿ. ಅವರಲ್ಲಿ 544 ನಾಗರಿಕರು, 75 ಭದ್ರತಾ ಸಿಬ್ಬಂದಿ ಮತ್ತು 88 ಮಾವೋವಾದಿಗಳು. ತೃಣಮೂಲ ಕಾಂಗ್ರೆಸ್ 2011ರಲ್ಲಿ ಎಡರಂಗ ವಿರುದ್ಧದ ವಿಜಯದ ಮೂಲಕ ಅಧಿಕಾರವನ್ನು ಪಡೆದುಕೊಂಡಿತು. ಬಂಡಾಯ ಕ್ರಮೇಣ ಕಡಿಮೆಯಾಯಿತು.
ಕುರ್ಮಿ ಸಮುದಾಯದ್ದು ಈ ಪ್ರದೇಶದಲ್ಲಿ ಅತಿದೊಡ್ಡ ಸಂಖ್ಯಾ ಬಲ. ಪುರುಲಿಯ ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆಯ ಶೇ.65, ಜಾರ್ಗ್ರಾಮ್ನಲ್ಲಿ ಶೇ.65, ಪಶ್ಚಿಮ ಮಿಡ್ನಾಪುರದಲ್ಲಿ ಶೇ.17 ಮತ್ತು ಬಂಕುರಾದಲ್ಲಿ ಶೇ.18. ಆದರೂ ಸಾಮೂಹಿಕ ಚಳವಳಿ ಇಲ್ಲದ ಕಾರಣ ರಾಜಕೀಯವಾಗಿ ಈ ಸಮುದಾಯ ಅಷ್ಟು ಪ್ರಭಾವಶಾಲಿಯಾಗಿರಲಿಲ್ಲ. ಕುರ್ಮಿ ನಾಯಕರು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿದ್ದರೂ, ಸಮುದಾಯಕ್ಕೊಂದು ರಾಜಕೀಯ ಅಸ್ಮಿತೆ ಸಿಕ್ಕಿರಲಿಲ್ಲ.
ಕುರ್ಮಿ ಸಮುದಾಯದ ಪ್ರಸಕ್ತ ಆಂದೋಲನ ಎರಡು ದೀರ್ಘಕಾಲದ ಬೇಡಿಕೆಗಳ ಸುತ್ತ ಸುತ್ತುತ್ತದೆ. ಮೊದಲನೆಯದಾಗಿ, ಅವರು ಪರಿಶಿಷ್ಟ ಪಂಗಡದ ಸಮುದಾಯವಾಗಿ ಅಧಿಕೃತ ಮಾನ್ಯತೆಯನ್ನು ಬಯಸುತ್ತಿದ್ದಾರೆ. ಸದ್ಯ ಅವರು ಇತರ ಹಿಂದುಳಿದ ವರ್ಗಗಳಲ್ಲಿದ್ದಾರೆ. ಎರಡನೆಯದಾಗಿ, ‘ಗುರಮ್’ ಅಥವಾ ‘ಥಾನ್’ ಎಂದು ಕರೆಯಲಾಗುವ ಅವರದೇ ಪವಿತ್ರ ಸ್ಥಳದಲ್ಲಿ ವಿಗ್ರಹಗಳಿಲ್ಲದೆ ಪ್ರಕೃತಿಯನ್ನು ಪೂಜಿಸುವ ‘ಸರಿ’ ಮತ್ತು ‘ಸರನಾ’ ಎಂಬ ಹೆಸರಿನ ತಮ್ಮ ವಿಶಿಷ್ಟ ಧಾರ್ಮಿಕ ಆಚರಣೆಗಳನ್ನು ಗುರುತಿಸಲು ಮತ್ತು ಒಪ್ಪಿಕೊಳ್ಳಲು ಅವರು ಒತ್ತಾಯಿಸುತ್ತಿದ್ದಾರೆ.
2011 ಮತ್ತು 2016ರಲ್ಲಿ ಜಂಗಲ್ ಮಹಲ್ನ ವಿಧಾನಸಭಾ ಕ್ಷೇತ್ರಗಳಲ್ಲಿ ಟಿಎಂಸಿ ಭರ್ಜರಿ ಗೆಲುವು ಸಾಧಿಸಿತ್ತು. ಆದರೂ, ಕುರ್ಮಿ ಸಮುದಾಯಕ್ಕೆ ನೀಡಿದ ಭರವಸೆಯನ್ನು ಈಡೇರಿಸಲು ಪಕ್ಷ ಸಮರ್ಥವಾಗಲಿಲ್ಲ. ಅಲ್ಲದೆ ಅತಿರೇಕದ ಭ್ರಷ್ಟಾಚಾರದ ಕಾರಣಕ್ಕೆ ಆ ಪಕ್ಷದ ಬಗ್ಗೆ ಈ ಅರಣ್ಯವಾಸಿ ಸಮುದಾಯದಲ್ಲಿ ದೊಡ್ಡ ಮಟ್ಟದ ಅಸಮಾಧಾನವಿದೆ.
