ಮೈಸೂರು| ಮಾಜಿ ಕಾರ್ಪೊರೇಟರ್‌ ಸಹೋದರನ ಹತ್ಯೆ ಪ್ರಕರಣ; ಮೂವರು ಪೊಲೀಸ್‌ ವಶಕ್ಕೆ

Update: 2024-03-09 16:12 GMT

ಅಕ್ಮಲ್‌ ಪಾಷ

ಮೈಸೂರು: ಮಾಜಿ ಕಾರ್ಪೋರೇಟರ್ ಅಯಾಝ್ ಪಾಷ (ಪಂಡು) ಸಹೋದರ ಮೌಲಾನಾ ಹಾಫಿಲ್‌ ಅಕ್ಮಲ್‌ ಪಾಷ ಅವರನ್ನು ಶುಕ್ರವಾರ ರಾತ್ರಿ ಭೀಕರ ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೈಸೂರು ನಗರ ಪೊಲೀಸ ಆಯುಕ್ತ ರಮೇಶ್ ಭಾನೋತ್ ತಿಳಿಸಿದ್ದಾರೆ.

ರಾಜೀವ್ ನಗರ ನಿಮ್ರಾ ಮಸೀದಿ ಬಳಿ ಇರುವ ಆರ್ಯ ಬೇಕರಿ ಮುಂಭಾಗ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಸ್ಕೂಟರ್ ನಲ್ಲಿ ತೆರಳುತ್ತಿದ್ದ ಅಕ್ಮಲ್ ರನ್ನು ದುಷ್ಕರ್ಮಿಗಳ ತಂಡ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಉದಯಗಿರಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, "ಕೊಲೆಯಾದ ಅಕ್ಮಲ್ ಪಾಷ ಮುಸ್ಲಿಂ ಧಾರ್ಮಿಕ ಗುರು ಆಗಿದ್ದಲ್ಲದೇ, ಒಬ್ಬ ಸಾಮಾಜಿಕ ಹೋರಾಟಗಾರರೂ ಆಗಿದ್ದರು. ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ಕಾರ್ಯಕರ್ತರೂ ಆಗಿದ್ದರು. ವಿಶೇಷವಾಗಿ ಸಮುದಾಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೆ ಅದರ ವಿರುದ್ಧ ದನಿ ಎತ್ತಿ, ಸಮಸ್ಯೆ ಬಗೆಹರಿಸುತ್ತಿದ್ದರು" ಎಂದು ಹೇಳಿದ್ದಾರೆ.

ಮಾರ್ಚ್ 6 ರಂದು ಮೈಸೂರಿಗೆ ಆಗಮಿಸಿದ್ದ ಕೆಎಂಡಿಸಿ ಅಧ್ಯಕ್ಷ ಬಿ.ಕೆ.ಅಲ್ತಾಫ್ ಖಾನ್ ಅವರಿಗೆ ಸ್ವಾಗತ ಕೋರಿ ಹಾಕಿದ್ದ ಬೃಹತ್ ಫ್ಲೆಕ್ಸ್ ಗಳ ಬಗ್ಗೆ ಅಕ್ಮಲ್ ಪಾಷ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದೇ ಅವರ ಕೊಲೆಗೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ.

ಅಕ್ಮಲ್ ಪಾಷ ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯ ಅಯಾಝ್ ಪಾಷ (ಪಂಡು) ಅವರ ಸಹೋದರರಾಗಿದ್ದು, ಎಸ್‍ಡಿಪಿಐ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು.

ಕಳೆದ ವರ್ಷ ಡಿ. 13 ರಂದು ಮೈಸೂರಿನಲ್ಲಿ ನಡೆದಿದ್ದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಆಗಮಿಸಿದ್ದ ಎಸ್‍ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಅವರಿಗೆ ಸ್ವಾಗತ ಕೋರಿ ಮೈಸೂರು ಶಾಂತಿನಗರದಲ್ಲಿ ಫ್ಲೆಕ್ಸ್ ಗಳನ್ನು ಹಾಕಲಾಗಿತ್ತು. ಆದರೆ, ಇಲ್ಲಿನ ಪಾಲಿಕೆ ಸದಸ್ಯ ಬಶೀರ್ ಅವರ ಒತ್ತಡದ ಮೇರೆಗೆ ಪಾಲಿಕೆ ಸಿಬ್ಬಂದಿಗಳು ಒಂದೇ ದಿನದಲ್ಲಿ ಎಲ್ಲಾ ಫ್ಲೆಕ್ಸ್ ಗಳನ್ನು ತೆಗೆದು ಹಾಕಿದ್ದರು ಎಂದು ಅಕ್ಮಲ್ ತಮ್ಮ ವೀಡಿಯೋದಲ್ಲಿ ಆರೋಪಿಸಿದ್ದರು. ಅದೇ ರೀತಿ 2024ರ ಮಾರ್ಚ್ 6 ರಂದು ಮೈಸೂರಿಗೆ ಆಗಮಿಸಿದ್ದ ಕೆಎಂಡಿಸಿ ಅಧ್ಯಕ್ಷ ಬಿ.ಕೆ. ಅಲ್ತಾಫ್ ಖಾನ್ ಅವರಿಗೆ ಸ್ವಾಗತ ಕೋರಿ ಪಾಲಿಕೆ ಸದಸ್ಯ ಬಶೀರ್ ಅವರು ಇದೇ ಶಾಂತಿನಗರ ಬಡಾವಣೆಯಲ್ಲಿ ಹಾಕಿದ್ದ ಬೃಹತ್ ಕಟೌಟ್‍ಗಳು ಮತ್ತು ಫ್ಲೆಕ್ಸ್ ಗಳ ಅನುಮತಿ ಪಡೆದಿರುವ ಅಕ್ಮಲ್ ಪಾಷಾ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ಈ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News