ಮೈಸೂರು : ಸಾಲ ತೀರಿಸಲು ಹಣ ನೀಡಲಿಲ್ಲ ಎಂದು ಪತ್ನಿಯನ್ನೇ ಕೊಲೆ ಮಾಡಿದ ಪತಿ

Update: 2024-02-07 08:05 GMT

ಮೈಸೂರು: ಸಾಲ ತೀರಿಸಲು ಹಣ ನೀಡದ ಪತ್ನಿಯನ್ನು ಪತಿಯೇ ಕತ್ತು ಹಿಸುಕಿ ಕೊಲೆ ಮಾಡಿದ್ದ ಘಟನೆ ಮೈಸೂರಿನ ರಾಜೀವ್ ನಗರದಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿ ಪತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಅಕ್ಬರ್ ಆಲಿ ಎಂದು ಗುರುತಿಸಲಾಗಿದ್ದು, ಕೊಲೆಯಾದ ಮಹಿಳೆಯನ್ನು ನವೀದಾ ಎಂದು ತಿಳಿದು ಬಂದಿದೆ.

ಮಂಡ್ಯ ಜಿಲ್ಲೆಯ ಅಕ್ಬರ್ ಆಲಿಯನ್ನು ನವೀದಾ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ಮೈಸೂರಿನ ರಾಜೀವ್ ನಗರದಲ್ಲಿ ಮೂರು ಮಕ್ಕಳೊಂದಿಗೆ ಸಂಸಾರ ನೆಲೆಸಿತ್ತು. ಮಂಡ್ಯದಲ್ಲಿ ಆಟೋ ಓಡಿಸುತ್ತಿದ್ದ ಅಕ್ಬರ್ ಆಲಿಗೆ ಹೃದಯಾಘಾತವಾದ ಹಿನ್ನಲೆ ಪತ್ನಿ ಮನೆಯವರು ಚಿಕಿತ್ಸೆ ಕೊಡಿಸಿ ಬದುಕಿಸಿಕೊಂಡಿದ್ದರು. ನಂತರ ಗೂಡ್ಸ್ ಆಟೋ, ಪ್ರಾವಿಷನ್ ಸ್ಟೋರ್ಸ್, ಆಟೋ ಮೊಬೈಲ್ಸ್ ಅಂಗಡಿ ಹೀಗೆ ಹಲವು ವ್ಯಾಪಾರ ಮಾಡಲು ಅಕ್ಬರ್ ಆಲಿಗೆ ಪತ್ನಿ ನವೀದಾ ಮನೆಯವರು ಆರ್ಥಿಕ ಸಹಾಯ ನೀಡಿದ್ದರು. ಎಲ್ಲಾ ಬಂಡವಾಳವನ್ನು ಬಳಸಿಕೊಂಡಿದ್ದರೂ ಸಹ ಅಕ್ಬರ್ ಆಲಿ ಮತ್ತಷ್ಟು ಸಾಲಗಾರನಾಗಿದ್ದ ಎನ್ನಲಾಗಿದೆ.

ನವೀದಾ ರವರು ನಡೆಸುತ್ತಿದ್ದ ಪುಟ್ಟ ಅಂಗಡಿಯಲ್ಲಿ ದುಡಿದು ಗಂಡನ ಸಾಲ ತೀರಿಸುತ್ತಿದ್ದರು. ಒಂದೆಡೆ ಸಾಲ ತೀರಿಸಿದರೆ ಮತ್ತೊಂದೆಡೆ ಸಾಲ ಮಾಡುತ್ತಿದ್ದ ಪತಿ ಜೊತೆ ಪತ್ನಿ ಆಗಾಗ ಗಲಾಟೆ ಮಾಡುತ್ತಿದ್ದರು. ರವಿವಾರ ಇದೇ ವಿಚಾರದಲ್ಲಿ ಗಲಾಟೆ ಆಗಿದೆ. ಇದ್ದಕ್ಕಿದ್ದಂತೆ ನವೀದಾ ರವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಅಕ್ಬರ್ ಆಲಿಯನ್ನು ಪ್ರಶ್ನಿಸಿದಾಗ ತಂದೆ ಮನೆಗೆ ಹೋಗಿದ್ದಾಳೆ, ಅಂಗಡಿಯಲ್ಲಿ ಇದ್ದಾಳೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದ. ಅಕ್ಕಪಕ್ಕದ ಮನೆಯವರನ್ನು ಕೇಳಿದಾಗ ಇಬ್ಬರ ನಡುವೆ ನಡೆದ ಗಲಾಟೆ ವಿಚಾರ ತಿಳಿಸಿದರು. ಅನುಮಾನಗೊಂಡು ಬೀಗ ಹಾಕಿದ್ದ ಮನೆ ಬಾಗಿಲನ್ನು ಒಡೆದು ನೋಡಿದಾಗ ನವೀದಾ ಅಸ್ವಸ್ಥರಾಗಿ ಕುಳಿತ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಕುತ್ತಿಗೆ ಮೇಲೆ ಗಾಯದ ಗುರುತುಗಳು ಕಂಡು ಬಂದಿದೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಈ ಸಂಭಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಕ್ಬರ್ ಆಲಿಯನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News