ದಸರಾ ಮಹೋತ್ಸವ | 10 ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ : ಸಚಿವ ಮಹದೇವಪ್ಪ

Update: 2024-09-23 14:45 GMT

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ 10 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ದೀಪಾಲಂಕರ ಆಯೋಜಿಸಲಾಗಿದ್ದು, ವಿದ್ಯುತ್ ದೀಪಾಲಂಕಾರದ ಪೋಸ್ಟರ್ ಅನ್ನು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬಿಡುಗಡೆಗೊಳಿಸಿದರು.

ನಗರದ ವಿಜಯನಗರ ಎರಡನೇ ಹಂತದಲ್ಲಿರುವ ಸೆಸ್ಕ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ನಗರದ 130 ಕಿ.ಮೀ ಪ್ರದೇಶದಲ್ಲಿ ವಿವಿಧ ಬಣ್ಣಗಳಿಂದ ಅ.3 ರಿಂದ‌ 21 ದಿನಗಳ ವರೆಗೆ ಲೈಟಿಂಗ್ಸ್ ಜಗಮಗಿಸಲಿದ್ದು, 6.5‌ ಕೋಟಿ ರೂ. ವೆಚ್ಚವಾಗಲಿದೆ. ಈ ಬಾರಿ ವಿಶೇಷವಾಗಿ ಡ್ರೋನ್ ಶೋ ಆಯೋಜಿಸಲಾಗಿದೆ. ಇದಕ್ಕೆ 3.5 ಕೋಟಿ ರೂ. ವೆಚ್ಚವಾಗಲಿದೆ ಎಂದು ಮಾಹಿತಿ ನೀಡಿದರು.

ನಗರದ ಕೆ.ಆ‌ರ್.ವೃತ್ತದಿಂದ ಡಿ.ದೇವರಾಜ ಅರಸು ರಸ್ತೆ, ಕಾಫಿ ಡೇ ವೃತ್ತ ಮತ್ತು ಹಳೆ ಜಿಲ್ಲಾಧಿಕಾರಿಗಳ ಕಛೇರಿ ರಸ್ತೆ ಹಾಗೂ ಹೊರ ವರ್ತುಲ ರಸ್ತೆಯ ಬಳಿ ಇರುವ ಹಿನಕಲ್ ಮೇಲ್ಸೇತುವೆ ಎಲ್.ಇ.ಡಿ ಬಲ್ಬ್‌ಗಳ ವಿಶೇಷ ವಿನ್ಯಾಸ ಮಾಡಲಾಗುವುದು. 100 ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಇರಲಿದೆ ಎಂದು ಹೇಳಿದರು.

ಭಾರತದಲ್ಲಿ ಪ್ರಜಾಪ್ರಭುತ್ವ ಸಾಗಿಬಂದ ಹಾದಿ, ಭುವನೇಶ್ವರಿ, ಸೋಮನಾಥೇಶ್ವರ ದೇವಾಲಯ, ಭಾರತದ ಸಂವಿಧಾನದ ಪ್ರಸ್ತಾವನೆ, ಮೈಸೂರು ರಾಜ ಮನೆತನದ ಅರಸರಾದ ರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪನಂಜಮ್ಮಣ್ಣಿ ದೇವಿ, ರಾಜ ಜಯಚಾಮರಾಜೇಂದ್ರ ಒಡೆಯರ್, ರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸೇರಿದಂತೆ 65 ಪ್ರತಿಕೃತಿಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಡ್ರೋನ್ ಶೋ:

ಇದೇ ಮೊದಲ ಬಾರಿಗೆ ಬೃಹತ್ ಡ್ರೋನ್ ಶೋ. ಕಾರ್ಯಕ್ರಮವನ್ನು ಆಯೋಜಿಸಲು ಯೋಚಿಸಲಾಗಿದೆ. ಎಲ್.ಇ.ಡಿ. ಬಲ್ಬ್‌ಗಳನ್ನು ಅಳವಡಿಸಿರುವ ಸುಮಾರು 1,500 ಸಂಖ್ಯೆ ಡ್ರೋನ್‌ಗಳನ್ನು ಬಳಸಿ ಆಕಾಶದಲ್ಲಿ ಅದ್ಭುತ ವಿನ್ಯಾಸಗಳನ್ನು ಮೂಡಿಸಲು ಯೋಜಿಸಲಾಗಿದೆ ಎಂದರು.

ಡ್ರೋನ್ ಶೋ ಅ.6 ಮತ್ತು ಅ.7 ಹಾಗೂ ಅ.11 ಮತ್ತು ಅ.12 ರಂದು ನಗರದ ಬನ್ನಿಮಂಟಪದಲ್ಲಿರುವ ಪಂಜಿನ ಕವಾಯತು ಮೈದಾನದಲ್ಲಿ ರಾತ್ರಿ 8 ಗಂಟೆಯಿಂದ 8.15 ವರೆಗೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಅ.6 ಮತ್ತು ಅ.7 ರಂದು ಸಾರ್ವಜನಿಕರಿಗೆ ಉಚಿತವಾಗಿ ವೀಕ್ಷಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಚೆಸ್ಕಾಂ ಅಧ್ಯಕ್ಷ ರಮೇಶ್ ಬಾಬು ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಸೆಸ್ಕ್ ಎಂಡಿ ಜಿ.ಶೀಲಾ, ತಾಂತ್ರಿಕ ವಿಭಾಗದ ನಿರ್ದೇಶಕ ಎಂ.ಮುನಿಗೋಪಾಲ ರಾಜು, ಹಣಕಾಸು ವಿಭಾಗದ ನಿರ್ದೇಶಕ ಶೇಖ್ ಮಹೀಮುಲ್ಲಾ, ಅಧೀಕ್ಷ ಇಂಜಿನಿಯರ್ ಸುನೀಲ್ ಕುಮಾರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News