ಸಂವಿಧಾನ ಬದಲಾವಣೆ ಬಿಜೆಪಿ ಡಿಎನ್ಎಯಲ್ಲೇ ಇದೆ: ರಣದೀಪ್ ಸಿಂಗ್ ಸುರ್ಜೇವಾಲ

Update: 2024-04-21 11:19 GMT

ಮೈಸೂರು: ಸಂವಿಧಾನ‌ ಬದಲಾವಣೆ ಬಿಜೆಪಿ ಡಿಎನ್ಎಯಲ್ಲಿಯೇ ಇದೆ. ಇದರ ಜೊತೆಗೆ ದಲಿತ, ರೈತ, ಮಹಿಳಾ ವಿರೋಧಿ ಡಿಎನ್ ಎ ಕೂಡ ಹೊಂದಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ದಲಿತ, ರೈತ, ಮಹಿಳಾ ವಿರೋಧಿಗಳು ಇವರ ಡಿಎನ್ಎ ನಲ್ಲಿ ಇದೆಲ್ಲವೂ ಇದೆ. 400 ಸೀಟು ಬರಬೇಕು ಎನ್ನುತ್ತಿರುವುದು ಸಂವಿಧಾನ ಬದಲಾವಣೆ ಮಾಡಲು ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಎಂದು ಇವರು ಹೇಳುವುದಾದರೆ ಇವರ ಪಕ್ಷದ ಅನಂತಕುಮಾರ್ ಹೆಗಡೆ ಹೇಳಿದಾಗ ಏಕೆ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲಿಲ್ಲ?. ಅರುಣ್ ಗೋಯಲ್ ಹೇಳಿದಾಗ ಯಾಕೆ ಅವರ ಮೇಲೆ ಕ್ರಮ‌ ಜರುಗಿಸಲಿಲ್ಲ? ಈಗ ಚುನಾವಣೆಗೆ ಸ್ಪರ್ಧೆ ಮಾಡಿರುವ ಲುಲ್ಲು ಸಿಂಗ್ ಯಾದವ್, ಜ್ಯೋತಿ ಮಿರ್ದಾ ಕೂಡ ಸಂವಿಧಾನ ಬದಲಾವಣೆ ಹೇಳಿಕೆ ಕೊಟ್ಟಿದ್ದಾರೆ. ಅವರನ್ನು ಚುನಾವಣೆಯಿಂದ ವಿತ್ ಡ್ರಾ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿ ಡಿಎನ್ಎ ಸಂವಿಧಾನ‌ ಬದಲಾವಣೆ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಈ ಹಿಂದೆ ಹೇಳಿಕೆ ನೀಡಿದ್ದಾರೆ. ಹಾಗಿದ್ದ ಮೆಲೆ ಇವರ ಉದ್ದೇಶ ಸಂವಿಧಾನ ಬದಲಾವಣೆ ಎಂಬುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷ ಸುಮ್ಮನೆ ಇವರ ಮೇಲೆ ಆರೋಪ ಮಾಡುತ್ತಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಮಹಿಳೆಯರಿಗೆ ನೀಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ-ಜೆಡಿಎಸ್ ವಿರೋಧಿಸುತ್ತಿದೆ.‌‌ ಇದು ಕೂಡ ಇವರ ಡಿಎನ್ಎಯಲ್ಲಿದೆ. ಗೃಹಲಕ್ಷ್ಮಿ ಯೋಜನೆಯಿಂದ 1.25 ಕೋಟಿ ಮಹಿಳೆಯರು ಅನುಕೂಲ ಪಡೆದುಕೊಳ್ಳುತ್ತಿದ್ದಾರೆ. ಗೃಹಜ್ಯೋತಿ, ಶಕ್ತಿ, ಯುವನಿಧಿ, ಅನ್ನಭಾಗ್ಯ ಯೋಜನೆಗಳನ್ನು ರಾಜ್ಯ ಬಿಜೆಪಿ ಅಧ್ಯಕ್ಣ ವಿಜಯೇಂದ್ರ, ಜೆಡಿಎಸ್ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿರೋಧಿಸುತ್ತಿದ್ದಾರೆ. ಇವರ ನಡವಳಿಕೆ ಮಹಿಳಾ ವಿರೋಧಿಯಲ್ಲದೆ ಇನ್ನೇನು ಎಂದು ಪ್ರಶ್ನಿಸಿದರು.

ಬಿಜೆಪಿಯವರು ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ರಾಜ್ಯದ ಬಡವರು, ಮಹಿಳೆಯರಿಗೆ ಮಾಡುತ್ತಿರುವ ಅನ್ಯಾಯ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರುಗಳ ರಕ್ತ ಇರೋವರೆಗೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದರು.

ರಾಜ್ಯದ ಬಡವರು ಮಹಿಳೆಯರ ಸಬಲೀಕರಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಕೇಂದ್ರದಲ್ಲಿ ಅಕ್ಕಿ ಇದ್ದರೂ ಅನ್ನ ಭಾಗ್ಯ ಅಕ್ಕಿ ಕೊಡಲು ಕೇಂದ್ರ ಸರ್ಕಾರ ನಿರಾಕರಿಸಿತು. ಆಗ ಯಾಕೆ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಲಿಲ್ಲ? ಇವರು ಏನೆ ಹೇಳಿದರು ಗ್ಯಾರಂಟಿ ಯೋಜನೆಗಳು ಐದು ವರ್ಷ ಮುಂದುವರೆಯುತ್ತವೆ ಎಂದು ಹೇಳಿದರು.

