ಮಿತಿಯಲ್ಲಿರಲಿ ಮೊಬೈಲ್ ಬಳಕೆ
-ಡಾ. ಗೀತಾ ಕುಮಾರಿ ಟಿ.
ಅಸಿಸ್ಟೆಂಟ್ ಪ್ರೊಪೆಸರ್, ಕನ್ನಡ ವಿಭಾಗ, ವಿವೇಕಾನಂದ ಪದವಿ ಕಾಲೇಜು, ಪುತ್ತೂರು.
ಕಾಲ ನಿಲ್ಲುವುದಿಲ್ಲ. ಬದಲಾವಣೆ ಪ್ರಕೃತಿ ಸಹಜವಾದುದು. ಮಾನವನು ಅವಶ್ಯಕತೆ, ಅನಿವಾರ್ಯತೆಗೆ ತಕ್ಕಂತೆ ಅನ್ವೇಷಣೆಗೆ ತೊಡಗಿಕೊಂಡು ಹೊಸಹೊಸ ಆವಿಷ್ಕಾರಗಳನ್ನು ಮಾಡಿಕೊಂಡಿದ್ದಾನೆ. ಅದರಲ್ಲಿ ಮೊಬೈಲ್ ಎಂಬ ಸಂಪರ್ಕ ಸಾಧನ ಇಂದು ಅಬಾಲವೃದ್ಧರ ಜೀವನದ ಅವಿಭಾಜ್ಯ ಅಂಗವಾಗಿ ಬೆರೆತುಹೋಗಿದೆ. ಮೊಬೈಲ್ ಗಿರುವ ಸಾಧ್ಯತೆ ಅಪೂರ್ವವಾದುದು. ಇಡೀ ಪ್ರಪಂಚವನ್ನು ಅಂಗೈಯಲ್ಲಿ ಕಾಣಿಸುವ ಪುಟ್ಟ ವಸ್ತುವೊಂದು ಹಳ್ಳಿಯ ಯಾವುದೋ ಮೂಲೆಯ ದಾರಿಯನ್ನು ತೋರುತ್ತದೆ. ದೂರದೂರಿನ ಸಂಬಂಧಿಕರ ಮುಖವನ್ನು ಕಾಣಿಸುತ್ತದೆ. ಎಲ್ಲೋ ನಡೆಯುತ್ತಿರುವ ಕಾರ್ಯಕ್ರಮವನ್ನು ಲೈವ್ ನೋಡಲು ಅನುಕೂಲ ಒದಗಿಸಿದೆ. ಶಾಲೆ, ಕಾಲೇಜು ವಿದ್ಯಾರ್ಥಿಗಳಂತೂ ಯಾವ ವಿಷಯ ಕೇಳಿದರೂ ಮೊಬೈಲ್ನ ಮೊರೆಹೋಗುವುದು ಸಾಮಾನ್ಯ ಸಂಗತಿಯಾಗಿದೆ. ಹಲವು ಹತ್ತು ಉಪಯೋಗಗಳಿರುವ ಮೊಬೈಲ್ ಫೋನನ್ನು ಸರಿಯಾಗಿ, ಮಿತಿಯಲ್ಲಿ ಬಳಸಿದರೆ ಅದು ತಂತ್ರಜ್ಞಾನದ ಒಂದು ವರವೇ ಆಗುವುದರಲ್ಲಿ ಸಂಶಯವಿಲ್ಲ.
ಕಳೆದೆರಡು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಮಾರ್ಪಾಡುಗಳಾಗಿವೆ. ವಿಶ್ವವ್ಯಾಪಿಯಾಗಿ ಕಾಣಿಸಿಕೊಂಡ ಕೊರೋನ ಮನುಷ್ಯನ ಜೀವನಕ್ರಮವನ್ನು ಬದಲಿಸಿದ್ದು ಮಾತ್ರವಲ್ಲ, ತರಗತಿಯ ಶಿಕ್ಷಣದ ಮಾದರಿಗಳನ್ನೇ ಬದಲಿಸಿತು. ಗುರುಶಿಷ್ಯರು ಪರಸ್ಪರ ಮುಖಾಮುಖಿಯಾಗಿ ಕಲಿಯುವ ಕ್ರಮದಿಂದ ವಂಚಿತರಾದ ಮಕ್ಕಳು ಮೊಬೈಲ್ ಫೋನ್ನ ಮುಂದೆ ನೆಟ್ವರ್ಕ್ ಗಾಗಿ ಕಾದು ದೂರದಿಂದ ಕೇಳಿಸುವ ಅಧ್ಯಾಪಕರ ಸ್ವರವನ್ನು ಆಲಿಸಿ ಪಾಠವನ್ನು ಕಲಿಯುವ ಕ್ರಮಕ್ಕೆ ತೆರೆದುಕೊಳ್ಳಬೇಕಾಯಿತು.
