ಬಿಜೆಪಿಯವರು ರಾಜಕೀಯ ಉದ್ದೇಶಕ್ಕಾಗಿ ನಮ್ಮಲ್ಲಿ ಒಳಜಗಳ ಇದೆ ಎನ್ನುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ
ಮೈಸೂರು : ನಮ್ಮಲ್ಲಿ ಯಾವುದೇ ಒಳಜಗಳವಿಲ್ಲ, ಹಾಗೇನಾದರೂ ಇದ್ದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಇಷ್ಟೊಂದು ಒಗ್ಗಟ್ಟಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿತ್ತೇ? . ಬಿಜೆಪಿಯವರು ರಾಜಕೀಯ ಉದ್ದೇಶಕ್ಕಾಗಿ ನಮ್ಮಲ್ಲಿ ಒಳಜಗಳ ಇದೆ ಎನ್ನುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದರು.
ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರ ನಾಮಪತ್ರ ಸಲ್ಲಿಕೆಗೆ ಮಂಗಳವಾರ ಮೈಸೂರಿಗೆ ಅಗಮಿಸಿದ ಸಿಎಂ ಸಿದ್ಧರಾಮಯ್ಯ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಮಹರಾಷ್ಟ್ರ ಮುಖ್ಯಮಂತ್ರಿ ಶಿಂಧೆ ಅವರು ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಬೀಳಲಿದೆ ಎಂದು ಹೇಳಿದ್ದಾರಲ್ಲ ಎಂಬ ಮಾಧ್ಯಮ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ,"ಒಂದು ವರ್ಷದಿಂದ ಇದೇ ರೀತಿ ಹೇಳುತ್ತಿದ್ದಾರೆ. ಮಹರಾಷ್ಟ್ರ ಸಿಎಂ ಶಿಂಧೆ ಮೊದಲು ಅವರ ಸರ್ಕಾರವನ್ನು ಉಳಿಸಿಕೊಂಡರೆ ಸಾಕಾಗಿದೆ. ಅವರು ಮಹರಾಷ್ಟ್ರ ಮುಖ್ಯಮಂತ್ರಿ ಅವರು ನಮ್ಮ ಸರ್ಕಾರದ ಬಗ್ಗೆ ಮಾತನಾಡುವುದು ಬಿಟ್ಟು ಅವರ ಸರ್ಕಾರ ಉಳಿಸಿಕೊಳ್ಳಲಿ" ಎಂದು ತಿರುಗೇಟು ನೀಡಿದರು.
ರಾಜ್ಯ ಸರ್ಕಾರದ ಭ್ರಷ್ಟಾಚಾರದ ಪೆನ್ ಡ್ರೈವ್ ನನ್ನ ಬಳಿ ಇದೆ. ಸರ್ಕಾರಕ್ಕೆ ತಾಕತ್ತಿದ್ದರೆ ತನಿಖೆ ನಡೆಸುವುದಾಗಿ ಹೇಳಲಿ, ಅದನ್ನು ಬಿಡುಗಡೆ ಮಾಡುತ್ತೀನಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ಧರಾಮಯ್ಯ, "ಕುಮಾರಸ್ವಾಮಿ ಅವರ ಹೇಳಿಕೆ ಹಿಟ್ ಅಂಡ್ ರನ್ ನಿಂದ ಕೂಡಿದೆ ಅವರ ಹೇಳಿಕೆಗೆಲ್ಲಾ ಉತ್ತರಕೊಡುವುದಿಲ್ಲ" ಎಂದು ಹೇಳಿದರು.
ವಿಧಾನಪರಿಷತ್ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ:
ಈ ಬಾರಿ ನಡೆಯುತ್ತಿರುವ ವಿಧಾನಪರಿಷತ್ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದು, ನಮಗೆ ಪೂರಕ ವಾತಾವರಣ ಇದೆ. ಆರು ತಿಂಗಳ ಮುಂಚೆಯೇ ನಾವು ಅಭ್ಯರ್ಥಿಗಳನ್ನು ನಿರ್ಧಾರ ಮಾಡಿರುವುದರಿಂದ ಅವರಿಗೆಲ್ಲಾ ಹೆಚ್ಚಿನ ಸಮಯ ಸಿಕ್ಕಿರುವುದರಿಂದ ಮತದಾರರನ್ನು ಭೇಟಿ ಮಾಡಲು ಅನುಕೂಲ ಆಯಿತು.
ವಿಧಾನಪರಿಷತ್ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಯಾವುದೇ ಪರಿಣಾಮ ಬೀರಲ್ಲ, ಲೋಕಸಭಾ ಚುನಾವಣೆಯಲ್ಲೇ ಬಿಜೆಪಿ-ಜೆಡಿಎಸ್ ಮೈತ್ರಿಯಾದರೂ ಏನು ಆಗಲಿಲ್ಲ, ಹಾಗಾಗಿ ಇದರ ಮೇಲೆ ಪರಿಣಾಮ ಬೀರಲ್ಲ ಎಂದು ಹೇಳಿದರು.