ಮಂಡ್ಯ: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 1 ಕೋಟಿ ರೂ. ಜಪ್ತಿ
ಮಂಡ್ಯ: ಜಿಲ್ಲೆಯ ಗಡಿಭಾಗದ ಮದ್ದೂರು ತಾಲೂಕಿನ ಕೊಂಗಬೋರನದೊಡ್ಡಿ ಬಳಿಯಲ್ಲಿ ಕಾರಿನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಅಂದಾಜು 1 ಕೋಟಿ ರೂ.ವನ್ನು ಚುನಾವಣಾ ಸಿಬ್ಬಂದಿ ಮತ್ತು ಮದ್ದೂರು ಪೊಲೀಸರು ಜಪ್ತಿ ಮಾಡಿದ್ದಾರೆ.
ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕಡೆಗೆ ಸಾಗುತ್ತಿದ್ದಂತಹ ಕ್ರೇಟಾ ಕಾರೊಂದನ್ನು ತಡೆದ ಚುನಾವಣಾ ಚೆಕ್ ಪೋಸ್ಟ್ ಅಧಿಕಾರಿಗಳು, ಕಾರನ್ನು ತಪಾಸಣೆ ನಡೆಸಿದ ವೇಳೆಯಲ್ಲಿ ಅಂದಾಜು ಒಂದು ಕೋಟಿ ರೂಪಾಯಿ ಪತ್ತೆಯಾಗಿದೆ.
ಗಿರೀಶ್ ಎಂಬವರು ಬೆಂಗಳೂರಿನಿಂದ ಹ್ಯೂಂಡಾಯ್ ಕ್ರೇಟಾ ಕೆಎ - 54 - ಎಂ - 4030 ಕಾರಿನಲ್ಲಿ ಕೆ.ಆರ್.ಪೇಟೆ ಕಡೆಗೆ ಪ್ರಯಾಣ ಮಾಡುತ್ತಿದ್ದಾಗ ಮದ್ದೂರು ತಾಲೂಕಿನ ಗಡಿಭಾಗ ಕೊಂಗಬೋರನದೊಡ್ಡಿ ಗ್ರಾಮದ ಬಳಿ ಚುನಾವಣಾ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ, ತಹಶೀಲ್ದಾರ್ ಕೆ.ಎಸ್.ಸೋಮಶೇಖರ್, ಮದ್ದೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ.ಆರ್.ಪ್ರಸಾದ್ ಹಾಗೂ ಚುನಾವಣಾಧಿಕಾರಿ ಲೋಕನಾಥ್ ಹಾಗೂ ಪೋಲೀಸ್ ಸಿಬ್ಬಂದಿ ಕಾರನ್ನು ಪರಿಶೀಲನೆ ನಡೆಸಿದಾಗ ಚೀಲದಲ್ಲಿ ಹಣ ಪತ್ತೆಯಾಗಿದೆ.
ಈ ಬಗ್ಗೆ ಅವರನ್ನು ಚುನಾವಣಾಧಿಕಾರಿಗಳು ಪ್ರಶ್ನಿಸಿದ್ದಾರೆ. ದೊರೆತ ಹಣಕ್ಕೆ ಸೂಕ್ತ ಉತ್ತರ, ದಾಖಲೆ ನೀಡದ ಪರಿಣಾಮ ಹಣವನ್ನು ಸೀಝ್ ಮಾಡಿದ್ದಾರೆ. ಈ ಸಂಬಂಧ ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.