ವಿಷಪ್ರಾಶನ: ಮುಂಬೈ ದಾಳಿ ಸಂಚಿನ ರೂವಾರಿ ಆಸ್ಪತ್ರೆಗೆ ದಾಖಲು
ಹೊಸದಿಲ್ಲಿ: ಪಾಕಿಸ್ತಾನದಲ್ಲಿ ಲಷ್ಕರ್-ಎ-ತೋಯ್ಬಾ ಕಾರ್ಯಕರ್ತರು ನಿಗೂಢವಾಗಿ ಹತ್ಯೆಯಾಗುತ್ತಿರುವ ನಡುವೆಯೇ ಮುಂಬೈ ದಾಳಿ ಸಂಚಿನ ರೂವಾರಿ ಹಾಗೂ ಎಲ್ಇಟಿ ಕಮಾಂಡರ್ ಸಜೀದ್ ಮೀರ್ ಆರೋಗ್ಯ ಹದಗೆಟ್ಟಿರುವ ಬಗ್ಗೆ ವರದಿಯಾಗಿದೆ.
ಕಳೆದ ಜೂನ್ ತಿಂಗಳಲ್ಲಿ ಭಯೋತ್ಪಾದಕ ನಿಗ್ರಹ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿದ ಬಳಿಕ ಮೀರ್, ಕೋತ್ ಲಖ್ ಪತ್ ಜೈಲಿನಲ್ಲಿದ್ದ ಆತನನ್ನು ದಿಢೀರನೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಪ್ರಾಶನಕ್ಕೆ ಒಳಗಾಗಿರುವ ಮೀರ್ ಇದೀಗ ವೆಂಟಿಲೇಟರ್ ನಲ್ಲಿರುವುದಾಗಿ ವರದಿಗಳು ಹೇಳಿವೆ. ಜೀವಬೆದರಿಕೆ ಹಿನ್ನೆಲೆಯಲ್ಲಿ ಈತನನ್ನು ದೇರಾ ಗಾಝಿ ಖಾನ್ ಕಾರಾಗೃಹಕ್ಕೆ ಸ್ಥಳಾಂತರಗೊಳಿಸಲಾಗಿದೆ ಎಂಬ ವರದಿಗಳ ಬೆನ್ನಲ್ಲೇ ಈ ವರದಿಗಳು ಹರಿದಾಡುತ್ತಿವೆ.
ಲಷ್ಕರ್ ಕಮಾಂಡರ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ವಿದೇಶಗಳ ಒತ್ತಡದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಸೇನಾ ಗುಪ್ತಚರ ಸಂಕೀರ್ಣ ಹೂಡಿದ ಉಪಾಯವಾಗಿರುವ ಸಾಧ್ಯತೆಯೂ ಇದೆ ಎಂಬ ವದಂತಿ ಕೂಡಾ ಹರಿದಾಡುತ್ತಿದೆ. ಭಯೋತ್ಪಾದಕ ಚಟುವಟಿಕೆಗಳಿಗೆ ನೆರವು ನೀಡಿದ ಆರೋಪದಲ್ಲಿ, ಪಾಕಿಸ್ತಾನದ ಮೇಲಿನ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗದ ಹಂತದಲ್ಲಿ ಈತನಿಗೆ ಎಂಟು ವರ್ಷಗಳ ಜೈಲು ಶಿಕ್ಷೆ ಮತ್ತು 4.2 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ.