ಮೋದಿ ಆರಾಧನೆಯ ಹಿಂದಿನ ಭ್ರಾಮಕ ಸಂಬಂಧದ ಮನಃಸ್ಥಿತಿ

ಹಿಂದುತ್ವ ಅಭಿಯಾನ ಮತ್ತು ಮೋದಿ ಆರಾಧನೆಯ ಬಗ್ಗೆ ಮಾತನಾಡುವ ಯಾರದೇ ವಿರುದ್ಧ ಮುಗಿಬೀಳುವ ಆನ್ಲೈನ್ ದಾಳಿಕೋರರು ಮತ್ತು ಕೆಲವು ಜನಪ್ರತಿನಿಧಿಗಳ ಪ್ರತಿಕ್ರಿಯೆಗಳನ್ನು ನೋಡುತ್ತಿದ್ದರೆ, ಅವರ ಮನಃಸ್ಥಿತಿಯ ಬಗ್ಗೆ ಪ್ರಶ್ನೆಗಳು ಮೂಡುತ್ತವೆ. ಮೋದಿಯವರನ್ನು ಎಲ್ಲೋ ಮತ್ತೊಂದು ತುದಿಯಲ್ಲಿದ್ದು ಹಾಡಿ ಹೊಗಳುವವರಿಗೂ ಮೋದಿಗೂ ಇರುವುದು ಪರಸ್ಪರ ಸಂಬಂಧವಲ್ಲ; ಬದಲಾಗಿ ಅದು ಏಕಮುಖ ಸಂಬಂಧ. ಸಂಬಂಧದ ಭ್ರಮೆ.

Update: 2023-07-23 04:02 GMT

- ರಾಜ್ ಶೇಖರ್ ಸೇನ್

ಪ್ರಧಾನಿ ನರೇಂದ್ರ ಮೋದಿ ವಿದೇಶಕ್ಕೆ ಪ್ರಯಾಣಿಸುವಾಗಲೆಲ್ಲ, ಅವರ ಪಕ್ಷದ ನಿಷ್ಠಾವಂತರು ಅದನ್ನು ರಾಜತಾಂತ್ರಿಕ ಕ್ರಾಂತಿ ಎಂದು ದೇಶದ ಜನರೆದುರು ಬಿಂಬಿಸಲು ಅತಿರೇಕದಿಂದ ಅಬ್ಬರಿಸುವುದುಂಟು. ಅವರ ಇತ್ತೀಚಿನ ಅಮೆರಿಕ ಭೇಟಿಯ ವೇಳೆಯಲ್ಲಿಯೂ ಯೋಜಿಸಿದಂತೆಯೇ ಎಲ್ಲವೂ ನಡೆಯಲಿಲ್ಲ ಎಂಬುದನ್ನು ಹೊರತುಪಡಿಸಿ - ಇದೇ ನಡೆಯಿತು.

ವಾಲ್ ಸ್ಟ್ರೀಟ್ ಜರ್ನಲ್ ವರದಿಗಾರ್ತಿ ಸಬ್ರಿನಾ ಸಿದ್ದೀಕಿ ಅವರು ಭಾರತದ ಮುಸ್ಲಿಮರೊಂದಿಗೆ ಮೋದಿ ಸರಕಾರದ ವರ್ತನೆಯ ಬಗ್ಗೆ ಪ್ರಶ್ನಿಸಿದ್ದಕ್ಕಾಗಿ ಶ್ವೇತಭವನದಿಂದಲೂ ಖಂಡನೆಗೆ ಗುರಿಯಾದರು, ದೇಶದ ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದಕ್ಕಾಗಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮೇಲಿನ ದಾಳಿಗಳು ಮೋದಿ ಭೇಟಿಗಿಂತ ಹೆಚ್ಚು ಸುದ್ದಿಯಾದವು.

