ಇದು ಅಸಂಸದೀಯ ನಡೆ
ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ
ಮಾನ್ಯರೇ,
ಶಾಸನ ಸಭೆಯಲ್ಲಿ ಸಭಾಧ್ಯಕ್ಷರದ್ದೇ ಸರ್ವ ಶ್ರೇಷ್ಠ ಸ್ಥಾನ.ಮಾತ್ರವಲ್ಲ ಸದನದ ಒಳಗೆ ಅವರು ಮೂರು ‘ಡಿ’ಗಳನ್ನು ಕಾಪಾಡಿಕೊಳ್ಳ ಬೇಕಾದದ್ದು ಅವರ ಆದ್ಯ ಕರ್ತವ್ಯವೂ ಹೌದು. ಮೂರು ‘ಡಿ’ಗಳೆಂದರೆ ಡಿಸಿಪ್ಲೀನ್, ಡಿಗ್ನಿಟಿ ಮತ್ತು ಡಿಕೋರಮ್. ಈ ಮೂರನ್ನು ಕಾಪಾಡಿಕೊಂಡಾಗ ಮಾತ್ರ ಸದನದ ಒಳಗೆ ಆರೋಗ್ಯ ಪೂರ್ಣ ವಾದ-ಸಂವಾದ-ಚರ್ಚೆ ನಡೆಯಲು ಸಾಧ್ಯ. ಆ ಕಾರಣದಿಂದಲೇ ಸದನದ ಅಧ್ಯಕ್ಷರಿಗೆ ವಿಶೇಷ ಸ್ಥಾನಮಾನ ಅಧಿಕಾರ ನೀಡಿರುವುದು. ಸರಕಾರ ಮತ್ತು ವಿಪಕ್ಷಗಳ ನಡುವೆ ಎಷ್ಟೇ ಗಂಭೀರವಾದ ವಿಚಾರಗಳಿರಬಹುದು ಅದನ್ನು ರಾಜಕೀಯ ಅಸ್ತ್ರವಾಗಿ ಸ್ಪೀಕರ್‌ರನ್ನೇ ಅವಮಾನಮಾಡುವುದು ಸದಸ್ಯರ ಅಕ್ಷಮ್ಯ ಅಪರಾಧ. ಇಂತಹ ಸಂದರ್ಭದಲ್ಲಿ ಸ್ಪೀಕರ್ ಸ್ಥಾನಮಾನ ಉಳಿಯಬೇಕಾದರೆ ಸ್ಪೀಕರ್ ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಬೇಕಾದದ್ದು ಅವರ ಅಧಿಕಾರ ಕೂಡ. ಈ ಮಾತು ಎಲ್ಲಾ ಪಕ್ಷಗಳಿಗೂ ಸರಿ ಸಮಾನವಾಗಿ ಅನ್ವಯಿಸುತ್ತದೆ.
ಸಭಾಧ್ಯಕ್ಷರು ಸದನಕ್ಕೆ ಪ್ರವೇಶ ಮಾಡುವಾಗ ಎಲ್ಲಾ ಸಚಿವರು ಸದಸ್ಯರು ಎದ್ದು ನಿಂತು ಗೌರವಿಸುವುದು ಎಲ್ಲರ ಸಭಾ ನಡಾವಳಿಯೂ ಹೌದು. ಸದನದಲ್ಲಿ ಮಾತನಾಡುವಾಗ ‘‘ಸ್ಪೀಕರ್ ಸರ್’’ ಎಂದೇ ಗೌರವಿಸಿ ಮಾತನಾಡ ಬೇಕು ಅನ್ನುವುದು ಸಂಸದೀಯ ಸಭ್ಯತೆಯೂ ಆಗಿದೆ. ಸ್ಪೀಕರ್ ನಿಂತಾಗ ಮಾತನಾಡುತ್ತಿರುವ ಸದಸ್ಯರಾಗಲಿ, ಸಚಿವರಾಗಲಿ ಅಲ್ಲಿಯೇ ಕುಳಿತುಕೊಳ್ಳಬೇಕು ಅನ್ನುವ ಸನ್ನಡತೆಯೂ ಇದೆ. ಆದರೆ ಈಗ ನಮ್ಮ ಸದನಗಳ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂದರೆ ಸ್ಪೀಕರ್ ನಿಂತರೆ ಸದಸ್ಯರು ಡೆಸ್ಕ್ ಹತ್ತಿ ನಿಲ್ಲುವ ಮಟ್ಟಕ್ಕೆ ಬೆಳೆದಿದ್ದಾರೆ.
ವಿಪಕ್ಷಗಳಿಗೆ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಹಲವಾರು ಅಸ್ತ್ರಗಳಿವೆ. ಪ್ರಶ್ನಾವಳಿ, ಸದನ ಮುಂದೂಡುವಿಕೆ, ಅವಿಶ್ವಾಸ ಗೊತ್ತುವಳಿ..ಸದನದ ಎದುರುಗಡೆ ಬಾವಿ ಇದೆ ಅಲ್ಲಿಗೂ ಹಾರ ಬಹುದು..ಇಷ್ಟೆಲ್ಲಾ ದಾರಿಗಳಿರುವಾಗ ಸದನದ ಬಾವಿಯಲ್ಲಿ ನಿಂತು ಸ್ಪೀಕರ್ ಮುಖಕ್ಕೆ ಕಾಗದ ಹರಿದು ಬಿಸಾಡುವ ಶಾಸಕರನ್ನು ನಾವು ಆಯ್ಕೆ ಮಾಡಿಕಳಿಸುತ್ತೇವೆ ಅಂದರೆ ಇದು ನಿಜಕ್ಕೂ ಪ್ರಜಾಪ್ರಭುತ್ವದ ಅವನತಿ ಎಂದೇ ಪರಿಗಣಿಸ ಬೇಕಾಗುತ್ತದೆ.
ಒಬ್ಬ ರಾಜಕೀಯ ಶಾಸ್ತ್ರ ಓದಿದ ವಿದ್ಯಾರ್ಥಿಯಾಗಿ ನಮ್ಮೆಲ್ಲ ಜನಪ್ರತಿನಿಧಿಗಳಲ್ಲಿ ನಾನು ಕೇಳುವುದು ಇಷ್ಟೇ. ಒಂದು ಕ್ಲಾಸ್‌ನಲ್ಲಿ ವಿದ್ಯಾರ್ಥಿಗಳೇ ಶಿಕ್ಷಕನ ಮುಖಕ್ಕೆ ಪುಸ್ತಕ ಹರಿದು ಬಿಸಾಡಿದ್ದರೆ ಆ ಮೇಷ್ಟ್ರ ಪರಿಸ್ಥಿತಿ ಏನಾಗ ಬಹುದು?. ನೀವು ಒಬ್ಬ ಹೆತ್ತವರ ಸ್ಥಾನದಲ್ಲಿ ನಿಂತು ಯಾರನ್ನು ಬೆಂಬಲಿಸುತ್ತೀರಿ ಅನ್ನುವುದನ್ನು ಆತ್ಮ ವಿಮರ್ಶೆಮಾಡಿಕೊಳ್ಳಿ ಅಷ್ಟೇ ಸಾಕು. ನಿನ್ನೆ ವಿಧಾನ ಸಭೆಯಲ್ಲಿ ನಡೆದ ಕದನ ಅತ್ಯಂತ ಕಟು ಮಾತಿನಿಂದ ಅಸಂಸದೀಯ ಬೆಳವಣಿಗೆ ಎಂದೇ ಅಭಿಪ್ರಾಯಿಸ ಬೇಕಾಗಿದೆ.