ಮೈಸೂರು | ಮುಡಾ ಕಚೇರಿ ಮುತ್ತಿಗೆಗೆ ಯತ್ನಿಸಿದ ಬಿಜೆಪಿ ಕಾರ್ಯಕರ್ತರ ಬಂಧನ, ಬಿಡುಗಡೆ

Update: 2024-07-04 17:03 GMT

ಮೈಸೂರು : ಮೈಸೂರು ನಗರಾಭಿವೃದ್ಧಿ(ಮುಡಾ) ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ರಾಜೀನಾಮೆ ನೀಡಬೇಕು ಮತ್ತು ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆಯಿತು.

ನಗರದ ರಾಮಸ್ವಾಮಿ ವೃತ್ತದಲ್ಲಿ ಗುರುವಾರ ಬೆಳಿಗ್ಗೆ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಜೆ.ಎಲ್.ಬಿ ರಸ್ತೆಯಲ್ಲಿರುವ ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಆಗಮಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಅರ್ಧದಲ್ಲಿಯೇ ತಡೆದು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದರು. ನಂತರ ಬಿಡುಗಡೆ ಮಾಡಿದರು.

ಇದಕ್ಕೂ ಮೊದಲು ಮಾತನಾಡಿದ ಮಾಜಿ ಮೇಯರ್ ಶಿವಕುಮಾರ್, ಮುಡಾ ಪ್ರಕರಣದ ಕೇಸ್ ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ. 4,500 ಕೋಟಿ ರೂ. ಹಗರಣದ ಆಗಿದೆ. ಅಧಿಕಾರಿಗಳನ್ನು ಜೈಲಿಗೆ ಹಾಕಬೇಕಾಗಿತ್ತು. ಆದರೆ ಸಚಿವರು ತಾವು ರಕ್ಷಣೆ ಆಗುವ ಮೂಲಕ ಅಧಿಕಾರಿಗಳನ್ನು ರಕ್ಷಿಸಿ ಬೂಟಾಟಿಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ಬಿಜೆಪಿ ಮುಖಂಡರಾದ ಜೋಗಿ ಮಂಜು, ಸಚಿನ್, ನಿಶಾಂತ್,ಕಿರಣ್, ಮಂಜುನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News