ಹಿಂದುತ್ವದ ಟ್ರೋಲ್ ದಂಡು ಅಂತರ್ರಾಷ್ಟ್ರೀಯ ಕುಖ್ಯಾತಿ ಗಳಿಸಿರುವುದು ಇದೇ ಮೊದಲಲ್ಲ. ಹಿಂದೆ, ಅವರು ಶಿಕ್ಷಣತಜ್ಞರಾದ ವೆಂಡಿ ಡೊನಿಗರ್ ಮತ್ತು ಆಡ್ರೆ ಟ್ರುಶ್ಕೆ, ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್, ಪತ್ರಕರ್ತರಾದ ಮೆಹದಿ ಹಸನ್ ಮತ್ತು ಮ್ಯಾಟ್ಯೂ ಯಗ್ಲೇಷಿಯಸ್ ಅವರ ಹಿಂದೆಯೂ ಹೀಗೆಯೇ ಮುಗಿಬಿದ್ದಿದ್ದರು.

ಹಿಂದುತ್ವ ಅಭಿಯಾನದ ಕೀಳರಿಮೆ ಮತ್ತು ಮೋದಿಯನ್ನು ಉದ್ಧಾರಕ ಎಂಬಂತೆ ಗೌರವಿಸುವ ಬಗ್ಗೆ ಬರೆವ ಯಾರದೇ ವಿರುದ್ಧ ಮುಗಿಬೀಳುವ ಈ ಟ್ರೋಲ್ಗಳು ಮತ್ತು ಕೆಲವು ಚುನಾಯಿತ ಜನಪ್ರತಿನಿಧಿಗಳ ಪ್ರತಿಕ್ರಿಯೆಗಳನ್ನು ನೋಡುತ್ತಿದ್ದರೆ, ಅವರ ಮನಃಸ್ಥಿತಿಯ ಬಗ್ಗೆ ಯಾವಾಗಲೂ ಪ್ರಶ್ನೆಗಳು ಮೂಡುತ್ತವೆ.

 

ಮೋದಿ ಆರಾಧನೆ ಎಂಬುದು, ದೇಶದ ಮಹಾನ್ ನಾಯಕನೆಂದು ಬಿಂಬಿಸುವುದಕ್ಕೆ ತೀವ್ರ ಭಾವನಾತ್ಮಕ ನೆಲೆಯಿಂದ ಪ್ರತಿಕ್ರಿಯಿಸಲೆಂದೇ ಬೆಳೆಸಿರುವ ಭ್ರಮಾತ್ಮಕ ಸಂಬಂಧದ ಪರಿಣಾಮ. ಮೋದಿಯನ್ನು ಮತ್ತೊಂದು ತುದಿಯಲ್ಲಿದ್ದು ಹಾಡಿ ಹೊಗಳುವವರಿಗೂ ಮೋದಿಗೂ ಇರುವುದು ಪರಸ್ಪರ ಸಂಬಂಧವಲ್ಲ; ಬದಲಾಗಿ ಅದು ಏಕಮುಖ ಸಂಬಂಧ. ಸಂಬಂಧದ ಭ್ರಮೆ.

ಮೋದಿ ರಾಷ್ಟ್ರೀಯ ರಾಜಕೀಯ ರಂಗದಲ್ಲಿ ಬೆಳೆಯುತ್ತಿದ್ದಂತೆ, ಅವರ ಜೀವನದ ಕಥೆ ಅನೇಕ ಭಾರತೀಯರನ್ನು ಆಕರ್ಷಿಸಿತು, ಅಂಥವರು ಮುಖ್ಯವಾಗಿ, ಸಾಮಾಜಿಕ ಆರ್ಥಿಕ ಸವಲತ್ತುಗಳನ್ನು ಹೊಂದಿದ್ದರೂ ತಮ್ಮನ್ನು ತಾವು ಕಾರ್ಮಿಕ ವರ್ಗವೆಂದು ನಂಬಿದ್ದವರಾಗಿದ್ದರು. ಗುಜರಾತ್ ಮಾದರಿ ಎಂಬುದರ ಸುತ್ತಲಿನ ಪ್ರಚಾರದ ಬಿರುಸು ಅವರ ಭೌತಿಕ ಆಕಾಂಕ್ಷೆಗಳನ್ನು ಉದ್ದೀಪಿಸಿತು. ಮೋದಿಯ ವಿರುದ್ಧ ಅವರ ಕೋಮುವಾದಿ ರಾಜಕೀಯಕ್ಕಾಗಿ ವ್ಯಕ್ತವಾಗುತ್ತಿದ್ದ ಟೀಕೆಗಳಿಗೆ ಸಿಟ್ಟಾಗುವ ಈ ಮಧ್ಯಮ ವರ್ಗದ ಮಂದಿ, ದಶಕಗಳ ಕಾಂಗ್ರೆಸ್ ಆಡಳಿತದಿಂದ ದೇಶವನ್ನು ಬಿಡಿಸಲು ಬಂದಿರುವ ಪ್ರಬಲ ನಾಯಕನೆಂದು ಮೋದಿಯನ್ನು ಕಾಣತೊಡಗಿದರು.

