ಮೈಸೂರು | ಮಾಜಿ ಕಾರ್ಪೊರೇಟರ್‌ ಸಹೋದರನ ಹತ್ಯೆ ಪ್ರಕರಣ: ಕೆಎಂಡಿಸಿ ಅಧ್ಯಕ್ಷರ ಸಹಿತ ಐವರ ವಿರುದ್ಧ ಎಫ್‍ಐಆರ್ ದಾಖಲು

Update: 2024-03-10 15:00 GMT

ಮೈಸೂರು: ಮಾಜಿ ಕಾರ್ಪೊರೇಟರ್‌ ಅಯಾಝ್ ಪಾಷಾ (ಪಂಡು) ಸಹೋದರ ಧಾರ್ಮಿಕ ಗುರು ಮುಹಮ್ಮದ್ ಅಕ್ಮಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೊರೇಟರ್‌ ಬಶೀರ್ ಅಹ್ಮದ್, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ.ಅಲ್ತಾಫ್ ಸೇರಿದಂತೆ 5 ಮಂದಿಯ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಲಿಎಫ್‍ಐಆರ್ ದಾಖಲಾಗಿದೆ.

ಮಾಜಿ ಕಾರ್ಪೊರೇಟರ್‌ ಬಶೀರ್ ಅಹ್ಮದ್,‌ ಈತನ ಪುತ್ರ ಫೈಝಾನ್ ಅಹ್ಮದ್,‌ ಅಲ್ತಾಫ್ ಖಾನ್,‌ ಪರ್ವೀಝ್ ಹಾಗೂ ಇಬ್ರಾಹಿಂ ಎಂಬವರ ವಿರುದ್ದ ಕೊಲೆ ಮಾಡಿಸಿರುತ್ತಾರೆ ಎಂದು ಆರೋಪಿಸಿ ಮೃತ ಅಕ್ಮಲ್ ಪತ್ನಿ ನಝಿಯಾ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಾರ್ಚ್ 8 ರಂದು ರಾತ್ರಿ 8.30 ರಲ್ಲಿ ರಾಜೀವ್ ನಗರದ ಬೇಕರಿ ಬಳಿ ಮುಹಮ್ಮದ್ ಅಕ್ಮಲ್ ಅವರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಉದಯಗಿರಿ ಠಾಣೆ ಪೊಲೀಸರು 5 ಮಂದಿ ವಿರುದ್ದ ಕೊಲೆ ಆರೋಪ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಶಾಂತಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್ ತೆರುವುಗೊಳಿಸುವಂತೆ ಅಕ್ಮಲ್ ಅವರು ನಗರಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದರು. ನಂತರ ರಾತ್ರಿ ಅಪಾರ್ಟ್ ಮೆಂಟ್ ನಲ್ಲಿ ಅಲ್ತಾಫ್ ಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಬಶೀರ್ ಹಾಗೂ ಅಲ್ತಾಫ್ ರವರು ಅಕ್ಮಲ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದರು ಎಂದು ಹೇಳಲಾಗಿದೆ. ಇದಕ್ಕೆ ಬಗ್ಗದ ಮುಹಮ್ಮದ್ ಅಕ್ಮಲ್ ಅವರು, ಬಶೀರ್ ಹಾಗೂ ಅಲ್ತಾಫ್ ವಿರುದ್ದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು ಎನ್ನಲಾಗಿದೆ.

ಅಲ್ಲದೆ ಬಶೀರ್ ಹಾಗೂ ಅಲ್ತಾಫ್ ಬೆದರಿಕೆ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಎಂದು ಹೇಳಲಾಗಿದೆ. ಹೀಗಾಗಿ ತನ್ನ ಪತಿ ಮುಹಮ್ಮದ್ ಅಕ್ಮಲ್ ಅವರ ಕೊಲೆ ಹಿಂದೆ ಬಶೀರ್ ಅಹ್ಮದ್, ಅಲ್ತಾಫ್ ಖಾನ್,‌ ಪರ್ವೀಝ್, ಇಬ್ರಾಹಿಂ ಹಾಗೂ ಫೈಝಾನ್ ಅಹ್ಮದ್ ಅವರ ಕೈವಾಡ ಇದೆ ಎಂದು ಆರೋಪಿಸಿ ನಝಿಯಾ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News