ಬಿಸಿಲುಗುದುರೆ ಆಗಿಬಿಟ್ಟಿರುವ ‘‘ಹಠಾತ್ ಸಾವು’’ ಅಧ್ಯಯನ ಫಲಿತಾಂಶ
ಇನ್ನು ಹತ್ತು ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆಗಳಿರುವುದರಿಂದ ಸಹಜವಾಗಿಯೇ ಸರಕಾರ ತನಗೆ ಮುಜುಗರ ಆಗಬಲ್ಲ ಯಾವುದನ್ನೂ ಬಹಿರಂಗಗೊಳ್ಳಲು ಅವಕಾಶ ನೀಡದಿರುವ ಸಾಧ್ಯತೆಗಳೇ ಹೆಚ್ಚು. ಜನರ ಜೀವಕ್ಕೆ ಸಂಬಂಧಿಸಿ ಅಂತಹ ಚೆಲ್ಲಾಟ ನಡೆಯದಿರಲಿ.
ಇನ್ನು ಹತ್ತು ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆಗಳಿರುವುದರಿಂದ ಸಹಜವಾಗಿಯೇ ಸರಕಾರ ತನಗೆ ಮುಜುಗರ ಆಗಬಲ್ಲ ಯಾವುದನ್ನೂ ಬಹಿರಂಗಗೊಳ್ಳಲು ಅವಕಾಶ ನೀಡದಿರುವ ಸಾಧ್ಯತೆಗಳೇ ಹೆಚ್ಚು. ಜನರ ಜೀವಕ್ಕೆ ಸಂಬಂಧಿಸಿ ಅಂತಹ ಚೆಲ್ಲಾಟ ನಡೆಯದಿರಲಿ.ಜಗತ್ತಿನಾದ್ಯಂತ ಪ್ರತೀ ವರ್ಷ ಹೃದಯದ ರಕ್ತನಾಳಗಳ ತೊಂದರೆಯ ಕಾರಣಕ್ಕೆ ೧.೭೯ ಕೋಟಿ ಜನ ‘‘ಹಠಾತ್ ಸಾವು’’ ಕಾಣುತ್ತಿದ್ದಾರೆ. ಅವರಲ್ಲಿ ಐದನೇ ಒಂದು ಭಾಗ ಭಾರತೀಯರು. ಅಂದರೆ ವರ್ಷಕ್ಕೆ ಸುಮಾರು ೩೫ ಲಕ್ಷ ಭಾರತೀಯರು ಹೃದಯಾಘಾತದಂತಹ ಕಾರಣಗಳಿಂದ ಹಠಾತ್ ಸಾವಿಗೀಡಾಗುತ್ತಿದ್ದಾರೆ ಎಂದು ಅಧ್ಯಯನಗಳು ಹೇಳುತ್ತವೆ. ೨೦೧೯ರ ಕೊನೆಯಲ್ಲಿ ಕೋವಿಡ್ ಜಗನ್ಮಾರಿ ಕಾಣಿಸಿಕೊಂಡ ಬಳಿಕ, ಜಗತ್ತಿನಾದ್ಯಂತ ಹಠಾತ್ ಸಾವಿನ ಪ್ರಕರಣಗಳು ಏಕಾಏಕಿ ಎಲ್ಲೆಡೆ ಹೆಚ್ಚಳಗೊಂಡು ಕಾಣಿಸಿಕೊಳ್ಳತೊಡಗಿವೆ. ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿರುವಾಗ, ಮದುವೆಯಂತಹ ಖಾಸಗಿ ಸಮಾರಂಭಗಳಲ್ಲಿ ನೃತ್ಯ ಮಾಡುತ್ತಿರುವಾಗ, ಕೆಲಸ ಮಾಡುತ್ತಿರುವಾಗಲೇ, ಮಲಗಿದಲ್ಲಿಯೇ, ಹೀಗೆ ದೈನಂದಿನ ಸಾಮಾನ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವಾಗಲೇ ಜನ ಥಟ್ಟೆಂದು ಸಾಯುತ್ತಿರುವುದನ್ನು ಬಹುತೇಕ ನಾವೆಲ್ಲರೂ ಕಳೆದ ಮೂರು ವರ್ಷಗಳಲ್ಲಿ ನೋಡಿದ್ದೇವೆ, ಕೇಳಿದ್ದೇವೆ ಅಥವಾ ಓದಿದ್ದೇವೆ. ಹಲವಾರು ಮಂದಿ ಸೆಲೆಬ್ರಿಟಿಗಳೂ ಇದೇ ರೀತಿ ಹಠಾತ್ ಸಾವಿಗೀಡಾದಾಗಲೆಲ್ಲ ಒಂದೆರಡು ದಿನಗಳ ಕಾಲ ಈ ಬಗ್ಗೆ ಚರ್ಚೆ ನಡೆದು ಎಲ್ಲವೂ ತಣ್ಣಗಾಗುತ್ತಾ ಬರುತ್ತಿತ್ತು.
