ಗಾಂಧೀಜಿಯವರ ಹೊಸ ಶಿಕ್ಷಣ(ನಯಿ-ತಾಲಿಮ್)ದ ಮರುಭೇಟಿ ಇಂದಿನ ಅಗತ್ಯ

ಗಾಂಧೀಜಿಯವರ ಮೂಲ ಶಿಕ್ಷಣವನ್ನು ಎಲ್ಲಾ ಶಾಲೆಗಳಲ್ಲಿ ಅವುಗಳ ಆಡಳಿತ ಮಂಡಳಿ, ಆದಾಯದ ಮೂಲ ಅಥವಾ ಪಠ್ಯಕ್ರಮ/ ಪರೀಕ್ಷಾ ಮಂಡಳಿಗಳ ಸಂಯೋಜನೆಯನ್ನು ಲೆಕ್ಕಿಸದೆ, ಕನಿಷ್ಠ ಮೂಲಸೌಕರ್ಯ, ಪಠ್ಯಕ್ರಮ ಮತ್ತು ಶಿಕ್ಷಣ ಮಾನದಂಡಗಳನ್ನು ಹೊಂದಿರುವ ಎಲ್ಲಾ ಶಾಲೆಗಳನ್ನು ಸಮಾನ ಶಾಲಾ ವ್ಯವಸ್ಥೆಯೊಳಗೆ ತಂದು, ಘೋಷಿತ ಕಾಲಮಿತಿಯೊಳಗೆ ಕೆಲಸ-ಕೇಂದ್ರಿತ ಶಿಕ್ಷಣವನ್ನು ಕಾರ್ಯಗತಗೊಳಿಸುವುದು ಇಂದಿನ ತರ್ತು ಅಗತ್ಯವಾಗಿದೆ.

Update: 2024-11-23 04:04 GMT

ಇಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳಲ್ಲಿ ಸೃಜನಾತ್ಮಕತೆ ಮತ್ತು ಆತ್ಮ ಸ್ಥೈರ್ಯವನ್ನು ಹೆಚ್ಚಿಸಿ ಅವರನ್ನು ಸ್ವಾವಲಂಬಿಗಳನ್ನಾಗಿಸಿ ಉತ್ತಮ ನಾಗರಿಕರಾಗಿ ಬದುಕಲು ಅಣಿಗೊಳಿಸುವಲ್ಲಿ ಸೋತಿದೆ ಎಂಬುದನ್ನು ಬಹುತೇಕ ಜನರು ಒಪ್ಪುತ್ತಾರೆ. ಶಿಕ್ಷಣ ಮಕ್ಕಳ ಪಾಲಿಗೆ ಸಂತಸದಾಯಕ ಅರ್ಥಪೂರ್ಣ ಕಲಿಕೆಯಾಗುವ ಬದಲು ಕಂಠಪಾಠ ಒಪ್ಪಿಸುವ ಶಿಕ್ಷೆಯಾಗಿದೆ ಎಂಬುದು ಬಹುತೇಕರ ಅಭಿಮತ. ಹಲವು ಸಂಶೋಧನೆಗಳು ಸಹ ಇದನ್ನು ಧೃಡಪಡಿಸಿವೆ.

