ಶ್ವೇತಭವನದಲ್ಲಿ ಮೋದಿ ಪ್ರತಿಪಾದಿಸಿದ 'ಪ್ರಜಾಪ್ರಭುತ್ವ' ಎಂಬ ಲೊಳಲೊಟ್ಟೆ
ಶ್ವೇತಭವನದಂಥ ಜಾಗತಿಕ ವೇದಿಕೆಗಳಲ್ಲಿ ನಿಂತು ಮೋದಿ ಹೇಳುತ್ತಿರುವುದಕ್ಕೂ ಅವರ ಸರಕಾರ ನಡೆದುಕೊಳ್ಳುತ್ತಿರುವ ರೀತಿಗೂ ಭಾರೀ ಅಂತರವಿದೆ. ತಮ್ಮ ಆಡಳಿತದಲ್ಲಿ ಯಾವುದೇ ರೀತಿಯ ತಾರತಮ್ಯ ನಡೆದಿದೆ ಎಂಬುದನ್ನು ನಿರಾಕರಿಸುವ ಅವರು, ಜಗತ್ತನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.ಆದಾಗ್ಯೂ, ಅವರು ತಮ್ಮ ಅಧಿಕಾರಾವಧಿಯ ಮೂಲಕ ತೋರಿದ ನಿರಂಕುಶಾಧಿಕಾರಿ ನಡೆಗಳು ಮತ್ತು ಭಾರತದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಅತಿ ಕೇಂದ್ರೀಕರಣದ ಪ್ರವೃತ್ತಿಗಳನ್ನು ಗಮನಿಸಿದರೆ, ಅಸಮರ್ಥನೀಯವಾದರೂ ಸಮರ್ಥಿಸಿಕೊಳ್ಳುವ ಅವರ ನಡೆಯೂ ಅನಿರೀಕ್ಷಿತವೇನಲ್ಲ.
- ಅಜೋಯ್ ಆಶೀರ್ವಾದ್ ಮಹಾಪ್ರಶಸ್ತ
ಕಡೆಗೂ ಒಂಭತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ. ಅದೂ ಅಮೆರಿಕದಲ್ಲಿ.
ಅದೆಷ್ಟು ಬಾರಿ ನಾಗರಿಕ ಸಮಾಜದ ಸದಸ್ಯರು ಬೇಡಿಕೆಯಿಟ್ಟಿದ್ದರೂ, ಅಧಿಕಾರಕ್ಕೆ ಬಂದ 9 ವರ್ಷಗಳಿಂದ ಒಮ್ಮೆಯೂ ಸುದ್ದಿಗೋಷ್ಠಿಯನ್ನು ಎದುರಿಸದೇ ಇದ್ದ ಅವರು, ಮೊನ್ನೆ (ಜೂನ್ 22, 2023) ಅಮೆರಿಕ ಭೇಟಿಯ ವೇಳೆ ಶ್ವೇತಭವನದಲ್ಲಿ, ಇಲ್ಲಿಗೆ ಬರುವವರು ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸುವುದು ನಡೆದುಕೊಂಡು ಬಂದಿರುವ ರೂಢಿ ಎಂಬ ಅಮೆರಿಕದ ಒತ್ತಾಯಕ್ಕೆ ಮಣಿದಿದ್ದಾರೆ. ಆದರೆ ಒಂದೇ ಒಂದು ಪ್ರಶ್ನೆಗೆ ಮಾತ್ರ ಉತ್ತರಿಸಲು ಒಪ್ಪಿಕೊಂಡಾಗ, ಅವರಿಗೆ ಎದುರಾದ ಪ್ರಶ್ನೆ, ಭಾರತದಲ್ಲಿ ಮುಸ್ಲಿಮರು ಬಲಿಪಶುಗಳಾಗುತ್ತಿರುವುದು, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮೋದಿ ಆಡಳಿತದಲ್ಲಿ ಭಿನ್ನಾಭಿಪ್ರಾಯ ಮತ್ತು ಟೀಕೆಗಳನ್ನು ದಮನಿಸುವ ನಡೆಯ ಕುರಿತದ್ದಾಗಿತ್ತು.
ತಮ್ಮ ಉತ್ತರದಲ್ಲಿ ಮೋದಿ 'ಪ್ರಜಾಪ್ರಭುತ್ವ' ಎಂಬ ಪದವನ್ನು 12 ಬಾರಿ ಉಲ್ಲೇಖಿಸಿದರೆಂದು ವರದಿಯಾಗಿದೆ. ತಮ್ಮ ಸರಕಾರದ ಕಲ್ಯಾಣ ಯೋಜನೆ ಗಳು ನಂಬಿಕೆ, ಜಾತಿ ಮತ್ತು ಪಂಥ ಭೇದವಿಲ್ಲದೆ ಎಲ್ಲರಿಗೂ ಲಭ್ಯ ಎಂದು ಹೇಳುವುದರೊಂದಿಗೆ, ಪ್ರಶ್ನೆಯಲ್ಲಿ ಒತ್ತುಕೊಡಲಾಗಿದ್ದ ನಿರ್ದಿಷ್ಟ ವಿಷಯವನ್ನು ಮುಟ್ಟದೆ ನಿಭಾಯಿಸಿದ್ದಾರೆ. ಮಾನವ ಹಕ್ಕುಗಳನ್ನು ಬದಿಗಿಟ್ಟು ತಾರತಮ್ಯ ಮಾಡಿದರೆ ಭಾರತ ವಿಶ್ವದ ಅತಿದೊಡ್ಡ ಸಾಂವಿಧಾನಿಕ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದಾಗಲು ಸಾಧ್ಯವಿಲ್ಲ ಎಂದೂ ಅವರು ತಮ್ಮ ಉತ್ತರದಲ್ಲಿ ಹೇಳಿದರು.
