ಮೈಸೂರು | ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ ಸಾಬೀತು: ಆರೋಪಿಗೆ 30 ವರ್ಷ ಜೈಲು ಶಿಕ್ಷೆ
ಮೈಸೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 30 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮೈಸೂರು ನ್ಯಾಯಾಲಯ ತೀರ್ಪು ನೀಡಿದೆ ಎಂದು ವರದಿಯಾಗಿದೆ.
ಪರಮಾನಂದ(31) ಜೈಲು ಶಿಕ್ಷೆಗೆ ಗುರಿಯಾದ ಆರೋಪಿ ಎಂದು ತಿಳಿದು ಬಂದಿದೆ. ಧಾರವಾಡ ಜಿಲ್ಲೆ ನವಲಗುಂದ ಮೂಲದ ಆರೋಪಿ ಸಂತ್ರಸ್ಥ ಬಾಲಕಿಯ ಮಲತಂದೆಯಾಗಿದ್ದು, ಒಟ್ಟಿಗೆ ಮನೆಯಲ್ಲಿ ವಾಸವಿದ್ದಾಗ ಆರೋಪಿ ಪರಮಾನಂದ ಅಪ್ರಾಪ್ತ ಬಾಲಕಿಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬಾಲಕಿಗೆ ಬೆದರಿಕೆ ಹಾಕಿ ಹಾಗೂ ಆಕೆಯನ್ನು ಮದುವೆ ಮಾಡಿಕೊಳ್ಳಲು ಹಿಂಸೆ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಅಪ್ರಾಪ್ತ ಬಾಲಕಿಯ ತಾಯಿ ಕೆ.ಆರ್. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆಯನ್ನು ನಡೆಸಿದ ಕೆ.ಆರ್.ಪೊಲೀಸ್ ಠಾಣೆ ಪಿಐ ಮಹೇಶ್ ಆರೋಪಿಯ ವಿರುದ್ಧ ಪೊಕ್ಸೊ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ಪೊಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶೈಮಾ ಖಮೋಜ್ ಅವರು ಆರೋಪಿಯ ವಿರುದ್ಧ ಆರೋಪ ಸಾಬೀತಾಗಿದೆ ಎಂದು ತಿಳಿಸಿ ಆರೋಪಿಗೆ ಫೋಕ್ಸೋ ಕಾಯಿದೆ ಅಡಿಯಲ್ಲಿನ ಅಪರಾಧಗಳಿಗಾಗಿ ಒಟ್ಟು 30 ವರ್ಷಗಳ ಕಠಿಣ ಶಿಕ್ಷೆಯನ್ನು ಮತ್ತು ಒಂದು ಲಕ್ಷ ರೂ.ಗಳ ದಂಡವನ್ನು ವಿಧಿಸಿ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಬಿ. ಜಯಂತಿ ರವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.