ವಾಸ್ತವವಾಗಿ, 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿಯವರ ಭಾರತೀಯ ಜನತಾ ಪಕ್ಷ ಕಾಂಗ್ರೆಸ್ನೊಂದಿಗೆ ಮುಖಾಮುಖಿಯಾದ 189 ಕ್ಷೇತ್ರಗಳಲ್ಲಿ 166ನ್ನು ಗೆದ್ದಿದೆ. ಅಂದರೆ, ಅದರ ಒಟ್ಟು ಸ್ಥಾನಗಳ ಸುಮಾರು ಶೇ.60ರಷ್ಟು. ಉತ್ತರ ಪ್ರದೇಶ ಮತ್ತು ಬಿಹಾರದ ಹೊರಗಿರುವ 144 ಕ್ಷೇತ್ರಗಳಲ್ಲಿ ಬಿಜೆಪಿ ನೇರವಾಗಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸದಿದ್ದರೂ ಕೇವಲ 56 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿತ್ತು.

ಇದು 2019ರಲ್ಲಿ ಹೆಚ್ಚಾಗಿ ಮುಂದುವರಿಯಿತು, ಚುನಾವಣಾ ವಿಶ್ಲೇಷಕ ನೀಲಂಜನ್ ಸಿರ್ಕಾರ್ ಅವರು ಮೋದಿಯ ಬೆಂಬಲಿಗರು ಚುನಾವಣಾ ವಿಷಯಗಳ ಆಧಾರದ ಮೇಲೆ ಅವರಿಗೆ ಮತ ಹಾಕಲಿಲ್ಲ; ಆದರೆ ಅವರಿಗೆ ತಾವು ಮತ ಹಾಕಿರುವುದನ್ನು ಸಮರ್ಥಿಸಿಕೊಳ್ಳಲು ತಾವೇ ಕಾರಣಗಳನ್ನು ಕಂಡುಕೊಂಡಿದ್ದಾರೆ ಎಂದು ಇದನ್ನು ವ್ಯಾಖ್ಯಾನಿಸಿದ್ದರು.

ಇದರ ಫಲಿತಾಂಶವೆಂದರೆ ಮೋದಿಯ ಆರಾಧನೆ, ಇದರಲ್ಲಿ ಉನ್ನತ ನಾಯಕರಿಂದ ಸಾಮಾನ್ಯ ಭಕ್ತರವರೆಗೆ ಎಲ್ಲರೂ ಒಂದೇ ಬಗೆಯಲ್ಲಿ ಗುಣಗಾನ ಮಾಡುತ್ತಾರೆ. ಭಾರತದ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಸೆಪ್ಟಂಬರ್ನಲ್ಲಿ ಅಮೆರಿಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ‘‘ನಮ್ಮ ಅಭಿಪ್ರಾಯಗಳು, ದೃಷ್ಟಿಕೋನ ಎಲ್ಲವೂ ಮುಖ್ಯವಾಗುತ್ತವೆ ಮತ್ತು ನಮ್ಮ ಕಾಲದ ಪ್ರಮುಖ ವಿಚಾರಗಳನ್ನು ರೂಪಿಸುವ ಸಾಮರ್ಥ್ಯವನ್ನು ನಾವಿಂದು ಹೊಂದಿದ್ದೇವೆ. ಇದೆಲ್ಲವೂ ಮೋದಿಯವರಿಂದಾಗಿ ಸಾಧ್ಯವಾಗಿದೆ’’ ಎಂದು ಪ್ರತಿಪಾದಿಸಿದ್ದರು. ಎರಡು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಮೋದಿಯವರನ್ನು ‘‘ಬಹುಮುಖ ಪ್ರತಿಭೆ ಮತ್ತು ಜಾಗತಿಕವಾಗಿ ಯೋಚಿಸುವ, ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಅಂತರ್ರಾಷ್ಟ್ರೀಯ ಖ್ಯಾತಿಯ ದಾರ್ಶನಿಕ’’ ಎಂದು ಕರೆದಿದ್ದರು.