ಆದರೆ, 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದ, ದೇಶದಲ್ಲಿ ಸರಕಾರದ ಕೆಲವು ನಡೆಗಳು ಸ್ಪಷ್ಟವಾಗಿ ಪ್ರಜಾಪ್ರಭುತ್ವ ವಿರೋಧಿ ಎಂಬುದನ್ನು ತೋರಿಸುವ ಅನೇಕ ಸಂದರ್ಭಗಳನ್ನು ಜಗತ್ತೇ ಗಮನಿಸಿದೆ. ಮೋದಿ ನಿರಂತರವಾಗಿ ದೇಶದಲ್ಲಿ ಬಹುಸಂಖ್ಯಾಕ ಭಾವನೆಗಳನ್ನೇ ಉತ್ತೇಜಿಸಿರುವುದು ಮತ್ತು ಅವರದೇ ಆಡಳಿತದಲ್ಲಿ ಒಂದರ ಬೆನ್ನಿಗೊಂದು ತಾರತಮ್ಯದ ಆದೇಶಗಳು ಜಾರಿಯಾಗಿದ್ದರೂ ಅವರು ವೌನವಾಗಿರುವುದು ಯಾರಿಗೂ ಗೊತ್ತಿಲ್ಲದೇ ಇರುವ ವಿಚಾರವಲ್ಲ.
ಶ್ವೇತಭವನದಲ್ಲಿ ನಿಂತು ಮೊದಿ ಹೇಳಿದ್ದಕ್ಕೂ, ದೇಶದಲ್ಲಿನ ವಾಸ್ತವಕ್ಕೂ ಮಧ್ಯೆ ಕಾಣಿಸುವುದು ದೊಡ್ಡ ವಿರೋಧಾಭಾಸ.
ಎಲ್ಗರ್ ಪರಿಷತ್ ಪ್ರಕರಣವನ್ನೇ ನೋಡಿದರೆ, ಐದು ವರ್ಷಗಳೇ ಕಳೆದರೂ ಬಂಧಿತರು ಇನ್ನೂ ಜೈಲಿನಲ್ಲಿದ್ದಾರೆ. 16 ಜನ ಬಂಧಿತರಲ್ಲಿ ನಾಲ್ವರು ಶಿಕ್ಷಣ ತಜ್ಞರು, ಮೂವರು ವಕೀಲರು, ಇಬ್ಬರು ಸ್ವತಂತ್ರ ಪತ್ರಕರ್ತರು, ಒಕ್ಕೂಟದ ಸಂಘಟಕ ಮತ್ತು ಸಾಮಾಜಿಕ ಕಾರ್ಯಕರ್ತ, ಒಬ್ಬ ಕವಿ, ಮೂವರು ಪ್ರದರ್ಶಕ ಕಲಾವಿದರು ಮತ್ತು ಜೈಲಿನಲ್ಲಿ ನಿಧನರಾದ ಫಾದರ್ ಸ್ಟಾನ್ ಸ್ವಾಮಿ ಸೇರಿದ್ದಾರೆ. ಪ್ರಕರಣದಲ್ಲಿ ಯಾರನ್ನೂ ಅಪರಾಧಿ ಎಂದು ಸಾಬೀತು ಪಡಿಸಲಾಗಿಲ್ಲ. ಮತ್ತು ಪ್ರಕರಣದ ವಿಚಾರಣೆ ಇನ್ನೂ ಶುರುವಾಗಿಯೇ ಇಲ್ಲ. ಯಾವ ವಿಚಾರಕ್ಕೆ ಬಂಧಿಸಲಾಯಿತೊ ಆ ಹಿಂಸಾಚಾರಕ್ಕೂ ಅವರು ಸಂಬಂಧಿಸಿಲ್ಲ. ಹೆಚ್ಚಿನವರು, ನಾಗರಿಕ ಸ್ವಾತಂತ್ರದ ಪ್ರತಿಪಾದಕರು ಮತ್ತು ದಮನಿತ ಜನರ ವಿರುದ್ಧದ ಯಾವುದೇ ರೀತಿಯ ತಾರತಮ್ಯವನ್ನು ವಿರೋಧಿಸುವವರು. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಅವರನ್ನೆಲ್ಲ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಯಿತು. ಸರಕಾರದ ವಿರುದ್ಧ ಪಿತೂರಿ ಆರೋಪವನ್ನು ಎನ್‌ಐಎ ಅವರತಲೆಗೆ ಕಟ್ಟಿತು. ಯುಎಪಿಎಯಂತಹ ಕಾನೂನಿನ ತೀವ್ರ ನಿಬಂಧನೆಗಳ ಮೂಲಕ ಅವರೆಲ್ಲ ಜೈಲಿನಲ್ಲಿಯೇ ಇರುವಂತೆ ಮಾಡಲಾಗಿದೆ.
