ನನ್ನ ವೈಯಕ್ತಿಕ ಹಿತಾಸಕ್ತಿಯಿಂದ ಬಿಜೆಪಿ ಆಯ್ಕೆ: ಯದುವೀರ್

Update: 2024-03-18 09:16 GMT

ಮೈಸೂರು,ಮಾ.18: ನನಗೆ ಎಲ್ಲಾ ಪಕ್ಷದವರ ಜೊತೆಗೆ ಸಂಪರ್ಕ ಇದೆ. ಆದರೆ ನನ್ನ ವೈಯಕ್ತಿಕ ಹಿತಾಸಕ್ತಿಯಿಂದ ನಾನು ಬಿಜೆಪಿ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ಸೋಮವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

ಸಂವಿಧಾನ ಬಂದ ಮೇಲೆ ರಾಜ-ಮಹರಾಜ ಅಥವಾ ಇನ್ನಾವುದೋ ಬಿರುದುಗಳು ಇಲ್ಲ. ನಾವು ಸಹ ಎಲ್ಲಾ ಪ್ರಜೆಗಳಂತೆ ಮತ್ತು ಸಾಮಾನ್ಯ ವ್ಯಕ್ತಿಗಳಂತೆ. ನಮ್ಮ ಅರಮನೆಗೆ ಎಲ್ಲಾ ಪಕ್ಷದವರು ಬರುತ್ತಾರೆ ಎಲ್ಲರ ಜೊತೆಯೂ ನಮಗೆ ಸಂಪರ್ಕವಿದೆ. ಆದರೆ ನನ್ನ ವೈಯಕ್ತಿಕ ದೃಷ್ಟಿಯಿಂದ ನಾನು ಬಿಜೆಪಿ ಪಕ್ಷಕ್ಕೆ ಹೋಗಿದ್ದೇನೆ. ಹಾಗಾಗಿ ಅವರು ನನಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಹೇಳಿದರು.

ನನ್ನನ್ನು ಭೇಟಿ ಮಾಡಲು ಸಾರ್ವಜನಿಕರು ಅರಮನೆಗೆ ಬರುವ ಅವಶ್ಯಕತೆ ಇಲ್ಲ. ನಾನೇ ಅವರ ಬಳಿಗೆ ಹೋಗುತ್ತೇನೆ. ಅವರ ಜೊತೆ ಸಂಪರ್ಕದಲ್ಲಿರುತ್ತೇನೆ. ಹಾಗಾಗಿ ನಾನು ಅವರ ಕೈಗೆ ಎಟುಕದ ವ್ಯಕ್ತಿ ಎಂಬುವುದೆಲ್ಲಾ ಸುಳ್ಳು ಎಂದು ಹೇಳಿದರು.

ನನಗೆ ಎಲ್ಲಾ ಜಾತಿ ಧರ್ಮದವರು ಮುಖ್ಯ, ಎಲ್ಲರ ಅಭಿವೃದ್ಧಿಗಾಗಿ ನಾನು ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ. ಎಲ್ಲಾ ಧರ್ಮದವರ ಬಳಿಗೂ ತೆರಳಿ ಮತ ಯಾಚಿಸುತ್ತೇನೆ ಎಂದರು.

ಅರಮನೆಯಲ್ಲಿದ್ದ ವ್ಯಕ್ತಿಗೆ ಬಡವರು, ದಲಿತರು, ಹಿಂದುಳಿದವರ ಕಷ್ಟದ ಅರಿವಿದಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯದುವೀರ್, ನಾನು ಕಳೆದ ಒಂಬತ್ತು ವರ್ಷಗಳಿಂದಲೂ ಸಾರ್ವಜನಿಕರ ಸಂಪರ್ಕದಲ್ಲಿದ್ದೇನೆ. ಅವರ ಕಷ್ಟ ಸುಖದ ಅರಿವು ಇದೆ. ಈಗ ಇನ್ನಷ್ಟು ತಿಳಿದುಕೊಳ್ಳುವ ಸಮಯ ಬಂದಿದೆ. ಎಲ್ಲವನ್ನು ಅರ್ಥಮಾಡಿಕೊಂಡು ಎಲ್ಲರ ಕಷ್ಟ ಸುಖಗಳಿಗೆ ಭಾಗಿಯಾಗುತ್ತೇನೆ ಎಂದು ಹೇಳಿದರು.

ಯದುವೀರ್ ರಾಜಕಾರಣಕ್ಕೆ ಬಂದರೆ ಮಹರಾಜರಾಗಿ ಕೆಲಸ ಮಾಡುತ್ತಾರೋ ಅಥವಾ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಾರೋ ಎಂಬ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯದುವೀರ್, ನಮ್ಮ ಸಂಪ್ರದಾಯದಂತೆ ಅರಮನೆ ವಿಚಾರ ಬಂದಾಗ ನಾನು ಅರಮನೆಯ ಉತ್ತರಾಧಿಕಾರಿಯಾಗಿಯೂ ಸ್ವಲ್ಪ ದಿನ ಇರಬೇಕಾಗುತ್ತದೆ. ಉಳಿದ ಸಮಯ ಸಾಮಾನ್ಯನಂತೆ ಸಾರ್ವಜನಿಕ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲಾತಿ ಜಾರಿಗೆ ತಂದವರು. ಆದರೆ ಅವರ ವಂಶಸ್ಥರು ಸಂವಿಧಾನ ಬದಲಾಯಿಸುವುದಾಗಿ ಹೇಳುತ್ತಿರುವ ಪಕ್ಷದ ಜೊತೆ ಹೋಗಿರುವುದು ಎಷ್ಟು ಸರಿ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದಿಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯದುವೀರ್,  ಸಂವಿಧಾನ ಬದಲಾಯಸುವ ಬಗ್ಗೆ ಹೇಳಿಕೆ ಕೊಟ್ಟಿರುವುದು ಅವರ ವೈಯಕ್ತಿಕ ಹೇಳಿಕೆ. ಇದು ಪಕ್ಷದ ಹೇಳಿಕೆಯಲ್ಲ. ಸಂವಿಧಾನವನ್ನು ರಕ್ಷಿಸುವ ಪಕ್ಷ ಯಾವುದಾದರು ಇದೆ ಎಂದರೆ ಅದು ಬಿಜೆಪಿ ಮಾತ್ರ ಎಂದು ಹೇಳಿದರು.

