ಮೈಸೂರು | ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಮೈಸೂರು: ವಿಜಯನಗರ ಠಾಣೆಯಲ್ಲಿ ಕೌಟುಂಬಿಕ ಸಮಸ್ಯೆ ಕಾರಣ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಜೆಸ್ಸಿ ಆ್ಯಂಟೋನಿ, ಅವರ ಸಹೋದರ ಜೋಬಿ ಆ್ಯಂಟೋನಿ(45) ಹಾಗೂ ಜೋಬಿ ಯವರ ಪತ್ನಿ ಶರ್ಮಿಳಾ(40) ಆತ್ಮಹತ್ಯೆ ಮಾಡಿಕೊಂಡವರು.
ಹಣಕಾಸಿನ ವಿಚಾರದಲ್ಲಿ ಉಂಟಾದ ಕೌಟುಂಬಿಕ ಸಮಸ್ಯೆಯಿಂದ ಇವರು ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದೆ.
ಜೆಸ್ಸಿ ಆ್ಯಂಟೋನಿಯ ಮೃತದೇಹ ರಮ್ಮನಹಳ್ಳಿಯಲ್ಲಿ ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದಕ್ಕೂ ಮೊದಲು ಅವರು ಮೊಬೈಲ್ ಫೋನ್ ನಲ್ಲಿ ಮಾಡಿದ್ದ ವಿಡಿಯೋದಲ್ಲಿ 'ಜೋಬಿಯಿಂದಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ನನ್ನ ತಂಗಿ ಹಾಗೂ ಆಕೆಯ ಮಗುವನ್ನೂ ಕೊಲ್ಲಲು ಅವರು ಪ್ರೇರೇಪಿಸಿದ್ದಾರೆ' ಎಂದು ಆರೋಪಿಸಿದ್ದಾರೆ. ಈ ಬಗ್ಗೆ ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಮಧ್ಯೆ ಜೋಬಿ ಆ್ಯಂಟೋನಿ ಮತ್ತು ಅವರ ಪತ್ನಿ ಶರ್ಮಿಳಾರ ಮೃತದೇಹಗಳು ವಿಜಯನಗರದ ಸಾರ್ವಜನಿಕ ಕ್ರೀಡಾಂಗಣದ ನೀರಿನ ಟ್ಯಾಂಕ್ ನ ಏಣಿಯಲ್ಲಿ ಮಂಗಳವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರಿಬ್ಬರು ತಮ್ಮ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿರುವುದರಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ಜೋಬಿ ಆ್ಯಂಟೋನಿ ತನ್ನ ತಂಗಿಯ ಹೆಸರಿನಲ್ಲಿ ಬೆಟ್ಟಿಂಗ್ ಗಾಗಿ ಲಕ್ಷಾಂತರ ಸಾಲ ಮಾಡಿದ್ದು, ಇದೇ ವಿಚಾರದಲ್ಲಿ ವಿವಾದ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಮೂಲಗಳು ತಿಳಿಸಿವೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.