ದೇಶದ ಯಾವ ಸರಕಾರವೂ ಮೋದಿ ಸರಕಾರದಂತೆ ಮುಕ್ತ ಮಾಧ್ಯಮದ ಮೇಲೆ ಕಡಿವಾಣ ಹಾಕಿರಲಿಲ್ಲ. ತನ್ನ ಬಗ್ಗೆ ಟೀಕಿಸುವ ಮತ್ತು ಕಟುಸತ್ಯವನ್ನು ಹೇಳುವ ಮಾಧ್ಯಮವನ್ನು ವೌನವಾಗಿಸಲು ಸರಕಾರ ಪರೋಕ್ಷ ವಿಧಾನ ಗಳನ್ನು ಬಳಸಿದೆ. ಆದರೆ ಕಾಲಕಾಲಕ್ಕೆ ಯೂಟ್ಯೂಬ್, ಟ್ವಿಟರ್ ಅಥವಾ ಫೇಸ್‌ಬುಕ್‌ನಂತಹ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಸರಕಾರದ ವಿರುದ್ಧವಿರುವ ವಿಷಯವನ್ನು ತೆಗೆಯುವಂತೆ ಸೂಚಿಸಲು ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಈ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಒತ್ತಡ ಹೇರಲು ಮೋದಿ ಸರಕಾರವು ಹಲವಾರು ಕಾನೂನುಗಳನ್ನು ಜಾರಿಗೆ ತಂದಿದೆ ಎಂಬುದಕ್ಕೂ ಸಾಕಷ್ಟು ಪುರಾವೆಗಳಿವೆ. ಇತ್ತೀಚೆಗೆ ಟ್ವಿಟರ್ ಮಾಜಿ ಸಿಇಒ ಜಾಕ್ ಡೋರ್ಸೆ ಭಾರತದಲ್ಲಿ ಟ್ವಿಟರ್‌ಅನ್ನು ಮುಚ್ಚುವ ಬೆದರಿಕೆಯನ್ನೂ ಮೋದಿ ಸರಕಾರ ಹಾಕಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.
ಕಳೆದ ಒಂಭತ್ತು ವರ್ಷಗಳಲ್ಲಿ, ಜಾಗತಿಕ ಪತ್ರಿಕಾ ಸ್ವಾತಂತ್ರದ ಸೂಚ್ಯಂಕದಲ್ಲಿ ಭಾರತ ನಿರಂತರವಾಗಿ ಕುಸಿಯುತ್ತಿದೆ. ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ತನ್ನ ಇತ್ತೀಚಿನ ವಿಶ್ವ ಪತ್ರಿಕಾ ಸ್ವಾತಂತ್ರ ಸೂಚ್ಯಂಕದಲ್ಲಿ ಭಾರತ 180 ದೇಶಗಳಲ್ಲಿ 161ನೇ ಸ್ಥಾನದಲ್ಲಿದೆ ಎಂದು ಗುರುತಿಸಿದೆ. 2022ರಲ್ಲಿದ್ದ 150ನೇ ಸ್ಥಾನದಿಂದ 2023ರಲ್ಲಿ 11 ಸ್ಥಾನಗಳನ್ನು ಭಾರತ ಕಳೆದುಕೊಂಡಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಂತಹ ನಿರಂಕುಶ ಪ್ರಭುತ್ವಗಳು ಸಹ ಶ್ರೇಯಾಂಕದಲ್ಲಿ ಭಾರತಕ್ಕಿಂತ ಉತ್ತಮವಾಗಿವೆ. ಹೀಗಿರುವಾಗ ಭಾರತದ ಉನ್ನತ ಪ್ರಜಾಸತ್ತಾತ್ಮಕ ಮಾನದಂಡಗಳ ಬಗ್ಗೆ ಪ್ರಧಾನಿ ಹೇಳಿದ್ದು ವಿಪರ್ಯಾಸ.
ಕೇವಲ ವರದಿ ಮಾಡಿದ್ದಕ್ಕಾಗಿ ನೂರಾರು ಪತ್ರಕರ್ತರು ಕಠಿಣ ಆರೋಪ ಗಳನ್ನು ಎದುರಿಸುತ್ತಿದ್ದಾರೆ. ಭಯೋತ್ಪಾದಕರ ವಿರುದ್ಧ ಬಳಸಲಾಗುವ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಕನಿಷ್ಠ ಏಳು ಪತ್ರಕರ್ತರು ಜೈಲಿನಲ್ಲಿದ್ದಾರೆ. ಮೋದಿ ಆಡಳಿತದಲ್ಲಿ ಭಾರತದಲ್ಲಿ ಪತ್ರಕರ್ತರ ಬಂಧನಗಳನ್ನು ವಿವಿಧ ಜಾಗತಿಕ ಸಂಸ್ಥೆಗಳು ಉಲ್ಲೇಖಿಸಿವೆ. ಕೋವಿಡ್ ಕಾರಣದ ಲಾಕ್‌ಡೌನ್ ಹೊತ್ತಿನ ಸಂಕಟಗಳ ಬಗ್ಗೆ ವರದಿ ಮಾಡಿದ್ದಕ್ಕಾಗಿಯೇ 55 ಪತ್ರಕರ್ತರು ಬೆದರಿಕೆ, ಬಂಧನ ಎದುರಿಸಬೇಕಾಯಿತು.