ಅರಮನೆ ಮತ್ತು ಸರ್ಕಾರದ ನಡುವೆ ನಡೆಯುತ್ತಿರುವ ವ್ಯಾಜ್ಯಗಳನ್ನು ಕಾನೂಕಾತ್ಮಕವಾಗಿ ಮುಂದುವರೆಸುತ್ತೇನೆ. ಅದಕ್ಕೂ ರಾಜಕಾರಣಕ್ಕೂ ಸಂಬಂಧ ಇಲ್ಲ. ನಮ್ಮ ಆಸ್ತಿ ರಕ್ಷಿಸಿಕೊಳ್ಳಬೇಕು ಎಂದು ನಾನು ರಾಜಕೀಯಕ್ಕೆ ಬಂದಿಲ್ಲ. ವಿಕಸಿತ ಭಾರತಕ್ಕಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಅಭಿವೃದ್ಧಿ ಕಾರ್ಯಗಳನ್ನು ಮಾಡಿ ನಾನು ಏನು ಎಂಬುದನ್ನು ತೋರಿಸುತ್ತೇನೆ ಎಂದು ಹೇಳಿದರು.

ಮಾಧ್ಯಮ ಸಂವಾದದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್.ಶ್ರೀವತ್ಸ, ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮಾಜಿ ಶಾಸಕ ಎಸ್.ಎ.ರಾಮದಾಸ್, ಮಾಳವಿಕ ಅವಿನಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಂಗ್ರೆಸ್ ನಿಂದ ಆಹ್ವಾನ: ಸ್ಪಷ್ಟ ಉತ್ತರ ನೀಡದೆ ನಿರಾಕರಿಸಿದ ಸಂಸದ ಪ್ರತಾಪ್ ಸಿಂಹ

ಮೈಸೂರು: ಬಿಜೆಪಿ ಟಿಕೆಟ್ ಕೈ ತಪ್ಪಿದ ಮೇಲೆ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿದೆಯಾ ಎಂಬ ಪ್ರಶ್ನೆಗೆ ಸಂಸದ ಪ್ರತಾಪ್ ಸಿಂಹ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದರು.

ನಗರದ ಖಾಸಗೀ ಹೋಟೆಲ್ ನಲ್ಲಿ ಸೋಮವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಸ್ಪರ್ಧೆಮಾಡಿದಾಗ ನನಗೆ ಎಲ್ಲಾ ಪಕ್ಷದವರು ಮತ ಹಾಕಿದ್ದಾರೆ. ರಾಜಕಾರಣದಲ್ಲಿ ಕೆಲವೊಂದು ವಿಚಾರಗಳನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೆಪಿ ಟಿಕೆಟ್ ತಪ್ಪಿದಾಗ ಕುರುಬ ಸಮಾಜದ ಮುಖಂಡರು ದೂರವಾಣಿ ಕರೆ ಮಾಡಿ ನೀವು ಚುನಾವಣೆಗೆ ಸ್ಪರ್ಧಿಸಿ ಬೇಕಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಹೇಳಿದ್ದರು. ಹಾಗಾಗಿ ಎಲ್ಲರೂ ನನ್ನೊಂದಿಗೆ ಚೆನ್ನಾಗಿದ್ದಾರೆ ಎಂದರು.

ಯದುವೀರ್ ಅವರು ಅರಮನೆ ಉತ್ತರಾಧಿಕಾರಿಯಾಗಿರುವುದರಿಂದ ಮಹರಾಜರಾಗಿ ಕೆಲಸ ಮಾಡುತ್ತಾರೋ, ಇಲ್ಲ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಾರೋ ಎಂಬ ಪ್ರಶ್ನೆ ಎತ್ತಿದ್ದೆ ಅಷ್ಟೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನನಗೆ ಅಚಾನಕ್ ಆಗಿ 2004 ರಲ್ಲಿ ಬಿಜೆಪಿ ಟಿಕೆಟ್ ಸಿಕ್ಕಿತು. 2024 ರಲ್ಲಿ ಪಕ್ಷ ನನ್ನನ್ನು ಬೇಡ ಎಂದು ಬೇರೆಯವರಿಗೆ ಟಿಕೆಟ್ ಕೊಟ್ಟಿದೆ.‌ ಇದರಿಂದ ನನಗೆ ಯಾವುದೇ ಬೇಸರ ಇಲ್ಲ. ಪಕ್ಷ ನನ್ನ ತಾಯಿ ಇದ್ದ ಹಾಗೆ. ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ. ಯದುವೀರ್ ಗೆ ಟಿಕೆಟ್ ಸಿಕ್ಕಿದಾಗ ನಾನು ನಿಮ್ಮ ಏಜೆಂಟ್ ಆಗಿ ಕೆಲಸ ಮಾಡುತ್ತೇನೆ ಎಂದಿದ್ದೇನೆ. ಹಾಗಾಗಿ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News