ನನಗೆ ಟಿಕೆಟ್ ಸಿಕ್ಕಿದ್ದರೆ ಎರಡರಿಂದ ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಿದ್ದೆ: ಸಂಸದ ಪ್ರತಾಪ್ ಸಿಂಹ
ಮೈಸೂರು: ಯದುವೀರ್ ಅವರಿಗೆ ಟಿಕೆಟ್ ಕೊಟ್ಟರು ಎಂಬ ಸಂತೋಷಕ್ಕಿಂತ ಪ್ರತಾಪ ಸಿಂಹನಿಗೆ ಟಿಕೆಟ್ ಸಿಗಲಿಲ್ಲವಲ್ಲ ಎಂದು ಜನ ಸಂಕಟ ಪಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಯದುವೀರ್ ಗೆಲ್ಲುತ್ತಾರೆ. ನನಗೆ ಟಿಕೆಟ್ ಸಿಕ್ಕಿದ್ದರೆ ಎರಡರಿಂದ ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಿದ್ದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದ ಕೆ.ಆರ್.ಕ್ಷೇತ್ರದ ವಿವಿಧ ವಾಡ್೯ಗಳಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜೊತೆ ಮಂಗಳವಾರ ಪ್ರಚಾರದಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಯದುವೀರ್ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿರುವ ಖುಷಿಗಿಂತ ಕಾರ್ಯಕರ್ತರು, ಜನರು ಪ್ರತಾಪ ಸಿಂಹನಿಗೆ ಟಿಕೆಟ್ ಸಿಗಲಿಲ್ಲವಲ್ಲ ಎಂದು ಸಂಕಟ ಪಡುತ್ತಿದ್ದಾರೆ. ಹಾಗಾಗಿ ನಾನು ಜೊತೆಯಲ್ಲಿ ಪ್ರಚಾರಕ್ಕೆ ತೆರಳಿ ದೇಶಕ್ಕೆ ಮೋದಿ ಬೇಕು ಎಂದು ಯದುವೀರ್ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.
ʼಯಾವ ರಾಜ ರೀʼ ಎಂಬ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ ಸಿಂಹ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿರುವುದರಲ್ಲಿ ತಪ್ಪೇನಿದೆ? ಸ್ವಾತಂತ್ರ್ಯ ಬಂದ ನಂತರ 1950 ರಲ್ಲಿ ಸಂವಿಧಾನ ಜಾರಿಯಾದ ಮೇಲೆ ರಾಜ-ಮಹರಾಜ ಎಂಬುದಿಲ್ಲ, ಇದರಲ್ಲಿ ಹುಳುಕು ಹುಡುಕುವುದು ತಪ್ಪು. ಯದುವೀರ್ ಬಿಜೆಪಿ ಅಭ್ಯರ್ಥಿ ಅಷ್ಟೆ. ನಾನು ಈ ಹಿಂದೆ ಅವರು ಪ್ರಜಾ ಪ್ರತಿನಿಧಿಯಾಗಿರಬೇಕಿರುತ್ತದೆ ಎಂದು ಹೇಳಿದ್ದೆ. ಯದುವೀರ್ ಪ್ರಜಾಪ್ರತಿನಿಧಿಯಾಗಲು ಬಂದಿದ್ದಾರೆ. ಅವರು ಈಗ ಬಿಜೆಪಿ ಅಭ್ಯರ್ಥಿ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹೇಳಿಕೆ ಹುಳುಕು ಅನ್ನಿಸುತ್ತಿಲ್ಲ, ಅವರು ಹೇಳಿರುವುದರಲ್ಲಿ ತಪ್ಪಿಲ್ಲ, ದೇಶದಲ್ಲಿ ರಾಜಾಡಳಿತ ಇಲ್ಲ, ನವರಾತ್ರಿ ಸಂದರ್ಭದಲ್ಲಿ ಖಾಸಗಿ ದರ್ಬಾರ್ ನಡೆಸುವಾಗ ವಿಧಿ ವಿಧಾನಗಳಿಗೆ ಸೀಮಿತವಾಗಿರುತ್ತಾರೆ ಎಂದು ಹೇಳಿದರು.
ಸಿಎಂ ಸಿದ್ಧರಾಮಯ್ಯ ಅವರನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತೇನೆ. ಅವರಿಗೂ ನನಗೂ ಬಹಳಷ್ಟು ವಿರೋಧಗಳು ಇದೆ. ಮೈಸೂರಿನ ಜನ ಯದುವೀರ್ ಅವರನ್ನು ಮಹರಾಜ ಅಂತ ಕರೆಯುತ್ತಾರ? ಅಥವಾ ಬಿಜೆಪಿ ಅಭ್ಯರ್ಥಿ ಅಂಥ ಕರೆಯುತ್ತಾರ? ಮಹರಾಜ ಅರಮನೆಗೆ ಸೀಮಿತವಾಗಿರದೆ ಜನಪ್ರತಿನಿಧಿಯಾಗಲು ಬಂದಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಜೆಪಿ ಅಭ್ಯರ್ಥಿ ಎಂದು ಕರೆದಿರುವುದರಲ್ಲಿ ತಪ್ಪಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ನಲ್ಲಿ ಈಗ ಕೇಳಿಬರುತ್ತಿರುವ ಹೆಸರು ಫೈನಲ್ ಆದರೆ, ಪ್ರಚಾರಕ್ಕೆ ಹೋಗುವುದೇ ಬೇಡ, ಯದುವೀರ್ ಒಳ್ಳೆ ಅಂತರದಿಂದಲೇ ಗೆಲ್ಲುತ್ತಾರೆ. ನಾನು ಚುನಾವಣೆಗೆ ನಿಂತಿದ್ದರೆ ಎರಡರಿಂದ ಮೂರು ಲಕ್ಷ ಮತಗಳಿಂದ ಗೆಲ್ಲುತ್ತಿದ್ದೆ. ಯದುವೀರ್ ಗೆಲ್ಲುತ್ತಾರೆ, ಎಷ್ಟು ಅಂತರ ಎಂದು ಹೇಳುವುದಿಲ್ಲ ಎಂದರು.
ರಾಜ್ಯ ರಾಜಕಾರಣಕ್ಕೆ ಪ್ರತಾಪ್ ಸಿಂಹ ಅವರು ಬರುತ್ತಾರ?, ನಿಮಗೇನಾದರು ಸ್ಥಾನಮಾನ ಸಿಗುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ ಸಿಂಹ, ನನಗೆ ಯಾವುದೇ ಸ್ಥಾನ ಮಾನ ಕೊಡುವುದಕ್ಕಿಂತ ಜನ ನನಗೆ ಅವರ ಮನಸ್ಸನಲ್ಲಿ ಕೊಟ್ಟಿರುವ ಸ್ಥಾನಮಾನವೇ ದೊಡ್ಡದು ಎಂದು ಹೇಳಿದರು.