ಮೋದಿ ನೇತೃತ್ವದ ಬಿಜೆಪಿ ಆಕ್ರಮಣಕಾರಿಯಾಗಿ ಅನುಸರಿಸುತ್ತಿರುವ ಬಹುಸಂಖ್ಯಾಕ ರಾಜಕೀಯದಿಂದ ಧಾರ್ಮಿಕ ಅಲ್ಪಸಂಖ್ಯಾತರು ನಿರಂತರ ಬಳಲುತ್ತಿದ್ದಾರೆ. 2014ರಿಂದ ಹಿಂದೂ ತೀವ್ರವಾದಿ ಗುಂಪುಗಳು ದೇಶಾದ್ಯಂತ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಬೆದರಿಸುವುದು, ದಾಳಿ ಮಾಡುವುದು ಯಾವ ಭಯವಿಲ್ಲದೆ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಮುಸ್ಲಿಮರ ಹತ್ಯೆಗಳು ಜಾಗತಿಕ ಸುದ್ದಿಯಾಗಿವೆ. ಇಂತಹ ಘಟನೆಗಳಲ್ಲಿ, ಗೋರಕ್ಷಣೆ ಹೆಸರಿನಲ್ಲಿ ಬಲಪಂಥೀಯ ಗುಂಪುಗಳು ಅಮಾಯಕ ಮುಸ್ಲಿಮರನ್ನು ಕೊಂದಿವೆ. ಮುಸ್ಲಿಮರ ಮೇಲಿನ ದಾಳಿಗಳು ಅಥವಾ ಅವರ ವಿರುದ್ಧ ಬೆದರಿಕೆಗಳ ಬಗ್ಗೆ ದೇಶದಲ್ಲಿ ಈಗ ಬಹುತೇಕ ನಿತ್ಯವೂ ಕೇಳುತ್ತಿದ್ದೇವೆ. ಇತ್ತೀಚೆಗಷ್ಟೆ ಉತ್ತರಾಖಂಡದಲ್ಲಿ ಹಿಂದುತ್ವವಾದಿ ಗುಂಪುಗಳು ಮುಸ್ಲಿಮ್ ವ್ಯಾಪಾರಿಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದವು. ಆಡಳಿತಾರೂಢ ಬಿಜೆಪಿಯ ಬೆಂಬಲ ಇದರ ಹಿಂದೆ ಇತ್ತೆನ್ನಲಾಗಿದೆ.
ಕೇಂದ್ರ ಮಂತ್ರಿಗಳೂ ಸೇರಿದಂತೆ ಬಿಜೆಪಿ ನಾಯಕರು ನಿರಂತರವಾಗಿ ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಅದು ಭಾರತದ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯಗಳನ್ನು ರಾಕ್ಷಸರೆಂಬಂತೆ ಬಿಂಬಿಸುತ್ತದೆ.
ಅಂತಹ ಗುಂಪುಗಳು ಮತ್ತು ವ್ಯಕ್ತಿಗಳು ಸರಕಾರದ ನೇರ ಮತ್ತು ಪರೋಕ್ಷ ಬೆಂಬಲವಿರುವುದರಿಂದಲೇ ಹೀಗೆ ಮಾಡಲು ಸಾಧ್ಯ. ಮೋದಿ ಸರಕಾರ ತನ್ನ ನಿಲುವುಗಳಲ್ಲಿ ಹಿಂದೂ ಬಹುಸಂಖ್ಯಾಕವಾಗಿರುವುದು ಅದರ ಕೆಲ ನೀತಿಗಳಲ್ಲಿಯೂ ಪ್ರತಿಫಲಿಸಿದೆ. ಅದು ಬಾಬರಿ ಮಸೀದಿ-ರಾಮ ಜನ್ಮಭೂಮಿ ವಿವಾದ ಕುರಿತ ಸುಪ್ರೀಂಕೋರ್ಟ್ ತೀರ್ಪನ್ನು ಸಂಭ್ರಮಿಸಿತು.
ನಂತರ, ಮೋದಿ ಸರಕಾರ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿತು. ಇದರಲ್ಲಿ ನೆರೆಯ ದೇಶಗಳಿಂದ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ಹಕ್ಕುಗಳ ಅವಕಾಶವಿದ್ದರೂ, ಭಾರತದಲ್ಲಿ ಆಶ್ರಯ ಪಡೆದ ಕಿರುಕುಳಕ್ಕೊಳಗಾದ ಮುಸ್ಲಿಮರನ್ನು ಹೊರಗಿಟ್ಟಿತು. ಹೊಸ ಕಾಯ್ದೆ ಯಲ್ಲಿ ನಂಬಿಕೆಯ ಆಧಾರದ ಮೇಲೆ ಪೌರತ್ವವನ್ನು ವ್ಯಾಖ್ಯಾನಿಸುವುದು, ನಂಬಿಕೆ, ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಭಾರತೀಯರಿಗೆ ಪೌರತ್ವ ಹಕ್ಕುಗಳನ್ನು ನೀಡಿರುವ ಭಾರತೀಯ ಸಂವಿಧಾನದ ಮೇಲಿನ ನೇರ ದಾಳಿಯೆಂದು ಭಾವಿಸಿದ ಭಾರತೀಯ ಮುಸ್ಲಿಮರು ಈ ಕಾನೂನಿನ ಬಗ್ಗೆ ವ್ಯಾಪಕವಾಗಿ ಆತಂಕಗೊಳ್ಳುವಂತಾಯಿತು. ಅಂತೆಯೇ, ಐತಿಹಾಸಿಕ ಕಾರಣಗಳಿಂದಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕಿದ್ದ ವಿಶೇಷ ಸ್ಥಾನಮಾನವನ್ನು ಹಠಾತ್ ಹಿಂದೆಗೆದುಕೊಳ್ಳಲಾಯಿತು. ರಾಜ್ಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಾಗಲಿ, 370ನೇ ವಿಧಿ ದುರ್ಬಲಗೊಳಿಸಿದ ನಂತರದ ವಾಸ್ತವವೇನು ಎಂಬುದನ್ನು ತಿಳಿಸುವುದಾಗಲಿ ನಡೆಯಲಿಲ್ಲ. ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿ ಕೇಂದ್ರದ ಆಡಳಿತಕ್ಕೆ ಒಳಪಡಿಸಲಾಯಿತು.
