ದಲಿತರು ಒಳಮೀಸಲಾತಿ ಜಾರಿಯಾದರೆ ಒಡಕುಂಟಾಗುತ್ತದೆ ಎಂಬ ಆತಂಕ ಬಿಟ್ಟು ತಮ್ಮ ಪಾಲನ್ನು ಹೆಚ್ಚಿಸಿಕೊಳ್ಳಲು ಹೋರಾಟ ಮಾಡಬೇಕು: ಚಿಂತಕ ಶಿವಸುಂದರ್

Update: 2024-09-16 17:51 GMT

ಮೈಸೂರು: ಒಳಮೀಸಲಾತಿ ಜಾರಿಯಾದರೆ ದಲಿತರಲ್ಲಿ ಒಡಕುಂಟಾಗುತ್ತದೆ ಎಂಬ ಆತಂಕವನ್ನು ಬಿಟ್ಟು, ತಮ್ಮ ಪಾಲನ್ನು ಹೆಚ್ಚಳ ಮಾಡಿಕೊಳ್ಳುವ ನಿಟ್ಟಿಲ್ಲಿ ದಲಿತರು ಹೋರಾಟ ಮಾಡಬೇಕು ಎಂದು ಚಿಂತಕ ಶಿವಸುಂದರ್ ಅಭಪ್ರಾಯಪಟ್ಟರು.

ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಸೋಮವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು 'ಮೇಲು-ಕೀಳುಅಪರಾಧ' ಕುರಿತು ಭಾಷಣ ಮಾಡಿದ ದಿನದ ಅಂಗವಾಗಿ "ಮೀಸಲಾತಿಯ ಒಳನೋಟ" ಕುರಿತ ವಿಚಾರ ಸಂಕಿರಣದಲ್ಲಿ ವಿಷಯ ಮಂಡನೆ ಮಾಡಿ ಅವರು ಮಾತನಾಡಿದರು.

ಸುಪ್ರೀಂ‌ಕೋಟ್೯ ಆದೇಶದಂತೆ ಆಳುವ ಸರ್ಕಾರಗಳು ಒಳ ಮೀಸಲಾತಿ ಜಾರಿ ಮಾಡಬೇಕು.ಒಳ ಮೀಸಲು ಜಾರಿಗೊಳಿಸಲು ಯಾವುದೇ ಸಾಂವಿಧಾನಿಕ ತೊಡಕಿಲ್ಲ, ಎಲ್ಲಾ ರಾಜಕೀಯ ಪಕ್ಷಗಳು ಸರ್ಕಾರ ಮೀನಾ ಮೇಷ ಎಣಿಸದೆ ನಾಟಕ ಆಡುವುದನ್ನು ಬಿಟ್ಟು ಒಳಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಒಳಮೀಸಲಾತಿ ಜಾರಿಯಾದರೆ ನಮ್ಮಲ್ಲೇ ಒಡಕುಂಟಾಗಲಿದೆ ಎಂಬ ಆತಂಕ ನಿಮ್ಮಲ್ಲಿದೆ. ನಿಮ್ಮಲ್ಲೇ ಅನ್ಯಾಯವಾಗಿರುವವರಿಗೆ ನ್ಯಾಯ ಒದಗಿಸುವ ಕೆಲಸವನ್ನು ನೀವೆ ಮಾಡಿದರೆ ನಿಮ್ಮಲ್ಲಿ ಇನ್ನಷ್ಟು ಒಗ್ಗಟ್ಟು ಹೆಚ್ಚಾಗಲಿದೆ. ಸರ್ಕಾರ ತಮ್ಮ ಪಾಲನ್ನು ಕೊಡದೆ ನಮ್ಮಲ್ಲೇ ಜಗಳ ಹಚ್ಚಲು ಪ್ರಯತ್ನಿಸುತ್ತಿವೆ. ಆದರೆ ನಾವುಗಳು ಒಗ್ಗಟ್ಟಾಗಿ ನಮ್ಮ ಪಾಲನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು.

ಒಳಮೀಸಲಾತಿ ಜಾರಿ ಮಾಡಲು ಮನಸ್ಸಿಲ್ಲದ ಪಕ್ಷಗಳು ಮತ್ತು ಸರ್ಕಾರ ಇನ್ನಿಲ್ಲದ ಸಬೂಬುಗಳನ್ನು ಹೇಳುತ್ತಿವೆ.‌ಕೆನೆಪದರ ವಿಚಾರ ಮುಂದಿಟ್ಟುಕೊಂಡು ಒಳಮೀಸಲಾತಿ ಜಾರಿಗೆ ಆಕ್ಷೇಪ ವ್ಯಕ್ತಪಡಿಸುತ್ತಿವೆ. ದಲಿತರಲ್ಲಿ ಅನ್ಯಾಯಕ್ಕೊಳಗಾದವರಿಗೆ ಮೀಸಲಾತಿಯ ಅಗತ್ಯವಿದೆ.‌ ಅದನ್ನು ಪ್ರಮಾಣಿಕವಾಗಿ ಸರ್ಕಾರಗಳು ಮಾಡಬೇಕಿದೆ ಎಂದು ಹೇಳಿದರು.

