ಕೇಂದ್ರ ಸರಕಾರದ ವಿರುದ್ಧ ಅನುದಾನ ಹಂಚಿಕೆ ತಾರತಮ್ಯದ ಆರೋಪ ನಿರಾಧಾರ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Update: 2024-03-24 14:55 GMT

ಮೈಸೂರು: ಕೇಂದ್ರ ಸರಕಾರದ ವಿರುದ್ಧ ಅನುದಾನ ಹಂಚಿಕೆ ತಾರತಮ್ಯದ ಆರೋಪ ನಿರಾಧಾರ. ಈ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಮೈಸೂರು ಚಿಂತಕರ ವೇದಿಕೆ ವತಿಯಿಂದ ರವಿವಾರ ಆಯೋಜಿಸಿದ್ದ ಅನೌಪಚಾರಿಕ ಸಂವಾದದಲ್ಲಿ ಮಾತನಾಡಿದ ಅವರು, "15ನೇ ಹಣಕಾಸು ಆಯೋಗ ಮತ್ತು ಕೇಂದ್ರ ಸರಕಾರದ ಕಾರ್ಯಕ್ರಮಗಳಿಂದ ದೊರೆತ ಅನುದಾನದ ಕುರಿತು ಕರ್ನಾಟಕ ಸರಕಾರ ಅಡಿಟ್‌ ರಿಪೋರ್ಟ್‌ ಸಲ್ಲಿಸಿದರೆ, ಕರ್ನಾಟಕಕ್ಕೆ ನೀಡಲಾಗಿರುವ ಅನುದಾನದ ಬಗ್ಗೆ ಕನ್ನಡದಲ್ಲಿಯೇ ವರದಿ ನೀಡುವುದಾಗಿ ಸವಾಲು ಹಾಕಿದರು. ಅನುದಾನ ಹಂಚಿಕೆ ಕುರಿತಂತೆ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ" ಎಂದು ಹೇಳಿದರು.

ಎನ್‌ಡಿಆರ್‌ಎಫ್‌ ಮೂಲಕ ಬರ ಪರಿಹಾರ ನೀಡದಿರುವ ಸಂಬಂಧ ರಾಜ್ಯ ಸರಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದಕ್ಕೆ ಪ್ರತಿಕ್ರಿಯಿಸುವುದಿಲ್ಲ. ಆದರೆ, ಈ ಬಗ್ಗೆ ಅಗತ್ಯ ದಾಖಲೆಗಳನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಹೇಳಿದರು.

ಗ್ಯಾರಂಟಿಗೆ ವಿರೋಧವಿಲ್ಲ: ಉಚಿತ ಕಾರ್ಯಕ್ರಮ ಅಥವಾ ಗ್ಯಾರಂಟಿ ಕಾರ್ಯಕ್ರಮಗಳನ್ನು ವಿರೋಧಿಸುವುದಿಲ್ಲ. ಅದಕ್ಕೆ ನಮ್ಮ ಆಕ್ಷೇಪಣೆಯೂ ಇಲ್ಲ. ಉಚಿತ ಕಾರ್ಯಕ್ರಮಗಳನ್ನು ಘೋಷಿಸುವ ಮುನ್ನ ಬಜೆಟ್‌ನಲ್ಲಿ ಖಾತರಿ ಇರಬೇಕು. ಬಜೆಟ್‌ನಲ್ಲಿ ಅನುದಾನ ಮೀಸಲಿಡದೇ ಮೋದಿ ಸರಕಾರ ಅನುದಾನ ಕೊಡುತ್ತಿಲ್ಲವೆಂದು ಟೀಕಿಸಿದರೆ ಏನು ಮಾಡುವುದು ಎಂದು ಪ್ರಶ್ನಿಸಿದರು.