ಇನ್ನೊಂದೆಡೆ, ಮೋದಿ ಜನ್ಮದಿನವನ್ನು 24 ಗಂಟೆಗಳ ಕಾಲ ತಡೆರಹಿತವಾಗಿ ಅವರ ಹೆಸರನ್ನು ಜಪಿಸುವ ಮೂಲಕ ಅಥವಾ ಅವರ ಹೆಸರನ್ನು ತಮ್ಮ ದೇಹದ ಮೇಲೆ ಹಚ್ಚೆ ಹಾಕುವ ಮೂಲಕ ಆಚರಿಸುವ ಅಭಿಮಾನಿಗಳಿದ್ದಾರೆ. ಇವೆಲ್ಲವನ್ನೂ ಒಟ್ಟಿಗೆ ಜೋಡಿಸಲು ಮುಖ್ಯವಾಹಿನಿಯ ಮಾಧ್ಯಮಗಳಿವೆ. ಇವಂತೂ ಲಜ್ಜೆಯಿಲ್ಲದೆ ಮೋದಿಯ ಮೋಹದಲ್ಲಿ ಮೈಮರೆಯಬಲ್ಲವು. ಇವೆಲ್ಲದರ ಜೊತೆಗೆ ಆನ್ಲೈನ್ ಟ್ರೋಲ್. ಇದು ವಾಸ್ತವ ಜಗತ್ತಿನಲ್ಲಿ ಇರುವ ಮೋದಿ ಆರಾಧನೆಯ ವಿಸ್ತೃತ ಮುಂದುವರಿಕೆಯಷ್ಟೆ.

ಫ್ಯಾಶಿಸಂ ಎಂಬುದು, ಬರಹಗಾರ ಮತ್ತು ದಾರ್ಶನಿಕ ಉಂಬರ್ಟೊ ಇಕೊ ಹೇಳುವಂತೆ ಕೆಲವು ದುರ್ಬಲ ತರ್ಕದ ಮೂಲಕ ಸಮಾಜದ ಎಲ್ಲಾ ಸಮಸ್ಯೆಗಳ ಮೂಲವೆಂದು ಕಾಣಿಸುವ ತನ್ನ ಶತ್ರುಗಳ ಮೇಲೆ ತಮ್ಮ ಹತಾಶೆಯನ್ನು ಕಾರಿಕೊಳ್ಳುವಂತೆ ಅನುಯಾಯಿಗಳನ್ನು ಉತ್ತೇಜಿಸುವ ಬಗೆ. ಮೋದಿ ತಮ್ಮ ಬೆಂಬಲಿಗರ ಮೂಲ ಪ್ರವೃತ್ತಿಯನ್ನು ಪೋಷಿಸಿದ್ದಾರೆ ಮತ್ತು ಅದರ ಮೂಲಕವೇ ಬೆಳೆದಿದ್ದಾರೆ. 2005ರಲ್ಲಿ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಪೊಲೀಸರು ಸೊಹ್ರಾಬುದ್ದೀನ್ ಶೇಕ್ ಮತ್ತವನ ಪತ್ನಿಯನ್ನು ಕೊಂದುಹಾಕಿದ್ದರು. ಹಿಂದಿನ ವರ್ಷ, ಯುವತಿ ಇಶ್ರತ್ ಜಹಾನ್ ಸೇರಿದಂತೆ ನಾಲ್ವರನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದರು.