ರಾಜ್ಯದಲ್ಲಿ ಬರ ಉಂಟಾಗಿ ರೈತರು, ಬಡವರು ತತ್ತರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಿರುವ ಅನುದಾನವನ್ನು ನೀಡಲಿಲ್ಲ. 15 ನೇ ಹಣಕಾಸು ಯೋಜನೆ ಪ್ರಕಾರ ರಾಜ್ಯಕ್ಕೆ ಕೊಡಬೇಕಿರುವ ತೆರಿಗೆ ಪಾಲನ್ನು ಕೊಡಲಿಲ್ಲ. ಈ ಸಂಬಂಧ ಕೇರಳ, ತಮಿಳುನಾಡು ಸರ್ಕಾರ ಕೂಡ ಧನಿ ಎತ್ತಿವೆ. ಅಷ್ಟಾದರೂ ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ನಾವು ಕೇಳುತ್ತಿರುವುದು ಭಿಕ್ಷೆಯಲ್ಲ, ನಮ್ಮ ಹಕ್ಕು ಎಂದು ಹೇಳಿದರು.

ಜೂನ್ 4 ರ ನಂತರ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ, ಮೋದಿ‌ ಅಧಿಕಾರ ಅಂತ್ಯವಾಗಲಿದೆ. ಬಳಿಕ‌ ಕೇಂದ್ರದ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಮಹಾಲಕ್ಷಿ ಯೋಜನೆ ಮೂಲಕ 1 ಲಕ್ಷ ಕೊಡುತ್ತೇವೆ. ರಾಜ್ಯದ 2 ಸಾವಿರದ ಜೊತೆ ಕೇಂದ್ರದ 8 ಸಾವಿರ ಹಣ ಮಹಿಳೆಯರಿಗೆ ಸಿಗಲಿದೆ. ರಾಜ್ಯದ ಮಹಿಳೆಯರಿಗೆ ಡಬಲ್ ಧಮಾಕ ಸಿಗಲಿದೆ ಎಂದು ಸುರ್ಜೇವಾಲ ಹೇಳಿದರು.

ಚುನಾವಣೆ ಆಯೋಗಕ್ಕೆ ಆಯುಕ್ತರನ್ನು ನೇಮಕ ಮಾಡಲು ಸಮಿತಿ ಇದೆ‌. ಆದರೆ ಆ ಸಮಿತಿಯಲ್ಲಿ ಮೋದಿಯವರೆ ಇದ್ದಾರೆ. ಇವರು ಹೇಳಿದಂತೆ ಚುನಾವಣೆ ಆಯೋಗ ನಡೆದುಕೊಳ್ಳುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಸಚಿವ ಕೆ.ವೆಂಕಟೇಶ್, ಶಾಸಕ ಕೆ.ಹರೀಶ್ ಗೌಡ, ಮಾಜಿ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಿಜೆಪಿ ವಿರುದ್ಧ ಖಾಲಿ ಚೊಂಬು ಪ್ರದರ್ಶನ

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಚೊಂಬು ಕೊಟ್ಟಿದೆ. ನಾವು ವಾಪಸ್ ಖಾಲಿ ಚೊಂಬು ಕೊಡುತ್ತಿದ್ದೇವೆ ಎಂದು ಕಾಂಗ್ರೆಸ್ ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಖಾಲಿ ಚೊಂಬು ಪ್ರದರ್ಶಿಸಿದರು.

ಮೋದಿ ಮಾಡೆಲ್ ಅಂದರೆ ಚೊಂಬು, ಅವರಿಗೆ ರಾಜ್ಯದ ಜನರ ಹಿತ ಬೇಕಿಲ್ಲ, ಮತ ಮಾತ್ರ ಬೇಕು, ಅದಕ್ಕಾಗಿಯೇ ಅವರು ಇಲ್ಲಿವರೆಗೂ ಚೊಂಬು ಕೊಟ್ಟಿದ್ದಾರೆ. ನಾವು ಈಗ ವಾಪಸ್ ಖಾಲಿ ಚೊಂಬು ಕೊಡಬೇಕಿದೆ ಎಂದು ಹೇಳಿದರು.

ಬರಗಾಲದ ಪರಿಹಾರ ಕೊಡಲಿಲ್ಲ, ತರಿಗೆ ಬಾಕಿ ನೀಡಲಿಲ್ಲ, ರೈತರ ಹಣ ದುಪ್ಪಟ್ಟು ಮಾಡಲಿಲ್ಲ, ಯುವಕರಿಗೆ ಉದ್ಯೋಗ ಕೊಡಲಿಲ್ಲ, ಇದೆಲ್ಲವೂ ಮೋದಿ ಅವರ ಚೊಂಬು ಎಂದು ವ್ಯಂಗ್ಯವಾಡಿದರು.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News