ಇಂತಹ ನಿರ್ಧಾರಗಳ ಪರಿಣಾಮವಾಗಿ, ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಬಹುಸಂಸ್ಕೃತಿಯ, ಜಾತ್ಯತೀತ ದೇಶಕ್ಕೆ ವಿರುದ್ಧವಾಗಿ ಹಿಂದೂ ರಾಷ್ಟ್ರದ ಕೂಗು ಭಾರತದಲ್ಲಿ ತೀವ್ರವಾಗಿ ಹೆಚ್ಚುತ್ತಿದೆ. ಹಿಂದುತ್ವವಾದಿ ಗಳ ಬಲ ಮೋದಿ ಆಡಳಿತದಲ್ಲಿ ರಾಜಕೀಯವಾಗಿ ಮುನ್ನೆಲೆಯಲ್ಲಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೆಲ್ಲ ಈ ಹಿಂದುತ್ವವಾದಿ ಗುಂಪುಗಳು ಅಲ್ಪಸಂಖ್ಯಾತರ ಪ್ರತಿಯೊಂದು ಸಾಂಸ್ಕೃತಿಕ ಮತ್ತು ಸಾಮಾಜಿಕ ಅಸ್ಮಿತೆಯ ಮೇಲೆ ದಾಳಿ ನಡೆಸಿವೆ ಮತ್ತು ಸಾಧ್ಯವಿರುವ ಎಲ್ಲ ಅವಕಾಶಗಳಲ್ಲೂ ಹಿಂದೂಗಳನ್ನು ಅವರ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿವೆ. ಧ್ರುವೀಕರಣ ರಾಜಕೀಯವನ್ನು ಪ್ರಧಾನಿಯೇ ಪ್ರತಿಪಾದಿಸಿದ್ದು, ಅವರು ಬಹುಸಂಖ್ಯಾತರ ಭಾವನೆಗಳನ್ನೇ ಉತ್ತೇಜಿಸುತ್ತ ಬಂದಿದ್ದಾರೆ. ಕಟ್ಟಾ ಹಿಂದುತ್ವದ ನಾಯಕರನ್ನು ಬೆಂಬಲಿಸಿದ್ದಾರೆ. ತಮ್ಮ ಚುನಾವಣಾ ಭಾಷಣಗಳಲ್ಲಿ ಭಾರತೀಯ ಮುಸ್ಲಿಮರ ಮೇಲೆ ದಾಳಿ ಮಾಡಿದ್ದಾರೆ ಮತ್ತು ಆಡಳಿತದಲ್ಲಿಯೂ ಅಂಥದೇ ಧೋರಣೆ ಮುಂದುವರಿಸಿದ್ದಾರೆ.
ಮೋದಿ ಅಧಿಕಾರಾವಧಿಯಲ್ಲಿ ದೊಡ್ಡ ಮತ್ತು ಸಣ್ಣ ಪ್ರಮಾಣದ ಕೋಮುಗಲಭೆಗಳು ತೀವ್ರಗೊಂಡಿವೆ ಮತ್ತು ಅಂತಹ ದ್ವೇಷದ ಅಪರಾಧ ಗಳಲ್ಲಿ ಶಿಕ್ಷೆಯ ಪ್ರಮಾಣ ಏನೇನೂ ಇಲ್ಲವೆಂಬಂತಿದೆ.
ಇದೆಲ್ಲದರ ಮಧ್ಯೆ, ಭಾರತದ ಇತಿಹಾಸಕ್ಕೆ ಮುಸ್ಲಿಮರ ಕೊಡುಗೆಯನ್ನೇ ಅಳಿಸಿಹಾಕಲು ಮೋದಿ ಸರಕಾರದಿಂದ ನಿರಂತರ ಪ್ರಯತ್ನಗಳು ನಡೆದಿವೆ. ಮುಸ್ಲಿಮ್ ಚಕ್ರವರ್ತಿಗಳು ಮತ್ತು ರಾಜವಂಶಗಳು ಆಳಿದ ಮಧ್ಯಕಾಲೀನ ಯುಗವನ್ನು ವಿವರಿಸುವ ಅಧ್ಯಾಯಗಳನ್ನು ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಸರಕಾರಗಳು ಶಾಲಾ ಪಠ್ಯಪುಸ್ತಕಗಳಿಂದ ವ್ಯವಸ್ಥಿತವಾಗಿ ತೆಗೆದುಹಾಕುತ್ತಿವೆ. ಇಂತಹ ಅಳಿಸುವಿಕೆಯ ಹಿಂದಿನ ರಾಜಕೀಯವು, ಇಸ್ಲಾಮಿಕ್ ಆಡಳಿತವನ್ನು ಭಾರತ ವಿರೋಧಿ ಮತ್ತು ಭಾರತೀಯ ಇತಿಹಾಸದಲ್ಲಿ ಕರಾಳ ಅವಧಿ ಎಂದು ಪರಿಗಣಿಸುವ ಹಿಂದೂ ಬಲಪಂಥೀಯರ ಐತಿಹಾಸಿಕ ಪೂರ್ವಾಗ್ರಹ ಎಂದು ಇತಿಹಾಸಕಾರರು ಭಾವಿಸುತ್ತಾರೆ.
ಸಾವಿರ ವರ್ಷಗಳ ವಿದೇಶಿ ಆಳ್ವಿಕೆಯ ನಂತರ ಭಾರತ ಸ್ವಾತಂತ್ರವನ್ನು ಸಾಧಿಸಿದೆ ಎಂದು ಮೊನ್ನೆ ಶ್ವೇತಭವನದಲ್ಲಿ ಮೋದಿ ಹೇಳಿಕೊಂಡಿದ್ದು, 200 ವರ್ಷಗಳ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಹೊರತಾಗಿ ಇಸ್ಲಾಮಿಕ್ ಆಳ್ವಿಕೆಯನ್ನು ಸಹ ಒಳಗೊಂಡಿದೆ. ಇದು ಯಾವುದೇ ವೃತ್ತಿಪರ ಇತಿಹಾಸಕಾರರು ಒಪ್ಪದ ಹಿಂದುತ್ವದ ಸಮರ್ಥನೆ.