ಈ ಬಗೆಗಿನ ಚರ್ಚೆ ಅಭಿಪ್ರಾಯಗಳು ಹೊಸದೇನಲ್ಲ. ಭಾರತದಲ್ಲಿನ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಶಿಕ್ಷಣ ವ್ಯವಸ್ಥೆಯ ಸಾಧಕ-ಬಾಧಕಗಳ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಲೇ ಬಂದಿವೆ. ಪ್ರಸಕ್ತ ಶಿಕ್ಷಣ ವ್ಯವಸ್ಥೆಯು ದೈಹಿಕ ಕೆಲಸ ಮತ್ತು ಜ್ಞಾನದ ನಡುವೆ ಕೃತಕವಾಗಿ ಸೃಷ್ಟಿಸಲಾಗಿರುವ ಇಬ್ಬಗೆಯ ತತ್ವದ ಮೇಲೆ ಸ್ಥಾಪಿಸಲ್ಪಟ್ಟಿದೆ. ಇದು ನಮ್ಮ ಸಮಾಜದಲ್ಲಿ ಶಾಲೆ ಮತ್ತು ಸಮಾಜದ ನಡುವಿರುವ ಅಂತರವನ್ನು ಸಹ ಪ್ರತಿಫಲಿಸುತ್ತದೆ. ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ನೈಜತೆಗಳನ್ನು ಬಹುತೇಕ ಕಡೆಗಣಿಸಿರುವ ಈ ದ್ವಂದ್ವತೆಯ ತತ್ವವು, ದೈಹಿಕ ಶ್ರಮದಿಂದ ಕೆಲಸ ಮಾಡಿ ಸಂಪತ್ತನ್ನು ಉತ್ಪಾದಿಸುವ ಬಹುಜನರಿಗೆ ಔಪಚಾರಿಕ ಶಿಕ್ಷಣದ ಪ್ರವೇಶವನ್ನು ನಿರಾಕರಿಸು ತ್ತದೆ. ಶಿಕ್ಷಣವನ್ನು ಒಂದು ವರ್ಗದ ಸವಲತ್ತಾಗಿ ಪರಿಗಣಿಸುತ್ತದೆ. ಆಗೊಮ್ಮೆ ಶಿಕ್ಷಣ ನೀಡಿದರೂ, ಆಳುವ ವರ್ಗದ ಅಡಿಯಾಳಾಗಿ ಬದುಕಲು ಅಗತ್ಯವಿರುವ ಸಾಕ್ಷರತೆಯ ಶಿಕ್ಷಣವನ್ನು ಮಾತ್ರ ಒದಗಿಸುವ ಆಶಯವನ್ನು ಹೊಂದಿದೆ. ಮತ್ತೊಂದೆಡೆ, ಔಪಚಾರಿಕ ಶಿಕ್ಷಣ ಪಡೆದವರು ದೈಹಿಕ ಕೆಲಸವನ್ನು ನಿರಾಕರಿಸುತ್ತಾರೆ. ಶಿಕ್ಷಣದ ಈ ಇಬ್ಬಗೆಯ ರಾಜಕೀಯ ಅರ್ಥಶಾಸ್ತ್ರ , ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ.