ಜಗತ್ತಿನಾದ್ಯಂತ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ಈ ಹಠಾತ್ ಸಾವುಗಳಿಗೂ ಕೋವಿಡ್ಗೂ ಸಂಬಂಧ ಇರಬಹುದು ಎಂಬ ಶಂಕೆ ಏಳುತ್ತಿದೆ. ಈ ಕುರಿತು ದೇಶದಿಂದ ಹೊರಗೆ ನಡೆದ ಅಧ್ಯಯನಗಳಲ್ಲಿ ಹಠಾತ್ ಸಾವುಗಳಿಗೆ ಕೋವಿಡ್ ಕಾರಣ ಇರಬಹುದೆಂದು ಖಚಿತವಾಗಿ ಹೇಳಲಾಗಿದೆ. ಆದರೆ, ಕೋವಿಡ್ ಸೋಂಕು ತಗಲದವರಲ್ಲೂ ಈ ಸಾವಿನ ಪ್ರಕರಣಗಳು ಕಾಣಿಸಿಕೊಂಡಿರುವುದಕ್ಕೆ ಕೋವಿಡ್ ಲಸಿಕೆಗಳು ಕಾರಣವಾಗಿರಬಹುದೆ? ಎಂಬಂತಹ ನಿರ್ದಿಷ್ಟ ಪ್ರಶ್ನೆಗಳಿಗೆ, ರಾಜಕೀಯ-ಸಾಮಾಜಿಕ-ಆರ್ಥಿಕ ಕಾರಣಗಳಿಗಾಗಿ ಸ್ಪಷ್ಟ ಉತ್ತರಗಳು ಸಿಗುತ್ತಿಲ್ಲ.
ಭಾರತದಲ್ಲೂ ಈ ಕೋವಿಡೋತ್ತರ ಹೃದಯಾಘಾತಗಳ, ಹಠಾತ್ ಕುಸಿದು ಸಾವುಗಳ ಪ್ರಕರಣಗಳು ಕಣ್ಣಿಗೆ ಎದ್ದು ತೋರುವಷ್ಟು ಹೆಚ್ಚಾಗತೊಡಗಿದಾಗ, ೨೦೨೨ರ ಆಗಸ್ಟ್ ತಿಂಗಳಲ್ಲಿ ಈ ಲೇಖಕ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ICMR) ಪತ್ರ ಬರೆದು, ಈ ಬಗ್ಗೆ ಅಧ್ಯಯನ ನಡೆಸುವಂತೆ ಮತ್ತು ಜನರಲ್ಲಿ ಮೂಡಿರುವ ಸಂಶಯಗಳನ್ನು ನಿವಾರಿಸುವಂತೆ ಕೇಳಿದ್ದರು. ಇಂತಹ ಹಲವು ಕೋರಿಕೆಗಳು ICMR ತಲುಪಿದ್ದರೂ, ಭಾರತ ಸರಕಾರ ಈ ಹಠಾತ್ ಸಾವುಗಳ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಕೋವಿಡ್ ಲಸಿಕೆಗಳು ಈ ಹಠಾತ್ ಸಾವುಗಳಿಗೆ ಕಾರಣ ಇರಬಹುದೆಂಬ ಗುಲ್ಲು ಎದ್ದು, ಆ ಬಗ್ಗೆ ಲೋಕಸಭೆಯಲ್ಲಿ ೨೦೨೩ರ ಮಾರ್ಚ್ ೧೮ರಂದು ರಾಜೀವ್ ರಂಜನ್ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ್ದ ಆರೋಗ್ಯ ಖಾತೆಯ ಸಹಾಯಕ ಸಚಿವ ಭಾರತೀ ಪ್ರವೀಣ್ ಪವಾರ್ ಅವರು ಹಠಾತ್ ಸಾವುಗಳಿಗೂ ಕೋವಿಡ್ ಲಸಿಕೆಗೂ ಸಂಬಂಧ ಇಲ್ಲ ಎಂದಿದ್ದರು.
