ಮುಡಾ ಹಗರಣದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಸಮಪಾಲು ಇದೆ : ಎಚ್.ವಿಶ್ವನಾಥ್

Update: 2024-08-05 16:01 GMT

ಮೈಸೂರು : ಮುಡಾ ಹಗರಣದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸಹಿತ ಮೂರೂ ಪಕ್ಷಗಳ ಸಮಪಾಲು ಇದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼಮೂರು ಪಕ್ಷಗಳ ನಾಯಕರಿಗೆ ರಾಜ್ಯದ ಹಿತಾಸಕ್ತಿ ಮುಖ್ಯವಾಗಿಲ್ಲ. ಅವರಿಗೆ ಅವರ ಮಕ್ಕಳ ಹಿತಾಸಕ್ತಿ ಕಾಪಾಡುವುದು ಮಾತ್ರ ಮುಖ್ಯವಾಗಿದೆ. ಎಚ್.ಡಿ.ಕುಮಾರಸ್ವಾಮಿಗೆ ತಮ್ಮ ಮಗ ನಿಖಿಲ್‌ನನ್ನು ಮುಂದೆ ತರಬೇಕು, ಯಡಿಯೂರಪ್ಪಗೆ ಮಕ್ಕಳಾದ ವಿಜಯೇಂದ್ರ, ರಾಘವೇಂದ್ರ ಅವರನ್ನು ರಾಜ್ಯದ ನಾಯಕರನ್ನಾಗಿ ರೂಪಿಸಬೇಕು. ಹಾಗೆಯೇ ಸಿದ್ದರಾಮಯ್ಯಗೆ ಮಗ ಯತೀಂದ್ರನನ್ನು ಮುಂದೆ ತರಬೇಕು ಎಂದು ಪಣತೊಟ್ಟಿದ್ದಾರೆ. ಇವರಿಗೆ ರಾಜ್ಯದ ಜನರ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ. ಇವರಿಗೆ ಕೌಟುಂಬಿಕ ಹಿತಾಸಕ್ತಿಯೇ ಮುಖ್ಯವಾಗಿದೆʼ ಎಂದು ಟೀಕಿಸಿದರು.

ಮಳೆ, ಪ್ರವಾಹ, ನಿರುದ್ಯೋಗ ಸೇರಿದಂತೆ ನಾಡಿನ ಜನರು ಕಷ್ಟದಲ್ಲಿದ್ದಾರೆ. ಇವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡದ ರಾಜಕಾರಣಿಗಳು, ಕೇವಲ ಒಬ್ಬರ ಮೇಲೊಬ್ಬರು ಕೆಸರೆರಚಾಟ ಮಾಡಿಕೊಂಡು ರಾಜ್ಯದ ಜನರ ಮುಂದೆ ಬೆತ್ತಲಾಗಿದ್ದಾರೆ. ಇವರ ಬೇಳೆ ಬೇಯಿಸಿಕೊಳ್ಳಲು ಈಗ ಎರಡು ಪಾದಯಾತ್ರೆಗಳು ನಡೆಯುತ್ತಿವೆ. ಯಾವ ಪುರುಷಾರ್ಥಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಇವರ ಮಾತಿನ ಪ್ರಯೋಗಗಳು ಅಸಹ್ಯ ಹುಟ್ಟಿಸುತ್ತಿವೆ ಎಂದರು.

ಮೂರೂ ಬಿಟ್ಟವರು: ವಾಸ್ತವದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನವರು ಮೂರೂ ಬಿಟ್ಟವರಂತೆ ವರ್ತಿಸುತ್ತಿದ್ದಾರೆ. ಕನ್ನಡ ಭಾಷೆಯ ಅತ್ಯಾಚಾರ ಆಗ್ತಾ ಇದೆ. ಜನರ ಬಳಿ ಇವರು ಬೆತ್ತಲಾಗುತ್ತಿದ್ದಾರೆ ಎಂದು ಮೂರೂ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

14 ಸೈಟು ವಾಪಸ್ ಕೊಟ್ಟುಬಿಡಿ : ಸಿದ್ದರಾಮಯ್ಯ ಅವರೇ ನಿಮಗೆ ಬಂದಿರುವ 14 ನಿವೇಶನ ವಾಪಸ್ ಕೊಡಿ. ಆಗ ನಿಮ್ಮ ಘನತೆ ಹೆಚ್ಚುತ್ತೆ, ನೀವೊಬ್ಬ ಸಮಾಜವಾದಿ ಅನ್ನುವುದಕ್ಕೆ ಅರ್ಥ ಬರುತ್ತದೆ ಎಂದು ಸಿಎಂ ಸಿದ್ದರಾಮಯ್ಯಗೆ ವಿಶ್ವನಾಥ್ ಸಲಹೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News