ಮೈಸೂರು | ಮಗುವನ್ನು ಅಪಹರಿಸಿ ಮಾರಾಟ ಮಾಡಲು ಯತ್ನ : ಐವರ ಬಂಧನ
ಮೈಸೂರು: ಮಗುವೊಂದನ್ನು ಅಪಹರಿಸಿ ಮಾರಾಟ ಮಾಡಲು ಯತ್ನಿಸಿದ ಐವರು ಆರೋಪಿಗಳನ್ನು ವಿಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೂವರೆ ವರ್ಷದ ಮಗುವನ್ನು ಅಪಹರಿಸಿ ಮಾರಾಟಮಾಡಲು ಯತ್ನಿಸಿದ್ದ ಪತ್ರಕರ್ತ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದು, ಅಪಹರಣಕ್ಕೆ ಒಳಗಾದ ಮಗುವನ್ನು ಪೊಲೀಸರು ಪೋಷಕರ ಬಳಿ ಸೇರಿಸಿದ್ದಾರೆ.
ಮೈಸೂರಿನ ಪತ್ರಕರ್ತ ಮಂಜುನಾಥ್, ನಾಗವಾಲದ ಇಂದ್ರಕುಮಾರ್, ವಿಜಯಲಕ್ಷ್ಮಿ ,ಸುಪ್ರಿಯ ಹಾಗೂ ಮಂಡ್ಯದ ಕುಮಾರ್ ಬಂಧಿತರು. ಏಳು ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದು ಉಳಿದಿಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
ಮೈಸೂರಿನ ಹೊರವಲಯದ ಹಿನಕಲ್ ನ ಜೋಪಡಿಯಲ್ಲಿ ಬಿಹಾರ ಮೂಲದ ರಮಡಳ್ಳಿದೇವಿ ಹಾಗೂ ಜಿ.ಮಂಡಲ ದಂಪತಿ ತಮ್ಮ ಒಂದೂವರೆ ವರ್ಷದ ಗಂಡು ಮಗುವಿನ ಜೊತೆ ವಾಸವಿದ್ದರು. ಆರೋಪಿಗಳು ಸಂಚು ರೂಪಿಸಿ ಆಟವಾಡುತ್ತಿದ್ದ ಮಗುವನ್ನು ಅಪಹರಿಸಿ ಪರಿಚಯವಿರುವ ಒಬ್ಬರಿಗೆ ಮಾರಾಟ ಮಾಡಲು ಮುಂದಾಗಿ ವ್ಯವಹಾರ ಕುದುರಿಸಿದ್ದರು. ಮಗು ಕಾಣೆಯಾದ ನಂತರ ಪೋಷಕರು ವಿಜಯನಗರ ಠಾಣೆ ಪೊಲೀಸರಿಗೆ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ವಿಜಯನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಮಗುವನ್ನು ರಕ್ಷಿಸಿ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.