ಮೈಸೂರು| ಮನೆಯಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಆನೆ ದಾಳಿ; ಚಿಕಿತ್ಸೆ ಫಲಿಸದೆ ಸಾವು

Update: 2024-08-27 12:31 GMT

ಮೈಸೂರು: ಮನೆಯಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಆನೆಯೊಂದು ದಾಳಿ ನಡೆಸಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕು ಡಿ.ಬಿ.ಕುಪ್ಪೆ ಗ್ರಾ.ಪಂ ವ್ಯಾಪ್ತಿಯ ಗೋಳೂರು ಹಾಡಿಯಲ್ಲಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದೆ.

ಗೋಳೂರು ಹಾಡಿಯ ತಮ್ಮ ನಿವಾಸದಲ್ಲಿ ಮಲಗಿದ್ದ ಕಾಳ (60) ಎಂಬವರ ಮನೆ ಮೇಲೆ ಮಂಗಳವಾರ ಬೆಳಗಿನ ಜಾವ 3.20 ಗಂಟೆ ಸಮಯದಲ್ಲಿ ಆನೆಯೊಂದು ಧಾಂದಲೆ ನಡೆಸಿ ಇವರ ಮೇಲೆ ದಾಳಿ ಮಾಡಿದೆ. ಮನೆಯಲ್ಲಿ ಮಲಗಿದ್ದ ಇತರರು ಓಡಿ ಹೋಗಿದ್ದಾರೆ. ಆದರೆ ವಯಸ್ಸಾಗಿದ್ದರಿಂದ ಕಾಳ ಎಂಬವರು ಅಲ್ಲಿಂದ ತೆರಳಲು ಸಾಧ್ಯವಾಗಲಿಲ್ಲ. ಇದರಿಂದ ಆನೆ ದಾಳಿಗೆ ಸಿಲಿಕಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತಾದರೂ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ 9.30 ಗಂಟೆ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪರಿಹಾರಕ್ಕೆ ಎ.ಐ.ಜೆ.ಎ.ಎಸ್.ಸಿ ಒತ್ತಾಯ:

ಇಂತಹ ಘಟನೆ ಈ ಭಾಗದಲ್ಲಿ ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಉಂಟುಮಾಡುತ್ತಿದೆ. ತಮ್ಮ ಜೀವ ಭಯದಲ್ಲಿ ಜನ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿಗೆ ಸಹ ಅರಣ್ಯ ಇಲಾಖೆ, ತಾಲೂಕು ಕಛೇರಿ ಹಾಗೂ ಗ್ರಾಮ ಪಂಚಾಯತಿ ಮೂಲಕ ಸರ್ಕಾರಕ್ಕೆ ಹಲವು ಬಾರಿ ಗಮನಕ್ಕೆ ತಂದರು ಸಹ ಸಮಸ್ಯೆ ಬಗೆಹರಿದಿಲ್ಲ, ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ತಡೆಗಟ್ಟಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಆದಿವಾಸಿ ಹಾಡಿಗಳ ಮೇಲೆ ಕಾಡು ಪ್ರಾಣಿಗಳ ದಾಳಿಯನ್ನು ತಡೆಗಟ್ಟಲು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು, ಮೃತರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಉದ್ಯೋಗ ಹಾಗೂ ಸೂಕ್ತ ಪರಿಹಾರವನ್ನು ಕೂಡಲೇ ಒದಗಿಸಬೇಕೆಂದು ಎಂದು ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿಯ ಸುನೀಲ್ ಟಿ.ಆರ್. ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News