2007ರ ಚುನಾವಣಾ ರ್ಯಾಲಿಯಲ್ಲಿ ಮೋದಿ, ‘‘ಏನು ಸಿಗಬೇಕಿತ್ತೋ ಅದೇ ಸೊಹ್ರಾಬುದ್ದೀನ್ಗೆ ಸಿಕ್ಕಿದೆ. ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ವ್ಯಕ್ತಿಯನ್ನು ಏನು ಮಾಡಬೇಕಿತ್ತು?’’ ಎಂದು ಜನರನ್ನು ಕೇಳಿದರು. ‘‘ಕೊಲ್ಲಬೇಕು’’ ಎಂದು ಜನಸಮೂಹ ಅಬ್ಬರದಿಂದ ಕಿರುಚಿತ್ತು.

ತಮ್ಮ ಮತ್ತು ತಮ್ಮ ರಾಜಕೀಯ ನಡೆಯ ಬಗೆಗಿನ ಟೀಕೆಗಳನ್ನೇ ಬಳಸಿಕೊಂಡು ಮೋದಿ ತಮ್ಮನ್ನು ತಾವು ಬಿಂಬಿಸಿಕೊಳ್ಳುವ ಕಲೆಯಲ್ಲೂ ಪಳಗಿದವರಾಗಿದ್ದಾರೆ. 2002ರ ಗುಜರಾತ್ ಹತ್ಯಾಕಾಂಡದ ನಂತರ ಅವರು ಬಹುಶಃ ರಾಜಕೀಯವಾಗಿ ದುರ್ಬಲರಾಗಿದ್ದರು. ಆಗ, ತಾನು ಪರಿಸ್ಥಿತಿಯ ಬಲಿಪಶುವಾಗಿದ್ದೇನೆ ಎಂದು ಬಿಂಬಿಸಲು ರಾಜ್ಯಾದ್ಯಂತ ಗುಜರಾತ್ ಗೌರವ್ ಯಾತ್ರೆ ಎಂಬ ಅಭಿಯಾನ ನಡೆಸಿದರು.

ಅಂದಿನಿಂದಲೂ ಅವರದು ಪೂರ್ವಯೋಜಿತ ಮಾತು. ಸ್ಕ್ರಿಪ್ಟ್ ಹೊರತುಪಡಿಸಿದ ಏನನ್ನೂ ಅವರು ಮಾಡುವುದಿಲ್ಲ. ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುವಾಗ ಅಥವಾ ಹೊಸ ಪೌರತ್ವ ಕಾನೂನಿನ ವಿರುದ್ಧದ ಪ್ರತಿಭಟನೆಗಳು ಮತ್ತು ರೈತರ ಪ್ರತಿಭಟನೆಗಳಂತಹ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವಾಗ ಮೋದಿ ದೂರು ಹೇಳುವ ರೀತಿಯಲ್ಲಿ ಏಕರೂಪವಾಗಿ ಮಾತನಾಡುತ್ತಾರೆ. ಇತ್ತೀಚೆಗೆ ಅವರು, ಪ್ರತಿಪಕ್ಷಗಳು ತಮ್ಮ ಮೇಲೆ ಮಾಡಿದ 91 ನಿಂದನೆಗಳನ್ನು ಪಟ್ಟಿ ಮಾಡಿದರು. ಮತ್ತದನ್ನು ತಾವು ಸೇರಿರುವ ಹಿಂದುಳಿದ ವರ್ಗ ಮತ್ತು ಇಡೀ ಭಾರತಕ್ಕೆ ಮಾಡಿದ ಅವಹೇಳನ ಎಂದು ಸಮೀಕರಿಸಿದರು.

ಇವೆಲ್ಲದರ ಜೊತೆಗೇ ಹಿಂದುತ್ವವನ್ನು ತಳುಕು ಹಾಕಿಕೊಂಡು, ಹಿಂದೂ ಹೃದಯಸಾಮ್ರಾಟ ಎನ್ನಿಸಿಕೊಳ್ಳುವ ತವಕ. ಎಲ್ಲದರ ಬಗ್ಗೆಯೂ ದೂರುವ ಸಾರ್ವಕಾಲಿಕ ಬಲಿಪಶುವಿನ ಮಾತುಗಳು ಇಂಥದೊಂದು ಅವಕಾಶ ಕೈತಪ್ಪಿಹೋಗುವ ಭಯದ ಹಿನ್ನೆಲೆಯದ್ದೂ ಅಗಿವೆ.

