ಸ್ವಾಮೀಜಿಗಳು ಯಾವ ವಿಚಾರ ಎಲ್ಲಿ ಮಾತನಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು : ಕೃಷ್ಣ ಭೈರೇಗೌಡ

Update: 2024-07-02 11:41 GMT

ಮೈಸೂರು : ಸ್ವಾಮೀಜಿಗಳು ಯಾವ ವಿಚಾರವನ್ನು ಎಲ್ಲಿ ಮಾತನಾಡಬೇಕು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬದಲಾವಣೆ ಕುರಿತ ಹೇಳಿಕೆ ನೀಡಿದ್ದ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಕಂದಾಯ ಸಚಿವ ಕೃಷ್ಣಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಮೈಸೂರು ವಿಭಾಗ ಮಟ್ಟದ ಕಂದಾಯ ಇಲಾಖೆ ಅಧಿಕಾರಿಗಳ ಪ್ರಗತಿಪರಿಶೀಲನಾ ಸಭೆಗೆ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸ್ವಾಮೀಜಿಗಳು ಯಾವ ವಿಚಾರವನ್ನು ಎಲ್ಲಿ ಮಾತಾಡಬೇಕು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಲಿ. ಸರಕಾರಿ ಸಮಾರಂಭಕ್ಕೆ ಬಂದು ರಾಜಕೀಯ ವಿಚಾರ ಮಾತಾಡಿದರೆ ಹೇಗೆ?. ಸ್ವಾಮೀಜಿ ತಮ್ಮ ಮಠದಲ್ಲಿ ಆ ವಿಚಾರ ಮಾತಾಡಲಿ. ತಮ್ಮ ಭಕ್ತರ ಮುಂದೆ ಅದನ್ನು ಹೇಳಲಿ. ಯಾರಿಗೆ ಯಾವ ವಿಚಾರ ಎಲ್ಲಿ ಮಾತಾಡಬೇಕು ಎಂದು ಹೇಳುವ ಸ್ಥಿತಿ ಬಂದಿದ್ದೇ ಬೇಸರದ ವಿಚಾರ" ಎಂದು ಹೇಳಿದರು.

ಡಿಸಿಎಂ ವಿಚಾರಕ್ಕೆ ಪರೋಕ್ಷವಾಗಿ ಸಚಿವ ರಾಜಣ್ಣ ವಿರುದ್ದ ಅಸಮಾಧಾನ ಹೊರ ಹಾಕಿದ ಸಚಿವ ಕೃಷ್ಣ ಭೈರೇಗೌಡ ಅವರು, "ಯಾರಿಗಾದರೂ ಯಾವುದಾದರೂ ಸ್ಥಾನಮಾನ ಬೇಕಿದ್ದರೆ ಅದನ್ನು ಪಕ್ಷದ ವರಿಷ್ಠರ ಬಳಿ ಕೇಳಬೇಕು. ಮಾಧ್ಯಮದವರ ಮುಂದೆ ತಮ್ಮ ಆಸೆ ಹೇಳಿಕೊಂಡರೆ ಏನೂ ಪ್ರಯೋಜನ?. ನಿಮ್ಮ‌ ಮುಂದೆ ಹೇಳಿಕೊಂಡರೆ ನೀವೇನಾದರೂ ಸ್ಥಾನ ಕೊಡಿಸ್ತಿರಾ?. ಸ್ಥಾನಮಾನದ ವಿಚಾರವನ್ನು ವರಿಷ್ಠರ ಬಳಿ ಮಾತ್ರ ಚರ್ಚೆ ಮಾಡಬೇಕು. ಮಾಧ್ಯಮದ ಬಳಿ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಿದರೆ ಅದರಿಂದ ಸರಕಾರಕ್ಕೂ ಒಳ್ಳೆಯದು ಜನರಿಗೂ ಒಳ್ಳೆಯದು" ಎಂದರು.

"ಡಿಸಿಎಂ ಸ್ಥಾನದ ಅವಶ್ಯಕತೆ ಇದೆಯೋ ಇಲ್ಲವೋ ಗೊತ್ತಿಲ್ಲ. ಸ್ಥಾನದ ಆಕಾಂಕ್ಷೆ ಇರುವವರು ಸರಿಯಾದ ವ್ಯಕ್ತಿಗಳ ಬಳಿ ಹೋಗಿ ವಿಚಾರ ಹೇಳಲಿ. ನಮ್ಮ ನಾಯಕರು ಎಚ್ಚರಿಕೆ ಕೊಟ್ಟ ಮೇಲೂ ಕೆಲವರು ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ವರಿಷ್ಠರಿಗೆ ತಾಳ್ಮೆ ಹೆಚ್ಚು. ಆದರೆ ಅವರು ಎಲ್ಲವನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News