ಭಾರತೀಯ ಶಿಕ್ಷಣ ವ್ಯವಸ್ಥೆಯ ಈ ದ್ವಂದ್ವತೆಯು ಶಿಕ್ಷಣದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಿದೆ. ಕೆಲಸ ಕೇಂದ್ರಿತ ಶಿಕ್ಷಣ ವಿಷಯದ ಬಗ್ಗೆ 2006ರಲ್ಲಿ ಎನ್‌ಸಿಇಆರ್‌ಟಿ ಹೊರತಂದ 21 ಕೇಂದ್ರೀಕೃತ ಗುಂಪು ಚರ್ಚೆಯ ಪ್ರಬಂಧಗಳು, ಅದರಲ್ಲೂ ವಿಶೇಷವಾಗಿ ಕೆಲಸ ಮತ್ತು ಶಿಕ್ಷಣ ಪ್ರಬಂಧ ಹೆಚ್ಚಿನ ಬೆಳಕು ಚೆಲ್ಲುತ್ತದೆ. ಮೇಲು-ಕೀಳು, ಮೇಲ್ಜಾತಿ-ಕೆಳಜಾತಿ, ಉತ್ತಮ-ಅಧಮ, ಶ್ರೇಷ್ಠ-ಕನಿಷ್ಠ, ಯಜಮಾನ-ಗುಲಾಮ, ಅಧಿಕಾರಿ-ಗುಮಾಸ್ತ ಇತ್ಯಾದಿ ದ್ವಿಭಜನೆಯ ಕಲ್ಪನೆಯಲ್ಲಿ ಬೇರೂರಿ ಬೆಳೆದಿರುವ ಈ ಶಿಕ್ಷಣ ವ್ಯವಸ್ಥೆಯು ಕ್ರಮೇಣವಾಗಿ ಸಾಂಸ್ಥೀಕರಣಗೊಂಡು ಪ್ರಬಲ ವರ್ಗ/ಜಾತಿ/ಸಂಸ್ಕೃತಿ/ಭಾಷೆಯನ್ನು ಪ್ರತಿನಿಧಿಸುವ ಜ್ಞಾನ ವ್ಯವಸ್ಥೆಯಲ್ಲಿ ಬೇರೂರಿದೆ. ಲಿಂಗವು ಈ ಪ್ರತಿಯೊಂದು ವರ್ಗಗಳಲ್ಲಿ ಪ್ರಾಬಲ್ಯದ ಪಾತ್ರವನ್ನು ವಹಿಸುತ್ತದೆ. ಇಂದಿನ ಶಿಕ್ಷಣ ವ್ಯವಸ್ಥೆಯು ಈ ಬಗೆಯ ಜ್ಞಾನದ ರೂಪವನ್ನು ಮಾತ್ರ ‘ಮಾನ್ಯ’ ರೂಪವೆಂದು ‘ಪ್ರಮಾಣೀಕರಿಸಲು’ ಒಲವು ತೋರುತ್ತದೆ. ಹೀಗಾಗಿ, ಈ ಪ್ರಕ್ರಿಯೆಯಲ್ಲಿ, ದೇಶದ ಅತಿ ದೊಡ್ಡ ಉತ್ಪಾದನಾ ಶಕ್ತಿಗಳಲ್ಲಿ ಅಂತರ್ಗತವಾಗಿರುವ ಜ್ಞಾನವನ್ನು ಮತ್ತು ಅದರ ಸಂಬಂಧಿತ ಮೌಲ್ಯಗಳು ಮತ್ತು ಕೌಶಲಗಳನ್ನು ಶಾಲಾ ಪಠ್ಯಕ್ರಮದಿಂದ ಹೊರಗಿಡಲಾಗಿದೆ. ವಸಾಹತುಶಾಹಿಗಳು ತಮ್ಮ ರಾಜಕೀಯ ಉದ್ದೇಶಕ್ಕಾಗಿ ಸ್ಥಾಪಿಸಿದ ಶಿಕ್ಷಣ ವ್ಯವಸ್ಥೆಯನ್ನು ಯಥಾವತ್ತಾಗಿ ಎರವಲು ಪಡೆದು ಮುಂದುವರಿಸುತ್ತಿರುವ ಕಾರಣ ಅದು ಭಾರತದ ಉತ್ಪಾದಕ ಕೆಲಸ ಮತ್ತು ಅದರ ಸಾಮಾಜಿಕತೆಯಿಂದ ದೂರವಾಗಿದೆ.

ಗಾಂಧೀಜಿ ಪ್ರತಿಪಾದಿಸಿದಂತೆ ‘‘ನಮ್ಮ ಶಿಕ್ಷಣದಲ್ಲಿ ಕ್ರಾಂತಿಯಾಗಬೇಕಿದೆ. ಮೆದುಳಿಗೆ ಕೆಲಸದ (ಕೈ) ಮೂಲಕ ಶಿಕ್ಷಣ ನೀಡಬೇಕು. ನಾನು ಕವಿಯಾಗಿದ್ದರೆ ಐದು ಬೆರಳುಗಳ ಸಾಧ್ಯತೆಗಳ ಮೇಲೆ ಕವನ ಬರೆಯಬಹುದಿತ್ತು. ಮೆದುಳೇ ಸರ್ವಸ್ವ, ಕೈಕಾಲು ಏನೂ ಇಲ್ಲ ಎಂದು ಏಕೆ ಭಾವಿಸಬೇಕು? ತಮ್ಮ ಕೈಗಳಿಗೆ ತರಬೇತಿ ನೀಡದೆ ಸಾಮಾನ್ಯ ಶಿಕ್ಷಣದ ಹಾದಿಯಲ್ಲಿ ಸಾಗುವವರು ಜೀವನದಲ್ಲಿ ಮಧುರತೆಯ ಕೊರತೆಯನ್ನು ಎದುರಿಸುತ್ತಾರೆ. ಅವರ ಎಲ್ಲಾ ಸಾಮರ್ಥ್ಯಗಳು ತರಬೇತಿ ಪಡೆದಿಲ್ಲ. ಕೇವಲ ಪುಸ್ತಕದ ಜ್ಞಾನವು ಮಗುವಿನ ಆಸಕ್ತಿ ಹುಟ್ಟಿಸಿ ಅವರ ಗಮನವನ್ನು ಸಂಪೂರ್ಣವಾಗಿ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಕೇವಲ ಪದಗಳಿಂದ ಮೆದುಳು ಆಯಾಸಗೊಳ್ಳುತ್ತದೆ ಮತ್ತು ಮಗುವಿನ ಮನಸ್ಸು ಅಲೆದಾಡಲು ಪ್ರಾರಂಭಿಸುತ್ತದೆ. ಕೈ ಮಾಡಬಾರದ್ದನ್ನು ಮಾಡುತ್ತದೆ, ಕಣ್ಣು ನೋಡಬಾರದದ್ದನ್ನು ನೋಡುತ್ತದೆ, ಕಿವಿ ಕೇಳಬಾರದದ್ದನ್ನು ಕೇಳುತ್ತದೆ. ಹೀಗಾಗಿ, ಮಕ್ಕಳು ಮಾಡಬೇಕಾದುದನ್ನು ಕ್ರಮವಾಗಿ ಮಾಡುವುದಿಲ್ಲ, ನೋಡುವುದಿಲ್ಲ ಅಥವಾ ಕೇಳುವುದಿಲ್ಲ. ಸರಿಯಾದ ಆಯ್ಕೆ ಮಾಡಲು ಅವರಿಗೆ ಕಲಿಸಲಾಗದ ಕಾರಣ ಶಿಕ್ಷಣ ಅವರ ವಿನಾಶವನ್ನು ಸಾಬೀತುಪಡಿಸುತ್ತದೆ. ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ತಾರತಮ್ಯ ಮಾಡುವುದನ್ನು ಕಲಿಸದ, ಒಂದನ್ನು ಮೈಗೂಡಿಸಿಕೊಂಡು ಮತ್ತೊಂದನ್ನು ತ್ಯಜಿಸುವುದನ್ನು ಕಲಿಸದ ಶಿಕ್ಷಣ ತಪ್ಪು ಶಿಕ್ಷಣವೆನಿಸುತ್ತದೆ.’’(ಹರಿಜನ, 18 ಫೆಬ್ರವರಿ 1939)