ಬಿಜೆಪಿಯ ಒಬ್ಬನೇ ಒಬ್ಬ ಸಂಸದನೂ ಮುಸ್ಲಿಮ್ ಸಮುದಾಯಕ್ಕೆ ಸೇರಿಲ್ಲದಿ ರುವುದು ಕೂಡ ಮೋದಿ ಆಡಳಿತದಲ್ಲಿನ ಮುಸ್ಲಿಮರ ವಿರುದ್ಧದ ಹಳೆಯ ಪಕ್ಷಪಾತವನ್ನೇ ತೋರಿಸುತ್ತದೆ. ವಾಸ್ತವವಾಗಿ, ಬಿಜೆಪಿ ಅಭ್ಯರ್ಥಿಯಾಗಿ ಪ್ರಮುಖ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಮುಸ್ಲಿಮರಿಗೆ ಅವಕಾಶ ನೀಡದಂತೆ ಎಚ್ಚರ ವಹಿಸಲಾಗಿದೆ.
ಭಾರತದಲ್ಲಿನ ಉನ್ನತ ಪ್ರಜಾಸತ್ತಾತ್ಮಕ ಮಾನದಂಡಗಳ ಬಗ್ಗೆ ಪ್ರಧಾನಿ ಮಾತನಾಡುತ್ತಿದ್ದರೂ, ತನಿಖಾ ಸಂಸ್ಥೆಗಳು ಬಿಹಾರದ ಹಣಕಾಸು ಸಚಿವ ವಿಜಯ್ ಕುಮಾರ್ ಚೌಧರಿ ಅವರ ಹತ್ತಿರದ ಸಂಬಂಧಿಯ ಮೇಲೆ ದಾಳಿ ನಡೆಸುತ್ತಿವೆ. ಬಿಹಾರದಲ್ಲಿ 2024ರ ಸಂಸತ್ ಚುನಾವಣೆಗೆ ಮುಂಚಿತವಾಗಿ ಅತಿದೊಡ್ಡ ವಿರೋಧ ಪಕ್ಷದ ಸಭೆಯನ್ನು ನಾಯಕರು ಆಯೋಜಿಸುತ್ತಿರುವ ಹೊತ್ತಿನಲ್ಲಿಯೇ ಈ ದಾಳಿಗಳು ನಡೆದಿವೆ. ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಒಟ್ಟಾಗುತ್ತಿರುವುದಾಗಿ ಹೇಳುತ್ತಿರುವ ವಿರೋಧ ಪಕ್ಷದ ನಾಯಕರು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಸೇರುವಾಗ, ಚೌಧರಿ ಅದರ ಉಸ್ತುವಾರಿ ವಹಿಸಿದ್ದರೆಂಬುದು ತನಿಖಾ ಏಜನ್ಸಿಗಳ ದಾಳಿಯ ಹಿಂದಿನ ಮರ್ಮ ಎನ್ನಲಾಗುತ್ತಿದೆ.
ವಿರೋಧ ಪಕ್ಷದ ನಾಯಕರ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ಪದೇ ಪದೇ ದಾಳಿಗಳನ್ನು ನಡೆಸುತ್ತಿವೆ. ಆದರೆ ಏಜೆನ್ಸಿಗಳು ಆರೋಪಪಟ್ಟಿ ಸಲ್ಲಿಸಿದ್ದು ಕಡಿಮೆ. ಅವು ಈ ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಂಡಿಲ್ಲ. ಆದರೆ ಒಬ್ಬರ ನಂತರ ಒಬ್ಬ ವಿರೋಧ ಪಕ್ಷದ ನಾಯಕರ ಮೇಲೆ ದಾಳಿಗಳನ್ನು ಮುಂದುವರಿಸಿವೆ. ಇದಕ್ಕೆ ವ್ಯತಿರಿಕ್ತವಾಗಿ, ಹಲವಾರು ಕಳಂಕಿತ ಬಿಜೆಪಿ ನಾಯಕರು ಮುಕ್ತವಾಗಿದ್ದಾರೆ. ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ, ಆದರೆ ಬಿಜೆಪಿ ಸೇರಿರುವ ವಿರೋಧ ಪಕ್ಷದ ನಾಯಕರು ತನಿಖೆಯಿಂದ ತಪ್ಪಿಸಿಕೊಂಡಿದ್ದಾರೆ. ಇದು ವಿರೋಧ ಪಕ್ಷದ ನಾಯಕರ ಮೇಲಿನ ದಾಳಿಗಳು ಸ್ವಭಾವತಃ ಸೆಲೆಕ್ಟಿವ್ ಆಗಿವೆ ಮತ್ತು ಆಡಳಿತಾರೂಢ ಬಿಜೆಪಿಯ ಹಿತಾಸಕ್ತಿಗಳನ್ನು ಕಾಯುವ ಉದ್ದೇಶದವಾಗಿವೆ ಎಂಬ ವ್ಯಾಪಕ ಭಾವನೆಗೆ ಕಾರಣವಾಗಿವೆ.