ಅದಕ್ಕಾಗಿಯೇ ಮೋದಿ ನಡವಳಿಕೆ ಅಥವಾ ನೀತಿಗಳ ವಿರುದ್ಧದ ಯಾವುದೇ ವಿಮರ್ಶಾತ್ಮಕ ಪ್ರಶ್ನೆಗಳು, ಹಿಂದೂ ಧರ್ಮ ಅಥವಾ ಭಾರತೀಯ ಇತಿಹಾಸದ ಶೈಕ್ಷಣಿಕ ವಿಮರ್ಶೆ ಕೂಡ ತೀವ್ರ ನಿಂದನೀಯ ದಾಳಿಗಳನ್ನು ಎದುರಿಸಬೇಕಾಗುತ್ತದೆ.

ಹಿಂದುತ್ವ ಸಿದ್ಧಾಂತ ಇರುವುದು, ಕಮ್ಯುನಿಸಂ ಅಥವಾ ಬಂಡವಾಳಶಾಹಿಯಂತಹ ಸಾಮಾಜಿಕ ಅಥವಾ ಆರ್ಥಿಕ ನೆಲೆಯ ಮೇಲಲ್ಲ; ಬದಲಾಗಿ ಭಯ ಮತ್ತು ಬಲಿಪಶುವೆಂಬ ಪ್ರಜ್ಞೆಯ ಮೇಲೆ ಸ್ಥಾಪಿತವಾಗಿದೆ. ಹೀಗಾಗಿ, ದೃಢವಾದ ಟೀಕೆಗಳು ಅಥವಾ ವಾದ ಎದುರಾದಾಗ, ಅದನ್ನು ಡಿಜಿಟಲ್ ಮಾಧ್ಯಮದ ಮೂಲಕ ಭಕ್ತಪಡೆಯಿಂದ ಛೇಡಿಸುವ ಕೆಲಸ ನಡೆಯುತ್ತದೆ. ಇದು ಒಂದು ಬಗೆಯಲ್ಲಿ ಮರೆಯಲ್ಲಿ ನಿಂತು ಬಾಣ ಹೂಡಿದಂತೆ. ರಸ್ತೆಯಲ್ಲಿ ಹೋಗುತ್ತಿರುವಾಗ ನಿಮ್ಮ ಕಿವಿಗೆ ಬೀಳುವ ಹಾಗೆ ನಿಮ್ಮನ್ನು ಟೀಕಿಸುವ, ಶಿಳ್ಳೆ ಹೊಡೆದು ಕೆಣಕುವ, ನೀವು ಅವರೆಡೆಗೆ ತಿರುಗುವಂತೆ ಮಾಡುವ ರೀತಿ. ಒಂದು ವೇಳೆ ನೀವು ಅವರ ಕಡೆ ನೋಡಿದಿರೋ ಅಥವಾ ಅವರ ವರ್ತನೆಗೆ ಪ್ರತಿಕ್ರಿಯಿಸಿದಿರೋ ಅವರದು ಗೆಲುವಿನ ನಗೆ. ಇದು ಈ ಆನ್ಲೈನ್ ದಾಳಿಯ ಆಟ.

ಆನ್ಲೈನ್ ದಾಳಿಕೋರರು ತಾವು ಎಲ್ಲಿಲ್ಲದಷ್ಟು ಧೈರ್ಯಶಾಲಿಗಳೆಂದು ಭಾವಿಸುತ್ತಾರೆ. ಮನೋವ್ಯೆಜ್ಞಾನಿಕ ಸಂಶೋಧನೆಯ ಪ್ರಕಾರ, ಅವರ ಅನಾಮಧೇಯತೆ ಮತ್ತು ಇತರರ ಬಗ್ಗೆ ಸಹಿಷ್ಣುತೆ ಇಲ್ಲದಿರುವ ಗುಣ ಇಂಥ ಆನ್ಲೈನ್ ದಾಳಿ ಪ್ರವೃತ್ತಿಯ ಹಿಂದೆ ಇರುತ್ತದೆ.