ಜನಸಾಮಾನ್ಯರಲ್ಲಿ ಈ ವಿಚಾರದ ಕುರಿತು ಸಂಶಯ ಹೆಚ್ಚಾಗತೊಡಗಿದಾಗ, ಸರಕಾರದ ಮೇಲೆ ಈ ಕುರಿತು ಅಧ್ಯಯನ ನಡೆಸಲು ಸಾಂಸ್ಥಿಕ ಒತ್ತಡಗಳು ಹೆಚ್ಚತೊಡಗಿದವು. ೨೦೨೨ರ ಡಿಸೆಂಬರ್ ೧೦ರಂದು ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ICMR, ಆರೋಗ್ಯ ಸೇವೆಗಳ ಮಹಾನಿರ್ದೇಶಕರು ಹಾಗೂ ಕೇಂದ್ರ ಸರಕಾರಕ್ಕೆ ನೋಟಿಸು ನೀಡಿ, ಈ ಹಠಾತ್ ಸಾವುಗಳ ಕಾರಣ ಪತ್ತೆ ಮಾಡುವಂತೆ ಸೂಚಿಸಿದ್ದರು. ಇದಾದ ಬಳಿಕ, ೨೦೨೩ರ ಮಾರ್ಚ್ ೨೩ರಂದು ಸಂಸತ್ತಿನ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸ್ಥಾಯಿ ಸಮಿತಿಯು ಈ ಹಠಾತ್ ಸಾವು, ಹೃದಯಾಘಾತಗಳ ಕುರಿತು ಸಾಕ್ಷಿಯಾಧಾರಿತ ವಿವರಣೆ ನೀಡಲು ICMRಗೆ ನಿರ್ದೇಶಿಸಿದೆ. ಸ್ಥಾಯಿ ಸಮಿತಿಯ ಅಧ್ಯಕ್ಷರಾದ, ರಾಜ್ಯಸಭಾ ಸದಸ್ಯ ಭುವನೇಶ್ವರ್ ಖಾಲಿತಾ ಈ ಆದೇಶ ನೀಡಿದ್ದರು.