ಬಹಳ ಹಿಂದೆಯೇ, ಅಂದರೆ 1931ರಲ್ಲಿ ಲಂಡನ್‌ನಲ್ಲಿ ನಡೆದ ದುಂಡುಮೇಜಿನ ಪರಿಷತ್ತಿನ ಸಭೆಯೊಂದರಲ್ಲಿ ಗಾಂಧಿ ಭಾರತದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಅಸಮರ್ಥತೆ ಮತ್ತು ಅಪ್ರಸ್ತುತತೆಯನ್ನು ಕುರಿತು ಪ್ರಸ್ತಾವಿಸಿದ್ದರು. ಇದಕ್ಕೆ ಅವರು ಅಂದಿನ ಬ್ರಿಟಿಷ್ ಸರಕಾರದ ನೀತಿಯನ್ನು ಬೆಟ್ಟುಮಾಡಿ ತೋರಿಸಿ ದರು. ಶಿಕ್ಷಣದ ಸಾರ್ವತ್ರೀಕರಣದ ನಿಧಾನಗತಿಯ ದಯನೀಯ ಪರಿಸ್ಥಿತಿಗೆ ಬ್ರಿಟಿಷ್ ಸರಕಾರವೇ ಹೊಣೆ ಎಂದಿದ್ದರು. ಶಿಕ್ಷಣ ವ್ಯವಸ್ಥೆಯ ಮುಖ್ಯ ದೋಷಗಳ ಬಗ್ಗೆ ವಿವರಿಸುತ್ತಾ ‘‘ಪ್ರಸಕ್ತ ಶಿಕ್ಷಣ ವ್ಯವಸ್ಥೆಯು ವ್ಯರ್ಥ ಮಾತ್ರವಲ್ಲ, ಅದು ಸಕಾರಾತ್ಮಕವಾಗಿ ಮಕ್ಕಳಿಗೆ ಹಾನಿಕಾರಕವಾಗಿದೆಯೆಂಬುದು ನನಗೆ ಸಂಪೂರ್ಣವಾಗಿ ಮನವರಿಕೆಯಾಗಿದೆ. ಈ ವ್ಯವಸ್ಥೆ ಇಂಗ್ಲಿಷ್ ಶಿಕ್ಷಣ ಪಡೆದ ಕೆಲವೇ ಕೆಲವರು ಮತ್ತು ಅಸಂಖ್ಯಾತ ಅಶಿಕ್ಷಿತರ ನಡುವೆ ಒಂದು ಶಾಶ್ವತ ತಡೆಗೋಡೆಯನ್ನು ಸೃಷ್ಟಿಸಿದೆ’’ ಎಂದಿದ್ದರು.