ಒಂದು ಕಾಲದಲ್ಲಿ ಬಲಶಾಲಿಯಾಗಿದ್ದ ಎಡಪಕ್ಷ ಈಗಾಗಲೇ ಈ ಪ್ರದೇಶದಲ್ಲಿ ನಿರ್ನಾಮವಾಗಿಬಿಟ್ಟಿದೆ. ತಳಮಟ್ಟದಲ್ಲಿನ ಅದರ ಇಲ್ಲವಾಗುವಿಕೆಯ ಲಾಭವನ್ನು ಸರಿಯಾದ ಸಮಯದಲ್ಲಿ ಸೂಕ್ತವಾಗಿಯೇ ಬಳಸಿಕೊಂಡಿರುವುದು ಬಿಜೆಪಿ.
ಜನಾಂಗೀಯ ಗಡಿಗಳನ್ನು ಮೀರಿದ ವಿರೋಧಿ ಶಕ್ತಿಗಳಿಗೆ ವೇದಿಕೆಯನ್ನೊದಗಿಸುವ ರಾಜಕಾರಣವನ್ನೂ ಅದು ಮಾಡಿದೆ. 2011ರಿಂದ ಈ ಪ್ರದೇಶದಲ್ಲಿ ಸಕ್ರಿಯವಾಗಿರುವ ಆರೆಸ್ಸೆಸ್ ಇವೆಲ್ಲದರ ಹಿಂದೆ ಇದೆ.
ಮಮತಾ ಬ್ಯಾನರ್ಜಿ ಸರಕಾರ ಸಮುದಾಯದ ಈ ಮನಸ್ಥಿತಿಯಲ್ಲಿನ ಬದಲಾವಣೆಯನ್ನು ಗ್ರಹಿಸಿತು. ಸ್ಥಳೀಯ ಬುಡಕಟ್ಟುಗಳ ಕಲ್ಯಾಣಕ್ಕಾಗಿ ಮೀಸಲಾದ ಪಶ್ಚಿಮ ಬಂಗಾಳ ಸಾಂಸ್ಕೃತಿಕ ಸಂಶೋಧನಾ ಸಂಸ್ಥೆಯನ್ನು ಪ್ರಾರಂಭಿಸಿತು. ಕುರ್ಮಿಗಳಿಗೆ ಎಸ್ಟಿ ಸ್ಥಾನಮಾನವನ್ನು ನೀಡುವ ಬಗ್ಗೆ ಪೂರಕ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿತು. ಆದರೆ ಅದು ತಿರಸ್ಕೃತಗೊಂಡಿದೆ.
ಕೇಂದ್ರ ಸರಕಾರಕ್ಕೆ ಸಮಗ್ರ ವರದಿ ಸಲ್ಲಿಸುವ ವಿಚಾರದಲ್ಲಿ ಸಾಂಸ್ಕೃತಿಕ ಸಂಶೋಧನಾ ಸಂಸ್ಥೆ ಮತ್ತು ರಾಜ್ಯ ಸರಕಾರ ಎಡವಿರುವುದೇ ಮಾನ್ಯತೆ ಪ್ರಕ್ರಿಯೆಗೆ ಅಡ್ಡಿಯಾಗಿದೆ ಎಂಬುದು ಕುರ್ಮಿ ಸಮುದಾಯದ ಮುಖಂಡರ ಆರೋಪ. ಮಾನ್ಯತೆ ದೊರಕುವಲ್ಲಿನ ವಿಳಂಬವೇ ವಿವಾದಕ್ಕೆ ಕಾರಣವಾಗಿದೆ.