ಹೊರಗೆ ಇಷ್ಟೆಲ್ಲಾ ಆಗುತ್ತಿದ್ದರೂ, ಭಾರತ ಸರಕಾರ ಮಾತ್ರ ಈ ಹಠಾತ್ ಸಾವಿನ ಅಧ್ಯಯನದ ಬಗ್ಗೆ ಮೊಗಂ ಆಗಿತ್ತು. ಸರಕಾರದ ಕಡೆಯಿಂದ ಈ ಬಗ್ಗೆ ಮೊದಲ ಬಾರಿಗೆ ಧ್ವನಿ ಹೊರಟದ್ದು ಈ ವರ್ಷ ಮಾರ್ಚ್ ಕೊನೆಯ ಹೊತ್ತಿಗೆ. ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಹಠಾತ್ ಸಾವುಗಳ ಬಗ್ಗೆ ICMR ಈಗಾಗಲೇ ಅಧ್ಯಯನ ನಡೆಸುತ್ತಿದೆ. ಆರು ತಿಂಗಳ ಈ ಅಧ್ಯಯನದ ಮೂರು-ನಾಲ್ಕು ತಿಂಗಳುಗಳು ಈಗಾಗಲೇ ಕಳೆದಿವೆ. ಇನ್ನೆರಡು ತಿಂಗಳಲ್ಲಿ ಫಲಿತಾಂಶ ಸಾರ್ವಜನಿಕವಾಗಿ ಲಭ್ಯವಾಗಲಿದೆ ಎಂದಿದ್ದರು. ಅವರ ಮಾತಿನ ಪ್ರಕಾರ, ಮೇ ೨೦೨೩ರ ಹೊತ್ತಿಗೆ ಈ ಫಲಿತಾಂಶಗಳು ಬಹಿರಂಗಗೊಳ್ಳಬೇಕಿತ್ತು. ಆದರೆ ಆಗಿಲ್ಲ.
ಕಳೆದ ತಿಂಗಳು (ಜೂನ್ ೨೧) ಈ ವಿಚಾರದಲ್ಲಿ ಮೊದಲ ಬಾರಿಗೆ ಬಾಯಿ ತೆರೆದ ICMR ಮಹಾನಿರ್ದೇಶಕ ರಾಜೀವ್ ಬೆಹ್ಲ್ ಅವರು, ಹಠಾತ್ ಸಾವುಗಳಿಗೆ ಸಂಬಂಧಿಸಿದಂತೆ ತಮ್ಮ ಸಂಸ್ಥೆ ನಾಲ್ಕು ಅಧ್ಯಯನಗಳನ್ನು ಪೂರ್ಣಗೊಳಿಸಿದೆ, ಅದರ ಫಲಿತಾಂಶಗಳ ಪೀರ್ ರಿವ್ಯೆ (ಅರ್ಥಾತ್ ಅಡ್ಡ ಪರಿಶೀಲನೆ) ನಡೆಯುತ್ತಿದೆ. ಅದಾದ ಬಳಿಕ ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ತಿಂಗಳೊಪ್ಪತ್ತಿನಲ್ಲಿ ಮುಗಿಯಬೇಕಾಗಿದ್ದ ಈ ಪ್ರಕ್ರಿಯೆ ಇನ್ನೂ ಮುಗಿದಂತೆ ಕಾಣಿಸುತ್ತಿಲ್ಲ ಅಥವಾ ಫಲಿತಾಂಶವನ್ನು ಉದ್ದೇಶಪೂರ್ವಕವಾಗಿ ಬಹಿರಂಗಪಡಿಸುತ್ತಿಲ್ಲ.
ICMR ಮಹಾನಿರ್ದೇಶಕರು ಕಳೆದ ತಿಂಗಳು ಮಾತನಾಡುವಾಗ ತಮ್ಮ ಸಂಸ್ಥೆ ನಡೆಸಿರುವ ನಾಲ್ಕು ಅಧ್ಯಯನಗಳ ಬಗ್ಗೆ ಕೆಲವು ವಿವರಗಳನ್ನು ನೀಡಿದ್ದರು. ಈ ಅಧ್ಯಯನಗಳಲ್ಲಿ ಒಂದು ಅಧ್ಯಯನವು ಗಂಭೀರ ಸ್ವರೂಪದ ಕೋವಿಡ್ ಸೋಂಕು ಬಂದವರಲ್ಲಿ ಒಂದು ವರ್ಷದಲ್ಲಿ ಎಷ್ಟು ಸಾವು ಸಂಭವಿಸಿದೆ ಎಂದು