ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಬೆಂಬಲಿಸುವುದಾಗಿ ಘೋಷಿಸಿದ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ
ಮೈಸೂರು : ಜಿಲ್ಲಾ ಒಕ್ಕಲಿಗರ ಸಂಘವು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಂ.ಲಕ್ಷ್ಮಣ್ ಅವರಿಗೆ ಬೆಂಬಲ ನೀಡುತ್ತಿದೆ ಎಂದು ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ, "ಎಪ್ರಿಲ್ 16 ರಂದು ಜಿಲ್ಲಾ ಒಕ್ಕಲಿಗರ ಸಂಘ ಸಭೆ ನಡೆಸಿದ್ದು, ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿರುವ ಒಕ್ಕಲಿಗ ಸಮುದಾಯದ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರಿಗೆ ಬೆಂಬಲ ನೀಡಲು ಒಮ್ಮತದ ತೀರ್ಮಾನ ಕೈಗೊಂಡಿದ್ದೇವೆ" ಎಂದು ತಿಳಿಸಿದರು.
ಪ್ರತಾಪ್ ಸಿಂಹ ಒಕ್ಕಲಿಗ ಎಂಬ ಕಾರಣಕ್ಕೆ ಬಿಜೆಪಿ ಈ ಬಾರಿ ಟಿಕೆಟ್ ನೀಡದೆ ಒಕ್ಕಲಿಗ ವ್ಯಕ್ತಿಗೆ ಅನ್ಯಾಯ ಮಾಡಿದೆ. ಆದರೆ ಕಾಂಗ್ರೆಸ್ ಪಕ್ಷ ಒಕ್ಕಲಿಗರಾದ ಎಂ.ಲಕ್ಷ್ಮಣ್ ಅವರಿಗೆ ಟಿಕೆಟ್ ನೀಡಿದೆ. ನಮ್ಮ ಸಮುದಾಯದ ವ್ಯಕ್ತಿಯೊಬ್ಬರು ಗೆಲ್ಲಲಿ ಎಂಬ ಉದ್ದೇಶದಿಂದ ನಾವು ಎಂ.ಲಕ್ಷ್ಮಣ್ ಅವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದರು.
ನಾವು ಯಾವ ಪಕ್ಷದ ಪರವೂ ಇಲ್ಲ, ವಿರೋಧವೂ ಇಲ್ಲ, ನಮಗೆ ಒಕ್ಕಲಿಗರ ಹಿತ ಮುಖ್ಯ. ಹಾಗಾಗಿ ನಮ್ಮ ಸಮುದಾಯದ ವ್ಯಕ್ತಿಯೊಬ್ಬರು ಗೆಲ್ಲಲಿ ಎಂಬ ಅಭಿಮಾನಕ್ಕೆ ನಾವು ಎಂ.ಲಕ್ಷ್ಮಣ್ ಅವರ ಬೆಂಬಲಕ್ಕೆ ನಿಂತಿದ್ದೇವೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಯದುವೀರ್ ಅವರ ಬಗ್ಗೆ ಮತ್ತು ಅವರ ವಂಶದ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ಮಹರಾಜರ ಕುಟುಂಬದವರು ಎಂದು ಗೌರವ ನೀಡುತ್ತೇವೆ. ಚುನಾವಣೆ ಬಂದಾಗ ನಮಗೆ ನಮ್ಮ ಸಮುದಾಯದ ಏಳಿಗೆ ಮುಖ್ಯವಾಗಿರುತ್ತದೆ. ರಾಷ್ಟ್ರೀಯ ಪಕ್ಷದಿಂದ ಎಂ.ಲಕ್ಷ್ಮಣ್ ಗೆ ಟಿಕೆಟ್ ನೀಡಿದ್ದಾರೆ. ಒಂದು ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಒಕ್ಕಲಿಗರಿಗೇ ಟಿಕೆಟ್ ನೀಡಿದ್ದಿದ್ದರೆ ನಾವು ಈ ರೀತಿಯ ಒಗ್ಗಟ್ಟು ಪ್ರದರ್ಶಿಸುತ್ತಿರಲಿಲ್ಲ. ಯಾಕೆಂದರೆ ಯಾರೇ ಗೆದ್ದರು ನಮ್ಮ ಸಮುದಾಯದವರೆ ಗೆಲ್ಲುತ್ತಿದ್ದರು ಎಂದು ಹೇಳಿದರು.
ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಎಲ್ಲಾ ಪಧಾದಿಕಾರಿಗಳು ಭಾಗವಹಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ, ಉಪಾಧ್ಯಕ್ಷ ಆರ್.ರವಿಕುಮಾರ್, ಸಹಕಾರ್ಯದರ್ಶಿ ಜಯರಾಮ್ ದಾಸನಕೊಪ್ಪಲು, ನಿರ್ದೇಶಕರಾದ ಸುಶೀಲಾ ನಂಜಪ್ಪ, ಮಂಜು, ಶಿವಕುಮಾರ್, ಪ್ರಸನ್ನ ಎನ್.ಲಕ್ಷ್ಮಣ್, ಬೋರೇಗೌಡ, ಉಮೇಶ್, ನಾಗಣ್ಣ, ಗೋಪಾಲ್, ಗುರುರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.