ಹಿಂದೂ ಅನುಪಾತ ಏರಿಕೆ: 10 ವರ್ಷಗಳ ಮೋದಿಯವರ ಆಡಳಿತದಲ್ಲಿ ಹಿಂದೂ ಅನುಪಾತವೂ ಏರಿಕೆಯಾಗಿದೆ. ಈ ಬಗ್ಗೆ ನಾವು ಹೆಮ್ಮೆ ಹೊಂದಿರಬೇಕು. ಕೋವಿಡ್‌ನಂತಹ ಸಾಂಕ್ರಾಮಿಕ ರೋಗದ ಕಾಲದಲ್ಲಿಯೂ ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಲಾಗಿದೆ ಎಂದರು.

2047ರ ವೇಳೆಗೆ ಭಾರತ ಸ್ವತಂತ್ರಗೊಂಡು 100 ವರ್ಷ ಪೂರ್ಣಗೊಳ್ಳಲಿದೆ. ಸ್ವ ಆಡಳಿತಕ್ಕೂ ಶತಮಾನ ತುಂಬಲಿದೆ. ಸ್ವಾತಂತ್ರ್ಯದತ್ತ ನಮ್ಮ ಹೆಜ್ಜೆಯೂ ಅಭಿವೃದ್ಧಿ ಪೂರಕವಾಗಿದೆ. ಸೋಲಾರ್‌ ಕ್ಷೇತ್ರದಲ್ಲಿ ಕ್ರಾಂತಿಕಾರವಾಗಿ ಮುನ್ನಡೆಯುತ್ತಿದ್ದೇವೆ. ಈಗಾಗಲೇ ಬೆಂಗಳೂರಿನಲ್ಲಿ 6ಜಿ ಚಾಲನೆಯಲ್ಲಿದೆ ಎಂದರು.

ಸೋಲಾರ್‌ ಕ್ಷೇತ್ರದಲ್ಲಿ 14 ನ್ಯೂ ಸೆಕ್ಟರ್‌ ಬರುತ್ತಿವೆ. ಇ ವಾಹನಗಳ ಬಳಕೆ, ಸೆಮಿ ಕಂಡಕ್ಟರ್‌ ನಿರ್ಮಾಣ, ಮೊಬೈಲ್‌ ತಯಾರಿಕೆಯಲ್ಲಿ ಜಾಗತಿಕವಾಗಿ 2ನೇ ಸ್ಥಾನದಲ್ಲಿದ್ದೇವೆ. ಈ ಅಭಿವೃದ್ಧಿ ಕಾರ್ಯಗಳೆಲ್ಲ ಮುಂದುವರಿಯಬೇಕಾದರೆ ಮೋದಿಯವರಿಗೆ ಮತ್ತೊಂದು ಅವಕಾಶ ನೀಡಬೇಕು ಎಂದು ಕೋರಿದರು.

ಭಾರತದ ಆರ್ಥಿಕತೆ 3ನೇ ಸ್ಥಾನಕ್ಕೆ ತರುವ ಗುರಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮೂರನೇ ಬಾರಿಗೆ ಅವಕಾಶ ಕೊಟ್ಟರೆ ಭಾರತದ ಆರ್ಥಿಕತೆಯೂ ಜಾಗತಿಕವಾಗಿ 3ನೇ ಸ್ಥಾನಕ್ಕೆ ಬರಲಿದೆ. 2014ಕ್ಕೂ ಮೊದಲು ದೇಶದ ಆರ್ಥಿಕತೆ ಜಾಗತಿಕವಾಗಿ 10ನೇ ಸ್ಥಾನದಲ್ಲಿತ್ತು. ನಮ್ಮ ಸರಕಾರದ 10 ವರ್ಷಗಳ ಆಡಳಿತದಲ್ಲಿ 5ನೇ ಸ್ಥಾನಕ್ಕೆ ಬಂದಿದೆ. 2024ರಿಂದ 29ರವರೆಗೆ ಮೂರನೇ ಅವಧಿಗೆ ಅವಕಾಶ ನೀಡಿದರೆ ದೇಶದ ಆರ್ಥಿಕತೆಯೂ 3ನೇ ಸ್ಥಾನಕ್ಕೆ ಬರಲಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News