ಅಶೋಕ್, ವಿಜಯೇಂದ್ರ ಸಹಿತ ನಾಲ್ವರು ಬಿಜೆಪಿ ನಾಯಕರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಎಂ.ಲಕ್ಷ್ಮಣ್ ಒತ್ತಾಯ

Update: 2024-09-13 11:42 GMT

ಮೈಸೂರು: "ನಾಗಮಂಗಲದ ಗಣೇಶೋತ್ಸವ ಗಲಾಟೆ ಸೇರಿದಂತೆ ರಾಜ್ಯದಲ್ಲಿ ಕೋಮುಗಲಭೆಗಳಿಗೆ ಪ್ರಚೋದನೆ ನೀಡಿ ಶಾಂತಿ ಸುವ್ಯವಸ್ಥೆ ಹದಗೆಡಲು ಕಾರಣರಾಗಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಅಶ್ವತ್ಥ್ ನಾರಾಯಣ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಈ ನಾಲ್ವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು" ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‌ʼನಾಗಮಂಗಲದಲ್ಲಿ ನಡೆದ ಗಲಾಟೆ ಒಂದು ಪೂರ್ವ ನಿಯೋಜಿತ ಕೃತ್ಯ. ಆರೆಸ್ಸೆಸ್, ಬಿಜೆಪಿ ಮತ್ತು ಜೆಡಿಎಸ್‌ನವರು ಸೇರಿಕೊಂಡು ಮಾಡಿದ್ದಾರೆ. ಇದನ್ನು ತಡೆಯುವಲ್ಲಿ ಕಾಂಗ್ರೆಸ್ ಸರಕಾರ ಯಶಸ್ವಿಯಾಗಿದೆ. ಆದರೆ ಬಿಜೆಪಿ-ಜೆಡಿಎಸ್‌ನವರು ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿಕೊಂಡು ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾಗಮಂಗಲ ಗಲಾಟೆಗೆ ಸಂಬಂಧಿಸಿದಂತೆ 53 ಜನರನ್ನು ಬಂಧಿಸಲಾಗಿದೆ. ಬಿಜೆಪಿ-ಜೆಡಿಎಸ್‌ನವರ ಪೂರ್ವ ನಿಯೋಜಿತ ಕೃತ್ಯದ ದಾಖಲೆಗಳನ್ನು ಶೀಘ್ರದಲ್ಲಿಯೇ ಗೃಹ ಸಚಿವರು ಬಿಡುಗಡೆ ಮಾಡಲಿದ್ದಾರೆʼ ಎಂದು ಹೇಳಿದರು.

ʼಗಲಭೆಯಾದ ಮೇಲೆ ನಾಗಮಂಗಲಕ್ಕೆ ಹೋಗಿ ಪ್ರಚೋದನಕಾರಿ ಹೇಳಿಕೆ ಕೊಟ್ಟಿದ್ದಾರೆ‌. ವಿಜಯೇಂದ್ರ, ಅಶೋಕ್ ಅವರು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಬೈಯ್ದಿದ್ದಾರೆ. ಇವರ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಬೇಕುʼ ಎಂದು ಹೇಳಿದರು.

"ಗಣೇಶೋತ್ಸವ ಮಧ್ಯಾಹ್ನ 1.30 ಗಂಟೆಗೆ ಆರಂಭವಾಗಿ ರಾತ್ರಿಯಾಗುವವರೆಗೂ ಕಾದು ರಾತ್ರಿ 7.30 ಗಂಟೆ ವೇಳೆಗೆ ಮಸೀದಿ ಬಳಿ ಬಂದು ಅರ್ಧಗಂಟೆ ಅಲ್ಲೇ ನಿಂತು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ್ದಾರೆ. ಇದೆಲ್ಲಾ ಪೂರ್ವನಿಯೋಜಿತ ಸಂಚು. ಇಲ್ಲಿ ಗಲಭೆ ಎಬ್ಬಿಸಬೇಕು ಎಂದೇ ಇವರು ಈ ಕೆಲಸ ಮಾಡಿಸಿದ್ದಾರೆ.‌ ಇದರಲ್ಲಿ ಪೊಲೀಸರ ವೈಫಲ್ಯವೂ ಇದ್ದು, ಅಲ್ಲಿನ ಓರ್ವ ಇನ್ಸ್ ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ" ಎಂದು ಹೇಳಿದರು.

"ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಇತ್ತೀಚೆಗೆ ಸಭೆ ನಡೆಸಿ ದೇಶದ ಎರಡು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ ಏನು ಮಾಡುತ್ತಿದ್ದೀರಿ ಗಲಭೆಗಳನ್ಮು ಎಬ್ಬಿಸಿ ಎಂದು ಹೇಳಿದ್ದಾರೆ. ಈ ವಿಚಾರವನ್ನು ಬಿಜೆಪಿ ಸ್ನೇಹಿತರುಗಳೇ ನನಗೆ ಹೇಳಿದ್ದಾರೆ" ಎಂದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಬಿ.ಎಂ.ರಾಮು, ಎಲ್.ಭಾಸ್ಕರ್ ಗೌಡ, ಮಾಧ್ಯಮ ವಕ್ತಾರ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News