ಮಾನವ ಹಕ್ಕುಗಳ ಕಾರ್ಯಕರ್ತರ ಮೇಲಿನ ದಾಳಿಗೆ ಎಲ್ಗರ್ ಪರಿಷತ್ ಪ್ರಕರಣದಲ್ಲಿನ ಸರಕಾರದ ಕ್ರಮ ಒಂದು ಸಾಕ್ಷಾತ್ ಉದಾಹರಣೆಯಾಗಿ ದ್ದರೂ, ದಮನಿತರ ಪರವಾಗಿ ನಿಲ್ಲುವವರ ಧ್ವನಿಯನ್ನು ಅದುಮುವ ಸರಕಾರದ ಧೋರಣೆಗೆ ಇನ್ನೂ ಹಲವಾರು ಕಟುವಾದ ಉದಾಹರಣೆಗಳಿವೆ. ದಿಲ್ಲಿ ಗಲಭೆಗಳು ಮೋದಿಯವರ ಬಿಜೆಪಿಯ ಬಹುಸಂಖ್ಯಾಕ ರಾಜಕಾರಣದ ಪರಾಕಾಷ್ಠೆ. ಮತ್ತದು ಭಾರತೀಯ ಮುಸ್ಲಿಮರು ಮತ್ತು ನಾಗರಿಕ ಸಮಾಜ ಗುಂಪುಗಳ ವ್ಯಾಪಕ ಸಾಂವಿಧಾನಿಕ ಪ್ರತಿಭಟನೆಯ ಬೆನ್ನಲ್ಲೇ ಶುರುವಾಯಿತು.
ಮೂರು ವರ್ಷಗಳ ಕೆಳಗೆ ಮುಸ್ಲಿಮರ ವಿರುದ್ಧ ಭಾರೀ ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದ ಯಾವುದೇ ಹಿಂದುತ್ವ ನಾಯಕರನ್ನು ಪೊಲೀಸರು ಬಂಧಿಸಲಿಲ್ಲ. ಆದರೆ ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿರುವವರ ಮೇಲೆ ದೇಶದ್ರೋಹ ಮತ್ತು ಭಯೋತ್ಪಾದನೆಯ ಆರೋಪಗಳನ್ನು ಹೊರಿಸಲಾಯಿತು. ಉಮರ್ ಖಾಲಿದ್, ಗುಲ್ಫಿಶಾ ಫಾತಿಮಾ, ಶಾರ್ಜೀಲ್ ಇಮಾಮ್, ನತಾಶಾ ನರ್ವಾಲ್, ಆಸಿಫ್ ತನ್ಹಾ ಮತ್ತು ದೇವಾಂಗನಾ ಕಲಿತಾ ಅವರಂತಹ ವಿದ್ಯಾರ್ಥಿಗಳ ವಿರುದ್ಧ - ಅವರಲ್ಲಿ ಮೂವರು ಇನ್ನೂ ಜೈಲಿನಲ್ಲಿ ದ್ದಾರೆ. ಯುಎಪಿಎ ಕಾನೂನನ್ನು ಅಸ್ತ್ರವಾಗಿ ಬಳಸಲಾಯಿತು. ಹಲವಾರು ಮುಸ್ಲಿಮ್ ಹೋರಾಟಗಾರರು ಇನ್ನೂ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿ ದ್ದಾರೆ. ಅವರಲ್ಲಿ ಹೆಚ್ಚಿನವರ ವಿರುದ್ಧ, ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಕೆಟ್ಟ ಹೆಸರು ತರುವ ಸಂಚು ರೂಪಿಸಿದ್ದರೆಂಬ ಆರೋಪ ಹೊರಿಸಲಾಗಿದೆ. ಆದರೆ ಅದನ್ನು ಸಮರ್ಥಿಸುವ ಯಾವುದೇ ಪುರಾವೆಗಳನ್ನು ಮಾತ್ರ ಒದಗಿಸಿಲ್ಲ.
1975 ಮತ್ತು 1977ರ ನಡುವೆ 21 ತಿಂಗಳ ಕಾಲ ಭಾರತೀಯ ಇತಿಹಾಸ ದಲ್ಲಿ ಕರಾಳ ಅವಧಿಯಾದ ತುರ್ತು ಪರಿಸ್ಥಿತಿಗಿಂತಲೂ ಕೆಟ್ಟ ರೀತಿಯಲ್ಲಿ, ಮೋದಿ ಆಡಳಿತದಲ್ಲಿ ಹೋರಾಟಗಾರರು ಮತ್ತು ಸರಕಾರವನ್ನು ಟೀಕಿಸುವ ವರ ವಿರುದ್ಧ ಜಾಮೀನು ರಹಿತ ಅಪರಾಧಗಳು ಮತ್ತು ಕಠಿಣ ಕಾನೂನುಗಳ ದುರ್ಬಳಕೆಯಾಗಿದೆ. ತೀರಾ ಇತ್ತೀಚೆಗೆ, ಭಾರತದ ಸಾಮಾಜಿಕ ನ್ಯಾಯ ಹೋರಾಟಗಾರರಲ್ಲಿ ಒಬ್ಬರಾದ ಮಾಜಿ ಅಧಿಕಾರಿ ಹರ್ಷ ಮಂದರ್ ಅವರು ಹಲವಾರು ರಂಗಗಳಲ್ಲಿ ಸರಕಾರದಿಂದ ದಾಳಿಗೆ ಒಳಗಾಗಿದ್ದಾರೆ. ಅವರ ಕಚೇರಿಗಳು, ಮನೆಗಳು ಮತ್ತು ಅವರು ಸಂಬಂಧ ಹೊಂದಿರುವ ಹಲವಾರು ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ.
ವಿದೇಶದಿಂದ ದೇಣಿಗೆ ಸ್ವೀಕರಿಸಲು ಎನ್‌ಜಿಒಗಳಿಗೆ ಅವಕಾಶ ನೀಡುವ ಹಲವಾರು ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಪರವಾನಿಗೆಗಳನ್ನು ಮೋದಿ ಸರಕಾರ ಹಠಾತ್ತನೆ ರದ್ದುಗೊಳಿಸಿದೆ. ಎಫ್‌ಸಿಆರ್‌ಎ ಪರವಾನಿಗೆಯನ್ನು ರದ್ದುಗೊಳಿಸಲಾಗಿರುವ ಎನ್‌ಜಿಒಗಳು ಮೋದಿ ಸರಕಾರದ ಬಹುಸಂಖ್ಯಾಕ ರಾಜಕೀಯವನ್ನು ಸಾರ್ವಜನಿಕವಾಗಿ ಟೀಕಿಸಿದವುಗಳಾಗಿವೆ.
