ಲಿಂಗಾಯತ ಉಪ ಪಂಗಡಗಳು ಒಗ್ಗೂಡಲಿ: ಸಚಿವ ಎಂ.ಬಿ. ಪಾಟೀಲ್‌

Update: 2024-06-09 18:24 GMT

ಮೈಸೂರು: ಕರ್ನಾಟಕದಲ್ಲಿರುವ ಲಿಂಗಾಯತ ಉಪ ಪಂಗಡಗಳು ಚೆಲ್ಲಾಪಿಲ್ಲಿಯಾಗಿದ್ದು, ಎಲ್ಲ ಉಪ ಪಂಗಡಗಳು ಒಗ್ಗೂಡಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಅಭಿಪ್ರಾಯಪಟ್ಟರು.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ, ವೀರಶೈವ-ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಬಸವಬಳಗಗಳ ಒಕ್ಕೂಟದಿಂದ ರವಿವಾರ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ನಮ್ಮ ಬಸವ ಜಯಂತಿ 2024ರ ಸಮಾರಂಭದಲ್ಲಿ ಮಾತನಾಡಿದರು.

ಎಲ್ಲ ಉಪ ಪಂಗಡಗಳ ಒಕ್ಕಲಿಗ ಸಮಾಜಕ್ಕೆ ಸೇರುವಂತೆ ಲಿಂಗಾಯತರು ಸೇರುವಂತಾಗಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಮಾನ್ಯತೆ ದೊರೆಯುವಂತಾಗಬೇಕು. ಎಲ್ಲ ಉಪ ಪಂಗಡಗಳಿಗೆ ಒಂದೇ ಮಾದರಿ ಮೀಸಲಾತಿ ದೊರಕಿಸಲು ಪಕ್ಷಾತೀತವಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.

ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಲಿಂಗಾಯತ ಸಮುದಾಯದ ಜನರ ನಡುವೆ ಸಂಪರ್ಕ ಇಲ್ಲ. ಸಮುದಾಯದ ಹಿತ ದೃಷ್ಟಿಯಿಂದ ಒಗ್ಗೂಡಬೇಕು. ಬಸವಣ್ಣರ ಅನುಯಾಯಿಗಳಾದ ನಾವುಗಳು ನಮ್ಮ ಧರ್ಮವನ್ನು ಗೌರವಿಸಿ ಇತರರ ಧರ್ಮವನ್ನು ಪ್ರೀತಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌‍.ಸಿ. ಮಹದೇವಪ್ಪ ಮಾತನಾಡಿ, ಬಸವ ಜನರ ಜಯಂತಿ ಜಾತಿ ವಿನಾಶ ಮತ್ತು ಮಾನವ ಹಕ್ಕುಗಳ ಸಂರಕ್ಷಣೆಯ ಮೂಢನಂಬಿಕೆ, ಸನಾತನವಾದ, ಶೋಷಣೆಯ ವಿರುದ್ಧದ ಜಯಂತಿಯಾಗಿದೆ. ವೈಜ್ಞಾನಿಕ ಮತ್ತು ವೈಚಾರಿಕ ತಿಳವಳಿಕೆ ಮೂಡಿಸುವುದೇ ಬಸವ ಜಯಂತಿ. ಬಸವಣ್ಣ ಮಹಾನ್‌ ಸಾಂಸ್ಕೃತಿಕ ನಾಯಕನ ಸ್ಮರಣೆಯೇ ಹೆಮ್ಮೆಯ ಸಂಗತಿ ಎಂದರು.

ಬುದ್ಧರ ನಂತರ ಬಸವಣ್ಣ ವೈದಿಕ ವ್ಯವಸ್ಥೆಯ ವಿರುದ್ಧ ವಚನಗಳ ಮೂಲಕ ಜಾಗೃತಿ ಮೂಡಿಸಿದರು. ಅಂಬೇಡ್ಕರ್‌ ಬಸವಣ್ಣನ ಹಾದಿಯಲ್ಲಿ ಹೋರಾಟ ಮುಂದುವರಿಸಿದರು. ಜಾತಿ ಶ್ರೇಷ್ಠತೆ ಅಳಿಯದೇ ಜಾತಿ ವಿನಾಶ ಆಗುವುದಿಲ್ಲ. ಜಾತಿ ನಾಶವಾಗದೇ ಮಾನವೀಯತೆ ಬರುವುದಿಲ್ಲ. ಪ್ರತಿಯೊಬ್ಬ ಭಾರತೀಯ ಬಸವ ಧರ್ಮದ ಅನುಯಾಯಿ ಆಗಬೇಕು ಎಂದರು.

ಶಾಸಕ ವಿನಯ್‌ ಕುಲಕರ್ಣಿ, ಬಸವ ಬಳಗಗಳ ಗ್ರಾಮ ಘಟಕ ಸ್ಥಾಪಿಸಬೇಕು. ಅವಕಾಶ ಸಿಗುವ ಕಡೆ ಲಿಂಗಾಯತ ಸಮಾಜದ ಯುವಕರನ್ನು ಬೆಳೆಸಬೇಕು. ಸರ್ಕಾರಿ ಉದ್ಯೋಗ ಸಿಗದವರು ಸ್ವಂತ ಉದ್ಯೋಗ ಆರಂಭಿಸುವಂತೆ ಸಲಹೆ ನೀಡಿದರು. ಬಸವ ಜಯಂತಿ ಸಮಾರಂಭಗಳಲ್ಲಿ ಬಸವಣ್ಣನ ಕುರಿತ ಸಣ್ಣ ಕೈಪಿಡಿ ಕೊಡಬೇಕು ಎಂದು ಹೇಳಿದರು.