73 ವರ್ಷಗಳಿಂದ ತಾವು ವಂಚನೆಗೆ ಬಲಿಯಾಗಿದ್ದೇವೆ ಮತ್ತು ಸತತ ಮನವಿಗಳ ಬಳಿಕವೂ ಏನೂ ಬೆಳವಣಿಗೆ ಕಾಣದೆ ಈಗ ಬೀದಿಗೆ ಬಿದ್ದಿದ್ದೇವೆ ಎಂಬುದು ಕುರ್ಮಿ ನಾಯಕರ ಅಳಲು. ಸಮುದಾಯದ ಆಕ್ರೋಶ ಯಾವ ಮಟ್ಟಿಗೆ ಹೋಗಿದೆಯೆಂದರೆ, ಟಿಎಂಸಿ ಪ್ರಧಾನ ಕಾರ್ಯದರ್ಶಿ ಮತ್ತು ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಅವರ ಕಾರನ್ನು ಹಿಂಬಾಲಿಸುತ್ತಿದ್ದ ತೃಣಮೂಲ ಕಾಂಗ್ರೆಸ್ ಸಚಿವ ಬಿರ್ಬಹಾ ಹನ್ಸ್ದಾ ಅವರಿಗೆ ಸೇರಿದ ಕಾರಿನ ಮೇಲೆ ಇತ್ತೀಚೆಗೆ ಆ ಪ್ರದೇಶದಲ್ಲಿ ದಾಳಿ ನಡೆಸಲಾಯಿತು. ಆದರೆ, ಪ್ರತಿಭಟನಾಕಾರರು ಬಿಜೆಪಿ ನಾಯಕರ ಪರವಾಗಿಯೂ ಇಲ್ಲ. ಅವರಿಗೂ ಬಿಜೆಪಿ ಬೆಂಬಲಿಗರಿಗೂ ನಡುವೆ ಘರ್ಷಣೆ ಕೂಡ ನಡೆದಿದೆ. ಬಿಜೆಪಿ ಸಂಸದ ದಿಲೀಪ್ ಘೋಷ್ ಬಂಗಲೆ ಮೇಲೆಯೂ ದಾಳಿ ನಡೆದಿದೆ.
ಈ ಮಧ್ಯೆ, ರಾಜ್ಯದ ಹಲವಾರು ಬುಡಕಟ್ಟು ಸಮುದಾಯಗಳು ಕುರ್ಮಿಗಳ ಎಸ್ಟಿ ಸ್ಥಾನಮಾನದ ಬೇಡಿಕೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ. ಜೂನ್ 8ರಂದು, ಯುನೈಟೆಡ್ ಫೋರಮ್ ಆಫ್ ಆಲ್ ಟ್ರೈಬಲ್ ಆರ್ಗನೈಸೇಷನ್ಸ್ ವತಿಯಿಂದ ಪ್ರತಿಭಟನೆ ನಡೆಯಿತು. ಕುರ್ಮಿಗಳು ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದು, ಬುಡಕಟ್ಟು ಸ್ಥಾನಮಾನಕ್ಕೆ ಅನರ್ಹರು ಎಂದು ಆರೋಪಿಸಲಾಯಿತು.
ಆದರೆ ಈ ವಿಚಾರವಾಗಿ ಒಮ್ಮತವಿಲ್ಲ. ಕುರ್ಮಿ ನಾಯಕರ ಅಭಿಪ್ರಾಯಗಳು ಸಂಘ ಪರಿವಾರದೊಂದಿಗಿನ ಅವರ ಸಂಬಂಧದ ಆಧಾರದಲ್ಲಿ ಬದಲಾಗುತ್ತವೆ. ಒಂದು ಬಣವು ಹಿಂದೂ ಅಲ್ಲ ಎಂದು ಬಲವಾಗಿ ಹೇಳಿದರೆ, ಮತ್ತೊಂದು ಬಣವು ಕುರ್ಮಿಗಳು ಪ್ರಕೃತಿಯನ್ನು ಗೌರವಿಸುವುದೂ ಸೇರಿದಂತೆ ಬುಡಕಟ್ಟು ಪದ್ಧತಿಗಳಿಗೆ ಬದ್ಧವಾಗಿರುವುದರ ಕಡೆ ಗಮನ ಸೆಳೆಯುತ್ತದೆ.