ಹಿಂದುತ್ವದ ಟ್ರೋಲ್ ವಿಶೇಷವಾಗಿ ಪರಾನುಭೂತಿಯ ಕೊರತೆಗೆ ಒಳಗಾಗುತ್ತದೆ. ತನ್ನ ಕೀಳರಿಮೆಯನ್ನು ಮರೆಮಾಚುತ್ತ, ರಾಜಕೀಯವಾಗಿ ಮಾರಿಕೊಂಡಿರುವವನಾಗಿ ಮಾತನಾಡುವ, ಎಲ್ಲಾ ರೀತಿಯ ಪಿತೂರಿಗಳು ಮತ್ತು ಶತ್ರುಗಳ ವಿರುದ್ಧ ತನ್ನವರನ್ನು ರಕ್ಷಿಸುತ್ತಿದ್ದೇನೆ ಎಂದುಕೊಳ್ಳುವ ಮತ್ತು ನೈಜ ಅಥವಾ ಕಾಲ್ಪನಿಕ ಶತ್ರುವಿನ ಮೇಲೆ ಅಧಿಕಾರ ತೋರಿಸಬಹುದು ಎಂದು ತನ್ನನ್ನು ತಾನೇ ನಂಬಿಸುವ ಕ್ರಿಯೆ ಇದಾಗಿದೆ. ಶತ್ರು ಸಿಟ್ಟಾದರೆ, ಹೆದರಿದರೆ ಅಥವಾ ಬಾಯಿ ಮುಚ್ಚಿಕೊಂಡರೆ, ಟ್ರೋಲ್ ತನ್ನ ಕೆಲಸ ಮಾಡಿದೆ ಎಂದುಕೊಳ್ಳಲಾಗುತ್ತದೆ.

ಹೆಚ್ಚಾಗಿ ಟ್ರೋಲ್ನ ರಾಜಕೀಯ ಸ್ವರೂಪ, ಜನಾಂಗೀಯ, ಕೌಟುಂಬಿಕ ಅಥವಾ ಧಾರ್ಮಿಕ ದೃಷ್ಟಿಕೋನಗಳಿಗೆ ಆನುವಂಶಿಕ ದೃಷ್ಟಿಕೋನದಿಂದ ನಿಷ್ಠವಾಗಿರುವ ಮತ್ತು ರಾಷ್ಟ್ರೀಯತೆಯೊಂದಿಗೆ ಬೆಸೆದುಕೊಳ್ಳುವ ಬಗೆಯಲ್ಲಿರುತ್ತದೆ. ಆನುವಂಶಿಕ ವಿಶ್ವ ದೃಷ್ಟಿಕೋನ ಅಮೆರಿಕದಲ್ಲಿ ಕ್ರಿಶ್ಚಿಯನ್ ಮತ್ತು ಭಾರತದಲ್ಲಿ ಹಿಂದೂ ಆಗಿರಬಹುದು, ಆದರೆ ಸಾಮಾನ್ಯ ವಿಷಯವೆಂದರೆ, ತನಗೆ ಸಂಬಂಧವೇ ಇಲ್ಲದವರನ್ನೂ ಆಳವಾದ ಅನುಮಾನದಿಂದ ನೋಡುವುದು. ಅದಕ್ಕಾಗಿಯೇ ಅಮೆರಿಕದ ಮಾಜಿ ಅಧ್ಯಕ್ಷರನ್ನು ಬರಾಕ್ ಹುಸೇನ್ ಒಬಾಮಾ ಎಂದು ಕರೆಯುವುದು ಅಥವಾ ಸಬ್ರಿನಾ ಸಿದ್ದೀಕಿ ಅವರ ಮುಸ್ಲಿಮ್ ಪರಂಪರೆಯನ್ನು ಎತ್ತಿ ತೋರಿಸುವುದು ಇಂಥವರಿಗೆ ಸರಿಯೆಂದೇ ಕಾಣಿಸುತ್ತದೆ. ಇದು, ಅವರು ಜಗತ್ತನ್ನು ಹೇಗೆ ನೋಡುತ್ತಾರೆ ಎಂಬುದರ ನಿದರ್ಶನ.