ಆದರೆ ಕಾಲಚಕ್ರ ಸರಿದು ಆಶಾದಾಯಕ ಬೆಳವಣಿಗೆಗಳಾಗಿವೆ. ಕೊರೋನ ನಿಯಂತ್ರಣಕ್ಕೆ ಬಂದು ಮತ್ತೆ ಶಾಲೆ, ಕಾಲೇಜು ಆರಂಭವಾಗಿವೆ. ಆದರೆ ಅಂದು ಅನಿವಾರ್ಯವಾಗಿ ಬಳಕೆಯಾಗುತ್ತಿದ್ದ ಮೊಬೈಲ್ ಫೋನ್ ಇಂದು ವಿದ್ಯಾರ್ಥಿಗಳ ಬ್ಯಾಗ್ ಗಳಲ್ಲಿ ಸ್ಥಾನಪಡೆದಿದೆ. ಈಗ ತರಗತಿಯಲ್ಲಿ ಮನಸ್ಸಿಟ್ಟು ಪಾಠ ಕೇಳುವವರ ಸಂಖ್ಯೆ ಕಡಿಮೆಯಾಗಿರುವುದಂತೂ ಸತ್ಯ. ತೀರಾ ಅಗತ್ಯ ಬಿದ್ದಾಗ ಆನ್ಲೈನ್ ತರಗತಿ ಮಾಡುವುದು ಸರಿಯೆನಿಸಿದರೂ ಸಂಪೂರ್ಣ ಅದಕ್ಕೇ ಅಂಟಿಕೊಳ್ಳುವುದು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹಿತದೃಷ್ಟಿಯಿಂದ ಸರಿಯಾದ ಕ್ರಮವಲ್ಲ.
ಮೊಬೈಲ್ ಬಳಸುವುದರಿಂದ ಕೈಬರಹದ ಅಭ್ಯಾಸ ತಪ್ಪಿದ ಮಕ್ಕಳು ಪರೀಕ್ಷೆಯ ದಿನ ಅರ್ಧಗಂಟೆಯಲ್ಲೇ ಬರೆದು ಕೈ ನೋವಾಯಿತು ಎಂದೋ, ವೇಗವಾಗಿ ಬರೆಯಲು ಸಾಧ್ಯವಾಗದೆ ಉತ್ತರ ಸರಿಯಾಗಿ ಬರೆಯದ ಉದಾಹರಣೆಗಳು ಸಿಗುತ್ತಿವೆ. ಪರೀಕ್ಷೆಗೆ ಪುಸ್ತಕಗಳನ್ನು ಓದುತ್ತಿದ್ದವರು ಈಗ ಮೊಬೈಲ್ ನಲ್ಲೇ ಓದುತ್ತಿದ್ದಾರೆ. ಗ್ರಂಥಾಲಯದಲ್ಲಿ ಗಂಟೆಗಟ್ಟಲೆ ಕುಳಿತು ಓದುತ್ತಿದ್ದ ತಲೆಮಾರನ್ನು ಈಗ ಕಳೆದುಕೊಂಡಿದ್ದೇವೆ. ಸೆಮಿನಾರ್ ಮಾಡಬೇಕಾದವರು, ಲೇಖನ ಬರೆಯಲು ಹೊರಟ ವಿದ್ಯಾರ್ಥಿಗಳು ಗೂಗಲ್ ಮೊರೆಯನ್ನೇ ಹೋಗುತ್ತಿದ್ದಾರೆ. ಹೀಗಾಗಿ ಬರವಣಿಗೆಯಲ್ಲಿ ವೈವಿಧ್ಯಗಳಿಲ್ಲದೆ ವಿದ್ಯಾರ್ಥಿಗಳು ಸ್ವಂತಿಕೆಯನ್ನೇ ಕಳೆದುಕೊಂಡಿದ್ದಾರೆ. ಬರೆಯುವ, ಓದುವ ಸಂಸ್ಕೃತಿ ನಾಶವಾಗಿ ವಿದ್ಯಾರ್ಥಿಗಳು ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಇದರ ದುಷ್ಪರಿಣಾಮಗಳನ್ನು ಎದುರಿಸಬೇಕಾದ ಅರಿವಿಲ್ಲದೆ ಸಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿರುವ ವಿದ್ಯಾರ್ಥಿ ಸಮುದಾಯವು ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಾದರೆ ಮೊಬೈಲ್ ಬಳಕೆಗೆ ಕಡಿವಾಣ ಹಾಕಲೇಬೇಕಾಗಿದೆ. ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುವ ಈ ವ್ಯವಸ್ಥೆ ಬದಲಾಗಲು ಪೋಷಕರು, ಮನೆಯ ಪರಿಸರ, ಅಧ್ಯಾಪಕ ಬಳಗ ಜೊತೆಗೂಡಿ ವಿದ್ಯಾರ್ಥಿಗಳ ಮನವೊಲಿಸಬೇಕಾಗಿದೆ. ಹಿತಮಿತ ಮೊಬೈಲ್ ಬಳಕೆಯಿಂದ ಸ್ವಸ್ಥ ಭವಿಷ್ಯ ರೂಪುಗೊಳ್ಳುವುದು ಎಂದು ವಿದ್ಯಾರ್ಥಿಗಳಿಗೆ ಅನ್ನಿಸಿದಾಗ ಮಾತ್ರ ಶಿಕ್ಷಣ ವ್ಯವಸ್ಥೆಯಲ್ಲಿ ನಿಜವಾದ ಕಲಿಕೆ ಸಿದ್ಧಿಸುತ್ತದೆ.