ಮೈಸೂರು | ಲಂಚ ಪಡೆಯುವಾಗ ಪೊಲೀಸ್ ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ
ಮೈಸೂರು : ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಲಂಚ ಪಡೆಯುವಾಗ ಕುವೆಂಪುನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಾಧ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸಿವಿಲ್ ಕಂಟ್ರ್ಯಾಕ್ಟರ್ ಒಬ್ಬರ ಎರಡು ಕಾರುಗಳನ್ನು ಕುವೆಂಪುನಗರ ಪೊಲೀಸರು ವಶಕ್ಕೆ ಪಡೆದಿದ್ದರು. ಕಾರಿನಲ್ಲಿ ಚಿನ್ನಾಭರಣಗಳು, ಆಸ್ತಿಗೆ ಸಂಬಂಧಿಸಿದ ದಾಖಲಾತಿಗಳು, ಬ್ಯಾಂಕ್ ಪಾಸ್ ಪುಸ್ತಕ, ಎ.ಟಿ.ಎಂ ಕಾರ್ಡ್‌ಳಿದ್ದವು ಎನ್ನಲಾಗಿದೆ. ಅವುಗಳನ್ನು ನೀಡುವಂತೆ ಕಂಟ್ರಾಕ್ಟರ್ ಇನ್ಸ್ ಪೆಕ್ಟರ್ ರಾಧವರನ್ನು ಕೇಳಿದ್ದಾಗ, ಇನ್ಸ್‌ಪೆಕ್ಟರ್ ರಾಧಾ ಅವರು 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕಂಟ್ರಾಕ್ಟರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಗುರುವಾರ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ 50 ಸಾವಿರ ರೂ. ಹಣ ಪಡೆದುಕೊಳ್ಳುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂಬಂಧ ಇನ್ಸ್ ಪೆಕ್ಟರ್ ರಾಧ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಲೋಕಾಯುಕ್ತ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್ ಮತ್ತು ಪೊಲೀಸ್ ಮಹಾನಿರೀಕ್ಷಕ ಸುಬ್ರಹ್ಮಣೇಶ್ವರರಾವ್ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಅಧೀಕ್ಷಕರಾದ ಸಜೀತ್.ವಿ.ಜೆ, ಡಿ.ವೈ.ಎಸ್.ಪಿ ಕೃಷ್ಣಯ್ಯ, ಮಾಲತೀಶ್ ರವರ ನೇತೃತ್ವದಲ್ಲಿ ಮೈಸೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಉಮೇಶ್, ಜಯರತ್ನ, ರೂಪಶ್ರೀ, ರವಿಕುಮಾರ್ ಸಿಬ್ಬಂದಿಗಳಾದ ರಮೇಶ್, ಗೋಪಿ, ಕಾಂತರಾಜು, ಪ್ರಕಾಶ್, ಮೋಹನ್‌ಗೌಡ, ವೀಣಾ, ಪುಷ್ಪಲತಾ, ದಿವ್ಯಶ್ರಿ, ನೇತ್ರಾವತಿ, ಪ್ರದೀಪ್, ಪರಶುರಾಮ, ಮೋಹನ್, ಲೋಕೇಶ್ ಅವರುಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.