ಈ ಅಸ್ವಸ್ಥತೆಯನ್ನು ಗುಣಪಡಿಸಲು ಇರುವ ಒಂದು ಮಾರ್ಗವೆಂದರೆ ಅಂಥವರನ್ನು ವಿಭಿನ್ನ ಸಾಮಾಜಿಕ ಸಂದರ್ಭಕ್ಕೆ, ಹೊರಗಿನ ಗುಂಪಿಗೆ ಸೇರಿಸುವುದು. ಹಾಗಾಗಿಯೇ ಹೆಚ್ಚಿನ ಜನರು ನಂಬಿಕೆ ಅಥವಾ ಆರಾಧನೆಯಿಂದ ದೂರವಾಗುತ್ತಾರೆ. ಈ ವಿದ್ಯಮಾನವನ್ನು ಕಾಂಟ್ಯಾಕ್ಟ್ ಹೈಪೋಥೆಸಿಸ್ ಎಂದು ಕರೆಯಲಾಗುತ್ತದೆ. ವಿವಿಧ ಹಿನ್ನೆಲೆಗಳು ಮತ್ತು ಪ್ರಪಂಚದ ದೃಷ್ಟಿಕೋನಗಳ ಜನರೊಂದಿಗೆ ಬೆರೆಯುವ ಮೂಲಕ ಉದಾರವಾದದ ಅರ್ಥ ಮನವರಿಕೆಯಾಗುವುದು ಸಾಧ್ಯ.

ಆದಾಗ್ಯೂ, ಭಾರತೀಯ ಸನ್ನಿವೇಶಗಳು ಆಳವಾಗಿ ಪ್ರತ್ಯೇಕಿಸಲ್ಪಟ್ಟಿವೆ ಮತ್ತು ಕಂದರ ಹೆಚ್ಚುತ್ತಲೇ ಇದೆ, ಇದು ಸಮುದಾಯಗಳನ್ನು ಮತ್ತಷ್ಟು ದೂರ ಮಾಡುತ್ತಿದೆ ಮತ್ತು 2020ರ ದಿಲ್ಲಿ ಹತ್ಯಾಕಾಂಡದಂತಹ ಧಾರ್ಮಿಕ ಕಲಹಗಳಿಗೆ ತನ್ನ ಪಾಲು ನೀಡುತ್ತದೆ.

ಟ್ರೋಲ್ಗಳು ನಮ್ಮ ಸಮಾಜದ ಪ್ರತಿಬಿಂಬ ಎಂದು ಗುರುತಿಸುವುದೇ ಸರಿ. ಒಬ್ಬ ಭಾರತೀಯ ಸಾರ್ವತ್ರಿಕ ಭ್ರಾತೃತ್ವವನ್ನು ನಿಜವಾಗಿಯೂ ನಂಬಬೇಕು ಎಂದರೆ ಅವನು ಸಾಮಾಜಿಕ, ಏಕಮುಖಿ ಸಾಮಾಜಿಕ, ಭಾವನಾತ್ಮಕ ಮತ್ತು ಕೌಟುಂಬಿಕ ಅಡೆತಡೆಗಳನ್ನು ಒಡೆಯಬೇಕು. ಹಾಗೆ ಮಾಡುವುದು ಸುಲಭವಲ್ಲ. ಜಾರ್ಜ್ ಆರ್ವೆಲ್ 1984ರಲ್ಲಿ ಎಚ್ಚರಿಸಿದಂತೆ, ನಮ್ಮಲ್ಲಿ ಹೆಚ್ಚಿನವರು ಸ್ವಾತಂತ್ರ್ಯಕ್ಕಿಂತ ಸಂತೋಷವನ್ನು ಬಯಸುತ್ತಾರೆ. ಹಾಗಾಗಿ ಟ್ರೋಲ್ಗಳು ಯುದ್ಧವೇ ಶಾಂತಿ, ಅಜ್ಞಾನವೇ ಆನಂದ, ಸ್ವಾತಂತ್ರ್ಯವೇ ಗುಲಾಮಗಿರಿ ಎಂದು ಜಪಿಸುತ್ತಲೇ ಇದ್ದಾರೆ.

(ಕೃಪೆ: Scroll.in)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News