ಗುಂಡ್ಲುಪೇಟೆ ಶಾಸಕ ಗಣೇಶ್‌ ಪ್ರಸಾದ್‌ ಮಾತನಾಡಿ, ಬಸವಣ್ಣ ತತ್ವ ಪಾಲಿಸಿದರೆ ಲಿಂಗಾಯತ ಸಮಾಜ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತದೆ ಎಂದರು.

ಮಾಜಿ ಶಾಸಕ ಅಶೋಕ್‌ ಖೇಣಿ ಮಾತನಾಡಿ, ವೀರಶೈವ ಮಹಾಸಭಾ ಚುನಾವಣೆ ಪಕ್ಷಗಳ ಆಧಾರದ ಮೇಲೆ ನಡೆಯುತ್ತಿರುವುದು ದುದೈರ್ವ. ಸಮಾಜ ಸೇವೆ ಮಾಡುವವರು ರಾಜಕಾರಣ ಮಾಡುವುದು ಬೇಡ. ಇದರಿಂದ ಸಮಾಜಕ್ಕೆ ಧಕ್ಕೆ ಆಗುತ್ತದೆ ಎಂದು ಎಚ್ಚರಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್‌, ಪ್ರದೀಪ್‌ ಕುಮಾರ್‌ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಟ ನಾಗಭೂಷಣ, ಮುಡಾ ಅಧ್ಯಕ್ಷ ಕೆ.ಮರಿಗೌಡ, ವಿಧಾನ ಪರಿಷತ್‌ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಡಾ. ಡಿ. ತಿಮ್ಮಯ್ಯ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌, ಕಾಡಾ ಅಧ್ಯಕ್ಷ ಮರಿಸ್ವಾಮಿ, ವಿವಿಧ ಮಠಾಧೀಶರು, ಬಸವ ಬಳಗಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಬಸವಣ್ಣ ಸ್ಮರಣೆ ಜಯಂತಿಗೆ ಸೀಮಿತವಾಗದಿರಲಿ: ನಟ ಡಾಲಿ ಧನಂಜಯ

ಬಸವಣ್ಣ ಸ್ಮರಣೆ ಜಯಂತಿಗೆ ಮಾತ್ರ ಸೀಮಿತವಾಗಬಾರದು. ಆಚರಣೆಯೊಂದಿಗೆ ವಿಚಾರವನ್ನು ತಿಳಿಯಬೇಕು. ಬದುಕಿನಲ್ಲಿ ಅನುಸರಿಸಬೇಕಾದ ಎಷ್ಟೊಂದು ಸಂಗತಿಗಳನ್ನು ಸರಳವಾಗಿ ಹೇಳಿದ್ದಾರೆ. ಅದನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಟ ಡಾಲಿ ಧನಂಜಯ ತಿಳಿಸಿದರು.

ಮೈಸೂರು ಭಾಗದ ಪ್ರತಿ ಮನೆಯಲ್ಲಿ ಶರಣು ಬನ್ನಿ ಎಂದು ಬರೆದಿದ್ದಾರೆ. ಮನದೊಳಗಣ ಕಿಚ್ಚು ಮನೆಯ ಸುಟ್ಟಲ್ಲದೇ ನೆರೆಮನೆಯ ಸುಡದೋ, ಇವನ್ಯಾರವ ಎನ್ನದೇ ಇವ ನಮ್ಮವ ಎಂದೆಣಿಸಯ್ಯ ವಚನ ಕೂಡಿ ಬಾಳುವುದನ್ನು ಕಲಿಸುತ್ತದೆ.

ಲಿಡ್ಕರ್‌ ರಾಯಭಾರಿ ಅನೇಕ ವಿಷಯಗಳನ್ನು ತಿಳಿದುಕೊಂಡೆ. ಚರ್ಮದಲ್ಲಿ ಚಪ್ಪಲಿ ಹೊಲೆಯುವ ಅನೇಕ ಕುಟುಂಬಗಳಿವೆ. ಈ ಸಂಸ್ಥೆಗೆ ಮೂಲ ಪ್ರೇರಣೆ 12ನೇ ಶತಮಾನದ ಹರಳಯ್ಯ ಮತ್ತು ಕಲ್ಯಾಣಮ್ಮ ಅವರು. ಈ ಸಂಸ್ಥೆಯ ಭಾಗವಾಗಿದ್ದಕ್ಕೆ ಸಂತೋಷವಿದೆ ಎಂದು ತಿಳಿಸಿದರು.

ದೇವರನ್ನು ಪೂಜೆ ಮಾಡುವುದು ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದ್ದ ಕಾಲದಲ್ಲಿ, ಗರ್ಭಗುಡಿಯಲ್ಲಿದ್ದ ದೇವರನ್ನು ಸಾಮಾನ್ಯರ ಅಂಗೈಗೆ ತಂದು ಕೊಟ್ಟವರು ಬಸವಣ್ಣ. ದೇವಾಲಯದ ಒಳಗೆ ಎಲ್ಲರಿಗೂ ಪ್ರವೇಶವಿಲ್ಲದ ಸಮಯದಲ್ಲಿ, ದೇವರನ್ನು ಪೂಜಿಸಲು ಮಧ್ಯದಲ್ಲಿ ಯಾರು ಬೇಡ ಎಂದು ಜನರಿಗೆ ಲಿಂಗವನ್ನು ಕೊಟ್ಟು ಪೂಜಿಸುವಂತೆ ಹೇಳಿದರು. ಸಮಾಜದಲ್ಲಿ ಇರುವ ಎಲ್ಲರೂ ಸಮಾನರು, ಎಲ್ಲರೂ ಮೋಕ್ಷಕ್ಕೆ ಅರ್ಹರು ಎಂದು ಅಣ್ಣ ಪ್ರತಿಪಾದಿಸಿದರು.

-ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News