ಸಂಸತ್‌ ಭದ್ರತಾ ವೈಫಲ್ಯಕ್ಕೆ ಪ್ರತಾಪಸಿಂಹ ನೇರ ಹೊಣೆ: ಮಾಜಿ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ

Update: 2023-12-14 12:53 GMT

ಮೈಸೂರು: "ಲೋಕಸಭೆಯಲ್ಲಿ ನಡೆದ ಭಾರೀ ಭದ್ರತಾ ವೈಫಲ್ಯದ ಹೊಣೆಯನ್ನು ಸಂಸದ ಪ್ರತಾಪಸಿಂಹ ಹೊರಬೇಕು" ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಘಟನೆ ಸಂಬಂಧ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಪಾರ್ಲಿಮೆಂಟಿಗೆ ನುಗ್ಗಿದ ಇಬ್ಬರು ಯುವಕರು ಪ್ರತಾಪಸಿಂಹ ಪರಿಚಯಸ್ಥರು, ಅವರ ಉದ್ದೇಶ ಏನಿತ್ತು? ಹುನ್ನಾರ ಇದೆಯೇ? ಕೂಲಂಕಷವಾಗಿ ತನಿಖೆ ಮಾಡಬೇಕು. ಇದು ಸಾಮಾನ್ಯ ವಿಷಯವಲ್ಲʼ ಎಂದು ತಿಳಿಸಿದರು.

ʼಬೇರೆ ಪಕ್ಷದವರು ಈ ತಪ್ಪು ಮಾಡಿದ್ದರೆ ಇಷ್ಟರಲ್ಲಿ ಭಯೋತ್ಪಾದಕ ಪಟ್ಟ ಕಟ್ಟುತ್ತಿದ್ದರು. ಪ್ರತಾಪಸಿಂಹ ಬಿಜೆಪಿ ಸಂಸದನಾದ ಕಾರಣಕ್ಕೆ ಕ್ರಮ ತೆಗೆದುಕೊಳ್ಳದೇ ರಕ್ಷಿಸುತ್ತಿದ್ದಾರೆ. ಈ ಪ್ರಕರಣದ ಸಂಬಂಧ ತನಿಖೆ ಮಾಡಬೇಕು. ಅಲ್ಲಿಯವರೆಗೆ ಸಂಸತ್ತಿನಿಂದ ಹೊರಗಿಡಬೇಕುʼ ಎಂದು ಒತ್ತಾಯಿಸಿದರು.

ಪಾರ್ಲಿಮೆಂಟ್‌, ತುಂಬಾ ಬಿಗಿಯಾದ ಭದ್ರತೆ ಇರುತ್ತದೆ. ಭದ್ರತಾ ಸಿಬ್ಬಂದಿ ಸಮರ್ಪಕವಾಗಿ ಕೆಲಸ ಮಾಡಿಲ್ಲ. ಸಣ್ಣ ಪುಟ್ಟ ಕಾರಣಗಳಿಗೆ ಸಂಸದರನ್ನು ಅಮಾನತು ಮಾಡುವ ಕೇಂದ್ರದ ಎನ್‌ಡಿಎ ಸರ್ಕಾರ, ಇಷ್ಟು ಗಂಭೀರವಾದ ತಪ್ಪು ಮಾಡಿದ್ದರೂ ಯಾಕೇ ರಕ್ಷಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದೇಶದ ಗಡಿ ಸುಭದ್ರವಾಗಿದೆ ಎಂಬುದೆಲ್ಲಾ ಸುಳ್ಳು. ಹಾಗೆಂದು ಬಿಜೆಪಿಯವರು ಪ್ರಚಾರ ಮಾಡುತ್ತಿದ್ದಾರೆ. ಚೀನಾದವರು ದೇಶದ ಸ್ಥಳವನ್ನು ಆಕ್ರಮಿಸಿಕೊಂಡರು ಸುಮ್ಮನಿದ್ದಾರೆ. ದೇಶ ಸುರಕ್ಷಿತವಾಗಿದೆ ಎಂದು ಸುಳ್ಳು ಹೇಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಯತೀಂದ್ರ ಸಿದ್ದರಾಮಯ್ಯ ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News