ಇದಕ್ಕೆ ಪರ್ಯಾಯವಾಗಿ, ಗಾಂಧೀಜಿಯವರು ನಯಿ ತಾಲಿಮ್ (ಹೊಸ ಶಿಕ್ಷಣ)ದ ಪ್ರಸ್ತಾವವನ್ನು ಮುಂದಿಟ್ಟರು. ಇದು ಪ್ರಾಚೀನ ಬ್ರಾಹ್ಮಣ್ಯ ಹಾಗೂ ವಸಾಹತುಶಾಹಿ ಮಾದರಿ ಶಿಕ್ಷಣ ವ್ಯವಸ್ಥೆಯಿಂದ ಮೂಲಭೂತ ನಿರ್ಗಮನವಾಗಿದೆ. ಇದು ಶಾಲಾ ಪಠ್ಯಕ್ರಮದಲ್ಲಿ ಉತ್ಪಾದಕ ಕೆಲಸವನ್ನು ಕೇಂದ್ರ ಬಿಂದುವಾಗಿಸಿದೆ. ಗಾಂಧೀಜಿಯ ದೃಷ್ಟಿಕೋನದಲ್ಲಿ, ನೈಜ-ಜೀವನದ ಸನ್ನಿವೇಶದ ಹಲವು ಸಂದರ್ಭಗಳಲ್ಲಿ ಉತ್ಪಾದಕ ಕೆಲಸದಲ್ಲಿ ಭಾಗವಹಿಸುವಿಕೆಯು ಶಿಕ್ಷಣ- ಕಲಿಕೆಗೆ ನೇರವಾಗಿ ಸಂಬಂಧಿಸಿದ್ದು, ಏಕಕಾಲದಲ್ಲಿ ಜ್ಞಾನ ಸಂಪಾದನೆ, ಮೌಲ್ಯ ಮತ್ತು ಕೌಶಲ ಕಲಿಕೆಗೆ ಸಾಧನವಾಗುತ್ತದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಹಲವು ಸಂದರ್ಭಗಳಲ್ಲಿ ಸ್ಪಷ್ಟಪಡಿಸಿರುವಂತೆ ನಯಿ ತಾಲಿಮ್ ಎಂದರೆ ವೃತ್ತಿಪರ ಶಿಕ್ಷಣವಲ್ಲ.ಬದಲಿಗೆ, ಹೊಸ ಶಿಕ್ಷಣ ವ್ಯವಸ್ಥೆಯ ಈ ವಿಧಾನವು, ಎಲ್ಲಾ ವಿಷಯಗಳನ್ನು ಸಮಾನವಾಗಿ ಕಲಿಸುವ ಜೊತೆ ಜೊತೆಗೆ ಉತ್ಪಾದಕ ಕೆಲಸವನ್ನು ಮುಖ್ಯ ಸಾಧನವನ್ನಾಗಿ ಬಳಸುತ್ತದೆ. ಇದು ತಲೆ (ಜ್ಞಾನ), ಹೃದಯ (ಅಂತಃಕರಣ) ಮತ್ತು ಕೈ (ಕೌಶಲ)ಗಳ ಸಾಮರಸ್ಯದ ಬೆಳವಣಿಗೆಗೆ ಕಾರಣವಾಗುತ್ತದೆ.