ಒಳಮೀಸಲಾತಿ ಜಾರಿಯಾಗಬೇಕಾದರೆ ಅನ್ಯಾಯಕ್ಕೊಳಗಾಗಿದ್ದಾರೆ ಎಂಬುದನ್ನು ತಿಳಿಯಲು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡುವಂತೆ ಸುಪ್ರೀಂ‌ಕೋಟ್೯ ಹೇಳಿದೆ. ಅದರಂತೆ ಆಯಾ ರಾಜ್ಯಗಳು ಸಮೀಕ್ಷಾ ವರದಿಯನ್ನು ಸಿದ್ಧಪಡಿಸಿ ಸುಪ್ರೀಂ ಕೋಟ್೯ಗೆ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು.

ಒಳಮೀಸಲಾತಿ ವಿಚಾರದಲ್ಲಿ ಎನ್.ಡಿ.ಎ ಮೈತ್ರಿಕೂಟದಲ್ಲೇ ಭಿನ್ನ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದಕ್ಕೆ ಕಾಂಗ್ರೆಸ್ ಪಕ್ಷ ಏನು ಹೊರತಾಗಿಲ್ಲ, ಕರ್ನಾಟಕದಲ್ಲಿ ದಲಿತರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಕೂಡ ಒಳ ಮೀಸಲು ಜಾರಿ ಮಾಡಲು ಮೀನಾಮೇಷ ಎಣಿಸುತ್ತಿದೆ. ಇವರಿಗೆ ನಿಜವಾಗಿ ದಲಿತರ ಮೇಲೆ ಕಾಳಜಿ ಇದ್ದರೆ ಒಳ‌ಮೀಸಲಾತಿ ಜಾರಿ ಮಾಡಲು ಮುಂದಾಗಬೇಕು ಎಂದರು.

ಒಳಮೀಸಲಾತಿ ಜಾರಿ ಮಾಡಿದರೆ ನಮ್ಮ ಪಾಲು ಕಡಿಮೆಯಾಗಲಿದೆ ಎಂಬ ಆತಂಕ ದಲಿತರಲ್ಲೇ ಇದೆ. ಆದರೆ ನಿಮ್ಮ ಪಾಲನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ನಿಮ್ಮ ಹೋರಾಟವನ್ನು ಮುಂದುವರೆಸಬೇಕು. ಮೀಸಲಾತಿಯಲ್ಲಿ 50% ಮೇಲ್ಮಿತಿಯನ್ನು ರದ್ದುಗೊಳಿಸವಂತೆ ಒತ್ತಾಯಿಸಬೇಕು.‌ಯಾವ ಸಂವಿಧಾನದಲ್ಲಿ 50% ಮೇಲ್ಮಿತಿ ಹಾಕಬೇಕು ಎಂಬ ಅಂಶವಿದೆ ಎಂದು ಪ್ರಶ್ನಿಸಿದರು.

ಜನಸಂಖ್ಯಾವಾರು ಎಷ್ಟು ಜನಸಂಖ್ಯೆ ಹೆಚ್ಚಳವಾಗುತ್ತಿದೆ ಅದರ ಪಾಲನ್ನು ಹೆಚ್ಚಿಗೆ ಕೊಡುವಂತೆ ಕೇಳಬೇಕು, ಖಾಸಗೀಕರಣ ರದ್ದುಮಾಡಬೇಕು, ಉದ್ಯೋಗಗಳ ಸಂಖ್ಯೆ ಹೆಚ್ಚಳ ಮಾಡಿ, ಬ್ಯಾಕ್ ಲಾಗ್ ಭರ್ತಿ ಮಾಡಬೇಕು, ಸರ್ಕಾರಿ ಶಾಲೆ, ಉದ್ಯೋಗಗಳನ್ನು ಜಾಸ್ತಿ ಮಾಡಿದರೆ ಸಮಾಜಿಕ ನ್ಯಾಯ ಸಿಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಬುದ್ಧ ದಮ್ಮ ಸಮಿತಿ ಕಾರ್ಯದರ್ಶಿ ಆರ್.ಮಹದೇವಪ್ಪ, ವಿಚಾರವಾದಿ ಡಾ.ಕೃಷ್ಣಮೂರ್ತಿ ಚಮರಂ, ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕಿರಂಗೂರು ಸ್ವಾಮಿ ಉಪಸ್ಥಿತರಿದ್ದರು.

ಜಾತಿ ವಿನಾಶಕ್ಕಾಗಿ ಹೋರಾಟ ಮಾಡಬೇಕಾದ ಮಠಗಳು ಇಂದು ತಮ್ಮ ಜಾತಿಗಳನ್ನು ಪ್ರಬಲವಾಗಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ದುರದೃಷ್ಟಕರ. ಸರ್ಕಾರ ಕೂಡ ಅಂತಹ ಮಠಗಳಿಗೆ ಹೆಚ್ಚಿನ ಅನುದಾನ‌ಕೊಡುವುದಲ್ಲದೇ ನೂರಾರು ಎಕರೆ ಭೂಮಿಯನ್ನು ನೀಡುತ್ತಿರುವುದು ವಿಷಾದನೀಯ.

-ಆರ್.ಮಹದೇವಪ್ಪ,

ಕಾರ್ಯದರ್ಶಿ, ಕರ್ನಾಟಕ ಬುದ್ಧ ದಮ್ಮ ಸಮಿತಿ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News