ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ಜಿ.ಪಂ, ತಾ.ಪಂ, ಬಿಬಿಎಂಪಿ ಚುನಾವಣೆ : ಸಿಎಂ ಸಿದ್ದರಾಮಯ್ಯ

Update: 2024-05-24 09:57 GMT

ಮೈಸೂರು : ಲೋಕಸಭಾ ಚುನಾವಣೆ ಫಲಿತಾಂಶದ ನಂತರ ತಾಲ್ಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ ಕೂಡ ನಡೆಸಲಾಗುವುದು. ಸರ್ಕಾರ ಚುನಾವಣೆ ನಡೆಸಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಮೈಸೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಯತೀಂದ್ರರನ್ನು ಎಂ.ಎಲ್.ಸಿ ಮಾಡುವುದಾಗಿ ಹೈಕಮಾಂಡ್ ಹೇಳಿದೆ:

ಈ ಬಾರಿ ಯತೀಂದ್ರ ಅವರನ್ನು ವಿಧಾನ ಪರಿಷತ್ ಸದಸ್ಯ ರನ್ನಾಗಿಸಲು ಒತ್ತಡವಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯತೀಂದ್ರ ಅವರನ್ನು ಎಂ.ಎಲ್.ಸಿ ಮಾಡುವುದಾಗಿ ಹೈಕಮಾಂಡ್ ನವರು ಹೇಳಿದ್ದರು. ಏನು ಮಾಡುತ್ತಾರೆ ಎಂದು ನನಗೆ ಗೊತ್ತಿಲ್ಲ. ಕಳೆದ ಬಾರಿ ವರುಣಾದಲ್ಲಿಯೇ ನಿಲ್ಲಬೇಕು ಎಂದು ತೀರ್ಮಾನವಾದಾಗ ಕ್ಷೇತ್ರ ಬಿಟ್ಟುಕೊಡಲು ಸೂಚಿಸಿದ್ದರು. ಈಗ ಏನು ಮಾಡುತ್ತಾರೆ ಎಂದು ತಿಳಿದಿಲ್ಲ ಎಂದರು.

ಪ್ರಕರಣ ದುರ್ಬಲಗೊಳಿಸಲು ಹೇಳಿಕೆ:

ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಆಡಿಯೋ ಇರುವುದರಿಂದ ಅವರನ್ನೇ ವಿಚಾರಣೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, "ಅವರ ಅಣ್ಣನ ಮಗ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ. ಅತ್ಯಾಚಾರದ ವಿಡಿಯೊ ಹರಿದಾಡಿತು ಎನ್ನುವುದಕ್ಕಿಂತ, ಅತ್ಯಾಚಾರ ಘೋರ ಅಪರಾಧ. ಅತ್ಯಾಚಾರದ ಸಂಗತಿಯನ್ನು ದುರ್ಬಲಗೊಳಿಸಲು ಡಿ.ಕೆ.ಶಿವಕುಮಾರ್ ಹಾಗೂ ಮತ್ತೊಬ್ಬರ ಮೇಲೆ ಹೇಳುತ್ತಿದ್ದಾರೆ. ಅವರು ಈ ನೆಲದ ಕಾನೂನಿಗೆ ಗೌರವ ಕೊಡಬೇಕು. ಅಣ್ಣನ ಮಗ ಅಪರಾಧಿಯಲ್ಲ ಆರೋಪಿ ಅಷ್ಟೇ ಎಂದಿದ್ದಾರೆ, ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಂತೆ ನಾನೂ ಕೂಡ ಆರೋಪಿ ಎಂದೇ ಹೇಳಿದ್ದೇನೆ" ಎಂದರು.

ಉತ್ತರ ಕೊಡುತ್ತಾರೆ ಎಂಬ ನಂಬಿಕೆ ಇದೆ:

ಚುನಾಯಿತ ಸರ್ಕಾರದ ಮುಖ್ಯಮಂತ್ರಿ ಪ್ರಧಾನಿಗಳಿಗೆ ಪತ್ರ ಬರೆದಾಗ ಸ್ವಾಭಾವಿಕವಾಗಿ ಉತ್ತರ ಕೊಡುತ್ತಾರೆ ಎಂಬ ನಂಬಿಕೆ ಇದೆ. ಪ್ರಜ್ವಲ್ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡಲು ಬರೆದ ಮೊದಲ ಪತ್ರಕ್ಕೆ ಉತ್ತರ ಕೊಟ್ಟಿಲ್ಲ. ಎರಡನೇ ಪತ್ರಕ್ಕೆ ಉತ್ತರ ಕೊಡುತ್ತಾರೆಯೇ ನೋಡೋಣ ಎಂದರು.

ಪ್ರಕರಣದ ಬಗ್ಗೆ ಗಮನ ಕೇಂದ್ರೀಕರಿಸಲು ಎಸ್.ಐ.ಟಿ ರಚನೆ

ಎಸ್.ಐ.ಟಿ ತನಿಖೆ ತಾತ್ವಿಕ ಅಂತ್ಯ ಪಡೆಯುವುದಿಲ್ಲ ಎಂದು ಎಚ್ ಡಿ ಕುಮಾರಸ್ವಾಮಿಯವರು ಹೇಳಿರುವ ಬಗ್ಗೆ ಮಾತನಾಡಿ, ʼನಮಗೆ ಎಸ್.ಐ.ಟಿ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಕುಮಾರಸ್ವಾಮಿ ಕಾಲದಲ್ಲಿ ಎಷ್ಟು ಪ್ರಕರಣಗಳನ್ನು ಎಸ್ .ಐ.ಟಿ ಗೆ ವಹಿಸಿದ್ದಾರೆ ಎನ್ನುವ ಬಗ್ಗೆ ನನಗೆ ತಿಳಿದಿಲ್ಲ. ಎಸ್.ಐ.ಟಿ ರಚನೆ ಮಾಡುವುದು ಪ್ರಕರಣದ ಬಗ್ಗೆ ಗಮನವನ್ನು ಕೇಂದ್ರೀಕರಿಸಲುʼ ಎಂದರು.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು ttps://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News