ಕೆಲಸದ ಮೂಲಕ ಕಟ್ಟಿಕೊಳ್ಳುವ ಜ್ಞಾನವು ಸಮಗ್ರವಾಗಿ, ಅಂದರೆ ‘ತಲೆ, ಹೃದಯ ಮತ್ತು ಕೈ’ ನಡುವೆ ಸಾಮರಸ್ಯವನ್ನು ಸಂಯೋಜಿಸುವ ಮೂಲಕ ಬಹು-ಆಯಾಮದ ಕಲಿಕೆಯ ಗುಣಲಕ್ಷಣಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಪ್ರಸಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ಓದು ಬರಹ ಮತ್ತು ಲೆಕ್ಕಾಚಾರಗಳಿಗೆ ಮಾತ್ರ ಒತ್ತು ನೀಡಿದ್ದು, ದೈಹಿಕ ಶ್ರಮದ ಕೆಲಸಕ್ಕೆ ಮಕ್ಕಳನ್ನು ಅಣಿಗೊಳಿಸುವ ಮತ್ತು ಜ್ಞಾನ ಹಾಗೂ ದೈಹಿಕ ದುಡಿಮೆಯನ್ನು ಸಮಾನವಾಗಿ ಗೌರವಿಸುವ ಗುಣಲಕ್ಷಣಗಳು ಕಾಣೆಯಾಗಿವೆ. ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸುವ ಬಹುಪಾಲು ಮಕ್ಕಳಲ್ಲಿ ಎಲ್ಲಾ ಬಗೆಯ ಅಸಮರ್ಥತೆಯನ್ನು (ವಿಷಯ ಜ್ಞಾನವನ್ನು ಒಳಗೊಂಡಂತೆ) ಬಹಿರಂಗಪಡಿಸುವ ಹಲವಾರು ಅಧ್ಯಯನಗಳಿವೆ.

ಈ ಅರ್ಥದಲ್ಲಿ, ಪಠ್ಯಕ್ರಮ ಮತ್ತು ಕಲಿಕೆಯ ಕೇಂದ್ರದಲ್ಲಿ ಉತ್ಪಾದಕ ಕೆಲಸವನ್ನು ಇರಿಸುವುದು ಶಾಲಾ ಶಿಕ್ಷಣದ ಗತಿಯನ್ನು ಪೂರ್ಣವಾಗಿ ಬದಲಿಸುತ್ತದೆ. ಉತ್ಪಾದನಾ ಕೇಂದ್ರಿತ ಕಲಿಕೆಯ ಅನುಭವ, ಬಾಲ್ಯ ಮತ್ತು ಹದಿಹರೆಯದ ವಿವಿಧ ಹಂತಗಳಲ್ಲಿ ಪರಿಣಾಮಕಾರಿ ಮತ್ತು ನಿರ್ಣಾಯಕ ಬೆಳವಣಿಗೆಯ ಸಾಧನವಾಗುತ್ತದೆ. ಆ ಮೂಲಕ, ಜಾತ್ಯತೀತತೆ, ಸಮಾನತೆ, ಸಹಕಾರ, ಸಹಬಾಳ್ವೆ, ಘನತೆ ಮತ್ತು ಪ್ರಜಾಪ್ರಭುತ್ವ ಸಮಾಜದ ಕಡೆಗೆ ಚಲಿಸುತ್ತದೆ.

ಒಟ್ಟಾರೆ, ಗಾಂಧೀಜಿಯವರ ಮೂಲ ಶಿಕ್ಷಣವನ್ನು ಎಲ್ಲಾ ಶಾಲೆಗಳಲ್ಲಿ ಅವುಗಳ ಆಡಳಿತ ಮಂಡಳಿ, ಆದಾಯದ ಮೂಲ ಅಥವಾ ಪಠ್ಯಕ್ರಮ/ ಪರೀಕ್ಷಾ ಮಂಡಳಿಗಳ ಸಂಯೋಜನೆಯನ್ನು ಲೆಕ್ಕಿಸದೆ, ಕನಿಷ್ಠ ಮೂಲಸೌಕರ್ಯ, ಪಠ್ಯಕ್ರಮ ಮತ್ತು ಶಿಕ್ಷಣ ಮಾನದಂಡಗಳನ್ನು ಹೊಂದಿರುವ ಎಲ್ಲಾ ಶಾಲೆಗಳನ್ನು ಸಮಾನ ಶಾಲಾ ವ್ಯವಸ್ಥೆಯೊಳಗೆ ತಂದು, ಘೋಷಿತ ಕಾಲಮಿತಿಯೊಳಗೆ ಕೆಲಸ-ಕೇಂದ್ರಿತ ಶಿಕ್ಷಣವನ್ನು ಕಾರ್ಯಗತಗೊಳಿಸುವುದು ಇಂದಿನ ತರ್ತು ಅಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ನಿರಂಜನಾರಾಧ್ಯ ವಿ.ಪಿ.

contributor

Similar News