ಪರಿಶೀಲಿಸಿದೆ. ಅಂತಹ ೧೪,೦೦೦ ಮಂದಿಯಲ್ಲಿ ೬೦೦ ಮಂದಿಯಷ್ಟು ಸಾವಿಗೀಡಾಗಿದ್ದಾರೆ. ಅವರ ಸಾವಿನ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲಾಗಿದೆ. ಎರಡನೇ ಅಧ್ಯಯನ ಹಠಾತ್ ಸಾವುಗಳ ಕುರಿತಾದುದು. ಮೂರನೇ ಅಧ್ಯಯನ ಸಾವಿಗೀಡಾಗದೇ ಇದ್ದರೂ ಕೋವಿಡ್ ಬಳಿಕ ಹೃದಯದ ರಕ್ತನಾಳಗಳ ತೊಂದರೆ (ಕಾರ್ಡಿಯೊ ವ್ಯಾಸ್ಕ್ಯುಲರ್ ಈವೆಂಟ್ಸ್) ಮತ್ತು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವ ತೊಂದರೆ (ತ್ರಾಂಬೊಎಂಬೋಲಿಕ್ ಈವೆಂಟ್ಸ್) ಕಾಣಿಸಿಕೊಂಡಿರುವವರದು ಮತ್ತು ನಾಲ್ಕನೇ ಅಧ್ಯಯನ ಹಠಾತ್ ಸಾವುಗಳ ಕಾರಣ ಮತ್ತು ಪ್ರಮಾಣಗಳಲ್ಲಿ ಕೋವಿಡ್ ಕಾಣಿಸಿಕೊಳ್ಳುವ ಮುನ್ನ ಮತ್ತು ಈಗ ಏನಾದರೂ ವ್ಯತ್ಯಾಸಗಳಿವೆಯೇ ಎಂಬ ಕುರಿತಾದದ್ದು.
ಈ ಅಧ್ಯಯನಗಳ ಫಲಿತಾಂಶವನ್ನು ಸಾರ್ವಜನಿಕರ ಗಮನಕ್ಕೆ ತರದೆ ನನೆಗುದಿಗೆ ಹಾಕುವ ಕೆಲಸ ಆಗದಿರಲಿ ಮತ್ತು ಅಧ್ಯಯನದ ಫಲಿತಾಂಶಕ್ಕೆ ಅನುಗುಣವಾಗಿ ಪರಿಹಾರ ಕ್ರಮಗಳನ್ನೇನಾದರೂ ತೆಗೆದುಕೊಳ್ಳಬೇಕಿದ್ದರೆ, ದೇಶದ ಆರೋಗ್ಯ ವ್ಯವಸ್ಥೆ ಅದಕ್ಕೆ ಯಾವುದೇ ಕಾರಣಕ್ಕೂ ಹಿಂಜರಿಯದಿರಲಿ. ಇನ್ನು ಹತ್ತು ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆಗಳಿರುವುದರಿಂದ ಸಹಜವಾಗಿಯೇ ಸರಕಾರ ತನಗೆ ಮುಜುಗರ ಆಗಬಲ್ಲ ಯಾವುದನ್ನೂ ಬಹಿರಂಗಗೊಳ್ಳಲು ಅವಕಾಶ ನೀಡದಿರುವ ಸಾಧ್ಯತೆಗಳೇ ಹೆಚ್ಚು. ಜನರ ಜೀವಕ್ಕೆ ಸಂಬಂಧಿಸಿ ಅಂತಹ ಚೆಲ್ಲಾಟ ನಡೆಯದಿರಲಿ.
ಹಠಾತ್ ಸಾವುಗಳ ಕುರಿತ ತನ್ನ ಅಧ್ಯಯನ ಫಲಿತಾಂಶಗಳನ್ನು ICMR ತಕ್ಷಣ ಪ್ರಕಟಸಲಿ.
ಹಿರಿಯ ಲೇಖಕ ರಾಜಾರಾಂ ತಲ್ಲೂರು ರವರ ಪ್ರಚಲಿತ ವಿಷಯಗಳ ಬಗೆಗಿನ ಅಂಕಣ ‘ಪಿಟ್ಕಾಯಣ’ ಇಂದಿನಿಂದ ಪ್ರತೀ ಶನಿವಾರ ಪ್ರಕಟವಾಗುತ್ತದೆ.