ಅಂತೆಯೇ, ಕಳೆದ ಕೆಲವು ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸರಕಾರವನ್ನು ಟೀಕಿಸಿದವರ ವಿರುದ್ಧ ದಾಖಲಾದ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚಿದೆ. ಬಿಜೆಪಿ ವಿರೋಧಿಗಳ ವಿರುದ್ಧ ಪ್ರಕರಣ ದಾಖಲಿಸುವ, ಅವರನ್ನು ಬಂಧಿಸುವ ಇಲ್ಲವೆ ಬೆದರಿಸುವ ಘಟನೆಗಳು ಹಲವು ಪಟ್ಟು ಹೆಚ್ಚಾಗಿವೆ. ಪ್ರತಿಪಕ್ಷ ನಾಯಕರು, ಪತ್ರಕರ್ತರು ಮತ್ತು ಸಾಮಾನ್ಯ ಜನರ ವಿರುದ್ಧದ ಬೃಹತ್ ಸಂಖ್ಯೆಯ ಪ್ರಕರಣಗಳಲ್ಲಿ ಇದನ್ನು ಗಮನಿಸಬಹುದು. ಈ ಬಹುತೇಕ ಪ್ರಕರಣಗಳನ್ನು ಶಾಂತಿ ಮತ್ತು ಸೌಹಾರ್ದಕ್ಕೆ ಭಂಗ ತರುವ ಯತ್ನ ಅಥವಾ ಸಾರ್ವಜನಿಕ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸುವುದಕ್ಕೆ ಸಂಬಂಧಿಸಿದ ಸೆಕ್ಷನ್‌ಗಳಡಿ ದಾಖಲಿಸಲಾಗಿದೆ.
ಇನ್ನು, ಇಸ್ರೇಲ್‌ನ ಘೆಖ ಗುಂಪು ಅಭಿವೃದ್ಧಿಪಡಿಸಿದ ಮಿಲಿಟರಿ ದರ್ಜೆಯ ಸ್ಪೈವೇರ್ ಪೆಗಾಸಸ್ ಬಳಕೆ ವಿಚಾರದಲ್ಲಿ ಮೋದಿ ಸರಕಾರ ನಿರಂತರವಾಗಿ ವೌನವಾಗಿರುವುದನ್ನು ಯಾರು ತಾನೆ ಮರೆಯಲು ಸಾಧ್ಯ? ಮೋದಿ ಸರಕಾರ ನ್ಯಾಯಾಧೀಶರು, ಮಂತ್ರಿಗಳು, ಪತ್ರಕರ್ತರು, ವಿರೋಧ ಪಕ್ಷದ ನಾಯಕರು, ವಿಜ್ಞಾನಿಗಳು, ಉದ್ಯಮಿಗಳು ಮತ್ತು ಪ್ರಮುಖ ಸ್ಥಾನಗಳಲ್ಲಿದ್ದ 174 ಜನರ ಮೇಲೆ ಸ್ಪೈವೇರ್ ಕಣ್ಗಾವಲು ಇಟ್ಟಿದ್ದ ವಿಚಾರ ತನಿಖೆಯಿಂದ ಬಯಲಾಗಿದೆ. ರಾಜಕೀಯವಾಗಿ ಲಾಭವಾಗಬಹುದಾದ ಮಾಹಿತಿಯನ್ನು ಪಡೆಯಲು ನಿರ್ಣಾಯಕ ಸಮಯದಲ್ಲಿ ಸ್ಪೈವೇರ್ ಅನ್ನು ಆಡಳಿತಾರೂಢ ಬಿಜೆಪಿ ಬಳಸಿದೆ ಎಂದು ಆರೋಪಿಸಲಾಗಿದೆ.
ಶ್ವೇತಭವನದಂಥ ಜಾಗತಿಕ ವೇದಿಕೆಗಳಲ್ಲಿ ನಿಂತು ಮೋದಿ ಹೇಳುತ್ತಿರುವು ದಕ್ಕೂ ಅವರ ಸರಕಾರ ನಡೆದುಕೊಳ್ಳುತ್ತಿರುವ ರೀತಿಗೂ ಭಾರೀ ಅಂತರವಿದೆ. ತಮ್ಮ ಆಡಳಿತದಲ್ಲಿ ಯಾವುದೇ ರೀತಿಯ ತಾರತಮ್ಯ ನಡೆದಿದೆ ಎಂಬುದನ್ನು ನಿರಾಕರಿಸುವ ಅವರು, ಜಗತ್ತನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಆದಾಗ್ಯೂ, ಅವರು ತಮ್ಮ ಅಧಿಕಾರಾವಧಿಯ ಮೂಲಕ ತೋರಿದ ನಿರಂಕುಶಾಧಿಕಾರಿ ನಡೆಗಳು ಮತ್ತು ಭಾರತದ ಒಕ್ಕೂಟ ವ್ಯವಸ್ಥೆಗೆ ವಿರುದ್ಧ ವಾದ ಅತಿ ಕೇಂದ್ರೀಕರಣದ ಪ್ರವೃತ್ತಿಗಳನ್ನು ಗಮನಿಸಿದರೆ, ಅಸಮರ್ಥನೀ ಯವಾದರೂ ಸಮರ್ಥಿಸಿಕೊಳ್ಳುವ ಅವರ ನಡೆಯೂ ಅನಿರೀಕ್ಷಿತವೇನಲ್ಲ.
(ಕೃಪೆ: The Wire)