ಅವರನ್ನು ಹಿಂದೂ ಧರ್ಮಕ್ಕೆ ಸೇರಿಸಲು ಪ್ರಯತ್ನಿಸುವ ಮೂಲಕ ಬಿಜೆಪಿ ಅವರ ದೌರ್ಬಲ್ಯಗಳನ್ನು ಬಳಸಿಕೊಳ್ಳುತ್ತಿದೆ ಎಂಬುದು ಈ ಎರಡನೇ ಗುಂಪಿನ ಆರೋಪ. 2010ರಲ್ಲಿ ಆರೆಸ್ಸೆಸ್ ಪ್ರವೀಣ್ ತೊಗಾಡಿಯಾ ಸಮ್ಮುಖದಲ್ಲಿ ಬಿರ್ಭುಮ್ನ ರಾಮ್ಪುರಹಟ್ನಲ್ಲಿರುವ ದೇವಾಲಯಗಳಲ್ಲಿ ಗಂಗಾ ಸ್ನಾನ ಮತ್ತು ಪೂರ್ವಜರ ಪೂಜೆ ನಡೆಸಿದಾಗ, ಇದು ತಮ್ಮ ಬುಡಕಟ್ಟು ಸಂಪ್ರದಾಯಗಳನ್ನು ಅತಿಕ್ರಮಿಸುವ ಒಂದು ಉದ್ದೇಶಪೂರ್ವಕ ನಡೆ ಎಂದು ಕುರ್ಮಿಗಳ ಒಂದು ಬಣ ಆಕ್ಷೇಪಿಸಿತು.
ಇದರ ನಡುವೆಯೇ, ಜಂಗಲ್ ಮಹಲ್ ಒಂದು ದಶಕದಿಂದ ಸಂಘ ಪರಿವಾರದ ಬುಡಕಟ್ಟು ಕಲ್ಯಾಣ ಶಾಖೆಯೊಂದಿಗೆ ಬಲವಾದ ಸಂಪರ್ಕ ಹೊಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಂಕುರಾ, ಬಿಷ್ಣುಪುರ್, ಜಾರ್ಗ್ರಾಮ್, ಮಿಡ್ನಾಪುರ ಮತ್ತು ಪುರುಲಿಯಾದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಲು ಆರೆಸ್ಸೆಸ್ನ ಈ ಹಿಡಿತ ನೆರವಾಯಿತು. ಜಂಗಲ್ ಮಹಲ್ನಲ್ಲಿ ಶೇ.38ರಷ್ಟು ಮತದಾರರನ್ನು ಹೊಂದಿರುವ ಕುರ್ಮಿ ಸಮುದಾಯದ ಬೆಂಬಲ ಈ ಚುನಾವಣಾ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಕುತೂಹಲಕಾರಿ ಸಂಗತಿಯೆಂದರೆ, ತಳಮಟ್ಟದಲ್ಲಿರುವ ‘ಮೇಲ್ವರ್ಗದ’ ಬಿಜೆಪಿ ನಾಯಕರು ಕುರ್ಮಿ ಆಂದೋಲನವನ್ನು ವಿರೋಧಿಸುತ್ತಿದ್ದಾರೆ. ಇನ್ನೊಂದೆಡೆ ಸಿಪಿಐಎಂ ಆರೋಪವೆಂದರೆ, ಬಿಜೆಪಿ ಉದ್ದೇಶಪೂರ್ವಕವಾಗಿ ಬುಡಕಟ್ಟು ಮತ್ತು ಕುರ್ಮಿಗಳ ನಡುವೆ ಒಡಕು ಮತ್ತು ಸಂಘರ್ಷವನ್ನು ಬಿತ್ತುತ್ತಿದೆ ಎಂಬುದು. ಬಿಜೆಪಿಯ ಈ ಒಡೆಯುವ ರಾಜಕೀಯ ತಂತ್ರಗಳಿಗೆ ಬಲಿಯಾಗಬೇಡಿ ಎಂಬ ಎಚ್ಚರಿಕೆಯನ್ನು ಅದು ನೀಡುತ್ತಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುವುದು ಈ ಸಂದರ್ಭದಲ್ಲಿ ಅವಶ್ಯವಿದೆ. ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕಿದೆ. ಬಿಜೆಪಿ ತನ್ನ ರಾಜಕೀಯ ಆಟಕ್ಕೆ ಕುರ್ಮಿಗಳ ಹೋರಾಟವನ್ನು ಬಳಸಿಕೊಳ್ಳುವ ಸಾಧ್ಯತೆ ಇದ್ದೇ ಇದೆ. ಮಣಿಪುರದಲ್ಲಿ ಬಳಸಿದ ತಂತ್ರಗಳನ್ನೇ ಇಲ್ಲಿಯೂ ಅದು ಅನುಸರಿಸುತ್ತಿದೆ. ಈ ಪಿತೂರಿಯಲ್ಲಿ ಸಿಕ್ಕಿಬೀಳದಂತೆ ಹೋರಾಟಗಾರರು ಎಚ್ಚರಿಕೆ ವಹಿಸಬೇಕಿದೆ.