ಮೈಸೂರು | ಧರ್ಮಗುರು ಮುಹಮ್ಮದ್ ಅಕ್ಮಲ್ ಹತ್ಯೆ ಖಂಡಿಸಿ ಎಸ್‌ಡಿಪಿಐನಿಂದ ಬೃಹತ್ ಪ್ರತಿಭಟನೆ

Update: 2024-03-10 16:30 GMT

ಮೈಸೂರು: ಕಳೆದ ಶುಕ್ರವಾರ ಮೈಸೂರಿನ ರಾಜೀವ್‌ ನಗರದಲ್ಲಿ ಹತ್ಯೆಯಾದ ಮುಸ್ಲಿಂ ಧರ್ಮಗುರು ಮುಹಮ್ಮದ್ ಅಕ್ಮಲ್ ಅವರ ಕೊಲೆ ಆರೋಪಿಗಳನ್ನು ರಾಜಕಾರಣಿಗಳು ರಕ್ಷಣೆ ಮಾಡುತ್ತಿದ್ದಾರೆ ಎಂದು ಎಸ್‌ಡಿಪಿಐ ಮುಖಂಡ ಅಫ್ಸರ್ ಕೊಡ್ಲಿಪೇಟೆ ಆರೋಪಿಸಿದರು.

ರವಿವಾರ ಸಂಜೆ ಶಾಂತಿನಗರ ಬಡಾವಣೆಯ ಮಹದೇವಪುರ ಮುಖ್ಯರಸ್ತೆಯಲ್ಲಿ ಮೃತ ಮುಹಮ್ಮದ್ ಅಕ್ಮಲ್ ಅವರ ಹತ್ಯೆಯನ್ನು ಖಂಡಿಸಿ ಎಸ್‌ಡಿಪಿಐ ಕರೆ ನೀಡಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

"ಈ ಹಿಂದೆ ಮೈಸೂರಿನಲ್ಲಿ ನಿವೃತ್ತ ಐಬಿ ಅಧಿಕಾರಿ ಕೊಲೆ ಪ್ರಕರಣವನ್ನು ಪೊಲೀಸರು ಒಂದೇ ದಿನದಲ್ಲಿ ಬೇಧಿಸಿ ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಅಕ್ಮಲ್ ಅವರನ್ನು ಕೊಲೆ ಮಾಡಿದ ಆರೋಪಿಗಳು ಮತ್ತು ಅವರಿಗೆ ಕುಮ್ಮಕ್ಕು ನೀಡಿದ ವ್ಯಕ್ತಿಗಳ ಬಗ್ಗೆ ಸಾಕಷ್ಟು ಮಾಹಿತಿ ಇದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿಲ್ಲ ಯಾಕೆ?. ಯಾರು ಅವರನ್ನು ರಕ್ಷಿಸುತ್ತಿದ್ದಾರೆ?. ಪೊಲೀಸರ ಕೈ ಕಟ್ಟಿಹಾಕಿರುವ ರಾಜಕಾರಣಿಗಳ ಹೆಸರನ್ನಾದರೂ ಹೇಳಿ" ಎಂದು ಒತ್ತಾಯಿಸಿದರು.

"ಮೈಸೂರಿನಲ್ಲಿ ಕೊಲೆಯಾದವರು ಅನ್ಯಾಯಗಳ ವಿರುದ್ಧ ದನಿ ಎತ್ತಿದ ಮುಸ್ಲಿಂ ಧರ್ಮಗುರುಗಳು, ಮುಖ್ಯಮಂತ್ರಿಗಳು ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಬಹುದಿತ್ತು. ಆದರೆ, ಆ ಕೆಲಸ ಮೈಸೂರಿನವರೇ ಆದ ಮುಖ್ಯಮಂತ್ರಿಗಳು ಮಾಡಲಿಲ್ಲ. ಕನಿಷ್ಠ ಅವರ ಕುಟುಂಬದರು ತಮ್ಮನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸದರೂ ಅದಕ್ಕೆ ಅವಕಾಶ ನೀಡಲಿಲ್ಲ. ಕೂಡಲೇ ಮುಖ್ಯಮಂತ್ರಿಗಳು ಮೃತರ ಕುಟುಂಬದವರಿಗೆ ತಮ್ಮನ್ನು ಭೇಟಿಯಾಗಲು ಅವಕಾಶ ಕಲ್ಪಿಸಬೇಕು ಮತ್ತು ಅವರ ಕುಟುಂಬಕ್ಕೆ ಸರಕಾರದಿಂದ 50 ಲಕ್ಷ ರೂ ಪರಿಹಾರ ನೀಡಬೇಕು" ಎಂದು ಒತ್ತಾಯಿಸಿದರು.

ʼಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ ಅಕ್ರಮಗಳ ವಿರುದ್ಧ ದನಿ ಎತ್ತಿದ ಮತ್ತು ಸತ್ಯ ಹೇಳಿದ ಕಾರಣಕ್ಕಾಗಿ ಅಕ್ಮಲ್ ಅವರನ್ನು ತಲ್ವಾರ್ ಏಟಿನಿಂದ ಹೊಡೆದು ಸಾಯಿಸಿದ್ದಾರೆ. ಅಕ್ಮಲ್ ಅವರ ತಲೆಯಿಂದ ಚಿಮ್ಮಿದ ರಕ್ತದಿಂದ ಸತ್ಯ ಹೇಳುವ ಸಾವಿರಾರು ಜನ ಅಕ್ಮಲ್ ಪಾಷ ಹುಟ್ಟುತ್ತಾರೆʼ ಎಂದು ಅವರು ಹೇಳಿದರು.

ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ರಫತ್ ಖಾನ್ ಮಾತನಾಡಿ, "ಮೈಸೂರಿನಲ್ಲಿ ಮುಸ್ಲಿಂ ಸಮುದಾಯದ ಒಬ್ಬ ಧರ್ಮಗುರುವನ್ನು ರಾಜಾರೋಷವಾಗಿ ಕೊಲೆ ಮಾಡುವಷ್ಟು ಧೈರ್ಯ ತೋರುವುದು ಇಲ್ಲಿನ ಕಾನೂನು ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಬಿಜೆಪಿ ವಿರುದ್ಧ ಮುಸ್ಲಿಂ ಸಮುದಾಯವನ್ನು ಎತ್ತಿಕಟ್ಟಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸಿಕೊಂಡು ಗೆಲುವು ಸಾಧಿಸಿದ ಜನಪ್ರತಿನಿಧಿಗಳೇ ಅಮಾಯಕರನ್ನು ಕೊಲೆ ಮಾಡಿಸುತ್ತಿದ್ದಾರೆ " ಎಂದು ಅವರು ಆರೋಪಿಸಿದರು.

ಇದೇ ಸಂದರ್ಭದಲ್ಲಿ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಮತ್ತು ಮಾಜಿ ಪಾಲಿಕೆ ಸದಸ್ಯ ಬಶೀರ್ ಹಾಗೂ ಕೆಎಂಡಿಸಿ ರಾಜ್ಯಾದ್ಯಕ್ಷ ಬಿ.ಕೆ.ಅಲ್ತಾಫ್ ಖಾನ್ ವಿರುದ್ಧ ಘೋಷಣೆ ಕೂಗಲಾಯಿತು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಮುಖಂಡರಾದ ಅಮ್ಜದ್ ಖಾನ್, ನೂರುದ್ದೀನ್ ಮೌಲಾನ, ತಬ್ರೇಝ್ ಸೇಠ್ ಮುಂತಾದವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News